Site icon Vistara News

Siddheshwar Swamiji | ಶತಮಾನದ ಮಹಾಮಾನವ, ಮಾನವರೂಪಿ ಮಾಧವ!

Siddheshwar Swamiji

| ಶಂಕರಾನಂದ, ನವದೆಹಲಿ
ಒಂದು ಕಡೆ ಕರೆ ಬಂದಿತ್ತು: ದೀಪ ಆರಿತ್ತು. ದೇಹ ಬಾಡಿತ್ತು. ಬೆಳಕೊಂದು ಹೊರಬಿದ್ದಿತ್ತು. ಬಂದ ಕಡೆಗೆ ಹೋಗಲು ಹೊರಳಿತ್ತು. ತನ್ನ ನೆಲೆಯೆಡೆಗೆ ಸಾಗಿತ್ತು. ಹೋಗುವಾಗ ಸಂದೇಶವನ್ನೂ ಕೊಟ್ಟಿತ್ತು. ಆ ಪ್ರಸನ್ನ ವದನದಲ್ಲಿ ಶಾಂತಿ ಮನೆ ಮಾಡಿತ್ತು, ಆನಂದ ಇತ್ತು, ದಿವ್ಯತೆ ಇತ್ತು. ಮೂರರ ಸಂಯೋಗದಿಂದ ಪ್ರಶಾಂತ ಭಾವ ಸುತ್ತಲೂ ಆವರಿಸಿತ್ತು(Siddheshwar Swamiji).

ಇನ್ನೊಂದು ಕಡೆ: ಲಕ್ಷ ಲಕ್ಷ ಕಂಠಗಳು ಬಿಗಿದುಕೊಂಡಿವೆ. ದುಃಖ ಉಮ್ಮಳಿಸಿದೆ. ಅನಾಥ ಭಾವ ಮನದ ತುಂಬಾ ಆವರಿಸಿದೆ. ಮುಂದೇನು? ನಮಗೆ ಇನ್ನಾರು? ಸುತ್ತೆಲ್ಲ ಕತ್ತಲೆ ಎಂಬ ಭಾವ. ತಂದೆಯನ್ನ, ಮಿತ್ರನೊಬ್ಬನನ್ನ, ಗುರುವೊಬ್ಬನನ್ನ, ಎಲ್ಲಕ್ಕಿಂತ ಹೆಚ್ಚಾಗಿ ದೇವನೊಬ್ಬನನ್ನ ಕಳೆದುಕೊಂಡ ಸಂಕಟ. ಒಳಗಿಟ್ಟುಕೊಳ್ಳಲಾಗದ, ಹೊರಹಾಕಲೂ ಆಗದ ವಿಚಿತ್ರ ಸಂಕಟ ಅಸಂಖ್ಯ ಹೃದಯಗಳಲ್ಲಿ. ಮಾನವ ಮಹಾಮಾನವನಾದಾಗ, ಮಾನವರೂಪಿ ಮಾಧವನಾದಾಗ ಕಂಡು ಬರುವ ಎರಡು ಅಪರೂಪದ, ಅನನ್ಯ ಅವಸ್ಥೆಗಳು ಇವು. ಸಂಕಟದ ಗರ್ಭದಿಂದಲೇ ಇನ್ನಷ್ಟು, ಮತ್ತಷ್ಟು ಮಹಾಮಾನವರ ಉಗಮವಾಗುತ್ತದೆ. ಅದಕ್ಕಾಗಿ ಈ ಭಾರತ ಪುಣ್ಯಭೂಮಿ, ಕರ್ಮಭೂಮಿ.

ಉತ್ತರಾಯಣದ ಪುಣ್ಯಕಾಲದಲ್ಲಿ, ವೈಕುಂಠ ಏಕಾದಶಿಯ ಪವಿತ್ರ ದಿನದಂದು ಸೋಮವಾರ, 2.1.2023ರಂದು ನಮ್ಮ ಪೂಜ್ಯ ಸಿದ್ಧೇಶ್ವರ ಮಹಾಸ್ವಾಮಿಗಳು ದೇಹ ತ್ಯಾಗ ಮಾಡಿದಾಗ ಕಂಡು ಬಂದ ಎರಡು ಅವಸ್ಥೆಗಳು ಇವು. ಸ್ವಾಮಿಗಳ ಪಾಲಿಗೆ ಮರಣವೂ ಮಹಾನವಮಿಯಾಗಿತ್ತು. ಮರಣದಲ್ಲೇ ಮನುಷ್ಯನ ಮಹಾನತೆ ತಿಳಿಯುವುದು ಎಂಬ ಮಾತು ಸಾರ್ಥಕವಾಗಿತ್ತು. ಮಾನವ ಮಹಾಮಾನವನಾಗುವ ಭಾರತದ ಈ ಪರಂಪರೆಯನ್ನು ಮತ್ತಷ್ಟು ಶ್ರೀಮಂತಗೊಳಿಸಿದವರು ಸಿದ್ಧೇಶ್ವರ ಅಪ್ಪನವರು.

ಯಾರ ಜೇಬು ಖಾಲಿ ಇರುತ್ತದೋ ಅವರಿಗೆ ಎಲ್ಲರ ಜೇಬಿನ ಮೇಲೆ ಅಧಿಕಾರ ಇರುತ್ತದೆ. ಜೇಬು ಎನ್ನುವುದೇ ಇರದಿದ್ದರೆ! ತುಂಬಿದ್ದ ಜೇಬನ್ನು ಅಂದರೆ ಶ್ರೀಮಂತ ಕುಟುಂಬದ ವಾರಸಿಕೆಯನ್ನು ತೊರೆದು ಬಂದ ವಿರಾಗಿ. ವೈರಾಗ್ಯವನ್ನೇ ಬಯಸಿ ಬದುಕಿದವರು. ಬಯಕೆಗಳ ಮೇಲೆ ಬಿಗಿತವನ್ನು ಸಾಧಿಸುವ ಅದ್ಭುತ ಚಿಂತನೆಯಂತೆ ಆಚರಣೆಯೂ ಅವರದ್ದಾಗಿತ್ತು. ಜೇಬನ್ನು ತುಂಬಿಸಿಕೊಳ್ಳಲೆಂದೇ ಕಂಡ ಕಂಡ ಮಾರ್ಗಗಳನ್ನು ಹಿಡಿಯುವ ಅನೇಕರು ಸುತ್ತಲೂ ಇರುವಾಗ ಜೇಬಿಲ್ಲದ ವಸ್ತ್ರ ಧಾರಣೆಯ ಸಂಕಲ್ಪ ಮತ್ತು ಅದನ್ನು ಬದುಕಿನುದ್ದಕ್ಕೂ ಆಚರಿಸಿದ್ದು ನಮಗೆ ಅವರು ಬಿಟ್ಟು ಹೋಗಿರುವ ಸಂದೇಶ.

ಆಡಿದ ಮಾತುಗಳೇ ಲೇಖನವಾದವು!
ಅವರು ಭಾಷಣ ಮಾಡಲಿಲ್ಲ. ಅವರ ಒಂದೊಂದು ಮೃದು, ಮಧುರ ಮಾತು ಕೋಟಿ ಕೋಟಿ ಹೃದಯಗಳನ್ನು ತಲುಪಿತು. ಅವರು ಲೇಖನ ಬರೆಯಲಿಲ್ಲ. ಅವರಾಡಿದ ಮಾತುಗಳೇ ಲೇಖನಗಳಾದವು. ಅವರು ಪುಸ್ತಕ ರಚಿಸಲಿಲ್ಲ. ಬದುಕಿನಲ್ಲಿ ಉಸಿರಿದ್ದೆಲ್ಲ ಗ್ರಂಥ ರೂಪ ತಳೆಯಿತು.

ಸರಳ ಬದುಕು. ಸಹಜ ನಡೆ. ಅದೇ ನಿಜವಾದ ಸೌಂದರ್ಯ. ಬಯಕೆಗಳನ್ನು ಮೀರಿ ನಿಂತಾಗ, ಪ್ರಕೃತಿ ಸಹಜ ನಿರ್ದೇಶನಗಳನ್ನು ಮೀರಿ ಬೆಳೆದಾಗ ಮನುಷ್ಯ ನೈಜ ಆನಂದವನ್ನು ಅನುಭವಿಸುತ್ತಾನೆ. ಆಗ ಅದರ ಪ್ರಭಾವ ಅಸಂಖ್ಯ ಜನಗಳ ಮೇಲಾಗುತ್ತದೆ. ಸಿದ್ಧೇಶ್ವರ ಮಹಾಸ್ವಾಮಿಗಳು ಈ ಅವಸ್ಥೆಯನ್ನು ತಲುಪಿದ್ದರು. ಕೇವಲ ದರ್ಶನ ಮಾತ್ರದಿಂದ, ಒಂದು ಸಣ್ಣ ಮುಗುಳ್ನಗೆಯಿಂದ ಎದುರಿಗೆ ಬಂದವರ ಬದುಕನ್ನು ಪ್ರೇರೇಪಿಸುವ ಶಕ್ತಿ ಈ ಅವಸ್ಥೆಯಲ್ಲಿ ಸಿದ್ಧಿಸುತ್ತದೆ. ಅದಕ್ಕಾಗಿ ಅವರು ಮಹಾಮಾನವ, ಮಾನವರೂಪಿ ಮಾಧವ.

ಶ್ರೇಷ್ಠ ಗುರು
ನನಗೂ ಪೂಜ್ಯರಿಗೂ ಅನೇಕ ವರ್ಷಗಳ ನಿಕಟ ಸಂಬಂಧ, ಅವಿನಾಭಾವ ಬಾಂಧವ್ಯ. ಅವರಲ್ಲಿ ನಾನು ಕಂಡದ್ದು ಒಬ್ಬ ಶ್ರೇಷ್ಠ ಗುರುವನ್ನು. ಆನಂದದ ಸಾಗರವೇ ಆಗಿದ್ದರು ಅವರು. ರಾಷ್ಟ್ರೀಯ ಸ್ವಯಂಸೇವಕ ಸಂಘ ಎಂದರೆ ಅಪರಿಮಿತ ಸ್ನೇಹ ಅವರಿಗೆ. ಪ್ರವಚನ ನಡೆಯುವ ಊರಿನಲ್ಲಿ ಅವರ ನಿವಾಸದ ಸಮೀಪ ಸಂಘದ ಶಾಖೆಯನ್ನು ನಡೆಸಲು ಹೇಳುತ್ತಿದ್ದರು. ಶಾಖೆಯನ್ನು ಸೂಕ್ಷ್ಮವಾಗಿ ಗಮನಿಸಿ ಅನೇಕ ಪ್ರಶ್ನೆಗಳನ್ನು ಕೇಳಿ ತಿಳಿದುಕೊಳ್ಳುತ್ತಿದ್ದರು. ಹೀಗೆ ಕೇಳುವಾಗ ಮಗುವಿನ ಮುಗ್ಧತೆ, ವಿನಮ್ರತೆಯ ಭಾವ ಎದ್ದು ಕಾಣುತ್ತಿತ್ತು. ಮಹಾಪುರುಷರ ಲಕ್ಷಣವೇ ಇದು. ಸಂಘ ದೇಶಾದ್ಯಂತ ಮಾಡುತ್ತಿರುವ ಕಾರ್ಯವನ್ನು ಕೇಳುವ ತವಕ, ಪ್ರತಿ ಬಾರಿ ಭೇಟಿಯಾದಾಗಲೂ ಅವರಲ್ಲಿ ಕಾಣುತ್ತಿತ್ತು. ಶಿಕ್ಷಣ, ಆರ್ಥಿಕ, ಕಾರ್ಮಿಕ, ಧಾರ್ಮಿಕ, ಸುರಕ್ಷೆ, ವೈಚಾರಿಕ ಇತ್ಯಾದಿ ಅನೇಕ ಕ್ಷೇತ್ರಗಳಲ್ಲಿ ಬೆಳೆಯುತ್ತಿರುವ ಸಂಘದ ಕಾರ್ಯವನ್ನು ತಿಳಿದು ಸಂತೋಷ ಪಡುತ್ತಿದ್ದರು. ಅವರ ಚರ್ಚೆಗಳಲ್ಲಿ ಕುಳಿತುಕೊಳ್ಳುವ ಅನೇಕರಿಗೆ ಸಂಘವನ್ನು ತಿಳಿಸಿ ಹೇಳಲಾರಂಭಿಸಿದರು. ಕ್ರಮೇಣ ತಮ್ಮ ತಿಂಗಳ ಪ್ರವಚನ ಕಾರ್ಯಕ್ರಮದಲ್ಲಿ ಒಂದು ದಿನ ಸಂಘದ ಕಡೆಯಿಂದ ಒಬ್ಬ ವಕ್ತಾರರನ್ನು ಕರೆಸಲು ಪ್ರಾರಂಭಿಸಿದರು. ಕ್ರಮೇಣ ಅದು ಪದ್ಧತಿಯಾಗಿ ಬೆಳೆಯಿತು. ದಿವಂಗತ ವಿದ್ಯಾನಂದ ಶೆಣೈ, ರವೀಂದ್ರರು ಇತ್ಯಾದಿ ಅನೇಕರು ಈ ಕಾರ್ಯಕ್ರಮದಲ್ಲಿ ವಿಚಾರವನ್ನು ಮಂಡಿಸಿದ್ದಾರೆ. ಆ ರೀತಿಯ ಅವಕಾಶ ನನಗೂ ಎರಡು ಬಾರಿ ಸಿಕ್ಕಿತ್ತು ಎನ್ನುವುದೇ ನನ್ನ ಸೌಭಾಗ್ಯ.

ಪುರಸ್ಕಾರ ಮರಳಿಸಿದರು
ಪದ್ಮ ಪುರಸ್ಕಾರವನ್ನು ವಿನಮ್ರತೆಯಿಂದ ಮರಳಿಸಿದರು. ಅರಸಿ ಬಂದ ಡಾಕ್ಟರೇಟ್ ಪದವಿಗಳನ್ನು ನಯವಾಗಿ ನಿರಾಕರಿಸಿದರು. ಮಠ ಕಟ್ಟಲಿಲ್ಲ. ಸಂಸ್ಥೆಗಳನ್ನು ಕಟ್ಟುವ ಗೋಜಿಗೆ ಹೋಗದೆ ಸದ್ವಿಚಾರಗಳನ್ನು ತುಂಬಿದರು. ಸಂಪ್ರದಾಯವನ್ನು ಪ್ರಾರಂಭಿಸಲಿಲ್ಲ, ಸನ್ಮಾರ್ಗವನ್ನು ತೋರಿದರು. ಅವರಿಗಾಗಿ ಮನೆ(ಕುಟೀರ) ಕಟ್ಟಿ ಕೊಟ್ಟ ಭಕ್ತರು ಅನೇಕರು. ಆದರೆ ಅನಿಕೇತನ ಅವಸ್ಥೆಯನ್ನು ತಲುಪಿದ ಅವರಿಗೆ ಬಯಲೇ ಆಲಯವಾಗಿತ್ತು. ಎಲ್ಲೂ ಅಂಟಿಕೊಳ್ಳಲಿಲ್ಲ. ನಂಟಿನ ಅಂಟನ್ನು ಅಂಟಿಸಿಕೊಳ್ಳದ ವಿರಾಗಿಯಾಗಿ ಇರುವುದರಲ್ಲೇ ಆನಂದವನ್ನು ಕಂಡರು. ಇದೇ ನೈಜ ‘ಶಿವತ್ವ’. ಈ ಶಿವತ್ವ ದ ಮೂರ್ತಿ ಅವರಾಗಿದ್ದರು. ಪಾಂಡಿತ್ಯಪೂರ್ಣ ಅಲ್ಲ, ಸರಳವಾದ, ಜನತೆಯ ಆಡುಭಾಷೆಯಲ್ಲಿ, ಸಂವಾದ ರೂಪಿ ಮಾತುಗಳಿಂದ ಲಕ್ಷಾಂತರ ಮನಸ್ಸುಗಳನ್ನು ಅವರಿಸಿದರು. ಭಗವದ್ಗೀತೆಯನ್ನೇ ಬದುಕಿದರು. ಪ್ರಾತಃಸ್ಮರಣೀಯರಾದರು.

ಪ್ರಸಿದ್ಧಿ ಬಯಸಲಿಲ್ಲ
ಮೊಬೈಲ್ ಇಟ್ಟುಕೊಳ್ಳಲಿಲ್ಲ. ಜೇಬು ಇಲ್ಲದ ಅಂಗಿಗೆ ಮೊಬೈಲ್ ನ ಬಯಕೆಯದರೂ ಹೇಗೆ ಬಂದೀತು! ಬದುಕಿದ್ದಾಗ ಪ್ರಸಿದ್ಧಿಯನ್ನು ಬಯಸಲೇ ಇಲ್ಲ. ಬದುಕಿನ ನಂತರವೂ ಪ್ರಸಿದ್ಧಿಯನ್ನು ಬಯಸದೇ ಸ್ಮಾರಕವೂ ಬೇಡ, ಯಾವುದೇ ವಿಧಿಗಳ ಆಚರಣೆಯೂ ಬೇಡ ಎಂದು ಹೇಳಿ ಹೋಗಿಬಿಟ್ಟರು. ಇಂಥವರು ಇಂದಿನ ಕಾಲದಲ್ಲಿ ಅಪರೂಪ ಅಲ್ಲವೇ! ಹಿಮಾಲಯದಷ್ಟು ಎತ್ತರಕ್ಕೆ ಬೆಳೆದರೂ, ದರ್ಬೆ(ಹುಲ್ಲು)ಯ ಅಕರ್ತಾ ಭಾವದಲ್ಲಿ ಬದುಕಿದರು.

ಅವರು ಈಗ ಇಲ್ಲ. ಅವರು ಹೋಗಿಯೂ ಇಲ್ಲ. ನಮ್ಮೊಳಗೆ ಇದ್ದು ಎಚ್ಚರಿಸುವ ಕಾರ್ಯ ಮಾಡುತ್ತಾರೆ. ‘ನನ್ನೊಳು ನನ್ನದು ಏನೂ ಇಲ್ಲ, ಇರುವುದೆಲ್ಲ ನೀನೇ’ ಎಂಬ ಕಬೀರರ ನುಡಿಗೆ ಅನ್ವರ್ಥಕ ಬದುಕು ಅವರದ್ದು. ಅವರು ನಡೆದ ದಾರಿಯಲ್ಲಿ, ಬದುಕಿ ತೋರಿದ ಮಾರ್ಗದಲ್ಲಿ ಸಾಗುವುದೇ ಆ ನಡೆದಾಡುವ ದೇವರಿಗೆ ನಾವು ಸಲ್ಲಿಸುವ ನೈಜ ಶ್ರದ್ಧಾಂಜಲಿ.
(ಲೇಖಕರು ಭಾರತೀಯ ಶಿಕ್ಷಣ ಮಂಡಲ, ಅಖಿಲ ಭಾರತೀಯ ಸಹ ಸಂಘಟನಾ ಕಾರ್ಯದರ್ಶಿ, ನವದೆಹಲಿ)

Exit mobile version