ಬೆಂಗಳೂರು: ಐಪಿಎಸ್ ಅಧಿಕಾರಿ ಡಿ. ರೂಪಾ ಹಾಗೂ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ( Sindhuri Vs Roopa) ನಡುವಿನ ಕಾಳಗದಲ್ಲಿ ಇಬ್ಬರನ್ನೂ ರಾಜ್ಯ ಸರ್ಕಾರ ವರ್ಗಾವಣೆ ಮಾಡಿದೆ. ಆದರೆ ಇಬ್ಬರಿಗೂ ಯಾವುದೇ ಜಾಗ ತೋರಿಸದೆ, ಇದ್ದ ಸ್ಥಳದಿಂದ ಎತ್ತಂಗಡಿ ಮಾಡಿದೆ. ಇದೇ ವೇಳೆ ರೂಪಾ ಪತಿ ಹಾಗೂ ಹಿರಿಯ ಐಎಎಸ್ ಅಧಿಕಾರಿ ಮೌನೀಶ್ ಮೌದ್ಗಿಲ್ ಅವರನ್ನೂ ವರ್ಗಾವಣೆ ಮಾಡಲಾಗಿದೆ.
ಇತ್ತೀಚೆಗೆ ಕೃಷ್ಣರಾಜ ಕ್ಷೇತ್ರದ ಶಾಸಕ ಸಾ. ರಾ. ಮಹೇಶ್ ಜತೆಗೆ ರೋಹಿಣಿ ಸಿಂಧೂರಿ ಸಂಧಾನ ನಡೆಸಿದ ಸಂಧಾನ ಸಭೆ ಕುರಿತು ಮಾಧ್ಯಮಗಳಲ್ಲಿ ಸುದ್ದಿ ಪ್ರಕಟವಾಗಿತ್ತು. ಇದರಿಂದ ಸಿಟ್ಟಿಗೆದ್ದಿದ್ದ ಐಪಿಎಸ್ ಅಧಿಕಾರಿ ಡಿ. ರೂಪಾ, ರೋಹಿಣಿ ಸಿಂಧೂರಿ ವಿರುದ್ಧ 19 ಪ್ರಶ್ನೆ ಹಾಗೂ ಆರೋಪಗಳನ್ನು ಮಾಡಿ ಸರ್ಕಾರಕ್ಕೆ ದೂರು ನೀಡಿದ್ದರು. ಇದೇ ಆರೋಪಗಳನ್ನು ಸಾಮಾಜಿಕ ಜಾಲತಾಣದಲ್ಲೂ ಪ್ರಕಟಿಸಿದ್ದರು. ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದರ ವಿರುದ್ಧ ರೋಹಿಣಿ ಸಿಂಧೂರಿ ಹಾಗೂ ಅವರ ಪತಿ ಸಹ ಆಕ್ರೋಶ ವ್ಯಕ್ತಪಡಿಸಿದ್ದರು.
ಇದೀಗ ರಾಜ್ಯ ಸರ್ಕಾರ ವರ್ಗಾವಣೆ ಆದೇಶ ಪ್ರಕಟಿಸಿದೆ. ರೋಹಿಣಿ ಸಿಂಧೂರಿ ನಿಭಾಯಿಸುತ್ತಿದ್ದ ಮುಜರಾಯಿ ಆಯುಕ್ತೆ ಹುದ್ದೆಯಿಂದ ಎತ್ತಂಗಡಿ ಮಾಡಲಾಗಿದೆ. ಆ ಸ್ಥಳಕ್ಕೆ ಕೌಶಲ ಅಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆಯ ಜಂಟಿ ಕಾರ್ಯದರ್ಶಿ ಎಚ್. ಬಸವರಾಜೇಂದ್ರ ಅವರನ್ನು ನೇಮಿಸಲಾಗಿದೆ. ಆದರೆ ರೋಹಿಣಿ ಸಿಂಧೂರಿ ಅವರಿಗೆ ಯಾವುದೇ ಸ್ಥಳವನ್ನು ತೋರಿಸಿಲ್ಲ.
ಇದನ್ನೂ ಓದಿ: Sindhuri Vs Roopa : ಸಿಂಧೂರಿ ಮೇಲೆ ಯಾವ ಕ್ರಮವೂ ಆಗುತ್ತಿಲ್ಲ ಯಾಕೆ, ಅವರನ್ನು ರಕ್ಷಿಸುತ್ತಿರುವವರು ಯಾರು?: ರೂಪಾ ಪ್ರಶ್ನೆ
ಡಿ. ರೂಪಾ ಕಾರ್ಯನಿರ್ವಹಿಸುತ್ತಿದ್ದ ಕರ್ನಾಟಕ ಕರಕುಶಲ ಅಭಿವೃದ್ಧಿ ನಿಗಮದ ಎಂಡಿ ಹುದ್ದೆಗೆ ಡಿ, ಭಾರತಿ ಅವರನ್ನು ನೇಮಕ ಮಾಡಲಾಗಿದೆ. ಡಿ. ರೂಪಾ ಅವರಿಗೂ ಯಾವುದೇ ಸ್ಥಾನ ತೋರಿಸಿಲ್ಲ.
ಇದೇ ವೇಳೆ, ಡಿ. ರೂಪಾ ಅವರ ಪತಿ ಮತ್ತು ಹಿರಿಯ ಐಎಎಸ್ ಅಧಿಕಾರಿ ಮೌನೀಶ್ ಮೌದ್ಗಿಲ್ ಅವರನ್ನೂ ವರ್ಗಾವಣೆ ಮಾಡಿ ರಾಜ್ಯ ಸರ್ಕಾ ಅಚ್ಚರಿ ಮೂಡಿಸಿದೆ. ರೋಹಿಣಿ ಸಿಂಧೂರಿ ಅವರ ವಿರುದ್ಧ ಆರೋಪ ಮಾಡುವ ಸಂದರ್ಭದಲ್ಲಿ ಮೌನೀಶ್ ಮೌದ್ಗಿಲ್ ಅವರ ಹೆಸರನ್ನೂ ರೂಪಾ ಎಳೆದು ತಂದಿದ್ದರು. ಇದೀಗ ಸರ್ವೇ ಮತ್ತು ಭೂದಾಖಲೆ ಇಲಾಖೆಯ ಆಯುಕ್ತರಾಗಿರುವ ಮುನೀಶ್ ಮೌದ್ಗಿಲ್ ಅವರನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಗೆ (ಆಡಳಿತ ಸುಧಾರಣೆ) ಪ್ರಧಾನ ಕಾರ್ಯದರ್ಶಿಯಾಗಿ ವರ್ಗಾವಣೆ ಮಾಡಲಾಗಿದೆ. ಈ ಸ್ಥಾನದಲ್ಲುದ್ದ ಡಾ. ಶ್ರೀವತ್ಸ ಕೃಷ್ಣ ಅವರನ್ನು ವರ್ಗಾವಣೆ ಮಾಡಲಾಗಿದೆ.
ಮುನೀಶ್ ಮೌದ್ಗಿಲ್ ಅವರ ವರ್ಗಾವಣೆಯಿಂದ ತೆರವಾದ ಸ್ಥಾನಕ್ಕೆ ಸಿ.ಎನ್. ಶ್ರೀಧರ ಅವರನ್ನು ನೇಮಕ ಮಾಡಲಾಗಿದೆ. ಇದು ಈ ಕ್ಷಣದಿಂದಲೇ ಜಾರಿಯಾಗಲಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.