ಪುತ್ತೂರು: ಮಂಗಳವಾರ ರಾತ್ರಿ ದುಷ್ಕರ್ಮಿಗಳಿಂದ ಕೊಲೆಯಾದ ಬಿಜೆಪಿ ಯುವಮೋರ್ಚಾ ಪದಾಧಿಕಾರಿ ಪ್ರವೀಣ್ ನೆಟ್ಟಾರ್ ಅವರು ಹೇಗೆ ಜನಸೇವಕರಾಗಿದ್ದರು ಎನ್ನುವ ಬಗ್ಗೆ ಸಾಕಷ್ಟು ಮಾಹಿತಿಗಳು ಹೊರಬೀಳುತ್ತಿವೆ. ಅದರ ಜತೆಗೆ ಅವರು ಮುಗ್ಧ ಪ್ರಾಣಿಗಳ ಬಗ್ಗೆಯೂ ಅಷ್ಟೇ ಪ್ರೀತಿ ಹೊಂದಿದ್ದರು ಎನ್ನುವುದು ಅವರದೇ ಫೇಸ್‌ಬುಕ್ ಪೋಸ್ಟ್‌ಗಳಿಂದ ಸ್ಪಷ್ಟವಾಗುತ್ತಿದೆ.
ಪ್ರವೀಣ್ ಅವರು ಕಳೆದ ಜುಲೈ ೩ರಂದು ರಾತ್ರಿ ಮಳೆಯಲ್ಲಿ ನೆನೆಯುತ್ತಾ ಸಂಕಷ್ಟದಲ್ಲಿದ್ದ ಎರಡು ನಾಯಿ ಮರಿಗಳನ್ನು ರಕ್ಷಿಸಿ, ಆಸರೆ ಒದಗಿಸಿದ್ದನ್ನು ಮರುದಿನ ಫೇಸ್ ಬುಕ್‌ನಲ್ಲಿ ಬರೆದುಕೊಂಡಿದ್ದರು.
ʻʻಇದು ನಿನ್ನೆ ರಾತ್ರಿ ನಾನು ಸುಳ್ಯ ತಾಲೂಕಿನ ಬೆಳ್ಳಾರೆಯಿಂದ ಕೋಟೆಮುಂಡುಗಾರು’ಗೆ ಹೋಗುತ್ತಿದ್ದ ಸಂಧರ್ಭ ಜೋರು ಗಾಳಿ ಮಳೆಗೆ ಕಳಂಜ ಕ್ರಾಸ್ ರಸ್ತೆ ಬದಿಯಲ್ಲಿ ಕಂಡು ಬಂದ ದೃಶ್ಯ. ಆ ಗಾಳಿಮಳೆಗೆ ಬೈಕಿನ ಲೈಟು(ಬೆಳಕು) ನೋಡಿ ಹತ್ತಿರ ಬಂದು ರಕ್ಷಣೆಗಾಗಿ ಅದರದ್ದೇ ಭಾಷೆಯಲ್ಲಿ ಕಾಡಿ ಬೇಡಿಕೊಂಡ ದೃಶ್ಯ ಎಂತಹ ಕಲ್ಲು ಹೃದಯವನ್ನೂ ಕರಗಿಸುವ ಹಾಗಿತ್ತು. ಈ ಮೂಕ ಮುಗ್ಧ ಪ್ರಾಣಿಯನ್ನು ಇಂತಹ ಜೋರು ಗಾಳಿ ಮಳೆಯ ಸಂದರ್ಭ ಜನರಹಿತವಾದ ರಸ್ತೆಯಲ್ಲಿ ಬಿಟ್ಟುಹೋಗುವಂತಹ ದಯೆ,ಕನಿಕರ ಇಲ್ಲದ ಹೀನಾಯ ಮನಸ್ಥಿತಿಯ ಆ ಕೊಳಕು ಹೊಲಸು ಜೀವಿಗಳು ಮುಂದೊಂದು ದಿನ ಖಂಡಿತವಾಗಿಯೂ ನರಕ ಯಾತನೆ ಅನುಭವಿಸುವುದರಲ್ಲಿ ಯಾವುದೇ ಸಂಶಯವಿಲ್ಲ. ಒಂದು ವೇಳೆ ಯಾರಾದರೂ ಈ ರೀತಿಯಲ್ಲಿ ಬಿಡಲೇ ಬೇಕಂತಿದ್ದರೆ ಆ ಪುಟ್ಟ ಮರಿಗಳ ಜೊತೆಗೆ ಅದರ ತಾಯಿಯನ್ನು ಕೂಡ ರಸ್ತೆ ಬದಿಯಲ್ಲಿ ಜೊತೆಗೆ ಬಿಟ್ಟುಬಿಡಿ. ಹೇಗಾದರೂ ಬದುಕಲು ಬಿಡಿ. ಈಗ ಆ ಪುಟ್ಟಮರಿಗಳು ನನ್ನ ಮಿತ್ರನ ಮನೆಯಲ್ಲಿ ಸುರಕ್ಷಿತವಾಗಿದೆ. (ಬದುಕಿಸಿದ್ದೇವೆ ಎಂಬ ಜಂಬ, ಹೆಮ್ಮೆ ನಮ್ಮದು)ʼʼ ಎಂದು ಬರೆದುಕೊಂಡಿದ್ದರು. ಜತೆಗೆ ರಸ್ತೆ ಬದಿಯಲ್ಲಿ ನಿಂತು ಅಸರೆಗಾಗಿ ಕೋರುವಂತೆ ಕಾಣುವ ಎರಡು ನಾಯಿ ಮರಿಗಳ ಚಿತ್ರ ಮತ್ತು ಗೆಳೆಯನ ಮನೆಯಲ್ಲಿ ಬೆಚ್ಚಗಿರುವ ಆ ಮರಿಗಳ ಫೋಟೊವನ್ನು ಹಾಕಿದ್ದರು.
ನೀರು ಕೇಳುವ ನಾಯಿ ಮರಿ
ಪ್ರವೀಣ್ ಅವರು ಹಂಚಿಕೊಂಡ ಪ್ರಾಣಿಗಳು ಮತ್ತು ಮನುಷ್ಯರ ಮಾನವೀಯ ಸಂಬಂಧದ ಹಲವು ವಿಡಿಯೊಗಳು ಅತ್ಯಂತ ಹೃದ್ಯವಾಗಿವೆ. ಕೆಲವು ಮನ ಕಲಕುವಂತಿವೆ.
ನಾಯಿಯೊಂದು ನನಗೆ ನೀರು ಕೊಡಿ ಎಂದು ಕೈಯೆತ್ತಿ ಕೇಳುವ, ವ್ಯಕ್ತಿಯೊಬ್ಬರು ಬೊಗಸೆಯಲ್ಲಿ ನೀರು ತಂದು ಅದಕ್ಕೆ ಊಡಿಸುವ ದೃಶ್ಯವೊಂದು ಅತ್ಯಂತ ಹಿತವಾಗಿದೆ. ಕೊನೆಗೆ ನಾಯಿ ಮರಿ ಅಷ್ಟೇ ಪ್ರೀತಿಯಿಂದ ಕೈೆ ಎತ್ತುವ ದೃಶ್ಯ ಚೇತೋಹಾರಿಯಾಗಿದೆ.
ಇನ್ನೊಂದು ವಿಡಿಯೊದಲ್ಲಿ ವ್ಯಕ್ತಿಯೊಬ್ಬ ಏಳೆಂಟು ಮಂಗದ ಮರಿಗಳನ್ನು ಕೂರಿಸಿಕೊಂಡು ಅವುಗಳಿಗೆ ತಾನು ತಂದ ತಿಂಡಿಯನ್ನು ಹಂಚುತ್ತಿದ್ದಾನೆ. ಮಳೆಯ ನಡುವೆ ಆ ಮಂಗದ ಮರಿಗಳು ಅವನ ಮೇಲೆ ಪ್ರೀತಿಯಿಂದ ಹತ್ತಿಳಿಯುವ ದೃಶ್ಯಗಳು ಅತ್ಯಂತ ಖುಷಿಕೊಡುತ್ತವೆ.
ವ್ಯಕ್ತಿಯೊಬ್ಬ ಅಳಿಲು ಮರಿಗಳಿಗೆ ಪ್ರೀತಿಯಿಂದ ಆಹಾರ ತಿನ್ನಿಸುವ ಇನ್ನೊಂದು ವಿಡಿಯೊ ಖುಷಿ ಕೊಡುತ್ತದೆ. ಅಳಿಲುಗಳಂತೂ ನಂಗೊಂದು, ನಂಗೆ ಇನ್ನೊಂದು ಎಂದು ಕೇಳುವಂತಿವೆ.
ಇದನ್ನೂ ಓದಿ| Praveen Nettaru | ಜನಸಾಗರ ನಡುವೆ ಪ್ರವೀಣ್ ಅಂತ್ಯ ಸಂಸ್ಕಾರ, ಮುಗಿಲು ಮುಟ್ಟಿದ ಆಕ್ರಂದನ