Site icon Vistara News

Criminal politics | ಕೈಗೆ ಸಿಕ್ಕಾಗ ಬಿಟ್ಟುಬಿಟ್ರು, ಈಗ ಪೊಲೀಸರು ಕೇಳಿದ್ರೆ ಕಾನೂನು ಮಾತಾಡ್ತಾ ಇದಾನೆ ಸೈಲೆಂಟ್‌ ಸುನಿಲ!

silent sunila

ಬೆಂಗಳೂರು: ರಾಜ್ಯದೆಲ್ಲೆಡೆ ಸದ್ದು ಮಾಡುತ್ತಿರುವ ರೌಡಿ ಪಾಲಿಟಿಕ್ಸ್‌ನ (Criminal politics) ನಡುವೆಯೇ ರೌಡಿ ಶೀಟರ್‌ ಸೈಲೆಂಟ್‌ ಸುನಿಲ್‌ ಪೊಲೀಸರಿಗೆ ಚೆನ್ನಾಗಿ ಚಳ್ಳೆ ಹಣ್ಣು ತಿನ್ನಿಸುತ್ತಿದ್ದಾನೆ. ಜತೆಗೆ ಪೊಲೀಸರ ಮುಂದೆ ಕಾನೂನು ಮಾತನಾಡುತ್ತಿದ್ದಾನೆ!

ಕಳೆದ ನವೆಂಬರ್‌ ೨೩ರಂದು ಪೊಲೀಸರು ಎಲ್ಲ ರೌಡಿ ಶೀಟರ್‌ಗಳ ಮನೆಗೆ ದಾಳಿ ಮಾಡಿ ಸುಮಾರು ೨೬ ಮಂದಿಯನ್ನು ಬಂಧಿಸಿ ಠಾಣೆಗೆ ಕರೆ ತಂದಿದ್ದರು. ಸೈಲೆಂಟ್‌ ಸುನಿಲ್‌ ಸೇರಿದಂತೆ ಹತ್ತಾರು ರೌಡಿಗಳು ಈ ದಾಳಿ ವೇಳೆ ತಪ್ಪಿಸಿಕೊಂಡಿದ್ದರು. ಆತ ತಪ್ಪಿಸಿಕೊಂಡಿದ್ದು ಆತನಿಗಾಗಿ ಹುಡುಕಾಡುತ್ತಿದ್ದೇವೆ ಎಂದು ಪೊಲೀಸ್‌ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿತ್ತು.

ಈ ನಡುವೆ ಕಳೆದ ಭಾನುವಾರ ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಸೈಲೆಂಟ್‌ ಸುನೀಲ್‌ ನೇತೃತ್ವದಲ್ಲಿ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು. ಇದರಲ್ಲಿ ಬಿಜೆಪಿ ನಾಯಕರು ಭಾಗವಹಿಸಿದ್ದರು. ಜತೆಗೆ ಪೊಲೀಸರು ಕೂಡಾ ಭದ್ರತೆ ನೀಡಿದ್ದರು. ಒಂದೊಮ್ಮೆ ಪೊಲೀಸ್‌ ಇಲಾಖೆಗೆ ನಿಜವಾದ ಬದ್ಧತೆ ಇದ್ದರೆ ಆವತ್ತೇ ಆತನನ್ನು ಹಿಡಿಯಬಹುದಿತ್ತು ಎಂಬ ಅಭಿಪ್ರಾಯವಿದೆ. ಅದರೆ, ಆವತ್ತು ಕೈಗೆ ಸಿಕ್ಕಿದ ಸುನಿಲ್‌ನನ್ನು ಬಿಟ್ಟು ಕಳುಹಿಸಿದ ಪೊಲೀಸರು ಈಗ ಪರಿತಪಿಸುವಂತಾಗಿದೆ. ಯಾಕೆಂದರೆ, ಆತ ಈಗ ಕಾನೂನು ಮಾತನಾಡಲು ಶುರು ಮಾಡಿದ್ದಾನೆ!

ಒಂದೆಡೆ ಹುಡುಕಾಟ, ಇನ್ನೊಂದೆಡೆ ಕಾನೂನು!
ಸುನಿಲ್‌ನನ್ನು ಸಿಕ್ಕಿದಾಗ ಬಂಧಿಸದ ಪೊಲೀಸರು ಈಗ ಆತನಿಗಾಗಿ ಹುಡುಕಾಟ ನಡೆಸುತ್ತಿದ್ದೇವೆ ಎಂದು ಹೇಳುತ್ತಾರೆ. ಜತೆಗೆ ʻʻನಮ್ಮ ಭಯಕ್ಕೆ ಕೆಲ ರೌಡಿಗಳು ಬೆಂಗಳೂರು ಬಿಟ್ಟು ತಮಿಳು ಬಾರ್ಡರ್‌ನಲ್ಲಿ ತಲೆಮರೆಸಿಕೊಂಡಿದ್ದಾರೆʼʼ ಎಂದು ಹೇಳುತ್ತಿದ್ದಾರೆ. ಸದ್ಯ ಎರಡು ದಿನಗಳಿಂದ ಸೈಲೆಂಟ್ ಸುನೀಲನ ಪತ್ತೆಗೆ ಶೋಧ ನಡೆಸುತ್ತಿರುವ ಪೊಲೀಸರಿಗೆ ಆತ ಎಲ್ಲಿದ್ದಾನೆ ಎಂಬ ಬಗ್ಗೆ ಸಣ್ಣ ಮಾಹಿತಿಯೂ ಇಲ್ಲದಂತಾಗಿದೆ. ಸುನೀಲನ ಪತ್ತೆಗೆ ಇಳಿದ ಪೊಲೀಸರು ಮೂರು ವಿಶೇಷ ತಂಡಗಳಾಗಿ ಮನೆ, ತೋಟ, ಸ್ನೇಹಿತರ ಅಡ್ಡೆಗಳು ಅಂತಾ ಸಿಕ್ಕ ಸಿಕ್ಕಲ್ಲಿ ಹುಡುಕಾಟ ನಡೆಸಿದ್ದಾರೆ.

ಇದರ ಮಧ್ಯೆ ಸುನಿಲ್‌ ಮಂಗಳವಾರ ವಕೀಲರೊಂದಿಗೆ ಸಿಸಿಬಿ ಕಚೇರಿಗೆ ಹಾಜರಾಗುತ್ತಾನೆ ಅಂತ ಸುದ್ದಿಯಾಗಿತ್ತು. ಆದರೆ, ಹಾಜರಾಗಿದ್ದು ಕೇವಲ ಸುನೀಲನ ಪರ ವಕೀಲರಾದ ಪ್ರಮೋದ್ ಚಂದ್ರ. ಹಾಗೆ ಹಾಜರಾದ ವಕೀಲ ಪ್ರಮೋದ್ ಚಂದ್ರ ರೌಡಿ ಸ್ಕ್ವಾಡ್‌ನ ಎಸಿಪಿ ಜೊತೆ ಸುನೀಲನ ಸರ್ಚಿಂಗ್ ಸಂಬಂಧಿಸಿದಂತೆ ಚರ್ಚೆ ನಡೆಸಿದ್ದಾರೆ.

ʻʻಯಾವ ವಿಚಾರಕ್ಕಾಗಿ ಸುನಿಲ್‌ನ ಹುಡುಕಾಡುತ್ತಿದ್ದೀರಿ. ಅವರ ಮೇಲೆ ಯಾವುದಾದ್ರೂ ಕೇಸ್ ಇದೀಯಾ..? ಕೇಸ್ ಗಳು ಏನಾದರೂ ಇದ್ದರೆ ಕೇಸು ಕೊಡಿ ಅವರು ಬಂದು ಹಾಜರಾಗ್ತಾರೆ. ಅದು ಬಿಟ್ಟು ಸೈಲೆಂಟ್ ಸುನೀಲ್ ಎಲ್ಲಿಯೂ ನಾಪತ್ತೆಯಾಗಿಲ್ಲ. ಮಾಧ್ಯಮಗಳ ಮುಂದೆ ಸುಳ್ಳು ಹೇಳುವ ಪ್ರಯತ್ನ ಮಾಡ್ಬೇಡಿ. ಅದಲ್ಲದೆ ಈ ಹಿಂದೆ ಅಲೋಕ್ ಕುಮಾರ್ ಜಂಟಿ ಪೊಲೀಸ್ ಆಯುಕ್ತರಾಗಿದ್ದ ವೇಳೆ ವಿಚಾರಣೆ ನೆಪದಲ್ಲಿ ನಡೆದುಕೊಂಡ ರೀತಿಯ ವಿಡಿಯೋ ಸಂಬಂಧ ಹೈಕೋರ್ಟ್ ಆದೇಶವಿದೆ. ಯಾವ ಕಾರಣಕ್ಕಾಗಿ ವಿಚಾರಣೆಗೆ ಕರೆಯುತ್ತೀರೋ ಅದಕ್ಕೆ ಸಂಬಂಧಿಸಿದಂತೆ ನೋಟಿಸ್ ನೀಡಬೇಕು. ನೋಟಿಸ್ ಕೊಟ್ಟರೆ ನೀವು ಸೂಚಿಸಿದ ಅಧಿಕಾರಿ ಮುಂದೆ ಹಾಜರಾಗುತ್ತೇವೆʼʼ ಎಂದು ಹೇಳಿದ್ದಾರೆ.

ಇದನ್ನೂ ಓದಿ | ರೌಡಿ ಸುನಿಲ್‌ BJP ಸೇರ್ಪಡೆ ಇಲ್ಲ ಎಂದ ನಳಿನ್‌ ಕುಮಾರ್‌ ಕಟೀಲ್‌; ಈಗಾಗಲೆ ಸೇರಿರುವ ಫೈಟರ್‌ ರವಿ ಬಗ್ಗೆ ʼಸೈಲೆಂಟ್‌ʼ

Exit mobile version