Site icon Vistara News

ಜಾತ್ಯತೀತ ಪ್ರಜಾಪ್ರಭುತ್ವ ವ್ಯವಸ್ಥೆಗೆ ಧಕ್ಕೆ ಎಂದು ಸೀತಾರಾಮ್ ಯೆಚೂರಿ ಕಳವಳ

ಸೀತಾರಾಮ್ ಯೆಚೂರಿ

ಬೆಂಗಳೂರು: ಜಾತ್ಯತೀತ ಪ್ರಜಾಪ್ರಭುತ್ವ, ಆರ್ಥಿಕತೆ, ಸಾಮಾಜಿಕ ನ್ಯಾಯ, ಆಡಳಿತ ವಿಕೇಂದ್ರೀಕರಣ ಎಂಬ ನಾಲ್ಕು ಅಂಶಗಳ ತಳಹದಿಯ ಮೇಲೆ ರಾಷ್ಟ್ರವನ್ನು ಕಟ್ಟಲಾಗಿದೆ. ಆದರೆ, ಇಂದು ಜಾತ್ಯತೀತ ಪ್ರಜಾಪ್ರಭುತ್ವ ವ್ಯವಸ್ಥೆಗೆ ಧಕ್ಕೆಯಾಗುತ್ತಿದ್ದು, ಹಣ ಮುಖ್ಯ ಪಾತ್ರ ವಹಿಸುತ್ತಿದೆ ಎಂದು ಬಿಜೆಪಿ ಹಾಗೂ ಆರ್‌ಎಸ್‌ಎಸ್‌ ವಿರುದ್ಧ ಸಿಪಿಐ (ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ ವಾಗ್ದಾಳಿ ನಡೆಸಿದ್ದಾರೆ.

ನಗರದ ಭಾರತೀಯ ವಿದ್ಯಾಭವನದಲ್ಲಿ ರಾಷ್ಟ್ರೀಯ ನವ ನಿರ್ಮಾಣ ವೇದಿಕೆಯಿಂದ ಸೋಮವಾರ ಆಯೋಜಿಸಲಾಗಿದ್ದ ರಾಮಕೃಷ್ಣ ಹೆಗಡೆ ಅವರ 96ನೇ ಹುಟ್ಟುಹಬ್ಬ ಕಾರ್ಯಕ್ರಮದಲ್ಲಿ ಮಾತನಾಡಿದರು. “ಸ್ವಾತಂತ್ರ್ಯ ಪಡೆದ ವೇಳೆ ಪ್ರತ್ಯೇಕ ಮುಸ್ಲಿಂ ಹಾಗೂ ಹಿಂದೂ ರಾಷ್ಟ್ರಕ್ಕಾಗಿ ಕೂಗು ಕೇಳಿ ಬಂದಿತ್ತು. ಇದು ಆರ್‌ಎಸ್‌ಎಸ್‌ ಇಟ್ಟಿದ್ದ ಬೇಡಿಕೆಯಾಗಿತ್ತು. ಈ ನಡುವೆ ಪಾಕಿಸ್ತಾನವು ಮುಸ್ಲಿಂ ರಾಷ್ಟ್ರ ಎಂದು ಘೋಷಿಸಿಕೊಂಡರೆ, ಹಿಂದೂ ರಾಷ್ಟ್ರದ ಬದಲು ಜಾತ್ಯತೀತ ಪ್ರಜಾಪ್ರಭುತ್ವ ರಾಷ್ಟ್ರ ಎಂದು ನಮ್ಮ ಭಾರತದಲ್ಲಿ ಘೋಷಿಸಲಾಯಿತು. ಆದರೆ, ಪ್ರಜಾಪ್ರಭುತ್ವ ವ್ಯವಸ್ಥೆಗೆ ಇಂದು ಧಕ್ಕೆಯಾಗಿದೆ. ಮಹಾರಾಷ್ಟ್ರದಲ್ಲಿ ಏನಾಯಿತು ಎಂದು ಎಲ್ಲರಿಗೂ ಗೊತ್ತಿದೆ. ಈಗ ಹಣವೇ ಮುಖ್ಯ ಪಾತ್ರ ವಹಿಸುತ್ತಿದೆ” ಎಂದು ಕಿಡಿಕಾರಿದರು.

ಇದನ್ನೂ ಓದಿ | ವಿಸ್ತಾರ Exclusive | ಪಾರ್ಟಿ ಫಸ್ಟ್‌: ಸಿದ್ದು, ಡಿಕೆಶಿ ಗುಂಪುಗಾರಿಕೆಗೆ ಸುರ್ಜೆವಾಲ ಖಡಕ್‌ ವಾರ್ನಿಂಗ್‌

ಪತ್ರಕರ್ತರಿಂದಲೂ ನಿರ್ಭಯ ವರದಿ ಅಸಾಧ್ಯ
“ಪತ್ರಕರ್ತರು ಸಹ ಇಂದು ನಿರ್ಭಯವಾಗಿ ವರದಿ ಮಾಡುವುದು ಅಸಾಧ್ಯವಾಗಿದೆ. ಅವರೂ ಭೀತಿಯ ವಾತಾವರಣವನ್ನು ಎದುರಿಸುತ್ತಿದ್ದಾರೆ. ವರದಿ ಮಾಡಿ ಜೈಲಿಗೆ ಹೋಗುವ ಸ್ಥಿತಿ ನಿರ್ಮಾಣವಾಗಿದೆ. ಈಗ ದೇಶದಲ್ಲಿ ಬಹಳ ದೊಡ್ಡ ಸವಾಲು ನಮ್ಮ ಮುಂದಿದೆ” ಎಂದು ಯೆಚೂರಿ ಕಳವಳ ವ್ಯಕ್ತಪಡಿಸಿದರು.

“ಕೇಂದ್ರ ಸರ್ಕಾರ ಸಾರ್ವಜನಿಕ ಉದ್ದಿಮೆಗಳನ್ನು ಖಾಸಗೀಕರಣ ಮಾಡುತ್ತಿದೆ. ಸಾರ್ವಜನಿಕ ಉದ್ದಿಮೆ ಜನರ ಆಸ್ತಿ, ಇದನ್ನು ಸರ್ಕಾರ ನಿರ್ವಹಣೆ ಮಾಡಬೇಕೇ ಹೊರತು, ಮಾರಾಟ ಮಾಡುವುದಲ್ಲ. ಆದರೂ ಮಾರಾಟ ಮಾಡುತ್ತಿರುವುದು ಯಾಕೆ” ಎಂದು ಪ್ರಶ್ನೆ ಮಾಡಿದ ಸೀತಾರಾಮ್‌, ದೇಶದಲ್ಲಿ ಆರ್ಥಿಕ ಬಿಕ್ಕಟ್ಟು ಎದುರಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಅನುದಾನ ಬಿಡುಗಡೆಯಲ್ಲಿ ತಾರತಮ್ಯ
“ಬಿಜೆಪಿಯೇತರ ಸರ್ಕಾರವಿರುವ ರಾಜ್ಯಗಳು ಅನುದಾನ ಬಿಡುಗಡೆಗಾಗಿ ಕೇಂದ್ರಕ್ಕೆ ಅಲೆದಾಡಬೇಕಿದೆ. ಪ್ರತಿ ರಾಜ್ಯವೂ ಕೇಂದ್ರದ ಮುಂದೆ ಬಂದು ನಿಲ್ಲಬೇಕು ಎಂಬ ನಿಟ್ಟಿನಲ್ಲಿ ಜಿಎಸ್‌ಟಿ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ” ಎಂದು ಆರೋಪಿಸಿದರು.

ಬಿಲ್‌ ಪಾಸ್‌ ವೇಳೆ ಚರ್ಚೆ ಆಗುತ್ತಿಲ್ಲ
“ಸಂಸತ್ತಿನಲ್ಲಿ ಬಹುಮತ ಒಂದೇ ಮುಖ್ಯವಾಗಿದೆ. ಕಾನೂನು ರೂಪಿಸುವಾಗ ಬಿಲ್‌ಗಳ ಮೇಲೆ ಚರ್ಚೆಗೆ ಆದ್ಯತೆ ಇಲ್ಲವಾಗಿದೆ. ಕೇವಲ ಬಹುಮತದ ಆಧಾರದಲ್ಲಿ ಬಿಲ್ ಪಾಸ್ ಮಾಡಿಕೊಳ್ಳಲಾಗುತ್ತಿದೆ. ದನಿ ಎತ್ತಿದವರನ್ನು ಸದನದಿಂದ ಹೊರಹಾಕಲಾಗುತ್ತಿದೆ. ಹಾಗಾಗಿ ಸಂಸತ್ತು ಸರಿಯಾಗಿ ಕೆಲಸ ಮಾಡದ ಸ್ಥಿತಿ ನಿರ್ಮಾಣವಾಗಿದೆ. ಇದು ಅಪಾಯಕಾರಿ ಬೆಳವಣಿಗೆಯಾಗಿದೆ” ಎಂದರು.

“ರಾಮಕೃಷ್ಣ ಹೆಗಡೆ ಕರ್ನಾಟಕದಲ್ಲಿ ಮೊದಲ ಕಾಂಗ್ರೆಸ್ಸೇತರ ಮುಖ್ಯಮಂತ್ರಿ ಆಗಿದ್ದರು. ಅಧಿಕಾರ ವಿಕೇಂದ್ರೀಕರಣ ಮಾಡುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಎತ್ತಿಹಿಡಿಯುವ ಕೆಲಸ ಮಾಡಿದ್ದರು. ಸಮಾಜವಾದ, ಜಾತ್ಯತೀತ, ಪ್ರಜಾಪ್ರಭುತ್ವ ವ್ಯವಸ್ಥೆಗೆ ರಾಮಕೃಷ್ಣ ಹೆಗಡೆ ದೊಡ್ಡ ಕೊಡುಗೆ ನೀಡಿದ್ದಾರೆ” ಎಂದು ಸ್ಮರಿಸಿದರು.

ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡಿ, “ಯೆಚೂರಿ ಅವರು ರಾಮಕೃಷ್ಣ ಹೆಗಡೆ ಅವರೊಂದಿಗೆ ನಿಕಟ ಸಂಬಂಧ ಹೊಂದಿದ್ದರು. ಹೆಗಡೆ ಅವರು ಸಿಎಂ ಆಗಿದ್ದಾಗ ಕಮ್ಯುನಿಸ್ಟ್ ಪಾರ್ಟಿಗಳ ಜತೆ ರಾಜಕೀಯ ಮೈತ್ರಿ ಇತ್ತು. ಸಿಪಿಐ, ಸಿಪಿಐಎಂ ಪಾರ್ಟಿಗಳಿಂದ ಈ ಹಿಂದೆ ಮೂರು ಮೂರು ಜನ ಶಾಸಕರು ಇದ್ದರು. ಈಗ ಒಬ್ಬರೂ ಇಲ್ಲ, ಅವರು ಕೂಡ ಇರಬೇಕು. ಕಮ್ಯುನಿಸ್ಟರು ಒಂದು ಸಿದ್ಧಾಂತಕ್ಕೆ ಕಟ್ಟುಬಿದ್ದು ಕೆಲಸ ಮಾಡುತ್ತಿದ್ದಾರೆ” ಎಂದು ಹೇಳಿದರು.

ಇದನ್ನೂ ಓದಿ | ಗ್ರಾಮರ್‌ ಮೇಷ್ಟ್ರು ಸಿದ್ದರಾಮಯ್ಯಗೆ ಸುರ್ಜೇವಾಲ ಬ್ರೇಕ್‌!: ಬಿಜೆಪಿ ವಿರುದ್ಧ ವಚನ ಭ್ರಷ್ಟತೆ ಆರೋಪ

“ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದರೂ ಎಲ್ಲರಿಗೂ ಆರ್ಥಿಕ ಸ್ವಾತಂತ್ರ್ಯ ಸಿಕ್ಕಿಲ್ಲ. ಆರ್ಥಿಕ, ಸಾಮಾಜಿಕ ಪ್ರಜಾಪ್ರಭುತ್ವ ಸಿಕ್ಕಾಗ ದೇಶಕ್ಕೆ ಸ್ವಾತಂತ್ರ್ಯ ಸಿಗುತ್ತದೆ ಎಂದು ಅಂಬೇಡ್ಕರ್ ಹೇಳಿದ್ದರು. ಹೆಗಡೆ ಅವರು ಸಂವಿಧಾನದ ಬಗ್ಗೆ ಗೌರವ ಹೊಂದುವ ಜತೆಗೆ ಪ್ರಜಾಪ್ರಭುತ್ವವಾದಿಯಾಗಿದ್ದರು. ಅಧಿಕಾರ ಸಿಕ್ಕಾಗ ಸಂವಿಧಾನಬದ್ಧವಾಗಿ ಕೆಲಸ ಮಾಡುವ ಬದ್ಧತೆ ಇರಬೇಕು. ಬದ್ಧತೆ ಇಲ್ಲದ ಪಕ್ಷಗಳು, ರಾಜಕಾರಣಿಗಳಿಗೆ ಸ್ವಾತಂತ್ರ್ಯ ಬಂದರೂ ಸಾರ್ಥಕತೆ ಇರಲ್ಲ” ಎಂದರು.

“ರಾಮಕೃಷ್ಣ ಹೆಗಡೆ ಅವರು ನನ್ನನ್ನು ಕನ್ನಡ ಕಾವಲು ಸಮಿತಿ ಅಧ್ಯಕ್ಷರನ್ನಾಗಿ ಮಾಡಿದ್ದರು. ಆಗ ನಾನು ಸಾಹಿತ್ಯದ ವಿದ್ಯಾರ್ಥಿ ಅಲ್ಲ ಎಂದು ಅವರಿಗೆ ಹೇಳಿದ್ದೆ. ಆಗ ರಾಮಕೃಷ್ಣ ನೀನು ಅಧ್ಯಕ್ಷನಾಗಿ ಕೆಲಸ ಮಾಡು ಮಾಡು ಮುಂದೆ ಅನುಕೂಲ ಆಗುತ್ತದೆ ಎಂದರು. ಮುಂದೆ ಕ್ಯಾಬಿನೆಟ್‌ ದರ್ಜೆ ಸ್ಥಾನಮಾನ ನೀಡಿ, ನನಗೆ ಗೊತ್ತಿಲ್ಲದೆ ಮಂತ್ರಿ ಸ್ಥಾನ ಕೊಟ್ಟಿದ್ದರು. ಹೆಗಡೆ ಅವರು ಎರಡು ವರ್ಷಗಳ ಕಾಲ ಬಹಳಷ್ಟು ಅಭಿವೃದ್ಧಿ ಕೆಲಸ ಮಾಡಿದ್ದರು. ಅದರಿಂದ ಅವರ ಜನಪ್ರಿಯತೆ ಹೆಚ್ಚಾಗಿತ್ತು” ಎಂದು ತಿಳಿಸಿದರು.

“1985ರಲ್ಲಿ ಜನತಾ ಪಾರ್ಟಿ ಸ್ವಂತ ಶಕ್ತಿಯಿಂದ ಅಧಿಕಾರಕ್ಕೆ ಬಂತು. ಆದರೆ, ನಮ್ಮ ನಮ್ಮ ಜಗಳದಿಂದ ಹಾಳಾಯಿತು‌. ಇಲ್ಲವೆಂದರೆ ಇನ್ನೂ ಐದಿನೈದು ವರ್ಷಗಳ ಕಾಲ ಇರುತ್ತಿದ್ದೆವು” ಎಂದು ಜನತಾ ಪಾರ್ಟಿಯ ಒಳ ಜಗಳದ ಬಗ್ಗೆ ಸ್ಮರಿಸಿದ ಅವರು, “ಏನೇ ವಿಷಯವಾದರೂ ಪ್ರಧಾನಿಗೆ ಧೈರ್ಯ ಮಾಡಿ ಹೆಗಡೆ ಅವರು ಪತ್ರ ಬರೆಯುತ್ತಿದ್ದರು. ಆದರೆ ಈಗಿನ ಮುಖ್ಯಮಂತ್ರಿ ಕೈ ಕಟ್ಟಿಕೊಂಡು ನಿಲ್ಲುತ್ತಾರೆ, ಪ್ರಧಾನಿ ಬಳಿ ಮಾತಾಡುವುದಕ್ಕೆ ಭಯ ಪಡುತ್ತಾರೆ” ಎಂದು ವ್ಯಂಗ್ಯವಾಡಿದರು.

ಕಾಂಗ್ರೆಸ್‌ ಹಿರಿಯ ಮುಖಂಡ ಬಿ.ಎಲ್. ಶಂಕರ್, ಶಾಮನೂರು ಶಿವಶಂಕರಪ್ಪ, ನವ ನಿರ್ಮಾಣ ವೇದಿಕೆ ಅಧ್ಯಕ್ಷೆ ಮಮತ ನಿಚ್ಚಾನಿ ಸೇರಿ ಹಲವು ಗಣ್ಯರು ಭಾಗಿಯಾಗಿದ್ದರು.

ಇದನ್ನೂ ಓದಿ | National Sports Day 2022 | ವಿಶ್ವದರ್ಶನ ಕೇಂದ್ರೀಯ ಶಾಲೆಯಲ್ಲಿ ರಾಷ್ಟ್ರೀಯ ಕ್ರೀಡಾ ದಿನಾಚರಣೆ

Exit mobile version