ಬೆಂಗಳೂರು: ಐಪಿಎಸ್ ಅಧಿಕಾರಿ ಡಿ. ರೂಪಾ ಅವರು ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ (Sindhuri Vs Roopa) ಸಿಡಿದೆದ್ದಿರುವುದಕ್ಕೆ ನಿಜವಾದ ಕಾರಣ ಈಗ ನಿಧಾನಕ್ಕೆ ಆದರೆ, ಸ್ಪಷ್ಟವಾಗಿ ಬಯಲಾಗುತ್ತಿದೆ. ಮೈಸೂರಿನ ಆರ್‌ಟಿಐ ಕಾರ್ಯಕರ್ತ ಗಂಗರಾಜು ಅವರ ಜತೆಗಿನ ಮಾತುಕತೆಯಲ್ಲಿ ಡಿ. ರೂಪಾ ಅವರು ಈ ವಿಚಾರವನ್ನು ಸ್ಪಷ್ಟವಾಗಿ ಹೇಳಿದ್ದಾರೆ. ರೋಹಿಣಿ ಸಿಂಧೂರಿ ಅವರು ಮೌನೀಷ್ ಮೌದ್ಗಿಲ್ ಅವರನ್ನು ಬಳಸಿಕೊಂಡು ಭೂಮಿಯ ವ್ಯವಹಾರಕ್ಕೂ ಪ್ರಯತ್ನಿಸುತ್ತಿದ್ದಾರೆ ಎಂಬಲ್ಲಿಂದ ಹಿಡಿದು ಮೌದ್ಗಿಲ್ ಅವರಿಗೆ ತಮ್ಮ ಕುಟುಂಬದ ಮೇಲೆ ಗಮನವೇ ಇಲ್ಲ ಎನ್ನುವವರೆಗೆ ಹಲವು ಆಪಾದನೆಗಳನ್ನು ಮಾಡಿದ್ದಾರೆ.
ಗಂಗರಾಜು ಎಂಬವರು ಕೆಲವೊಂದು ಭೂದಾಖಲೆಗಳಿಗೆ ಸಂಬಂಧಿಸಿ ಸರ್ವೇ ಇಲಾಖೆಯ ಆಯುಕ್ತರಾಗಿದ್ದ ಮೌನೀಶ್ ಮೌದ್ಗಿಲ್ ಅವರ ಬಳಿ ಆಗಾಗ ಬರುತ್ತಿರುವುದನ್ನು ಗಮನಿಸಿ ಡಿ. ರೂಪಾ ಅವರು ತರಾಟೆಗೆ ತೆಗೆದುಕೊಳ್ಳುವುದರಿಂದ ಆರಂಭಗೊಂಡು ನಾನಾ ಸಂಗತಿಗಳು ಬಿಚ್ಚಿಕೊಳ್ಳುತ್ತವೆ. ಆರಂಭದಲ್ಲಿ ಗಂಗರಾಜು ಅವರನ್ನು ರೋಹಿಣಿ ಅವರ ಪರವಾಗಿ ಕೆಲಸ ಮಾಡುವ ದಲ್ಲಾಳಿ ಎಂದೇ ಮೂದಲಿಸುವ ಡಿ. ರೂಪಾ ಅವರು ಆಗಾಗ ಇಂಥ ಕಡತಗಳನ್ನು ಹಿಡಿದುಕೊಂಡು ಬಂದರೆ ಹುಷಾರು, ಈಗಲೇ ಎದ್ದು ಹೋಗಿ ಎಂದು ಎಚ್ಚರಿಸುತ್ತಾರೆ. ರೋಹಿಣಿ ಸಿಂಧೂರಿ ಅವರನ್ನು ಅವಾಚ್ಯ ಶಬ್ದಗಳಿಂದ ಬೈಯುವ ಮಾತುಗಳೂ ದಾಖಲಾಗಿವೆ.
ಆದರೆ, ಒಮ್ಮೆ ಗಂಗರಾಜು ಅವರ ಮೇಲೆ ವಿಶ್ವಾಸ ಬಂದ ಬಳಿಕ ಅವರೊಂದಿಗೆ ಸಾಕಷ್ಟು ವಿಚಾರಗಳನ್ನು ಹಂಚಿಕೊಳ್ಳುತ್ತಾರೆ ಡಿ. ರೂಪಾ. ಅದರಲ್ಲಿ ಮುಖ್ಯವಾಗಿರುವುದು ರೋಹಿಣಿ ಸಿಂಧೂರಿ ಅವರು ಪದೇಪದೆ ಮೌನೀಶ್ ಮೌದ್ಗಿಲ್ ಅವರ ಸಲಹೆ ಕೇಳುವುದು, ಮೌನೀಷ್ ಅವರು ಕೂಡಾ ಆಕೆಗೆ ಸಹಾಯ ಮಾಡುವುದು, ಈ ಪ್ರಕ್ರಿಯೆಯಲ್ಲಿ ತಮ್ಮ ಕುಟುಂಬವನ್ನು ಕಡೆಗಣಿಸುತ್ತಿದ್ದಾರೆ ಎಂಬ ಆರೋಪಗಳನ್ನು ಆಕೆ ಮಾಡುತ್ತಾರೆ. ಇದು ಜನವರಿ ೩೦ರಂದು ನಡೆದ ಮಾತುಕತೆ ಎಂದು ಗಂಗರಾಜು ತಿಳಿಸಿದ್ದಾರೆ.
ಆಡಿಯೋದ ಕೆಲವೊಂದು ಪ್ರಮುಖ ಭಾಗಗಳು ಇಲ್ಲಿವೆ..
ಲ್ಯಾಂಡ್ ಖರೀದಿ ವಿಚಾರಕ್ಕೆ ಮೌನೀಷ್ ಬಳಕೆ ಎಂದ ರೂಪಾ
ನಮ್ಮ ಮನೆಯವರು ಲ್ಯಾಂಡ್ ರೆಕಾರ್ಡ್ ವಿಭಾಗದಲ್ಲಿರುವುದಲ್ವಾ? ಅವರ ಕುಟುಂಬದವರದ್ದು ರಿಯಲ್ ಎಸ್ಟೇಟ್ ಬಿಸಿನೆಸ್. ಹೀಗಾಗಿ ಭೂಮಿ ಖರೀದಿ ವಿಚಾರಕ್ಕೆ ಸಂಬಂಧಿಸಿ ಎಲ್ಲಾ ಇವರ ಹತ್ರ ಸಲಹೆ ಕೇಳ್ತಾರೆ. ನಾನು ಎಲ್ಲಾ ವಾಟ್ಸ್ ಆಪ್ ಚಾಟ್ಸ್ ನೋಡಿದ್ದೀನಿ. ಕಬಿನಿ ಪ್ರದೇಶದ ನಾಲ್ಕು ಪಹಣಿ ಹಾಕಿ ಈ ಲ್ಯಾಂಡ್ ತಗೋಬಹುದಾ, ಈ ಲ್ಯಾಂಡ್ ತಗೋಬಹುದಾ? ಅಂತ ಕೇಳ್ತಾರೆ. ಇನ್ನೊಂದು ಭುಜ್ಜಮ್ಮ ಅಂತ ಯಾವುದೋ ಜಾಗದ ವಿಷ್ಯ ಕೇಳಿದ್ರು. ಈ ಥರ ಸುಮಾರು ಲ್ಯಾಂಡ್ ವಿಷಯಗಳಿಗೆ ಸಂಬಂಧಿಸಿ ತಗೋಬಹುದಾ? ವಿವಾದಿ ಇದ್ಯಾ ಎಂಬೆಲ್ಲ ಪ್ರಶ್ನೆಗಳನ್ನು ಕೇಳಿದ್ದಾರೆ. ರೋಹಿಣಿ ಅವರು ಪವರ್ ಉಪಯೋಗಿಸಿ ಇಂಥ ಹಲವು ಜಾಗಗಳನ್ನು ತೆಗೆದುಕೊಂಡಿದ್ದಾರೆ. ಇದು ಸರೀನಾ?
ಟ್ರಾನ್ಸ್‌ಫರ್ ಮಾಡಿಸಿ ಅಂತ ಕೇಳಿದ್ದೀನಿ..
ಈಗ ನಾನು ಅವರನ್ನು (ಮೌನೀಷ್ ಮೌದ್ಗಿಲ್) ಆ ಇಲಾಖೆಯಿಂದ ವರ್ಗಾವಣೆ ಮಾಡುವಂತೆ ಕೇಳಿಕೊಂಡಿದ್ದೀನಿ ಎಂದು ರೂಪಾ ಹೇಳುತ್ತಾರೆ. ಆಗ ಗಂಗರಾಜು ಅವರು ʻಬೇಡ ಮೇಡಂ ಅವರು ತುಂಬಾ ಒಳ್ಳೆಯ ಕೆಲಸ ಮಾಡುತ್ತಿದ್ದಾರೆʼ ಅನ್ನುತ್ತಾರೆ.
ಅದಕ್ಕೆ ಸಿಟ್ಟಿಗೇಳುವ ರೂಪಾ, ʻʻಇದರಿಂದ ಫ್ಯಾಮಿಲಿಗೆ ಏನೂ ಉಪಯೋಗ ಇಲ್ಲಾರಿ.. ಯಾವತ್ತೂ ಮನೆ ಕಡೆಗೆ ಗಮನ ಕೊಡಲ್ಲ. ಬರೀ ಇಂಥವರ ಕೆಲಸ ಮಾಡಿಕೊಡುತ್ತಾರೆ. ನಾನು ಏನಾದರೂ ದುಡ್ಡು ಮಾಡಿಕೊಂಡಿದ್ದೇವಾ? ಅವರಿಗೆ ಮನೆಯ ಕಡೆಗೆ ಗಮನವೇ ಇಲ್ಲ- ಎನ್ನುತ್ತಾರೆ.
ನಮ್ಮ ಕುಟುಂಬ ಚೆನ್ನಾಗಿ ಇಲ್ವಲ್ಲ ಈವಾಗ.. ಅಂತಾರೆ ರೂಪಾ
ಗಂಗರಾಜು ಅವರು ʻನಮ್ಮ ಸಾಹೇಬ್ರು ಚೆನ್ನಾಗಿದ್ದಾರೆ. ನಿಮ್ಮ ಕುಟುಂಬ ಚೆನ್ನಾಗಿರಬೇಕುʼ ಅಂತಾರೆ. ಆಗ ರೂಪಾ ಅವರು, ಚೆನ್ನಾಗಿಲ್ವಲ್ಲ ಈಗ.. ಆಯಮ್ಮನ ದೆಸೆಯಿಂದ ಚೆನ್ನಾಗಿ ಇಲ್ವಲ್ಲ ಈವಾಗ ಅಂತ ಹೇಳುತ್ತಾರೆ (ರೂಪಾ ನಗುತ್ತಾರೆ).
ಹಾಗೆಲ್ಲ ಅಂದುಕೊಳ್ಳಬಾರದು ಅಂತ ಗಂಗರಾಜು ಸಮಾಧಾನ ಹೇಳಿದರೂ, ಯಾಕೆ ಅಂದುಕೊಳ್ಳಬಾರದು, ಕಣ್ಣಿಗೆ ಕಾಣುತ್ತಲ್ವಾ ಈವಾಗ ಎಂದು ಕೇಳುತ್ತಾರೆ ರೂಪಾ.
ʻಪದೇಪದೆ ಅವರ ಕಚೇರಿಗೆ ಹೋಗ್ಬೇಡಿ. ನಾನು ಅವರನ್ನು ಹೆಚ್ಚು ಸಮಯ ಅಲ್ಲೇ ಇರಲಿಕ್ಕೆ ಬಿಡಲ್ಲʼʼ ಎಂದು ಹೇಳುತ್ತಾರೆ ರೂಪಾ.
ಆಗ ಗಂಗರಾಜು ಅವರು, ಹಾಗೆಲ್ಲ ಮಾಡ್ಬೇಡಿ, ಒಳ್ಳೆಯ ಆಫೀಸರ್ ಮೇಡಂ ಇರಲಿ ಅಂತಾರೆ. ಆಗ ರೂಪಾ ಅವರು, ಇಂಥವರು ಅವರ ಬೆನ್ನು ಬೀಳ್ತಾರಲ್ಲಾ ಅಂತ ಕೇಳುತ್ತಾರೆ. ಜತೆಗೆ ʻಓ ಆಯಮ್ಮ ಕ್ಯಾನ್ಸರ್ ಇದ್ದ ಹಾಗೆ. ಯಾರನ್ನೂ ಬಿಡಲ್ಲ. ಎಲ್ಲರನ್ನೂ ಬುಟ್ಟಿಗೆ ಹಾಕಿಕೊಳ್ತಾಳೆ. ಡಿ.ಕೆ. ರವಿಗೆ ಆಗಿದ್ದೂ ಹಾಗೇನೇʼʼ ಎನ್ನುತ್ತಾರೆ.
ಆಗ ಗಂಗರಾಜು ಅವರು, ಕ್ಯಾನ್ಸರ್‌ಗೂ ಟ್ರೀಟ್‌ಮೆಂಟ್ ಇದ್ಯಲ್ವಾ ಮೇಡಂ. ನಾನೂ ಸಾಹೇಬ್ರಿಗೆ ಹೇಳ್ತೀನಿ.. ಇದೆಲ್ಲ ಬಿಟ್ಬಿಡಿ ಅಂತ ನಾನೂ ಹೇಳ್ತೀನಿ, ಸಾಹೇಬ್ರು ನನ್ನ ಜತೆ ಕ್ಲೋಸಾಗಿ ಮಾತನಾಡುತ್ತಾರೆ ಅಂತಾರೆ. ಆಗ ರೂಪಾ ಮೆಲ್ಲಗೆ, ʻಬಿಡಿ ಅವೆಲ್ಲ ಆಗಲ್ಲʼ ಅಂತಾರೆ.
ʻʻಆಯಮ್ಮ ಅವರ ಹಿಂದೆನೇ ಬಿದ್ದಿದ್ದಾಳೆ. ಎಲ್ಲ ಬರೆಸ್ಕೋತಾಳೆ. ಲೋಕಾಯುಕ್ತ ಕೇಸಿನ ರಿಪ್ಲೈ ಬರೆಯೋದನ್ನೂ ಇವರತ್ರ ಮಾಡಿಸಿಕೊಳ್ತಾಳೆʼʼ ಎಂದು ರೂಪಾ ಹೇಳುತ್ತಾರೆ.
ಈ ಎಲ್ಲ ವಿಚಾರಗಳು ಡಿ ರೂಪಾ ಅವರಿಗೆ ರೋಹಿಣಿ ಸಿಂಧೂರಿ ಅವರ ಮೇಲೆ ನಿಜಕ್ಕೂ ಯಾವ ಕಾರಣಕ್ಕೆ ಸಿಟ್ಟಿದೆ ಎನ್ನುವುದನ್ನು ತಿಳಿಸುತ್ತವೆ.
ಇದನ್ನೂ ಓದಿ : Sindhuri Vs Roopa: ಸಿಂಧೂರಿಗೆ ರೂಪಾ ಅವಾಚ್ಯವಾಗಿ ಬೈದ ಹಳೇ ಆಡಿಯೋ ವೈರಲ್