Site icon Vistara News

Shakti Scheme : ಮಹಿಳೆಯರ ಉಚಿತ ಪ್ರಯಾಣದ ಸ್ಮಾರ್ಟ್‌ ಕಾರ್ಡ್‌; ಹುಟ್ಟಿದ ಹೊಸ ಕಥೆ!

Shakti smart card

ಬೆಂಗಳೂರು: ಕಾಂಗ್ರೆಸ್‌ ಸರ್ಕಾರದ ಪ್ರಮುಖ ಗ್ಯಾರಂಟಿಗಳಲ್ಲಿ (Congress Guarantee Scheme) ಒಂದಾಗಿರುವ “ಶಕ್ತಿ” ಯೋಜನೆಗೆ (Shakti Scheme) ಈಗಾಗಲೇ ಮಹಿಳೆಯರಿಂದ ಭರ್ಜರಿ ರೆಸ್ಪಾನ್ಸ್‌ ಸಿಕ್ಕಿದೆ. ಸದ್ಯಕ್ಕಂತೂ ಮಹಿಳೆಯರು ಆಧಾರ್‌ ಕಾರ್ಡ್‌ (AAdhar Card) ಸೇರಿದಂತೆ ತಮ್ಮ ಗುರುತಿನ ಚೀಟಿಯನ್ನು ತೋರಿಸಿ ಪ್ರಯಾಣ ಮಾಡುತ್ತಿದ್ದಾರೆ. ಆದರೆ, ಇನ್ನು ಮುಂದೆ ಮಹಿಳೆಯರಿಗೆ ಸ್ಮಾರ್ಟ್‌ ಕಾರ್ಡ್‌ (Smart Card) ಕೊಡಲಾಗುವುದು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್‌ ಅವರು ಶುಕ್ರವಾರ (ಆಗಸ್ಟ್‌ 10) ಮಾದರಿ ಕಾರ್ಡ್‌ ಅನ್ನು ಪ್ರದರ್ಶನ ಮಾಡಿದ್ದರು. ಆದರೆ, ಈಗ ಈ ಬಗ್ಗೆ ಹಲವಾರು ಅಂತೆಕಂತೆಗಳು ಹುಟ್ಟಿಕೊಂಡಿವೆ. ಸ್ಮಾರ್ಟ್‌ ಕಾರ್ಡ್‌ಗೆ ಸೆಂಟರ್ ಫಾರ್ ಇ-ಆಡಳಿತ (CEG) ವಿರೋಧ ಇದೆ. ಹೀಗಾಗಿ ಇದರ ಬದಲು ಮಾಮೂಲಿ ಬಸ್‌ ಪಾಸ್‌ ನೀಡಲಾಗುವುದು ಎಂದು ಹೇಳಲಾಗಿತ್ತು. ಆದರೆ, ಇದು ಶುದ್ಧ ಸುಳ್ಳು, ಸರ್ಕಾರ ಸ್ಮಾರ್ಟ್‌ ಕಾರ್ಡ್‌ ಅನ್ನೇ ಕೊಡಲಿದೆ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ (Transport Minister Ramalinga Reddy) ವಿಸ್ತಾರ ನ್ಯೂಸ್‌ಗೆ ಸ್ಪಷ್ಟಪಡಿಸಿದ್ದಾರೆ.

ಸಾರ್ವಜನಿಕರು ಯಾವುದೇ ಊಹಾಪೋಹಕ್ಕೆ ಕಿವಿಗೊಡಬಾರದು. ಈಗಾಗಲೇ ನಮ್ಮ ಸರ್ಕಾರ ತೀರ್ಮಾನಿಸಿದಂತೆ ಸ್ಮಾರ್ಟ್‌ ಕಾರ್ಡ್‌ ಅನ್ನೇ ಕೊಡಲಿದೆ ಎಂದು ವಿಸ್ತಾರ ನ್ಯೂಸ್‌ಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಪ್ರತಿಕ್ರಿಯೆ ನೀಡಿದರು.

ಇದನ್ನೂ ಓದಿ: Commission Politics : ನ್ಯಾಯಾಂಗ ತನಿಖಾ ಆಯೋಗಕ್ಕೆ ಬಿಜೆಪಿಯ 40% ಕಮಿಷನ್‌ ದಾಖಲೆ ಕೊಡುವೆ: ಕೆಂಪಣ್ಣ

ಸ್ಮಾರ್ಟ್‌ ಕಾರ್ಡ್‌ನಲ್ಲೇನು ಇರಲಿದೆ?

ಈ ಸ್ಮಾರ್ಟ್ ಕಾರ್ಡ್‌ನಲ್ಲಿ ಫಲಾನುಭವಿಗಳ ವಿವರ ಇರಲಿದೆ. ಮೊದಲಿಗೆ ಕ್ರಮ ಸಂಖ್ಯೆ, ಹೆಸರು, ಜನ್ಮ ದಿನಾಂಕ ಹಾಗೂ ವಾಸ ಸ್ಥಳದ ಮಾಹಿತಿ ಇರಲಿದೆ. ಇದರ ಕೆಳಗೆ ಕಾರ್ಡ್‌ ವಿತರಣಾ ದಿನಾಂಕವೂ ಇರಲಿದೆ. ಕೊನೆಯಲ್ಲಿ ಕ್ಯೂ ಆರ್‌ ಕೋಡ್‌ ಅನ್ನೂ ನೀಡಲಾಗುತ್ತದೆ. ಇನ್ನು ಸಿಎಂ ಸಿದ್ದರಾಮಯ್ಯ (CM Siddaramaiah), ಡಿಸಿಎಂ ಡಿ.ಕೆ. ಶಿವಕುಮಾರ್ (DCM DK Shivakumar) ಹಾಗೂ ಸಚಿವ ರಾಮಲಿಂಗಾ ರೆಡ್ಡಿ ಭಾವಚಿತ್ರ ಇರಲಿದೆ. ಜತೆಗೆ “ಶಕ್ತಿ – ಮಹಿಳಾ ಸಬಲೀಕರಣದತ್ತ ಪಯಣ” ಎಂಬ ಅಡಿ ಶೀರ್ಷಿಕೆಯೂ ಇರಲಿದೆ.

ಈ ಕಾರ್ಡ್‌ ಕೊಡುವುದರ ಹಿಂದಿದೆ ಜಾತಿ ಲೆಕ್ಕಾಚಾರ!

ರಾಜ್ಯ ಸರ್ಕಾರವು ಉಚಿತ ಪ್ರಯಾಣಕ್ಕೆ (Free Bus ride) ಸ್ಮಾರ್ಟ್‌ ಕೊಡುವುದರ ಹಿಂದೆ ಪ್ರಚಾರದ ಜತೆ ಜಾತಿ ಲೆಕ್ಕಾಚಾರಗಳೂ (Caste calculation) ಅಡಗಿವೆ. ಕಾರಣ, ಕಾರ್ಡ್‌ಗಳು ಬೇಗ ಹಾಳಾಗುವುದಿಲ್ಲ. ಜತೆಗೆ ಕಲರ್‌ಫುಲ್‌ ಆಗಿರುವುದರಿಂದ ಪ್ರತಿ ಬಾರಿ ಪ್ರಯಾಣ ಮಾಡುವಾಗಲೂ ಸರ್ಕಾರದ ಉಚಿತ ಯೋಜನೆ ಬಗ್ಗೆ ಗಮನಕ್ಕೆ ಬರುತ್ತದೆ. ಜನರ ಮನಸ್ಸಿನಲ್ಲಿ ಹಾಗೆಯೇ ಉಳಿಯುತ್ತದೆ ಎಂಬುದಾಗಿದೆ. ಇನ್ನೊಂದೆಡೆ ಈಗಾಗಲೇ ಸರ್ಕಾರದ ವಿರುದ್ಧ ಗ್ಯಾರಂಟಿ ಯೋಜನೆಗಳಿಗೆ ಎಸ್‌ಟಿ, ಎಸ್‌ಟಿ ನಿಧಿಗಳನ್ನು (ST/ST Fund) ಬಳಸಿದ ಆರೋಪ ಕೇಳಿ ಬಂದಿದೆ. ಆದರೆ, ಜಾತಿಗಳ ವಿವರವನ್ನು ಪಡೆದುಕೊಂಡರೆ ಯಾವ ಯಾವ ಜಾತಿಯ ಎಷ್ಟು ಫಲಾನುಭವಿಗಳಿದ್ದಾರೆ ಎಂಬ ಲೆಕ್ಕ ಸಿಗುತ್ತದೆ. ಆ ಪ್ರಕಾರ, ಜನರ ಮುಂದೂ ಈ ಲೆಕ್ಕವನ್ನು ಇಡುವ ಲೆಕ್ಕಾಚಾರ ಸರ್ಕಾರದ ಹಿಂದಿದೆ ಎನ್ನಲಾಗಿದೆ. ಅಲ್ಲದೆ, ಈಚೆಗೆ ಸಚಿವ ಪ್ರಿಯಾಂಕ್‌ ಖರ್ಗೆ ಸಹ ಈ ಬಗ್ಗೆ ಸೂಚ್ಯವಾಗಿ ಹೇಳಿಕೆ ನೀಡಿದ್ದರು.

ಇದನ್ನೂ ಓದಿ: Commission Politics : ನ್ಯಾಯಾಂಗ ಆಯೋಗಕ್ಕೆ ಕೊಠಡಿಯನ್ನೇ ಕೊಡದ ಸರ್ಕಾರ; ಇನ್ನೂ ಶುರುವಾಗದ ತನಿಖೆ!

ಮೂರು ತಿಂಗಳೊಳಗೆ ಸ್ಮಾರ್ಟ್‌ ಕಾರ್ಡ್ ಕೊಡುವುದಾಗಿ ಹೇಳಿದ್ದ ಸರ್ಕಾರ!

ಶಕ್ತಿ ಯೋಜನೆಯು ಜೂನ್‌ 11ರಂದು ಜಾರಿಗೆ ಬಂದಿದೆ. ಈ ಯೋಜನೆಯ ಉದ್ಘಾಟನಾ ಸಮಾರಂಭದಲ್ಲಿ ಐವರು ಮಹಿಳೆಯರಿಗೆ ಸಾಂಕೇತಿಕವಾಗಿ ಸ್ಮಾರ್ಟ್‌ ಕಾರ್ಡ್‌ ವಿತರಣೆ ಮಾಡಿದ್ದ ರಾಜ್ಯ ಸರ್ಕಾರ, ಮೂರು ತಿಂಗಳೊಳಗೆ ಎಲ್ಲರಿಗೂ ಸ್ಮಾರ್ಟ್‌ ಕಾರ್ಡ್‌ ನೀಡುವ ವ್ಯವಸ್ಥೆಗೆ ಚಾಲನೆ ನೀಡಲಾಗುವುದು ಎಂದು ಹೇಳಿತ್ತು. ಆದರೆ, ಈ ಶುಕ್ರವಾರಕ್ಕೆ (ಆಗಸ್ಟ್‌ 11) ಸರಿಯಾಗಿ 2 ತಿಂಗಳು ಪೂರೈಸಿದೆ. ಇಲ್ಲಿಯವರೆಗೂ ಸ್ಮಾರ್ಟ್‌ ಕಾರ್ಡ್‌ಗೆ ಅರ್ಜಿ ಸಲ್ಲಿಕೆ ಬಗ್ಗೆ ಯಾವುದೇ ತೀರ್ಮಾನವನ್ನೂ ರಾಜ್ಯ ಸರ್ಕಾರ ಕೈಗೊಂಡಿಲ್ಲ. ಅಂದಹಾಗೆ, ರಾಜ್ಯದಲ್ಲಿ ‘ಶಕ್ತಿ’ ಯೋಜನೆಯಡಿ ವಿದ್ಯಾರ್ಥಿಗಳು, ಮಂಗಳಮುಖಿಯರು, ಮಹಿಳೆಯರು ಸೇರಿದಂತೆ ಒಟ್ಟು 1.2 ಕೋಟಿ ಮಂದಿ ಸ್ಮಾರ್ಟ್ ಕಾರ್ಡ್‌ಗಾಗಿ ಅರ್ಜಿ ಸಲ್ಲಿಸಬಹುದು ಎಂದು ಸಾರಿಗೆ ಇಲಾಖೆ ಅಂದಾಜಿಸಿದೆ.

Exit mobile version