Site icon Vistara News

ಮಗುವಿಗೆ 6 ವರ್ಷ ತುಂಬಿದ್ರೆ ಮಾತ್ರ 1ನೇ ತರಗತಿ ಪ್ರವೇಶ: ಈ ನಿಯಮ ಈ ವರ್ಷದಿಂದಲೇ ಜಾರಿ ಇಲ್ಲ, ಮತ್ಯಾವಾಗ?

ಬೆಂಗಳೂರು: ಮುಂದಿನ ಶೈಕ್ಷಣಿಕ ವರ್ಷದಿಂದ (೨೦೨೩-೨೪) ಮಗುವಿಗೆ ಆರು ವರ್ಷ ತುಂಬಿದರೆ ಮಾತ್ರ ಒಂದನೇ ತರಗತಿಗೆ ಪ್ರವೇಶ ನೀಡಲಾಗುತ್ತದೆ ಎಂದು ಶಿಕ್ಷಣ ಇಲಾಖೆ ಇತ್ತೀಚೆಗೆ ಸುತ್ತೋಲೆ ಹೊರಡಿಸಿತ್ತು. ಈಗ ಅದರಲ್ಲಿ ತಿದ್ದುಪಡಿ ಮಾಡಿದ್ದು, ಈ ನಿಯಮದ ಅನುಷ್ಠಾನವನ್ನು ಎರಡು ವರ್ಷ ಮುಂದೂಡಿದೆ. ಅಂದರೆ, ಈ ನಿಯಮ ೨೦೨೫-೨೬ನೇ ಸಾಲಿನಿಂದ ಅನ್ವಯವಾಗಲಿದೆ.

ಕಳೆದ ಜುಲೈ ೨೬ರಂದು ಒಂದು ಆದೇಶವನ್ನು ಹೊರಡಿಸಿದ್ದ ಶಿಕ್ಷಣ ಇಲಾಖೆ ಇನ್ನು ಮುಂದೆ ಒಂದು ಮಗುವಿಗೆ ಒಂದೇ ತರಗತಿಗೆ ಪ್ರವೇಶ ನೀಡಬೇಕಾದರೆ ಜೂನ್‌ ಒಂದನೇ ತಾರೀಖಿಗೆ ಅನ್ವಯವಾಗುವಂತೆ ಆರು ವರ್ಷ ತುಂಬಿರಲೇಬೇಕು ಎಂದು ಸೂಚಿಸಿತ್ತು. ಈ ಸೂಚನೆ ೨೦೨೩-೨೪ನೇ ಸಾಲಿನಿಂದಲೇ ಜಾರಿಯಾಗುವ ಮುನ್ಸೂಚನೆ ನೀಡಲಾಗಿತ್ತು.

ಸರಕಾರದ ಈ ಸೂಚನೆಯಿಂದ ಈಗಾಗಲೇ ಎಲ್‌ಕೆಜಿ ಮತ್ತು ಯುಕೆಜಿಯಲ್ಲಿ ಕಲಿಯುತ್ತಿರುವ ಮಕ್ಕಳ ಭವಿಷ್ಯದ ಬಗ್ಗೆ ಆತಂಕ ಸೃಷ್ಟಿಯಾಗಿತ್ತು. ಹಿಂದಿನ ನಿಯಮಗಳ ಪ್ರಕಾರ ಒಂದನೇ ತರಗತಿಗೆ ಸೇರ್ಪಡೆಗೆ ಐದು ವರ್ಷ ಐದು ತಿಂಗಳಾದರೆ ಸಾಕಿತ್ತು. ಇದರ ಅನ್ವಯ ಹೆಚ್ಚಿನ ಮಕ್ಕಳನ್ನು ಮೂರುವರೆ ವರ್ಷಕ್ಕೆ ಎಲ್‌ಕೆಜಿಗೆ ಸೇರಿಸಲಾಗಿತ್ತು. ಅಂಥ ಮಕ್ಕಳು ಯುಕೆಜಿ ಮುಗಿಸುವಾಗ ಐದುವರೆ ವರ್ಷ ಮಾತ್ರ ಆಗಿರುತ್ತದೆ. ಆಗ ಅವರಿಗೆ ಒಂದನೇ ತರಗತಿಗೆ ಪ್ರವೇಶ ನೀಡುವುದಿಲ್ಲ ಎಂದಾದರೆ ಮತ್ತೆ ಯುಕೆಜಿಯಲ್ಲೇ ಮುಂದುವರಿಸಬೇಕಾ ಎಂಬ ಗಂಭೀರ ಪ್ರಶ್ನೆ ಎದುರಾಗಿತ್ತು. ಹಲವು ಶಿಕ್ಷಣ ಸಂಸ್ಥೆಗಳು ಕೂಡಾ ಇದರ ಬಗ್ಗೆ ಗಂಭೀರ ಆಕ್ಷೇಪ ಎತ್ತಿದ್ದವು. ಮಕ್ಕಳ ಅಮೂಲ್ಯ ಒಂದು ವರ್ಷ ಹಾಳಾಗುವುದರ ಜತೆಗೆ ಒಂದೇ ತರಗತಿಯಲ್ಲಿ ಎರಡು ವರ್ಷ ಕೂರಿಸುವುದು ಮಕ್ಕಳ ಮಾನಸಿಕ ಸ್ಥಿತಿಗತಿಯ ಮೇಲೂ ಪರಿಣಾಮ ಬೀರುತ್ತದೆ ಎಂಬ ಮಾತುಗಳು ಕೇಳಿಬಂದಿದ್ದವು.

ಬದಲಾದ ಸುತ್ತೋಲೆಯ ಅರ್ಥವೇನು?
ಇದೆಲ್ಲವನ್ನೂ ಪರಿಗಣಿಸಿ ಶಿಕ್ಷಣ ಇಲಾಖೆ ಆರು ವರ್ಷ ಕಡ್ಡಾಯ ಎಂಬ ನಿಯಮದ ಜಾರಿಯಲ್ಲಿ ಎರಡು ವರ್ಷಗಳ ಸಡಿಲಿಕೆಯನ್ನು ಪ್ರಕಟಿಸಿದೆ. ಈ ಹಿಂದೆ ೨೦೨೩-೨೪ನೇ ಸಾಲಿನಿಂದ ಜಾರಿಯಾಗಲಿದೆ ಎಂದು ಹೇಳಲಾಗಿದ್ದ ಹೊಸ ನಿಯಮ ೨೦೨೫-೨೬ನೇ ಸಾಲಿಗೆ ಮುಂದೂಡಲ್ಪಟ್ಟಿದೆ.

ಅಂದರೆ ಹೊಸ ನಿಯಮದಿಂದ ಈಗ ಎಲ್‌ಕೆಜಿ, ಯುಕೆಜಿಯಲ್ಲಿ ಕಲಿಯುತ್ತಿರುವ ಮಕ್ಕಳಿಗೆ ಈ ನಿಯಮ ಅನ್ವಯವಾಗುವುದಿಲ್ಲ. ಅವರು ಯಾವುದೇ ಗೊಂದಲವಿಲ್ಲದೆ ಒಂದೇ ತರಗತಿಗೆ ಈಗಿರುವ ನಿಯಮದಂತೆ ಸೇರಿಕೊಳ್ಳಬಹುದು.

ಎಲ್‌ಕೆಜಿಗೆ ಸೇರಿಸುವಾಗ ಎಚ್ಚರಿಕೆ
ಹೊಸ ನಿಯಮ ಒಂದನೇ ತರಗತಿ ಸೇರ್ಪಡೆ ವಿಚಾರಕ್ಕೆ ಬಂದಾಗ ೨೦೨೫-೨೬ರಿಂದ ಜಾರಿಗೆ ಬರುವುದಾದರೂ ಎಲ್‌ಕೆಜಿ ಸೇರ್ಪಡೆ ವಿಷಯದಲ್ಲಿ ಈಗದಿಂದಲೇ ಎಚ್ಚರಿಕೆ ವಹಿಸಬೇಕಾಗುತ್ತದೆ. ಅಂದರೆ ೨೦೨೫-೨೬ನೇ ಸಾಲಿಗೆ ಬರುವಾಗ ಒಂದನೇ ತರಗತಿ ಸೇರುವ ಮಗುವಿಗೆ ಆರು ವರ್ಷ ತುಂಬಿರುವುದು ಕಡ್ಡಾಯ. ಹಾಗಾಗಿ, ಮುಂದಿನ ವರ್ಷ (೨೦೨೩-೨೪) ಎಲ್‌ಕೆಜಿಗೆ ಒಂದು ಮಗುವನ್ನು ಸೇರಿಸಬೇಕು ಎಂದಾದರೆ ಮಗುವಿಗೆ ಕಡ್ಡಾಯವಾಗಿ ನಾಲ್ಕು ವರ್ಷ ಆಗಿರಬೇಕು.

ಈ ಹಿಂದೆ ಒಂದನೇ ತರಗತಿ ಸೇರ್ಪಡೆ ವಯಸ್ಸು ಎಷ್ಟಿತ್ತು?
ಶಿಕ್ಷಣ ಹಕ್ಕು ಕಾಯ್ದೆಯ ಅನ್ವಯ 2016-17ನೇ ಶೈಕ್ಷಣಿಕ ವರ್ಷದಲ್ಲಿ ಎಲ್​ಕೆಜಿ ಪ್ರವೇಶಕ್ಕೆ ಮಗುವಿಗೆ 4 ವರ್ಷ, 10 ತಿಂಗಳು ತುಂಬಿರಬೇಕು ಎಂದು ನಿಯಮ ಮಾಡಲಾಯಿತು. ಅದಕ್ಕೂ ಮೊದಲು ಎಲ್​ಕೆಜಿ ಪ್ರವೇಶಕ್ಕೆ 3 ವರ್ಷ 10 ತಿಂಗಳು ಆಗಿದ್ದರೆ ಸಾಕಾಗಿತ್ತು. ಅದೇ ರೀತಿ 1ನೇ ತರಗತಿ 5 ವರ್ಷ 10 ತಿಂಗಳಿನಿಂದ 6 ವರ್ಷ 10 ತಿಂಗಳ ನಡುವೆ ಮಗುವಿನ ವಯಸ್ಸು ಇದ್ದರೆ ದಾಖಲಾತಿ ಮಾಡಿಕೊಳ್ಳಬಹುದು ಎಂದು ನಿಯಮ ರೂಪಿಸಿತ್ತು.

ಕರ್ನಾಟಕ ಸರ್ಕಾರವು ಈ ನಿಯಮವನ್ನು 2018ರಲ್ಲಿ ಮತ್ತೊಮ್ಮೆ ಸಡಿಲಿಸಿತ್ತು. 1ನೇ ತರಗತಿಗೆ ದಾಖಲಿಸಲು ಕನಿಷ್ಠ 5 ವರ್ಷ 5 ತಿಂಗಳು, ಗರಿಷ್ಠ 7 ವರ್ಷ ಆಗಿರಬೇಕು ಎಂದು ಅಧಿಸೂಚನೆ ಹೊರಡಿಸಿತು.

ಇದಾದ ಬಳಿಕ ೨೦೨೨ರ ಜುಲೈ ೨೬ರಂದು ಹೊರಡಿಸಿದ ಸುತ್ತೋಲೆಯಲ್ಲಿ ಆಯಾ ಶೈಕ್ಷಣಿಕ ವರ್ಷದ ಜೂನ್‌ ಒಂದಕ್ಕೆ ಅನ್ವಯವಾಗುವ ಹಾಗೆ ಮಗುವಿನ ವಯಸ್ಸು 6 ವರ್ಷ ಪೂರ್ಣಗೊಂಡಿದ್ದರೆ ಮಾತ್ರ 1ನೇ ತರಗತಿಗೆ ಪ್ರವೇಶ ಪಡೆಯಲು ಸಾಧ್ಯ ಎಂದು ತಿಳಿಸಿತ್ತು. ಈಗ ಈ ನಿಯಮವನ್ನು ಎರಡು ವರ್ಷದ ಮಟ್ಟಿಗೆ ಸಡಿಲಿಸಲಾಗಿದೆ. ಹೊಸ ನಿಯಮ ೨೦೨೫-೨೬ನೇ ಸಾಲಿನಿಂದ ಜಾರಿಗೆ ಬರಲಿದೆ. ಆದರೆ, ಎಲ್‌ಕೆಜಿ ಸೇರ್ಪಡೆಗೆ ನಾಲ್ಕು ವರ್ಷ ಕಡ್ಡಾಯ ಎನ್ನುವ ನಿಯಮ ಮುಂದಿನ ವರ್ಷದಿಂದಲೇ ಜಾರಿಗೆ ಬರಲಿದೆ.

ಇದನ್ನೂ ಓದಿ | Saffron politics| ವಿವೇಕ ಶಾಲೆ ಕೊಠಡಿಗಳಿಗೆ ಕೇಸರಿ ಬಣ್ಣ: ಮುಖ್ಯಮಂತ್ರಿ ಬೊಮ್ಮಾಯಿ ಸಮರ್ಥನೆ

Exit mobile version