ಬೆಂಗಳೂರು: ಇತ್ತೀಚೆಗೆ ಅತ್ಯಂತ ಕ್ಷುಲ್ಲಕ ವಿಚಾರಕ್ಕೆ ಕೊಲೆಗಳು ನಡೆಯುತ್ತಿವೆ. ಸಣ್ಣ ಸಣ್ಣ ಕಾರಣ ಇಟ್ಟುಕೊಂಡು ಇನ್ನೊಬ್ಬರ ಜೀವವನ್ನೇ ತೆಗೆಯುವ ಪ್ರವೃತ್ತಿಗಳು ಹೆಚ್ಚುತ್ತಿವೆ. ಅಂಥದ್ದೇ ಒಂದು ಕೊಲೆಯ ವಿವರ ಇಲ್ಲಿದೆ. ಇದು ದೇವಸ್ಥಾನದಲ್ಲಿ ಮಲಗುವ ವಿಚಾರಕ್ಕೆ ನಡೆದ ಒಂದು ಕೊಲೆ.
ಇದು ಸೆಪ್ಟೆಂಬರ್ ೧೩ರಂದು ಯಶವಂತಪುರದ ಪೈಪ್‌ಲೈನ್ ರಸ್ತೆಯಲ್ಲಿರುವ ಶ್ರೀ ವರಸಿದ್ಧಿ ವಿನಾಯಕ ದೇವಸ್ಥಾನದ ಮುಂದೆ ನಡೆದ ಕೊಲೆ ಪ್ರಕರಣ. ಅಂದು ಶಂಕರಪ್ಪ ಎಂಬಾತನ ಕೊಲೆ ನಡೆದಿತ್ತು. ಈಗ ಕೊಲೆ ಮಾಡಿದ ಆರೋಪಿ ಪ್ರಕಾಶನನ್ನು ಪೊಲೀಸರು ಬಂಧಿಸಿದ್ದಾರೆ. ಆವತ್ತು ಕೊಲೆ ಯಾಕೆ ನಡೆಯಿತು ಎನ್ನುವುದು ಸಿಸಿಟಿವಿಯಲ್ಲಿ ದಾಖಲಾಗಿತ್ತು. ಅದರ ಬೆನ್ನು ಹತ್ತಿ ಹೋಗಿ ಪೊಲೀಸರು ಪ್ರಕಾಶನನ್ನು ಬಂಧಿಸಿದ್ದಾರೆ.
ಕೊಲೆ ನಡೆದಿದ್ದು ಯಾಕೆ?
ಹತ್ಯೆಯಾದವನು ಹಾಗು ಕೊಲೆ ಮಾಡಿದವನು ಇಬ್ಬರಿಗೂ ಇರುವುದಕ್ಕೆ ಒಂದು ಸೂರಿಲ್ಲ. ಇಬ್ಬರೂ ರಾತ್ರಿ ವೇಳೆ ಮಲಗೋದು ಫುಟ್ ಪಾತ್ ಮೇಲೆಯೇ. ಪ್ರಕಾಶ ಯಶವಂತಪುರದ ಪೈಪ್ ಲೈನ್ ಬಳಿ ಇರುವ ವಿನಾಯಕ ದೇವಸ್ಥಾನದ ಜಗುಲಿಯ ಬಳಿ ಮಲಗುತ್ತಿದ್ದ. ಆದರೆ ಸೆ. ೧೩ರಂದು ಬಂದು ನೋಡಿದರೆ ಆತ ಮಲಗುತ್ತಿದ್ದ ಜಾಗದಲ್ಲಿ ಶಂಕ್ರಪ್ಪ ಮಲಗಿದ್ದ. ಎಷ್ಟೇ ಎಬ್ಬಿಸಿದರೂ ಎದ್ದೇಳಲಿಲ್ಲ. ಇದೇ ಸಿಟ್ಟಿನಲ್ಲಿ ಅಲ್ಲೇ ಇದ್ದ ದೊಣ್ಣೆಯಿಂದ ಶಂಕ್ರಪ್ಪನ ತಲೆಗೆ ಬಾರಿಸಿದ್ದ. ಅಷ್ಟಲ್ಲದೆ ಹೊಟ್ಟೆ ಭಾಗಕ್ಕೂ ಒದ್ದು ಗಾಯಗೊಳಿಸಿ ಅಲ್ಲಿಂದ ಪರಾರಿಯಾಗಿದ್ದ. ತಲೆಗೆ ಗಂಭೀರವಾಗಿ ಏಟು ಬಿದ್ದ ಹಿನ್ನೆಲೆಯಲ್ಲಿ ರಕ್ತಸ್ರಾವವಾಗಿ ಶಂಕ್ರಪ್ಪ ಮೃತಪಟ್ಟಿದ್ದ.
ಇವರಿಬ್ಬರ ನಡುವೆ ಈ ಹಿಂದೆ ಕೂಡ ಹಲವು ಬಾರಿ ಮಲಗುವ ಜಾಗದ ವಿಚಾರವಾಗಿ ಜಗಳ ನಡೆದಿತ್ತು. ಅಂದು ಹತ್ಯೆಯ ಬಗ್ಗೆ ದಾರಿಹೋಕರಿಂದ ಪೊಲೀಸರಿಗೆ ಮಾಹಿತಿ ಬಂದ ಹಿನ್ನೆಲೆಯಲ್ಲಿ ಸ್ಥಳಕ್ಕಾಗಮಿಸಿದ ಪೊಲೀಸರು ಸ್ಥಳದಲ್ಲಿದ್ದ ಸಿಸಿಟಿವಿಯನ್ನು ಪರಿಶೀಲನೆ ನಡೆಸಿದಾಗ ಹತ್ಯೆ ಮಾಡಿರುವ ದೃಶ್ಯ ಪತ್ತೆಯಾಗಿದೆ. ಇನ್ನು ಈ ವಿಚಾರವಾಗಿ ಅಲ್ಲಿದ್ದ ಸುತ್ತಮುತ್ತಲಿನ ಮೂವತ್ತಕ್ಕೂ ಹೆಚ್ಚು ಭಿಕ್ಷುಕರನ್ನು ಕರೆಸಿ ವಿಚಾರಣೆ ನಡೆಸಲಾಗಿತ್ತು. ಈ ವೇಳೆ ಪ್ರಕಾಶ ಸಿಕ್ಕಿಬಿದ್ದಿದ್ದ. ಆರೋಪಿ ಪ್ರಕಾಶ ಹಾಗು ಕೊಲೆಯಾದ ಶಂಕ್ರಪ್ಪ ಇಬ್ಬರೂ ಕೂಡ ಭಿಕ್ಷುಕರೇ. ಪ್ರಕಾಶನನ್ನು ಬಂಧಿಸಿರುವ ಯಶವಂತಪುರ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಇದನ್ನೂ ಓದಿ | Murder Case | ತಾನು ಮದುವೆ ಆಗುವ ಹುಡುಗಿ, ಮತ್ತವಳ ತಾಯಿಯ ಅಶ್ಲೀಲ ವಿಡಿಯೊ ಅಪ್ಲೋಡ್: ವೈದ್ಯನ ಕೊಲೆ