ಕೇಳಿಸದವರ ಸಂಖ್ಯೆ ಈಗೀಗ ಹೆಚ್ಚಾಗುತ್ತಿದೆ. ಅಂದರೆ, ಸಂಗಾತಿ ಕರೆದಾಗ ಕೇಳದಿರುವುದು, ಅಪ್ಪ-ಅಮ್ಮ ಹೇಳಿದ್ದು ಕೇಳದಿರುವುದು, ಶಾಲೆಯಲ್ಲಿ ಶಿಕ್ಷಕರ ಮಾತು ಕೇಳದಿರುವುದು- ಇಂಥ ಜಾಣ ಕಿವುಡಿನ ಬಗ್ಗೆಯಲ್ಲ ಇಲ್ಲಿ ಹೇಳುತ್ತಿರುವುದು. ಶ್ರವಣ ಸಾಮರ್ಥ್ಯ ಕುಂಠಿತವಾಗುತ್ತಿರುವ ಬಗೆಗಿನ ಆತಂಕವಿದು. ನಮ್ಮ ಕಿವಿ ಮತ್ತು ಕೇಳುವ ಸಾಧ್ಯತೆಯನ್ನು ಜತನ ಮಾಡುವ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಪ್ರತಿ ವರ್ಷ ಮಾರ್ಚ್ 3ರಂದು ವಿಶ್ವ ಶ್ರವಣ ದಿನವನ್ನು ಆಚರಿಸಲಾಗುತ್ತದೆ. ಈ ವರ್ಷದ ಘೋಷವಾಕ್ಯ- “ಎಲ್ಲರಿಗೂ ಶ್ರವಣ ಮತ್ತು ಶ್ರವಣೇಂದ್ರಿಯದ ಆರೈಕೆ” (Ear and hearing care for all)
ಈಗಿನ ಬದುಕೇ ಗದ್ದಲದ್ದು. ಮನೆಯಿಂದ ಹೊರಗೆ ಬಂದರೆ ಟ್ರಾಫಿಕ್ಕಿನ ಗಲಾಟೆ, ಕಾರ್ಖಾನೆಗಳು, ರಸ್ತೆ- ಕಟ್ಟಡ ಇತ್ಯಾದಿಗಳ ನಿರ್ಮಾಣ ಕೆಲಸಗಳು- ಕಿವಿಗೆ ಬೇಕಾದ್ದು ಕೇಳುವುದಕ್ಕೆ ಆಸ್ಪದವೇ ಇಲ್ಲದಷ್ಟು ಶಬ್ದ. ಮನೆಯೊಳಗೆ ಹೋದರೆ ಫ್ರಿಜ್, ಟಿವಿ, ವಾಷಿಂಗ್ ಮಿಷನ್, ಮಿಕ್ಸರ್, ಕುಕ್ಕರ್, ಫೋನು, ಫ್ಯಾನ್- ಅಂತೂ ಒಂದಿಲ್ಲೊಂದು ದುಂಬಿಯಂತೆ ಗುಂ…ಯ್ ಗುಟ್ಟುತ್ತಲೇ ಇರುತ್ತದೆ. ರಾತ್ರಿಯ ನೀರವತೆಯಲ್ಲಿ ನಾವು ಇಯರ್‌ಫೋನ್ ಕಿವಿಗೆ ತುರುಕಿಕೊಂಡರೆ- ಅಲ್ಲಿಗೆ ಮನದ ಕದ ತಟ್ಟುವ ಸೌಮ್ಯ ನಾದಕ್ಕೆ ಬದುಕಿನಲ್ಲಿ ಎಡೆಯೇ ಇಲ್ಲ. ನಮಗರಿವಿಲ್ಲದಿದ್ದರೂ ಬಡಪಾಯಿ ಕಿವಿಯಂತೂ ಸದಾ ಜಾಗೃತವಾಗಿಯೇ ಇರಬೇಕಲ್ಲ.
ಇದಿಷ್ಟು ಸಾಲದೆಂಬಂತೆ ನಾನಾ ರೀತಿಯ ಔಷಧಿಗಳು, ಯಾವುದಕ್ಕೂ ಸಲ್ಲದ ಆಹಾರಕ್ರಮ, ಜಡಭರತನಂಥ ಜೀವನಶೈಲಿ ಮತ್ತು ಕುಲಗೆಟ್ಟ ಚಟಗಳು – ಕಿವಿಯ ಶಕ್ತಿ ಕುಂದದೆ ಇನ್ನೇನಾದೀತು? ಇತ್ತೀಚಿನ ಅಧ್ಯಯನದ ಪ್ರಕಾರ, ಧೂಮಪಾನಿಗಳಿಗೆ ಕೇಳುವ ಸಾಮರ್ಥ್ಯ ಉಳಿದರಿಗಿಂತ ಕಡಿಮೆಯಂತೆ. ಸಿಗರೇಟ್ ಬಿಡುವ ಬಗೆಗಿನ ಬುದ್ಧಿ ಮಾತನ್ನು ಅವರು ಕೇಳದೆ ಇರುವುದಕ್ಕೆ ಕಿವಿ ಸರಿಯಿಲ್ಲದ್ದೇ ಕಾರಣ ಎನ್ನಬೇಡಿ ಮತ್ತೆ! ಸಿಗರೇಟ್ ತ್ಯಜಿಸಿದರೆ ಕಿವುಡುತನದ ಅಪಾಯ ಕ್ರಮೇಣ ಕಡಿಮೆಯಾಗುತ್ತದೆ ಎಂಬುದನ್ನೂ ಈ ಅಧ್ಯಯನ ತಿಳಿಸಿದೆ.
ಇದನ್ನೂ ಓದಿ: World Wildlife Day: ಇಂದು ವಿಶ್ವ ವನ್ಯಜೀವಿ ದಿನ: ಏನಿದರ ಮಹತ್ವ?
ವಿಶ್ವ ಆರೋಗ್ಯ ಸಂಸ್ಥೆಯ ಮಾಹಿತಿಯ ಪ್ರಕಾರ, ಜಗತ್ತಿನಲ್ಲಿ 15 ಕೋಟಿ ಮಂದಿ ಕಿವುಡುತನದಿಂದ ನರಳುತ್ತಿದ್ದಾರೆ. 2050ರ ವೇಳೆಗೆ ಈ ಸಂಖ್ಯೆ 25 ಕೋಟಿ ತಲುಪುವ ನಿರೀಕ್ಷೆಯಿದೆ. ಅದರಲ್ಲೂ ಯುವ ಜನತೆ ಬಲು ಬೇಗನೆ ತಮ್ಮ ಶ್ರವಣ ಸಾಮರ್ಥ್ಯ ಕಳೆದುಕೊಳ್ಳುತ್ತಿದ್ದಾರೆ ಎಂಬುದು ಆತಂಕ ಹುಟ್ಟಿಸುವ ಸಂಗತಿಯಾಗಿದೆ. ಅತಿಯಾಗಿ ಇಯರ್ ಫೋನ್ ಬಳಸುವುದು ಒಂದು ಕಾರಣವಾದರೆ, ಸಿಗರೇಟ್ ಮತ್ತು ಆಲ್ಕೊಹಾಲ್ ಇನ್ನೊಂದು ಕಾರಣ. ಅಮೆರಿಕನ್ ಜರ್ನಲ್ ಆಫ್ ಮೆಡಿಸಿನ್‌ನಲ್ಲಿ ಪ್ರಕಟವಾದ ಅಧ್ಯಯನವೊಂದು ಈ ಬಗ್ಗೆ ವಿವರವಾಗಿ ಬೆಳಕು ಚೆಲ್ಲಿದೆ. 15.34 ಮಂದಿ ಯುವ ಜನರನ್ನು ಬಳಸಿಕೊಂಡು ನಡೆಸಲಾಗಿದ್ದ ಅಧ್ಯಯನದಲ್ಲಿ, 2760 ಮಂದಿ ಈಗಾಗಲೇ ಶ್ರವಣ ಸಮಸ್ಯೆಗೆ ತುತ್ತಾಗಿದ್ದರು. ಇವರಲ್ಲಿ ಹೆಚ್ಚಿನವರು ಸಿಗರೇಟ್ ಪ್ರೇಮಿಗಳು.
ತಜ್ಞರ ಸಲಹೆಗಳನ್ನು ಕೇಳಿ
ಸದಾ ಇಯರ್ ಫೋನ್ ಬಳಸುವವರಿಗೂ ತಜ್ಞರು ಕೆಲವು ಸಲಹೆಗಳನ್ನು ನೀಡುತ್ತಾರೆ. ಉಪಕರಣದ ಶೇ. 60ರಷ್ಟು ಸಾಮರ್ಥ್ಯ ಮೀರಿ ವಾಲ್ಯೂಮ್ ಇಟ್ಟುಕೊಳ್ಳುವುದು ಬೇಡ. ಇದಕ್ಕಿಂತ ಹೆಚ್ಚಿನ ವಾಲ್ಯೂಮ್‌ನಲ್ಲಿ ಇಯರ್‌ಫೋನ್ ಬಳಸುವವರು, ದಿನಕ್ಕೆ 90 ನಿಮಿಷಕ್ಕಿಂತ ಹೆಚ್ಚಿನ ಹೊತ್ತು ಬಳಸುವುದು ಸಲ್ಲದು.
ದೀರ್ಘ ಕಾಲ ಇಯರ್ ಫೋನ್ ಬಳಸುವವರು ಹೊರಗಿನ ಗದ್ದಲ ಕಡಿಮೆ ಮಾಡುವ ನಾಯ್ಸ್ ಕ್ಯಾನ್ಸಲಿಂಗ್ ಉಪಕರಣಗಳನ್ನು ಬಳಸುವುದು ಒಳ್ಳೆಯದು. ಹೊರಗಿನ ಗಲಾಟೆ ಕಡಿಮೆ ಇದ್ದರೆ, ಕಡಿಮೆ ವಾಲ್ಯೂಮ್‌ನಲ್ಲೇ ಇಯರ್‌ಫೋನ್ ಬಳಸಬಹುದು.
ಆಗಾಗಿ ಇಯರ್‌ಫೋನ್‌ನಿಂದ ಬಿಡುವು ಅಗತ್ಯ. ತಾಸಿಗೊಮ್ಮೆ ಇಯರ್ ಫೋನ್ ತೆಗೆದು ಕೆಲವು ನಿಮಿಷಗಳವರೆಗೆ ಕಿವಿಗೆ ವಿಶ್ರಾಂತಿ ನೀಡಿ. ಕೆಲಸ ಮಾಡುವ ಸ್ಥಳದಲ್ಲಿ ಸಿಕ್ಕಾಪಟ್ಟೆ ಗದ್ದಲ ಇದ್ದರೆ, ಅಲ್ಲಿಂದ ಹೊರಗೆ ಹೋದ ಮೇಲೆ ಮತ್ತೆ ಇಯರ್‌ಫೋನ್ ಬಳಸಬೇಡಿ. ಕಿವಿಯ ಮೇಲೆ ಕರುಣೆ ತೋರಿ!
ಕಣ್ಣು, ಕಿವಿ ಅಥವಾ ಮೂಗಿನಲ್ಲಿ ಯಾವುದೇ ಸೋಂಕಿದ್ದರೆ, ಅದನ್ನು ಆದಷ್ಟೂ ಶೀಘ್ರ ವೈದ್ಯರಲ್ಲಿ ತೋರಿಸಿ. ಇಂಥ ಸೋಂಕುಗಳು ನೇರವಾಗಿ ಕೇಳುವ ಸಾಧ್ಯತೆಯ ಮೇಲೆ ಪರಿಣಾಮ ಬೀರುತ್ತವೆ. ಹಾಗೆಯೇ, ಸಿಕ್ಕಿದ ಯಾವುದೋ ಡ್ರಾಪ್ ಕಿವಿಗೆ ಹಾಕುವುದು ಅಥವಾ ಕಡ್ಡಿ, ಪೆನ್ನು, ಪೆನ್ಸಿಲ್‌ನಂಥ ಏನನ್ನೂ ಕಿವಿಯೊಳಗೆ ಹಾಕಿ ಶುಚಿ ಮಾಡುವ ಸಾಹಸ ಕೂಡದು. ರಕ್ತದೊತ್ತಡ ಮತ್ತು ಹೃದ್ರೋಗಗಳು ಸಹ ಕಿವಿಯ ಮೇಲೆ ಘೋರ ಪರಿಣಾಮ ಬೀರಬಲ್ಲವು.
ನಿಯಮಿತವಾಗಿ ವ್ಯಾಯಾಮ ಮಾಡುವುದು ಶ್ರವಣೇಂದ್ರಿಯದ ಮೇಲೆ ಸಕಾರಾತ್ಮಕ ಪರಿಣಾಮ ಬೀರಬಲ್ಲದು. ವ್ಯಾಯಾಮದಿಂದ ದೇಹದೆಲ್ಲೆಡೆ ರಕ್ತ ಸಂಚಲನೆ ಸರಾಗವಾಗಿ, ಆಮ್ಲಜನಕದ ಮಟ್ಟ ಹೆಚ್ಚಿದಂತೆ ಕಿವಿಗೂ ಆಗುತ್ತದೆ. ಅದರಲ್ಲೂ ಹೆಚ್ಚಿನ ಗದ್ದಲವಿಲ್ಲದೆ ಮಾಡುವ ಯೋಗ-ಧ್ಯಾನದಂಥವು ಕಿವಿಯ ಆರೋಗ್ಯಕ್ಕೂ ಒಳ್ಳೆಯದು.