Site icon Vistara News

Siddheshwar swamiji | 8 ವರ್ಷ ಮೊದಲೇ ಅಂತ್ಯಪತ್ರ: ಶ್ರಾದ್ಧ ಬೇಡ, ಸಮಾಧಿ ಬೇಡ, ದೇಹವನ್ನು ಅಗ್ನಿಗರ್ಪಿಸಿ ಸಾಕು ಎಂದಿದ್ದ ಸ್ವಾಮೀಜಿ

siddheshwara swamiji

ವಿಜಯಪುರ: ಸರಳ ಜೀವನಕ್ಕೆ, ನೇರ ನಡೆನುಡಿಗಳಿಗೆ ಹೆಸರಾಗಿದ್ದ ಜ್ಞಾನಯೋಗಾಶ್ರಮದ ಶ್ರೀ ಸಿದ್ದೇಶ್ವರ ಸ್ವಾಮೀಜಿ (Siddheshwar Swamiji) ಅವರು ತಮ್ಮ ಇಹದ ಬದುಕು ಮಾತ್ರವಲ್ಲ, ಮೃತ್ಯು ಆವರಿಸಿದ ನಂತರ ತನ್ನ ಬಗ್ಗೆ ಹೇಗೆ ನಡೆದುಕೊಳ್ಳಬೇಕು ಎಂದು ಕೂಡಾ ಮೊದಲೇ ಬರೆದಿಟ್ಟಿದ್ದರು.

೨೦೧೪ರ ಗುರುಪೂರ್ಣಿಮೆಯಂದು ಅವರು ಬರೆದಿಟ್ಟ ಅಭಿವಂದನ ಪತ್ರದಲ್ಲಿ ತನ್ನ ಅಂತ್ಯಕ್ರಿಯೆ ಹೇಗೆ ಮಾಡಬೇಕು ಎಂದೂ ಹೇಳಿದ್ದಾರೆ. ಅಚ್ಚರಿ ಎಂದರೆ, ಎಂಟು ವರ್ಷದ ಬಳಿಕ ೨೦೨೨ರ ವೈಕುಂಠ ಏಕಾದಶಿಯಂದು ಅವರು ದೇಹ ತ್ಯಾಗ ಮಾಡಿದ್ದಾರೆ.

ಅಂತ್ಯ ಸಂಸ್ಕಾರದ ಬಗ್ಗೆ ಅವರು ಬರೆದಿಟ್ಟಿರುವ ಅಂಶಗಳು ಇಂತಿವೆ. ತನ್ನ ಪಾರ್ಥಿವ ಶರೀರವನ್ನು ಭೂಮಿಯಲ್ಲಿ ಇಡುವ ಬದಲು ಪಂಚಭೂತಗಳಲ್ಲಿ ಲೀನವಾಗಲು ಸಾಧ್ಯವಾಗುವಂತೆ ಅಗ್ನಿಗರ್ಪಿಸುವಂತೆ ಸೂಚಿಸಿದ್ದಾರೆ.
ಯಾವ ಕಾರಣಕ್ಕೂ ಶ್ರಾದ್ಧಾದಿ ವಿಧಿ ವಿಧಾನಗಳನ್ನು ಮಾಡುವುದು ಅನಗತ್ಯ ಎಂದು ಹೇಳಿದ್ದಾರೆ.

ಚಿತಾಭಸ್ಮವನ್ನು ನದಿ ಅಥವಾ ಸಾಗರದಲ್ಲಿ ವಿಸರ್ಜಿಸುವುದು ಎಂದು ಸೂಚಿಸಿರುವ ಅವರು, ಯಾವುದೇ ಬಗೆಯ ಸ್ಮಾರಕ ನಿರ್ಮಿಸಬಾರದು ಎಂದು ಸ್ಪಷ್ಟಪಡಿಸಿದ್ದಾರೆ.

ನನ್ನದು ಸಾವಧಾನದ ಸಾಮಾನ್ಯ ಬದುಕು
ಎಂಟು ವರ್ಷಗಳ ಹಿಂದೆ ಬರೆದ ಪತ್ರದಲ್ಲಿ ತನ್ನ ಬದುಕನ್ನು ತಾನೇ ವಿಮರ್ಶಿಸಿಕೊಂಡಿದ್ದು ಹೀಗೆ: ನನ್ನದು ಆವೇಗವಿಲ್ಲದ, ಸಾವಧಾನದ ಸಾಮಾನ್ಯ ಬದುಕು. ಅದನ್ನು ರೂಪಿಸಿದವರು ‘ಗುರುದೇವರು, ಅದನ್ನು ಹದುಳಿಸಿದವರು ನಾಡಿನ ಪೂಜ್ಯರು, ಹಿತೈಷಿಗಳು, ಸಹೃದಯರು, ಸಾಧಕರು ಹಾಗೂ ಶ್ರೀ ಸಾಮಾನ್ಯರು. ನಿಸರ್ಗವು ಮೈ ಮನಸ್ಸುಗಳಿಗೆ ತಂಪನಿತ್ತಿದೆ. ತಾತ್ವಿಕ ಚಿಂತನೆಗಳು ತಿಳಿಬೆಳಗ ಹರಡಿವೆ. ಜಾಗತಿಕ ತತ್ತ್ವಜ್ಞಾನಿಗಳ ಮತ್ತು ವಿಜ್ಞಾನಿಗಳ ಶೋಧನೆಗಳು ದೃಷ್ಟಿಯ ಪರಿಸೀಮೆಯನ್ನು ದೂರ ದೂರ ಸರಿಸಿವೆ. ಆದ್ದರಿಂದಲೇ ನಾನು ಎಲ್ಲರಿಗೂ ಎಲ್ಲದಕ್ಕೂ ‘ಉಪಕೃತ’ ಎಂದಿದ್ದಾರೆ.

ಸಾವಿನ ಬಗ್ಗೆ ಸ್ಪಷ್ಟವಾಗಿ ಮಾತನಾಡಿರುವ ಅವರು, ʻʻಬದುಕು ಮುಗಿಯುತ್ತದೆ; ದೀಪ ಆರಿದಂತೆ; ತೆರೆ ಅಡಗಿದಂತೆ; ಮೇಘ ಕರಗಿದಂತೆ. ಉಳಿಯುವುದು ಬರಿ ಬಯಲು. ಮಹಾಮೌನ. ಶೂನ್ಯಸತ್ಯʼʼ ಎಂದಿದ್ದಾರೆ.

ಹಲವು ದಶಕಗಳ ಕಾಲ ಈ ಅದ್ಭುತ ಜಗತ್ತಿನಲ್ಲಿ ಬಾಳಿದ್ದೇನೆ; ನೋಡಿ ತಿಳಿದು ಅನುಭವಿಸಿದ್ದೇನೆ. ನನ್ನ ಬದುಕು ಕೊನೆಗೊಳ್ಳುವ ಮುಂಚೆ ಅದನ್ನು ಕೃತಜ್ಞತೆಯಿಂದ ಸ್ಮರಿಸಬೇಕು; ಅದಕ್ಕಾಗಿ ಈ ‘ಅಂತಿಮ ಅಭಿವಂದನ ಪತ್ರʼ ಎಂದಿದ್ದಾರೆ ಅವರು.

ಇದನ್ನೂ ಓದಿ | Siddheshwar swamiji | ಸಣ್ಣವರಿದ್ದಾಗಲೇ ಗುಡ್ಡದ ಮೇಲೆ ಹೋಗಿ ಒಬ್ಬರೇ ಧ್ಯಾನ ಮಾಡುತ್ತಿದ್ದರು ಪುಟ್ಟ ಸಿದ್ದು!

Exit mobile version