Site icon Vistara News

Karnataka Election: ರಾಜ್ಯದಲ್ಲಿ ನೀತಿ ಸಂಹಿತೆ ಜಾರಿಯಾದ ದಿನದಿಂದ ಒಟ್ಟು 379 ಕೋಟಿ ರೂ. ಮೌಲ್ಯದ ವಸ್ತುಗಳು ಜಪ್ತಿ

Items worth Rs 379 crore seized in the state

ಬೆಂಗಳೂರು: ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ‌ ಚುನಾವಣಾ ಅಕ್ರಮಗಳನ್ನು ತಡೆಯಲು ಚೆಕ್‌ಪೋಸ್ಟ್‌ಗಳಲ್ಲಿ ಪೊಲೀಸರಿಂದ ಬಿಗಿ ತಪಾಸಣೆ ನಡೆಸಲಾಗುತ್ತಿದೆ. ಈ ನಡುವೆ ಚುನಾವಣಾ ನೀತಿ ಸಂಹಿತೆ ಜಾರಿಯಾದ ಮಾರ್ಚ್​​ 29ರಿಂದ ಏಪ್ರಿಲ್ 9 ರವರೆಗೆ 150 ಕೋಟಿ ರೂ. ನಗದು ಸೇರಿ ಬರೋಬ್ಬರಿ 379.36 ಕೋಟಿ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.

ಚುನಾವಣೆ ಹಿನ್ನೆಲೆಯಲ್ಲಿ ಮತದಾರರಿಗೆ ಆಮಿಷವೊಡ್ಡಲು ಸಾಗಿಸುತ್ತಿದ್ದ ಹಾಗೂ ಸಂಗ್ರಹಿಸಿದ್ದ ನಗದು ಸೇರಿ ಅಪಾರ ಪ್ರಮಾಣದ ಉಚಿತ ಉಡುಗೊರೆ, ಮದ್ಯ, ಸೀರೆ, ಚಿನ್ನಾಭರಣಗಳನ್ನು ವಿಚಕ್ಷಣ ದಳ, ಫ್ಲೈಯಿಂಗ್‌ ಸ್ಕ್ವಾಡ್‌, ಪೊಲೀಸರು ಹಾಗೂ ಆದಾಯ ತೆರಿಗೆ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಇವುಗಳಲ್ಲಿ 150.05 ಕೋಟಿ ರೂ. ನಗದು, 24.23 ರೂ. ಮೌಲ್ಯದ ಉಡುಗೊರೆಗಳು, 84.62 ಕೋಟಿ ರೂ. ಮೌಲ್ಯದ 22.57 ಲಕ್ಷ ಲೀಟರ್‌ ಮದ್ಯ, 23.84 ಕೋಟಿ ರೂ. ಮೌಲ್ಯದ ಮಾದಕ ವಸ್ತುಗಳು, 91.96 ಕೋಟಿ ರೂ. ಮೌಲ್ಯದ 179.82 ಕೆಜಿ ಚಿನ್ನ, 4.63 ಕೋಟಿ ರೂಪಾಯಿ ಮೌಲ್ಯದ 669.41 ಕೆ.ಜಿ ಬೆಳ್ಳಿ ಸೇರಿ 379.36 ಕೋಟಿ ರೂ. ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಚುನಾವಣಾ ಆಯೋಗ ಮಾಹಿತಿ ನೀಡಿದೆ.

ಇನ್ನು ಚುನಾವಣೆ ಘೋಷಣೆ ಆದ ದಿನದಿಂದಲೂ ತ್ವರಿತ ಕಾರ್ಯಾಚರಣೆ ನಡೆಸಲಾಗಿದ್ದು, ಚುನಾವಣಾ ಅಕ್ರಮಗಳಿಗೆ ಸಂಬಂಧಿಸಿದಂತೆ ರಾಜ್ಯಾದ್ಯಂತ ಪೊಲೀಸರು 2,970 ಎಫ್​ಐಆರ್‌ ದಾಖಲಿಸಿದ್ದಾರೆ. ಅದೇ ರೀತಿ 69,865 ಶಸ್ತ್ರಾಸ್ತ್ರಗಳನ್ನು ಠೇವಣಿ ಮಾಡಿಸಿಕೊಳ್ಳಲಾಗಿದ್ದು, 18 ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆದಿದ್ದು, 20 ಶಸ್ತ್ರಾಸ್ತ್ರಗಳ ಪರವಾನಗಿ ರದ್ದುಗೊಳಿಸಲಾಗಿದೆ. ಸಿಆರ್‌ಪಿಸಿ ಕಾಯ್ದೆಯಡಿ 5,784 ಪ್ರಕರಣ ದಾಖಲಿಸಲಾಗಿದ್ದು, 11,843 ವ್ಯಕ್ತಿಗಳಿಂದ ಮುಚ್ಚಳಿಕೆ ಪತ್ರ ಬರೆಸಿಕೊಂಡಿದ್ದು, 17,375 ಜಾಮೀನು ರಹಿತ ವಾರಂಟ್‌ ನೀಡಲಾಗಿದೆ.

ಇದನ್ನೂ ಓದಿ | Karnataka Election: ಮೇ 10 ನಿರ್ಣಾಯಕ ದಿನ; ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಭವಿಷ್ಯ ನಿರ್ಧರಿಸಲು ಮತದಾರರು ಸಿದ್ಧ

ಅದೇ ರೀತಿ ಅಬಕಾರಿ ಇಲಾಖೆ 3,662 ಪ್ರಕರಣ, 3,387 ಪರವಾನಗಿ ಉಲ್ಲಂಘನೆ, 103 ಎನ್‌ಡಿಪಿಎಸ್‌ ಹಾಗೂ ಅಬಕಾರಿ ಕಾಯ್ದೆ 1965ರ ಸೆಕ್ಷನ್‌ 15(ಎ) ಅಡಿ 36,573 ಪ್ರಕರಣ ದಾಖಲಾಗಿದ್ದು, 2545 ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ.

ಫಾರ್ಮಸಿ ಕಂಪನಿಯಲ್ಲಿ 1.9 ಕೋಟಿ ರೂಪಾಯಿ ಜಪ್ತಿ

ಬೆಂಗಳೂರು: ನಗರದ ಕಾಟನ್ ಪೇಟೆಯ ಫಾರ್ಮಸಿ ಕಂಪನಿ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿ, ಸೂಕ್ತ ದಾಖಲೆ ಇಲ್ಲದ 1.9 ಕೋಟಿ ರೂಪಾಯಿ ಹಣವನ್ನು ಜಪ್ತಿ ಮಾಡಿದ್ದಾರೆ. ಜತೆಗೆ ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ. ಸಿಸಿಬಿ ಪೊಲೀಸರು ಫ್ಲೈಯಿಂಗ್ ಸ್ಕ್ವಾಡ್ ಜತೆ ಕಾರ್ಯಾಚರಣೆ ನಡೆಸಿದ್ದು, ಪ್ರಕರಣವನ್ನು ಆದಾಯ ತೆರಿಗೆ ಇಲಾಖೆಗೆ ವರ್ಗಾವಣೆ ಮಾಡಲು ಸಿದ್ಧತೆ ನಡೆಸುತ್ತಿದ್ದಾರೆ.

Exit mobile version