Site icon Vistara News

Smart Virtual Clinic: ಬೆಂಗಳೂರಲ್ಲಿ ಕ್ಲಿಕ್‌ ಆಯ್ತು ಸ್ಮಾರ್ಟ್ ವರ್ಚುವಲ್ ಕ್ಲಿನಿಕ್; ಏನೆಲ್ಲ ಚಿಕಿತ್ಸೆ ಲಭ್ಯವಿದೆ?

Smart Virtual Clinic

Smart Virtual Clinic

ಬೆಂಗಳೂರು: ಸಾಮಾನ್ಯವಾಗಿ ಸರ್ಕಾರಿ ಆಸ್ಪತ್ರೆಗಳು (Govt hospital) ಎಂದಾಗ ಉದ್ದದ ಕ್ಯೂ, ವೈದ್ಯರಿಗಾಗಿ ಗಂಟೆಗಟ್ಟಲೇ ಕಾಯುವ ಸ್ಥಿತಿ ಸರ್ವೇ ಸಾಮಾನ್ಯವಾಗಿದೆ. ದೊಡ್ಡ ಸಾಲಿನಲ್ಲಿ ನಿಂತು ಚೀಟಿ ಬರೆಸಬೇಕು, ಸರಿಯಾದ ಸಮಯಕ್ಕೆ ನುರಿತ ತಜ್ಞರು ಸಿಗುವುದಿಲ್ಲ ಎಂಬೆಲ್ಲ ಸಮಸ್ಯೆಗಳು ಜನರಿಂದ ಕೇಳಿ ಬರುತ್ತವೆ. ಆದರೆ, ಈ ರೀತಿಯ ಅನೇಕ ಸಮಸ್ಯೆಗಳಿಗೆ ಪರಿಹಾರ ನೀಡುವ ಉದ್ದೇಶದಿಂದಲೇ ಬೆಂಗಳೂರು ಮಹಾನಗರ ಪಾಲಿಕೆ (BBMP) ಮತ್ತು ಸ್ಮಾರ್ಟ್‌ ಸಿಟಿ ಯೋಜನೆಯಡಿ ಇತ್ತೀಚೆಗೆ ಸ್ಥಾಪಿಸಿದ ಸ್ಮಾರ್ಟ್‌ ವರ್ಚುವಲ್‌ ಕ್ಲಿನಿಕ್‌ಗಳಿಗೆ (Smart Virtual Clinic) ಜನರಿಂದ ಉತ್ತಮ ಸ್ಪಂದನೆ ದೊರಕಿದೆ.

ನಗರದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ರೋಗಿಗಳಿಗೆ ನುರಿತ ತಜ್ಞರನ್ನು ಒದಗಿಸಿಕೊಡುವ ಉದ್ದೇಶದಿಂದ 29 ಸ್ಮಾರ್ಟ್‌ ವರ್ಚುವಲ್‌ ಕ್ಲಿನಿಕ್‌ಗಳನ್ನು ಸ್ಥಾಪಿಸಲಾಗಿದೆ. ಇಲ್ಲಿ ಸಂಪೂರ್ಣ ಉಚಿತ ಚಿಕಿತ್ಸೆ ನೀಡಲಾಗುತ್ತಿದ್ದು, ಬಡವರು, ಮಧ್ಯಮ ವರ್ಗದವರಿಗೂ ಅನುಕೂಲವಾಗಿದೆ.

ಸ್ಮಾರ್ಟ್‌ ಕ್ಲಿನಿಕ್‌ನಲ್ಲಿ ಸ್ಮಾರ್ಟ್‌ ಚೆಕ್‌ಅಪ್‌

ಡಿಜಿಟಲ್​​ ರೂಪದಲ್ಲಿ ವೈದ್ಯರ ಜತೆ ಸಂಪರ್ಕ ಸಾಧಿಸುವ ಸ್ಮಾರ್ಟ್​ ವರ್ಚುವಲ್ ಕ್ಲಿನಿಕ್ ವ್ಯವಸ್ಥೆ ಕಲ್ಪಿಸಲಾಗಿದೆ. ಕ್ಲಿನಿಕ್‌ಗೆ ಬರುವ ರೋಗಿಯ ಎಲ್ಲ ವಿವರಗಳನ್ನು ಮೊಬೈಲ್​ ಆ್ಯಪ್​ ಮೂಲಕ ದಾಖಲಿಸಲಾಗುತ್ತದೆ. ಸ್ಮಾರ್ಟ್​ ವರ್ಚುವಲ್ ಕ್ಲಿನಿಕ್​ನಿಂದಲೇ ವಿಡಿಯೊ ಕಾನ್ಫರೆನ್ಸ್​​​ ಮೂಲಕ ಸೆಂಟ್ರಲ್ ಕ್ಲಿನಿಕಲ್ ಕಮ್ಯಾಂಡ್ ಸೆಂಟರ್​ಗೆ​ ಸಂಪರ್ಕಿಸಲಾಗುತ್ತದೆ. ರೋಗಿಯ ಅಗತ್ಯಕ್ಕನುಸಾರವಾಗಿ ತಪಾಸಣೆ ನಡೆಸಲು ವೈದ್ಯರು, ಅರೆ ವೈದ್ಯಕೀಯ ಸಿಬ್ಬಂದಿಗೆ ಸೂಚಿಸುತ್ತಾರೆ. ಕ್ಲಿನಿಕ್‌ಗೆ ಬರುವ ರೋಗಿಗಳೊಂದಿಗೆ ಕಮಾಂಡ್ ಸೆಂಟರ್​​ನಿಂದ ತಜ್ಞ ವೈದ್ಯರು ವರ್ಚುವಲ್ ಸಮಾಲೋಚನೆ‌ ನಡೆಸುತ್ತಾರೆ.

ವರ್ಚವಲ್ ಕ್ಲಿನಿಕ್ ಹೈಲೈಟ್ಸ್

ಸ್ಮಾರ್ಟ್‌ ವರ್ಚುವಲ್‌ ಕ್ಲಿನಿಕ್‌ನಲ್ಲಿ ಡಿಜಿಟಲ್‌ ಸ್ಟೆಥೋಸ್ಕೋಪ್‌, ಡರ್ಮಾ ಸ್ಕೋಪ್‌, ಇಎನ್‌ಟಿ ಪರೀಕ್ಷಾ ಕ್ಯಾಮೆರಾ, ಇಸಿಜಿ ಸೇರಿದಂತೆ ಸಿಗ್ಮೋಮಾನೋ ಮೀಟರ್‌, ಗ್ಲೂಕೋ ಮೀಟರ್‌, ಎಕ್ಸ್‌ರೇ ಸ್ಕ್ಯಾನರ್‌, ಫಂಡಸ್‌ ರೆಟಿನಾ, ಕಣ್ಣಿನ ರಿಫ್ರಾಕ್ಷನ್‌ ಘಟಕ ಎಲ್ಲವೂ ಲಭ್ಯವಿದೆ.

ಇದನನೂ ಓದಿ: Weather Report: ಬೆಂಗಳೂರು ಸೇರಿ 11 ಜಿಲ್ಲೆಗಳಲ್ಲಿ ಮಳೆ; ಇನ್ನೂ ಐದು ದಿನ ಇದೆ ವರ್ಷಧಾರೆ

ಜನಸಾಮಾನ್ಯರಿಗೆ ಅನುಕೂಲ ಆಗಲಿ ಎಂಬ ಕಾರಣಕ್ಕೆ ಪಾಲಿಕೆ ಹಾಗೂ ಸ್ಮಾರ್ಟ್ ಸಿಟಿ ಆರಂಭ ಮಾಡಿದ್ದ ವರ್ಚುವಲ್ ಕ್ಲಿನಿಕ್ ಕ್ಲಿಕ್ ಆಗಿದೆ. ಆರೋಗ್ಯ ಸೇವೆಯನ್ನು ಸರಳೀಕರಣ ಮಾಡಲಾಗಿದೆ. ಇದು ಪಬ್ಲಿಕ್‌ಗೂ ಇಷ್ಟ ಆಗಿದೆ. ಹೀಗಾಗಿ ಇದನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಮುಂದುವರಿಸಿಕೊಂಡು ಹೋಗಲಿ ಎಂಬುದು ಜನರ ಆಶಯವಾಗಿದೆ.

ರಾಜ್ಯದ ಇನ್ನಷ್ಟು ಪ್ರಮುಖ ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version