Site icon Vistara News

ಖ್ಯಾತ ಗಾಯಕ ಶಿವಮೊಗ್ಗ ಸುಬ್ಬಣ್ಣ ಇನ್ನಿಲ್ಲ; ಬೆಂಗಳೂರಿನಲ್ಲಿ ಹೃದಯಾಘಾತದಿಂದ ನಿಧನ

shivamogga subbanna

ಬೆಂಗಳೂರು: ರಾಷ್ಟ್ರಪ್ರಶಸ್ತಿ ಪುರಸ್ಕೃತ ಗಾಯಕ, ಸಂಗೀತ ನಿರ್ದೇಶಕ ಶಿವಮೊಗ್ಗ ಸುಬ್ಬಣ್ಣ ಗುರುವಾರ ರಾತ್ರಿ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಅವರಿಗೆ ೮೩ ವರ್ಷ ವಯಸ್ಸಾಗಿತ್ತು. ಗುರುವಾರ ಸಂಜೆ ನಾಲ್ಕುಗಂಟೆಯ ವೇಳೆಗೆ ಹೃದಯಾಘಾತಕ್ಕೆ ಒಳಗಾದ ಅವರನ್ನು ಬನಶಂಕರಿಯ ಶಾಂತಿ ನರ್ಸಿಂಗ್‌ ಹೋಮ್‌ಗೆ ಸೇರಿಸಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಜಯದೇವ ಆಸ್ಪತ್ರೆಗೆ ಸೇರಿಸಲಾಗಿದ್ದು, ಅವರು ರಾತ್ರಿ ೧೧ ಗಂಟೆಗೆ ನಿಧನರಾದರೆಂದು ಕುಟುಂಬದ ಮೂಲಗಳು ತಿಳಿಸಿವೆ.

ಗುರುವಾರ ಮಧ್ಯಾಹ್ನದ ವರೆಗೂ ಅವರು ಆರೋಗ್ಯವಾಗಿಯೇ ಇದ್ದರು. ಮಧ್ಯಾಹ್ನದ ಊಟ ಕೂಡ ಮಾಡಿದ್ದರು. ಹೃದಯಾಘಾತವಾದ ಕೂಡಲೇ ಅವರನ್ನು ಆಸ್ಪತ್ರೆಗೆ ಸೇರಿಸಿದರೂ ಉಳಿಸಿಕೊಳ್ಳಲಾಗಲಿಲ್ಲ ಎಂದು ಕುಟುಂಬದ ಸದಸ್ಯರು ತಿಳಿಸಿದ್ದಾರೆ.

ಹಿನ್ನಲೆ ಗಾಯನಕ್ಕಾಗಿ ರಾಷ್ಟ್ರಪ್ರಶಸ್ತಿ ಪಡೆದ ಕನ್ನಡದ ಮೊದಲ ಗಾಯಕ ಎಂಬ ಹೆಗ್ಗಳಿಕೆ ಇವರದ್ದಾಗಿತ್ತು. ಕಾಡು ಕುದುರೆ ಸಿನಿಮಾದ ʼಕಾಡು ಕುದುರೆ ಓಡಿ ಬಂದಿತ್ತಾ…ʼ ಹಾಡಿಗಾಗಿ ರಾಷ್ಟ್ರ ಪ್ರಶಸ್ತಿ ಸಂದಿತ್ತು. ಈ ಸಿನಿಮಾವನ್ನು ಜ್ಞಾನಪೀಠ ಪುರಸ್ಕೃತ ಸಾಹಿತಿ ಚಂದ್ರಶೇಖರ ಕಂಬಾರ ನಿರ್ದೇಶಿಸಿದ್ದರು. ಕುವೆಂಪು, ಜಿ ಎಸ್‌ ಶಿವರುದ್ರಪ್ಪ, ನಿಸಾರ್‌ ಅಹ್ಮದ್‌, ದ.ರಾ. ಬೇಂದ್ರೆ ಸೇರಿದಂತೆ ಅನೇಕ ಕವಿಗಳ ಗೀತೆಗಳಿಗೆ ಸಂಗೀತ ನೀಡಿ, ಹಾಡಿದ್ದ ಶಿವಮೊಗ್ಗ ಸುಬ್ಬಣ್ಣ, ಕುವೆಂಪು ಅವರ ʼಬಾರಿಸು ಕನ್ನಡ ಡಿಂಡಿಮವಾ… ʼ ಹಾಡನ್ನು ಜನಪ್ರಿಯವಾಗಿಸಿದ್ದರು.

೨೦೦೮ರಲ್ಲಿ ಕುವೆಂಪು ವಿವಿಯು ಇವರಿಗೆ ಗೌರವ ಡಾಕ್ಟರೇಟ್‌ ನೀಡಿತ್ತು. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ರಾಜ್ಯ ಸಂಗೀತ ನೃತ್ಯ ಅಕಾಡಮಿ ಪ್ರಶಸ್ತಿ, ದೆಹಲಿ ಕನ್ನಡಿಗರ ಪತ್ರಿಕೆಯ ಕಾಳಿಂಗರಾವ್ ಪ್ರಶಸ್ತಿ, ಮೈಸೂರಿನ ಅನಂತಸ್ವಾಮಿ ಸ್ಮಾರಕ ಪ್ರಶಸ್ತಿ, ಕರ್ನಾಟಕ ಸರಕಾರದ ಪ್ರತಿಷ್ಠಿತ ಶಿಶುನಾಳ ಷರೀಫ್ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳಿಗೆ ಇವರು ಪಾತ್ರರಾಗಿದ್ದರು.

Exit mobile version