Site icon Vistara News

SM Krishna | ಬೆಂಗಳೂರು-ಮೈಸೂರು ದಶಪಥಕ್ಕೆ ನಾಲ್ವಡಿ ಕೃಷ್ಣರಾಜರ ಹೆಸರಿಡಿ: ಕೇಂದ್ರಕ್ಕೆ ಎಸ್ ಎಂ ಕೃಷ್ಣ ಒತ್ತಾಯ

SM Krishna @ Bengaluru-Mysore Expressway

ಬೆಂಗಳೂರು: ಹೊಸದಾಗಿ ನಿರ್ಮಾಣವಾಗಿರುವ ಬೆಂಗಳೂರು-ಮೈಸೂರು ರಾಷ್ಟ್ರೀಯ ದಶಪಥ ಹೆದ್ದಾರಿಗೆ ನಾಲ್ವಡಿ ಕೃಷ್ಣರಾಜ ಒಡೆಯರ್ (Nalwadi Krishnaraja Wodeyar) ಅವರ ಹೆಸರನ್ನು ನಾಮಕರಣ ಮಾಡಬೇಕೆಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರಿಗೆ, ಬಿಜೆಪಿಯ ಹಿರಿಯ ನಾಯಕ ಹಾಗೂ ಮಾಜಿ ಸಿಎಂ ಎಸ್‌ ಎಂ ಕೃಷ್ಣ (SM Krishna) ಅವರು ಪತ್ರ ಬರೆದು ಮನವಿ ಮಾಡಿಕೊಂಡಿದ್ದಾರೆ. ಇದೇ ವೇಳೆ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರಿಗೂ ಪತ್ರ ಬರೆದಿದ್ದು, ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಹೆಸರು ನಾಮಕರಣ ಮಾಡಲು ಕೇಂದ್ರಕ್ಕೆ ಶಿಫಾರಸು ಮಾಡುವಂತೆ ಕೋರಿದ್ದಾರೆ.

1902ರಿಂದ 1940ರಿಂದ ಮೈಸೂರು ರಾಜ್ಯವನ್ನು ಆಳಿದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ರಾಜ್ಯದ ಅಭಿವೃದ್ಧಿ ಮಹತ್ವದ ಕಾಣಿಕೆಯನ್ನು ನೀಡಿದ್ದಾರೆ. ಅವರ ಸಾಧನೆಗಳ ಪೈಕಿ ಹೆಗ್ಗುರುತಾಗಿರುವ ಕೆಆರ್‌ಎಸ್ ಡ್ಯಾಂ ಇಂದಿಗೂ ಕೋಟ್ಯಂತರ ರೈತರ ಜೀವನಾಡಿಯಾಗಿದೆ.

ದೇಶದ ಸಿಲಿಕಾನ್ ನಗರವಾಗಿ ಅಭಿವೃದ್ಧಿ ಹೊಂದುತ್ತಿರುವ ಮೆಟ್ರೋಪಾಲಿಟನ್ ಸಿಟಿ ಬೆಂಗಳೂರಿನಲ್ಲಿ ವೈವಿಧ್ಯಮಯ ಜೀವನೋಪಾಯವನ್ನು ಬೆಂಬಲಿಸುವ ಅಡಿಪಾಯ ಹಾಕಿದ್ದಾರೆ. ಆ ಮೂಲಕ ಲಕ್ಷಾಂತರ ಜನರ ಕುಡಿಯುವ ನೀರಿನ ಬಿಕ್ಕಟ್ಟು ನೀಗಿಸುವ ಪ್ರಯತ್ನವು ಅವರ ಕಾಲದಲ್ಲೇ ನಡೆದಿತ್ತು ಎಂಬುದನ್ನು ನಾವು ಒಪ್ಪಿಕೊಳ್ಳಬೇಕಿದೆ. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ದೂರದೃಷ್ಟಿಯ ಹಾಗೂ ಜನಪರ ರಾಜರಾಗಿದ್ದರು.

ಮೈಸೂರು ಮಹಾರಾಜರಾಗಿ ಅವರು, ಶಿವನಸಮುದ್ರ ಜಲವಿದ್ಯುತ್ ಉತ್ಪಾದನೆ, ಕನ್ನಡ ಸಾಹಿತ್ಯ ಪರಿಷತ್ ಸ್ಥಾಪನೆ, ದೇಶದಲ್ಲೇ ಮೊದಲ ಬಾರಿಗೆ ಬೀದಿ ದೀಪ ಅಳವಡಿಕೆ, ಭದ್ರಾವತಿಯ ವಿಶ್ವೇಶರಾಯ ಕಬ್ಬಿಣ ಮತ್ತು ಉಕ್ಕ ಘಟಕ(ವಿಐಎಸ್ಐ), ಮೈಸೂರು ಐರನ್ ವರ್ಕ್ಸ್, ಕೆ ಆರ್ ಹಾಸ್ಪಿಟಲ್, ಸ್ಯಾಂಡಲ್‌ವುಡ್ ತೈಲ ಕಾರ್ಖಾನೆ, ಮೈಸೂರು ಶುಗರ್ ಮಿಲ್ಸ್ ಆರಂಭಿಸಿ, ಈ ಭಾಗದ ಜನರಿಗೆ ಆಧಾರವಾದರು. ಅದೇ ರೀತಿ, ವಿಧವಾ ಶೈಕ್ಷಣಿಕ ಸ್ಕಾಲರ್‌ಶಿಪ್ ಜಾರಿಗೆ ತಂದರು. ಬಾಲ್ಯ ವಿವಾಹಗಳನ್ನು ನಿಷೇಧಿಸುವ ಮೂಲಕ ಸಾಮಾಜಿಕ ಸುಧಾರಣೆಗೂ ನಾಂದಿ ಹಾಡಿದರು.

ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ನಿಜಾರ್ಥದಲ್ಲಿ ಪ್ರಜಾನಾಯಕರಾಗಿ, ರಾಜ್ಯದ ಅಭಿೃದ್ಧಿಗೆ ಆ ಕಾಲದಲ್ಲೇ ಭದ್ರ ಬುನಾದಿ ಹಾಕಿದ್ದಾರೆ. ಅಂಥ ಮಹಾನ್ ರಾಜರ ಹೆಸರನ್ನು ಹೊಸದಾಗಿ ನಿರ್ಮಾಣವಾಗಿರುವ ಬೆಂಗಳೂರು-ಮೈಸೂರು ದಶಪಥ ಹೈವೇಗೆ ಇಡುವ ಮೂಲಕ ಅವರಿಗೆ ಗೌರವ ಸಲ್ಲಿಸಬೇಕೆಂದು ಕೇಂದ್ರ ಸಚಿವರಿಗೆ ಬರೆದ ಪತ್ರದಲ್ಲಿ ಎಸ್ ಎಂ ಕೃಷ್ಣ ಅವರು ಮನವಿ ಮಾಡಿದ್ದಾರೆ. ಇದೇ ವೇಳೆ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೂ ಪತ್ರ ಬರೆದು, ಬೆಂಗಳೂರು-ಮೈಸೂರು ದಶಪಥ ಹೈವೇಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಹೆಸರು ನಾಮಕರಣ ಮಾಡುವುದಕ್ಕೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕೆಂದು ಪತ್ರ ಬರೆದು ಒತ್ತಾಯಿಸಿದ್ದಾರೆ.

ಇದನ್ನೂ ಓದಿ | ದಶಪಥದಲ್ಲಿ ₹800 ಕೋಟಿ ಭ್ರಷ್ಟಾಚಾರ: ಸಂಸದ ಪ್ರತಾಪ್‌ ಸಿಂಹ ವಿರುದ್ಧ ಜೆಡಿಎಸ್‌ ಶಾಸಕ ಆರೋಪ

Exit mobile version