Site icon Vistara News

SK Jain: ಅನಾರೋಗ್ಯದಿಂದ ಖ್ಯಾತ ಜ್ಯೋತಿಷಿ ಎಸ್.ಕೆ. ಜೈನ್ ನಿಧನ

SK Jain

ಬೆಂಗಳೂರು: ಅನಾರೋಗ್ಯದಿಂದ ಬಳಲುತ್ತಿದ್ದ ಖ್ಯಾತ ಜ್ಯೋತಿಷಿ ಎಸ್.ಕೆ. ಜೈನ್ (67) (Astrologer SK Jain) ಅವರು ಶುಕ್ರವಾರ ಸಂಜೆ ನಿಧನರಾದರು. ಶ್ವಾಸಕೋಶ ಸಮಸ್ಯೆಯಿಂದ ಬಳಲುತ್ತಿದ್ದ ಅವರನ್ನು ನಗರದಲ್ಲಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೆ ಅವರು ಕೊನೆಯುಸಿರೆಳೆದಿದ್ದಾರೆ.

ಎಸ್.ಕೆ. ಜೈನ್ ಅವರಿಗೆ ಪತ್ನಿ ಹಾಗೂ ಪುತ್ರಿ ಇದ್ದಾರೆ. ಡಾ ಸುರೇಂದ್ರ ಕುಮಾರ್ ಜೈನ್ (ಎಸ್.ಕೆ.ಜೈನ್) ಅವರು 1957ರ ಅಕ್ಟೋಬರ್ 13ರಂದು ಜನಿಸಿದ್ದರು. ಮೂಲತಃ ದಕ್ಷಿಣ ಕನ್ನಡದವರಾದ ಇವರು, ಬೆಳೆದಿದ್ದು ಮಾತ್ರ ಬೆಂಗಳೂರಿನಲ್ಲಿ. ಶ್ವಾಸಕೋಶದಲ್ಲಿ ನೀರು ಶೇಖರಣೆಗೊಂಡು ದೇಹಕ್ಕೆಲ್ಲಾ ಹರಡಿದ್ದರಿಂದ ಮಾರ್ಚ್ 18ರಂದು ಸಂಜೆ ಅವರಿಗೆ ಎದೆ ನೋವು ಕಾಣಿಸಿಕೊಂಡಿತ್ತು. ಹೀಗಾಗಿ ಅವರನ್ನು ಸಂತೋಷ್ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಲ್ಲಿ ಪ್ರಥಮ ಚಿಕಿತ್ಸೆ ನಂತರ ಕನ್ನಿಂಗ್‌ಹ್ಯಾಮ್ ರಸ್ತೆಯಲ್ಲಿರುವ ಫೋರ್ಟಿಸ್ ಆಸ್ಪತ್ರೆಗೆ ಸ್ಥಳಾಂತರಿಲಾಸಗಿತ್ತು. ಏಪ್ರಿಲ್ ಎರಡನೇ ವಾರದಲ್ಲಿ ಅವರನ್ನು ಡಿಸ್ಚಾರ್ಜ್ ಮಾಡಲಾಗಿತ್ತು.

ಮತ್ತೆ ಅಸ್ವಸ್ಥರಾಗಿದ್ದರಿಂದ ಅವರನ್ನು 4 ದಿನಗಳ ಹಿಂದೆ ಭಗವಾನ್ ಮಹಾವೀನ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಬಿಳಿರಕ್ತ ಕಣಗಳು ಕಡಿಮೆಯಾಗಿ, ಲೋ ಬಿಪಿ ಆಗಿದ್ದರಿಂದ ಸೋಂಕು ದೇಹದ ಇತರ ಭಾಗಗಳಿಗೆ ಹರಡಿ ಜೈನ್ ಅವರು ನಿಧನರಾಗಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಹಬ್ಬ-ಹರಿದಿನ, ಗ್ರಹಣ ಸೇರಿದಂತೆ ವಿಶೇಷ ದಿನಗಳಂದು ನ್ಯೂಸ್‌ ಚಾನೆಲ್‌ಗಳಲ್ಲಿ ರಾಶಿ ಫಲಾಫಲ ಸೇರಿ ದಿನದ ವಿಶೇಷತೆಗಳ ಬಗ್ಗೆ ಜ್ಯೋತಿಷ ಹೇಳುತ್ತಿದ್ದ ಇವರು, ಉದಯ ವಾಹಿನಿಯಲ್ಲಿ ಜ್ಯೋತಿಷ ಕಾರ್ಯಕ್ರಮ ನಡೆಸಿಕೊಡುವುದರ ಮೂಲಕ ಕನ್ನಡ ವಿದ್ಯುನ್ಮಾನ ಮಾಧ್ಯಮದ ಮೊಟ್ಟಮೊದಲ ಜ್ಯೋತಿಷಿ ಎಂಬ ಖ್ಯಾತಿ ಹೊಂದಿದ್ದರು.

ಇದನ್ನೂ ಓದಿ | Heart Attack: ಟಿ.ಎ. ಶರವಣಗೆ ಲಘು ಹೃದಯಾಘಾತ; ಆರೋಗ್ಯದಲ್ಲಿ ಚೇತರಿಕೆ

ಇವರ ತಂದೆ ಬಿ.ಜಿ. ಶಶಿಕಾಂತ್ ಜೈನ್ ಹೆಸರಾಂತ ಜ್ಯೋತಿಷಿಗಳಾಗಿದ್ದರು. ಎಸ್.ಕೆ. ಜೈನ್ ಅವರು ಮೊದಲಿಗೆ ಇಂಜಿನಿಯರ್ ಆಗಬೇಕೆಂದುಕೊಂಡಿದ್ದರು. ಆದರೆ ನಂತರ ತಂದೆ ಬಳಿಯಲ್ಲಿ ಜ್ಯೋತಿಷ ಕಲಿತು ದೇಶ ವಿದೇಶಗಳಲ್ಲಿ ಹೆಸರು ಮಾಡಿದರು. ಡಾ.ಜೈನ್ ಅವರ ಕೊಡುಗೆಯನ್ನು ಗುರುತಿಸಿ ರಾಜ್ಯ ಸರ್ಕಾರವು ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸಿತ್ತು.

Exit mobile version