Site icon Vistara News

Shivanand Patil Somajal: ಸ್ವಗ್ರಾಮದಲ್ಲಿ ಸಿಂದಗಿ ಜೆಡಿಎಸ್ ಅಭ್ಯರ್ಥಿ ಶಿವಾನಂದ ಪಾಟೀಲ ಸೋಮಜಾಳ ಅಂತ್ಯಸಂಸ್ಕಾರ

Sindagi JDS candidate Shivanand Patil Somajal cremated in his native village

ವಿಜಯಪುರ: ಹೃದಯಾಘಾತದಿಂದ ನಿಧನರಾದ ಸಿಂದಗಿ ಜೆಡಿಎಸ್‌ ಅಭ್ಯರ್ಥಿ ಶಿವಾನಂದ ಪಾಟೀಲ ಸೋಮಜಾಳ (Shivanand Patil Somajal) ಅವರ ಅಂತ್ಯಸಂಸ್ಕಾರವು ಸಿಂದಗಿ ತಾಲೂಕಿನ ಸ್ವಗ್ರಾಮ ಸೋಮಜಾಳದಲ್ಲಿ ಶನಿವಾರ ನೆರವೇರಿತು. ಸಾವಿರಾರು ಬಂಧುಗಳು, ಕಾರ್ಯಕರ್ತರ ಸಮ್ಮುಖದಲ್ಲಿ ಹಿಂದು ಧರ್ಮದ ಸಂಪ್ರದಾಯದಂತೆ ಅಂತಿಮ ವಿಧಿ ವಿಧಾನ ನಡೆಯಿತು.

ವಿಜಯಪುರದಲ್ಲಿ ಜೆಡಿಎಸ್‌ ಪಂಚರತ್ನ ಯಾತ್ರೆಯಲ್ಲಿ ಶುಕ್ರವಾರ ಭಾಗವಹಿಸಿದ ಬಳಿಕ ಸಿಂದಗಿಯಲ್ಲಿ ಹೃದಯಾಘಾತದಿಂದ ಶಿವಾನಂದ ಪಾಟೀಲ ಸೋಮಜಾಳ ಅವರು ಮೃತಪಟ್ಟಿದ್ದರು. ‌ಹೀಗಾಗಿ ಶನಿವಾರ ಅಂತಿಮ ಯಾತ್ರೆ ನಡೆಸಿದ ಬಳಿಕ ಸ್ವಗ್ರಾಮದಲ್ಲಿ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು.

ಅಂತಿಮ ದರ್ಶನ ಪಡೆದ ಎಚ್.ಡಿ.ಕುಮಾರಸ್ವಾಮಿ

ಪಕ್ಷದ ಅಭ್ಯರ್ಥಿ ಮೃತರಾದ ಹಿನ್ನೆಲೆಯಲ್ಲಿ ಮುದ್ದೇಬಿಹಾಳ ಕ್ಷೇತ್ರದಲ್ಲಿ ಪಂಚರತ್ನ ಯಾತ್ರೆಯನ್ನು ರದ್ದು ಮಾಡಿ ಶಿವಾನಂದ ಪಾಟೀಲ ‌ಸೋಮಜಾಳ ಅವರ ಅಂತ್ಯ ಸಂಸ್ಕಾರದಲ್ಲಿ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ಪಾಲ್ಗೊಂಡಿದ್ದರು.

ಇದನ್ನೂ ಓದಿ | Karnataka Election: ಬೂತ್ ವಿಜಯ ಅಭಿಯಾನವು ವಿಧಾನಸಭಾ ಚುನಾವಣೆಗೆ ಬಿಜೆಪಿ ಸಜ್ಜಾಗಿರುವುದರ ದ್ಯೋತಕ: ಮೇಘರಾಜ್‌

ಶಿವಾನಂದ ಪಾಟೀಲ ಸೋಮಜಾಳ

ಈ ವೇಳೆ ಸೋಮಜಾಳ ಅವರ ಪತ್ನಿ, ಮಕ್ಕಳಿಗೆ ಸಾಂತ್ವನ ಹೇಳಿ, ಆತ್ಮಸ್ಥೈರ್ಯ ತುಂಬಿ ಮಾತನಾಡಿದ ಕುಮಾರಸ್ವಾಮಿ ಅವರು, ಸಿಂದಗಿ ಮತಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಸ್ನೇಹಿತ ಶಿವಾನಂದ ಪಾಟೀಲ ಅವರನ್ನು ಘೋಷಣೆ ಮಾಡಿದ್ದೆವು. ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದ ಅವರು, ನಾನಾ ರೀತಿಯ ಸಮಾಜ ಸೇವೆ ಮಾಡುತ್ತಿದ್ದರು ಎಂದು ಹೇಳಿದರು.

ಮೊದಲು ಬಿಜೆಪಿ ಸಕ್ರಿಯ ಕಾರ್ಯಕರ್ತರಾಗಿದ್ದ ಅವರಿಗೆ ಆ ಪಕ್ಷದಲ್ಲಿ ಸೂಕ್ತ ಅವಕಾಶ ಸಿಗದಿದ್ದಾಗ ನಾಗಠಾಣ ಶಾಸಕ ದೇವಾನಂದ್ ಚವ್ಹಾಣ ಮೂಲಕ ಜೆಡಿಎಸ್‌ ಸೇರ್ಪಡೆಯಾಗಿದ್ದರು. ಜನಪರ ಕಾಳಜಿಗಿಂತ ಅವರ ನಡವಳಿಕೆ ಗಮನಿ‌ಸಿ, ಅಭ್ಯರ್ಥಿಯನ್ನಾಗಿ ಘೋಷಿಸಿದೆ. ಅವರ ಹೆಸರು ಘೋಷಣೆಯಾದ ಕ್ಷಣದಿಂದ ಪಕ್ಷ ಸಂಘಟನೆಗಾಗಿ ಶ್ರಮಿಸಿದ್ದ ಶಿವಾನಂದ ಪಾಟೀಲ, ಸಿಂದಗಿಯಲ್ಲಿ ಯಶಸ್ವಿಯಾಗಿ ಪಂಚರತ್ನ ಕಾರ್ಯಕ್ರಮ ಆಯೋಜಿಸಿದ್ದರು ಎಂದು ಸ್ಮರಿಸಿದರು.

ಇದನ್ನೂ ಓದಿ | Prajadwani Yatra : ಕೊಟ್ಟ ಭರವಸೆಗಳನ್ನು ಈಡೇರಿಸದಿದ್ದರೆ ರಾಜಕೀಯ ನಿವೃತ್ತಿ: ಮಾಜಿ ಸಿಎಂ ಸಿದ್ದರಾಮಯ್ಯ

ಚುನಾವಣೆಯಲ್ಲಿ ಗೆದ್ದು ನನ್ನ ಜತೆಗೆ ವಿಧಾನಸಭೆಗೆ ಬರುತ್ತಾರೆ ಎಂದು ಭಾವಿಸಿದ್ದೆ. ಆದರೆ, ವಿಧಿಯಾಟವೇ ಬೇರೆಯೇ ಆಗಿದೆ. ಅವರಿಗೆ ಅಂತಿಮ ವಿದಾಯ ಹೇಳುವ ದಿನ ಬರುತ್ತದೆ ಎಂದು ನಿರೀಕ್ಷೆ ಮಾಡಿರಲಿಲ್ಲ. ಈ ದುಃಖವನ್ನು ಭರಿಸುವ ಶಕ್ತಿಯನ್ನು ದೇವರು ಅವರ ಕುಟುಂಬಕ್ಕೆ ನೀಡಲಿ ಎಂದು ಪ್ರಾರ್ಥಿಸುವುದಾಗಿ ತಿಳಿಸಿದರು.

Exit mobile version