Site icon Vistara News

Sindhuri Vs Roopa : ಡಿ. ರೂಪ ವಿರುದ್ಧ ಕೋರ್ಟ್‌ ಮೆಟ್ಟಿಲೇರಿದ ಸಿಂಧೂರಿ, ನಿರ್ಬಂಧ ಕೋರಿದ ಅರ್ಜಿ ಬಗ್ಗೆ ನಾಳೆ ತೀರ್ಪು

Roopa Moudgil and Rohini Sindhuri

#image_title

ಬೆಂಗಳೂರು: ಐಪಿಎಸ್‌ ಅಧಿಕಾರಿ ಡಿ. ರೂಪಾ ಮತ್ತು ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ನಡುವಿನ ಬೀದಿ ಜಗಳ (Sindhuri Vs Roopa) ಇದೀಗ ಕೋರ್ಟ್‌ ಮೆಟ್ಟಿಲೇರಿದೆ. ಡಿ. ರೂಪಾ ಅವರು ಪದೇಪದೇ ಆರೋಪ ಮಾಡುವುದಕ್ಕೆ ಮತ್ತು ಮಾಧ್ಯಮಗಳು ಅವುಗಳನ್ನು ವರದಿ ಮಾಡುವುದಕ್ಕೆ ತಡೆ ನೀಡುವಂತೆ ಕೋರಿ ರೋಹಿಣಿ ಸಿಂಧೂರಿ ಅವರು ಸಿಸಿಹೆಚ್ 74ನೇ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ. ವಿಚಾರಣೆ ನಡೆಸಿದ ಕೋರ್ಟ್‌ ಗುರುವಾರ (ಫೆ. ೨೩) ತೀರ್ಪು ಪ್ರಕಟಿಸುವುದಾಗಿ ತಿಳಿಸಿದೆ.

ಡಿ. ರೂಪಾ ಅವರು ಸಿಂಧೂರಿ ವಿರುದ್ಧ ಕೆಲವೊಂದು ಆಡಳಿತಾತ್ಮಕ ಮತ್ತು ಹಲವು ವೈಯಕ್ತಿಕ ಆರೋಪಗಳನ್ನು ಒಳಗೊಂಡ ೧೯ ಅಂಶಗಳ ದೋಷಾರೋಪ ಪಟ್ಟಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು. ಬಳಿಕ ರೋಹಿಣಿ ಸಿಂಧೂರಿ ಅವರ ಕೆಲವೊಂದು ಖಾಸಗಿ ಭಾವಚಿತ್ರಗಳನ್ನೂ ಬಿಡುಗಡೆ ಮಾಡಿದ್ದರು. ಖಾಸಗಿ ಫೋಟೊ ಮತ್ತು ವಿಚಾರಗಳಿಗೆ ಸಂಬಂಧಿಸಿ ಸಿಂಧೂರಿ ಅವರ ಪತಿ ಸುಧೀರ್‌ ರೆಡ್ಡಿ ಅವರು ಈಗಾಗಲೇ ಬಾಗಲಗುಂಟೆ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇದನ್ನು ಎನ್‌ಸಿಆರ್‌ ಆಗಿ ಸ್ವೀಕರಿಸಲಾಗಿದೆ.

ಇದೀಗ ಸ್ವತಃ ರೋಹಿಣಿ ಸಿಂಧೂರಿ ಅವರೇ ಕೋರ್ಟ್‌ ಮೆಟ್ಟಿಲು ಹತ್ತಿದ್ದು, ಈ ರೀತಿ ಸಾರ್ವಜನಿಕವಾಗಿ ತೇಜೋವಧೆ ಮಾಡುವ ರೂಪದಲ್ಲಿ ಆರೋಪಗಳನ್ನು ಮಾಡುವುದನ್ನು ತಡೆಯಬೇಕು ಎಂದು ಕೇಳಿಕೊಂಡಿದ್ದಾರೆ.

ರೋಹಿಣಿ ಸಿಂಧೂರಿ ಪರ ವಕೀಲರ ವಾದವೇನು?

೧. ಡಿ. ರೂಪಾ ಅವರು ತಮ್ಮ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಮಾಡಿದ್ದಾರೆ.
೨. ತಮ್ಮ ಖಾಸಗಿ ಭಾವಚಿತ್ರಗಳನ್ನು ಬಿಡುಗಡೆ ಮಾಡಿ ಖಾಸಗಿತನಕ್ಕೆ ಭಂಗ ತಂದಿದ್ದಾರೆ.
೩. ತಮ್ಮ ಖಾಸಗಿ ಮೊಬೈಲ್ ನಂಬರ್ ಅನ್ನೂ ಬಹಿರಂಗಪಡಿಸಿದ್ದಾರೆ.
೪. ಖಾಸಗಿ ಫೋಟೊಗಳನ್ನು ರೂಪಾ ಫೇಸ್ ಬುಕ್ ನಲ್ಲಿ ಪ್ರಕಟಿಸಿದ್ದಾರೆ.
೫. ಮೊಬೈಲ್ ನಿಂದ ಕಾನೂನು ಬಾಹಿರವಾಗಿ ಮಾಹಿತಿ ಪಡೆದಿದ್ದಾರೆ.
೬. ಐಪಿಎಸ್ ಆಗಿ ಅಧಿಕಾರ ದುರುಪಯೋಗ ಮಾಡಿಕೊಂಡಿದ್ದಾರೆ.

ನಾಳೆ ತೀರ್ಪು ಎಂದ ಕೋರ್ಟ್‌

ರೋಹಿಣಿ ಸಿಂಧೂರಿ ಪರ ವಕೀಲರು ಇದುವರೆಗೆ ನಡೆದಿರುವ ಘಟನಾವಳಿಗಳನ್ನು ಕೋರ್ಟ್‌ಗೆ ವಿವರಿಸಿದರು. ಈಗಾಗಲೇ ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರಿಗೆ ದೂರು ನೀಡಿರುವುದು, ಅವರು ಇಬ್ಬರಿಗೂ ಬಹಿರಂಗ ಹೇಳಿಕೆ ನೀಡದಂತೆ ಸೂಚನೆ ನೀಡಿರುವುದನ್ನು ಉಲ್ಲೇಖಿಸಲಾಗಿದೆ.

ರೂಪಾ ಅವರ ನಡವಳಿಕೆಗಳು ಭಾರತೀಯ ಸೇವಾ ನಿಯಮಗಳ ಉಲ್ಲಂಘನೆ ಎಂಬುದನ್ನೂ ಗಮನ ಸೆಳೆಯಲಿದೆ. ಐಪಿಎಸ್‌ ಅಧಿಕಾರಿಯಾಗಿರುವ ಅವರು ತಮ್ಮ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ಮೊಬೈಲ್‌ನ ಖಾಸಗಿ ಮಾಹಿತಿಗಳನ್ನು, ದೂರವಾಣಿ ಸಂಖ್ಯೆಯನ್ನು ಬಯಲು ಮಾಡಿದ್ದಾರೆ. ಈ ಬಗ್ಗೆ ಪೊಲೀಸ್‌ ಠಾಣೆಗೂ ದೂರು ನೀಡಲಾಗಿದೆ. ನ್ಯಾಯಾಲಯ ಇಂಥ ತೇಜೋವಧೆಯನ್ನು ತಡೆಯಲು ಪ್ರತಿಬಂಧಕಾಜ್ಞೆ ನೀಡಬೇಕು ಎಂದು ಕೇಳಿಕೊಂಡರು.

ರೋಹಿಣಿ ಪರ ವಕೀಲರು ಮಧ್ಯಂತರ ಆದೇಶ ನೀಡಬೇಕು ಎಂದು ಮನವಿ ಮಾಡಿದರು. ಆದರೆ, ಕೋರ್ಟ್‌ ವಿಚಾರಣೆಯನ್ನು ನಾಳೆಗೆ ಮುಂದೂಡಿದ್ದು, ಅಂದೇ ತೀರ್ಪು ನೀಡಲಿದೆ.

ಇದನ್ನೂ ಓದಿ : Sindhuri Vs Roopa : ಆಯಮ್ಮ ಕ್ಯಾನ್ಸರ್‌ ಇದ್ದ ಹಾಗೆ, ಎಲ್ಲರನ್ನೂ ಬುಟ್ಟಿಗೆ ಹಾಕಿಕೊಳ್ತಾಳೆ: ರೂಪಾ ಮಾತಿನ ಆಡಿಯೊ ವೈರಲ್

Exit mobile version