ಬೆಂಗಳೂರು: ಮೈಸೂರಿನ ಹಳ್ಳದಕೇರಿ ಎಂಬಲ್ಲಿ ಹುಟ್ಟಿದ ಭಗವಾನ್, ಕಾಲೇಜಿನಲ್ಲಿದ್ದಾಗಲೇ ನಾಟಕಗಳಲ್ಲಿ ನಟಿಸುತ್ತಿದ್ದರು. ಸುಂದರವಾಗಿದ್ದುದರಿಂದ ಹೆಣ್ಣು ಪಾತ್ರಗಳು ಅವರಿಗೆ ಸಿಗುತ್ತಿದ್ದವು. ಇದನ್ನು ನೋಡಿದ ಹಿರಣ್ಣಯ್ಯನವರು ಅವರನ್ನು ಕರೆದು ತಮ್ಮ ತಂಡದಲ್ಲಿ ನಟಿಸುವ ಆಫರ್ ನೀಡಿದರು. ಅವರ ನಟನೆ ಎಲ್ಲರ ಗಮನ ಸೆಳೆಯಿತು. ಅಲ್ಲಿಂದ ಎಡತೊರೆ ನಾಟಕ ಕಂಪನಿಗೆ ಆಹ್ವಾನ ಬಂತು. ಅಲ್ಲಿ ಜಿ.ವಿ ಅಯ್ಯರ್ ಅವರು ಭಗವಾನ್ ಅವರನ್ನು ʼಪ್ರಾಕ್ಟೀಸ್ ಮ್ಯಾನೇಜರ್ʼ ಎಂದು ಮಾಡಿದರು. ನಂತರ ಕರ್ನಾಟಕ ನಾಟಕ ಸಭಾ ತಂಡದಲ್ಲಿ ಸೇರಿಕೊಂಡರು.
ಒಮ್ಮೆ ಹಾಸನದಲ್ಲಿ ಜಾತ್ರೆ ಸಂದರ್ಭದಲ್ಲಿ ಕರ್ನಾಟಕ ನಾಟಕ ಸಭಾ ಟೀಮ್ ಟೆಂಟ್ ಹಾಕಿತ್ತು. ಪಕ್ಕದಲ್ಲೇ ಗುಬ್ಬಿ ವೀರಣ್ಣನವರ ನಾಟಕ ಕಂಪನಿ. ಅದರಲ್ಲಿ ಮುತ್ತುರಾಜು ಅವರು ʼಕೃಷ್ಣಲೀಲೆʼ ನಾಟಕದ ʼಕಲಾವತಿʼ ಪಾತ್ರ ಮಾಡುತ್ತಿದ್ದರು. ಇತ್ತ ಕರ್ನಾಟಕ ನಾಟಕ ಸಭಾದ ʼವೀರಪುತ್ರʼ ನಾಟಕದಲ್ಲಿ ಭಗವಾನ್ ಅವರ ʼಗಾಯತ್ರಿʼ ಪಾತ್ರ. ಇಬ್ಬರೂ ಅಲ್ಲಿ ಪರಸ್ಪರರ ಪಾತ್ರಗಳನ್ನು ನೋಡಿ, ಮೆಚ್ಚಿ, ಪರಿಚಯ ಮಾಡಿಕೊಂಡರು. ಹಾಗೆ ರಾಜ್‌ಕುಮಾರ್- ಭಗವಾನ್ ಪರಿಚಯ.
ಮುಂದೆ ಮದ್ರಾಸ್‌ನಲ್ಲಿ ಸಿನಿಮಾ ಪ್ರೊಡಕ್ಷನ್ ಯುನಿಟ್‌ನಲ್ಲಿ ಕೆಲಸಗಾರನಾಗಿ ಸೇರಿಕೊಂಡಾಗ ಅಲ್ಲಿಯೂ ರಾಜ್‌ಕುಮಾರ್ ಇದ್ದರು. ಆಗ ರಾಜ್ ಮದುವೆಯಾಗಿ ಮದ್ರಾಸ್‌ನಲ್ಲಿ ಎಂಟು ರೂಪಾಯಿಗೆ ಬಾಡಿಗೆ ಮನೆ ಮಾಡಿಕೊಂಡು ಅಲ್ಲೇ ನೆಲೆಸಿದ್ದರು. ಅಲ್ಲಿ ರಾಜ್‌ಕುಮಾರ್, ಭಗವಾನ್ ಅವರನ್ನು ತಮ್ಮ ಮನೆಗೆ ಕರೆದುಕೊಂಡು ಹೋಗಿ ಅವರಿಗೆ ಊಟ ಹಾಕಿದರು. ಪಾರ್ವತಮ್ಮನವರು ಎಲ್ಲರನ್ನೂ ಕೂರಿಸಿ ಕೈತುತ್ತು ಹಾಕಿದರು. ಅದನು ಭಗವಾನ್ ಕೊನೆಯವರೆಗೂ ನೆನೆಯುತ್ತಿದ್ದರು.
ಇದನ್ನೂ ಓದಿ: SK Bhagavan: ಡಾ.ರಾಜ್ ಜತೆ ಎಸ್.ಕೆ. ಭಗವಾನ್ ನಂಟು: ನಿರ್ದೇಶಕರ ಸಿನಿ ಜರ್ನಿ ಹೇಗಿತ್ತು?
ಮದ್ರಾಸ್‌ನ ಪಾಂಡಿ ಬಜಾರ್ ಸುತ್ತಮುತ್ತ ಸುಮಾರು ಕನ್ನಡದ ಕಂಪನಿಗಳು, ಕೆಲಸಗಾರರು ಇದ್ದರು. ಕೆಲವೊಮ್ಮೆ ಕೆಲಸ ಇರುತ್ತಿರಲಿಲ್ಲ. ಒಮ್ಮೆಯಂತೂ ಕನ್ನಡದ ಸಿನಿಮಾಗಳೆಲ್ಲಾ ಕಾಸಿಲ್ಲದೆ ನಿಂತುಹೋಗಿ, ಭಗವಾನ್‌ಗೆ ಕೆಲಸ, ಸಂಬಳ ಇಲ್ಲದಂತಾಯಿತು. ಬಾಡಿಗೆ ಮನೆಯಾತ ಹಿಂಸೆ ಕೊಡತೊಡಗಿದ. ಕಾಸಿಲ್ಲದೆ, ಊಟ ಮಾಡದೆ ಎರಡು ದಿನಗಳಾಗಿತ್ತು. ಹಸಿವಿನಿಂದ ತತ್ತರಿಸುತ್ತಿದ್ದರು. ಯಾರಾದರೂ ಕನ್ನಡದವರು ಬಂದರೆ ಸ್ವಲ್ಪ ಕಾಸು ಪಡೆದು ತಿಂಡಿ ಹೋಟೆಲ್‌ನಲ್ಲಿ ತಿನ್ನೋಣ ಎಂದುಕೊಂಡಿದ್ದರು. ಆಗ ಅಲ್ಲಿ ಕ್ಯಾಮೆರಾಮನ್ ಆಗಿದ್ದ ದೊರೆ ಬಂದರು. ಭಗವಾನ್ ಅವರು ದೊರೆ ಬಳಿ, ʼʼಒಂದು ರೂಪಾಯಿ ಇದ್ರೆ ಕೊಡ್ತೀರಾ, ಹಸಿವಾಗ್ತಿದೆ ಎರಡು ದಿನದಿಂದ ಊಟವಿಲ್ಲ. ಸಂಬಳ ಬಂದ ಮೇಲೆ ಕೊಡ್ತೀನಿʼʼ ಎಂದರು.
ಅದನ್ನು ಕೇಳಿ ದೊರೆ ಮುಖ ಪೆಚ್ಚು ಮಾಡಿಕೊಂಡರು. ಜೇಬಿಗೆ ಕೈಹಾಕಿ, ʼʼನನ್ನತ್ರ ಇರೋದು ಎಂಟೇ ಆಣೆ. ಇದನ್ನು ಇಟ್ಟುಕೊಳ್ಳಿʼʼ ಎಂದು ಹೊರಟುಹೋದರು. ಭಗವಾನ್ ಹೋಟೆಲ್‌ಗೆ ಹೋಗಿ (ಆಗ ನಾಲ್ಕಾಣೆಗೆ ಮೂರು ಇಡ್ಲಿ ಒಂದು ಕಾಫಿ ಸಿಗುತ್ತಿತ್ತು) ತಿಂಡಿ ತಿಂದು, ಜಿವಿ ಅಯ್ಯರ್ ಕಚೇರಿಗೆ ಬಂದು ಕುಳಿತರು. ಸ್ವಲ್ಪ ಹೊತ್ತಿನಲ್ಲಿ ಧಡಧಡನೆ ಬಂದ ಅಯ್ಯರ್, ʼʼಏನೋ, ಎರಡು ದಿನದಿಂದ ಹೊಟ್ಟೆಗಿಲ್ಲದೆ ಇದ್ದೀಯಾ, ನಾವೆಲ್ಲ ಸತ್ತುಹೋಗಿದೀವಾ ನಿನ್ನ ಪಾಲಿಗೆʼʼ ಎಂದು ಕೂಗಾಡಿದರು. ದೊರೆ ಈ ವಿಚಾರವನ್ನು ಅವರಿಗೆ ಹೇಳಿದ್ದರು. ಭಗವಾನ್‌ಗೆ ದೊರೆ ನೀಡಿದ್ದ ಎಂಟಾಣೆ, ಅಯ್ಯರ್ ಅವರ ಬಳಿ ದೊರೆ ಪಡೆದಿದ್ದ ಸಾಲವಾಗಿತ್ತು! ಸ್ವತಃ ಹಸಿದುಕೊಂಡು ಇದ್ದ ದೊರೆ, ತನ್ನ ಬಳಿ ಇದ್ದ ಹಣವನ್ನೇ ಭಗವಾನ್‌ಗೆ ನೀಡಿದ್ದರು.
ಕನ್ನಡ ಚಿತ್ರರಂಗ ಕಂಡ ಅಪೂರ್ವ ಜೋಡಿಯ ಗೆಳೆತನ ಆರಂಭವಾದದ್ದು ಹೀಗೆ. ಆಗಲೇ ರಾಜ್‌ಕುಮಾರ್ ಚಿತ್ರಗಳಿಗೆ ದೊರೆ ಕ್ಯಾಮೆರಾಮನ್ ಆಗಿದ್ದರು. ಸೋದರಿ, ಓಹಿಲೇಶ್ವರ ಚಿತ್ರಗಳನ್ನು ಚಿತ್ರೀಕರಿಸಿದ್ದರು. ಅವರ ಜತೆ ಭಗವಾನ್ ಸೇರಿಕೊಂಡರು. ಮುಂದೆ ಈ ಮೂವರ ಜೋಡಿ ಹತ್ತಾರು ಐತಿಹಾಸಿಕ ಚಿತ್ರಗಳನ್ನು ನಿರ್ಮಿಸಿತು.
ಇದನ್ನೂ ಓದಿ: SK Bhagavan: ಖ್ಯಾತ ಚಿತ್ರ ನಿರ್ದೇಶಕ ಎಸ್.ಕೆ. ಭಗವಾನ್ ಇನ್ನಿಲ್ಲ