Site icon Vistara News

Karnataka Election: ದಲಿತರನ್ನು ರಾಷ್ಟ್ರಪತಿ ಮಾಡಿದ್ದು ಬಿಜೆಪಿಯೇ ಹೊರತು ಕಾಂಗ್ರೆಸ್‌ ಅಲ್ಲ: ಸ್ಮೃತಿ ಇರಾನಿ

Smriti Irani says Bjp made Dalits president, not Congress

ಬೆಳಗಾವಿ: ಬಿಜೆಪಿ ದಲಿತರ ವಿರೋಧಿ ಎಂದು ಕಾಂಗ್ರೆಸ್ ಆರೋಪಿಸುತ್ತಾ ಬಂದಿದೆ. ಆದರೆ ದಲಿತರನ್ನು ರಾಷ್ಟ್ರಪತಿ ಮಾಡಿದ ಹೆಗ್ಗಳಿಕೆ ಬಿಜೆಪಿ ಪಕ್ಷಕ್ಕಿದೆ. ನಮ್ಮ ಪಕ್ಷ (Karnataka Election) ಆದಿವಾಸಿ ಮಹಿಳೆ ದ್ರೌಪದಿ ಮರ್ಮು ಅವರಿಗೆ ರಾಷ್ಟ್ರಪತಿ ಸ್ಥಾನ ನೀಡಿ ಮಹಿಳೆಯರ ಗೌರವ ಹೆಚ್ಚಿಸಿದೆ ಎಂದು ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಸ್ಮೃತಿ ಇರಾನಿ ಹೇಳಿದರು.

ನಿಪ್ಪಾಣಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಸಚಿವೆ ಶಶಿಕಲಾ ಜೊಲ್ಲೆ ಪರ ಪ್ರಚಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನಿಪ್ಪಾಣಿ ಕ್ಷೇತ್ರದಲ್ಲಿ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿ ರೈತರಿಗೆ 10 ಸಾವಿರ ರೂ. ರೈತ ಸಮ್ಮಾನ ನಿಧಿ ನೀಡಿದ್ದಾರೆ. ಮಹಿಳೆಯರ ಸಬಲೀಕರಣಕ್ಕೆ ಅನೇಕ ಯೋಜನೆಗಳನ್ನು ಜಾರಿ ಮಾಡಿದ್ದಾರೆ ಎಂದು ಹೇಳಿದರು.

ಕೊರೊನಾ ಸಂದರ್ಭದಲ್ಲಿ ಜನರ ಸಂಕಷ್ಟ ಪರಿಹರಿಸಿದ್ದು ಬಿಜೆಪಿಯೇ ಹೊರತು ಕಾಂಗ್ರೆಸ್‌, ಎನ್‌ಸಿಪಿ ಅಲ್ಲ. ಯಾವ ನೈತಿಕತೆಯಿಂದ ಜನರ ಬಳಿ ಮತ ಕೇಳತ್ತೀರಾ? ಕೋವಿಡ್ ವ್ಯಾಕ್ಸಿನ್ ಅನ್ನು ವಿದೇಶಿದಿಂದ ತನ್ನಿ ಎಂದು ಕಾಂಗ್ರೆಸ್ ನಾಯಕರು ಹೇಳಿದರು. ಆದರೆ ಭಾರತದಲ್ಲಿ ವ್ಯಾಕ್ಸಿನ್ ತಯಾರಿಸಿ ವಿದೇಶಗಳಿಗೂ ಪೂರೈಸಲಾಗಿದೆ. ಡಿ.ಕೆ.ಶಿವಕುಮಾರ, ಸಿದ್ದರಾಮಯ್ಯ ಸಿಎಂ ಆಗಿದ್ದರೆ ಉಚಿತವಾಗಿ ವ್ಯಾಕ್ಸಿನ್ ನೀಡುತ್ತಿರಲಿಲ್ಲ ಎಂದರು.

ಮಹಿಳೆಯರನ್ನು ಬಿಜೆಪಿ ಸಶಕ್ತರನ್ನಾಗಿ ಮಾಡುತ್ತಿದೆ: ಅನ್ನಪೂರ್ಣದೇವಿ

ದೇಶದಲ್ಲಿ ಮಹಿಳಾ ಸಶಕ್ತೀಕರಣದ ಅವಶ್ಯಕತೆ ಹೆಚ್ಚಾಗಿದ್ದು, ಪ್ರತಿಯೊಂದು ಕ್ಷೇತ್ರದಲ್ಲಿ ಮಹಿಳೆಯರನ್ನು ಬಿಜೆಪಿ ಸಶಕ್ತರನ್ನಾಗಿ ಮಾಡುತ್ತಿದೆ. ಸೈನಿಕ ಶಾಲೆಗಳಲ್ಲಿ ಇಲ್ಲಿಯವರೆಗೂ ಗಂಡುಮಕ್ಕಳಿಗೆ ಮಾತ್ರ ಶಿಕ್ಷಣಕ್ಕೆ ಅವಕಾಶ ನೀಡಲಾಗುತ್ತಿತ್ತು. ಆದರೆ ಪ್ರಧಾನಿ ನರೇಂದ್ರ ಮೋದಿ ಅವರು ಹೆಣ್ಣು ಮಕ್ಕಳಿಗೂ ಶಿಕ್ಷಣ ಸಿಗುವಂತೆ ಮಾಡಿದ್ದಾರೆ ಎಂದು ಕೇಂದ್ರ ಶಿಕ್ಷಣ ಖಾತೆ ರಾಜ್ಯ ಸಚಿವೆ ಅನ್ನಪೂರ್ಣದೇವಿ ಹೇಳಿದರು.

ಜಿಲ್ಲೆಯ ನಿಪ್ಪಾಣಿ ಪಟ್ಟಣದ ವಿಎಸ್ಎಂ ಕಾಲೇಜು ಮೈದಾನದಲ್ಲಿ ಮಂಗಳವಾರ ಆಯೋಜಿಸಿದ್ದ ಬಿಜೆಪಿ ಬೃಹತ್ ಮಹಿಳಾ‌ ಸಮಾವೇಶದಲ್ಲಿ ಮಾತನಾಡಿದ ಅವರು, ಇಲ್ಲಿ ಸೇರಿರುವ ಮಹಿಳೆಯರನ್ನು ನೋಡಿದರೆ ತುಂಬಾ ಖುಷಿಯಾಗುತ್ತದೆ. ಮೋದಿ ಸಂಪುಟದಲ್ಲಿ 11 ಮಹಿಳಾ ಜನಪ್ರತಿನಿಧಿಗಳು ಇದ್ದಾರೆ. ಸಂಸತ್‌ನಲ್ಲಿ 112 ಸಂಸದೆಯರು ಇದ್ದೇವೆ. ಕೇಂದ್ರ ಸರ್ಕಾರ ಮಹಿಳಾ ಸಬಲೀಕರಣಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದೆ ಎಂದು ತಿಳಿಸಿದರು.

ರಾಜ್ಯದಲ್ಲಿ ಡಬಲ್ ಎಂಜಿನ್ ಸರ್ಕಾರ ಅಧಿಕಾರದಲ್ಲಿದೆ. ಭಾರತ ವಿಶ್ವಮಟ್ಟದಲ್ಲಿ ಉತ್ತಮ ಹೆಸರು ಮಾಡುತ್ತಿದೆ. ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತವನ್ನು ಇಡೀ ವಿಶ್ವವೇ ನೋಡುತ್ತಿದೆ. ಚುನಾವಣೆಯಲ್ಲಿ ಶಶಿಕಲಾ ಜೊಲ್ಲೆಗೆ ಮತ ನೀಡುವ ಮೂಲಕ ಅವರನ್ನು ಭಾರಿ ಅಂತರದಲ್ಲಿ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.

ಇದನ್ನೂ ಓದಿ | Karnataka Election 2023 : ನಾಳೆಯಿಂದ ಕಿಚ್ಚ ಸುದೀಪ್‌ ಪ್ರಚಾರ; ಈ ಬಾರಿ ಯಾವ ನಟ-ನಟಿಯರೆಲ್ಲಾ ಪ್ರಚಾರ ಮಾಡಲಿದ್ದಾರೆ?

ಕಾಂಗ್ರೆಸ್‌ನಲ್ಲಿ ಸಿಎಂ ಆಗಲು ಸಿದ್ದರಾಮಯ್ಯ, ಡಿಕೆಶಿ ಸೇರಿ ಹಲವರ ಪರದಾಟ: ದೇವೇಂದ್ರ ಫಡ್ನವೀಸ್‌

ವಿಜಯಪುರ: ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್‌, ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಹಲವರು ಸಿಎಂ ಆಗಲು ಪರದಾಡುತ್ತಿದ್ದಾರೆ. ರಾಹುಲ್ ಗಾಂಧಿ ಭಾರತ್ ಜೋಡೊ ಯಾತ್ರೆ ಮಾಡಿದರು. ಭಾರತ ಎಲ್ಲಿ ತುಂಡಾಗಿದೆ ಎಂಬುದು ಗೊತ್ತಿಲ್ಲಾ. ಆದರೆ, ಅದು ಕಾಂಗ್ರೆಸ್ ಜೋಡೊ ಯಾತ್ರೆ ಆಗಿದೆ ಎಂದು ಮಹಾರಾಷ್ಟ್ರ ಡಿಸಿಎಂ ದೇವೇಂದ್ರ ಫಡ್ನವೀಸ್‌ ಹೇಳಿದರು.

ನಗರದಲ್ಲಿ ಮಂಗಳವಾರ ಏರ್ಪಡಿಸಿದ್ದ ಚಾಯ್‌ ಪೇ ಚರ್ಚಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕರ್ನಾಟಕದಲ್ಲಿ ಕಾಂಗ್ರೆಸ್ಸಿಗರಿಗೆ ಮಾನ, ಮರ್ಯಾದೆ ಇಲ್ಲಾ. ಕರ್ನಾಟಕದಲ್ಲಿ ಬಿಜೆಪಿ ಪೂರ್ಣ ಬಹುಮತ ಸರ್ಕಾರ ಕೊಡುತ್ತೇವೆ ಎಂದು ಜನರು ಸಂಕಲ್ಪ‌ ಮಾಡಬೇಕು. ಜನರು ಬಿಜೆಪಿಗೆ ಬೆಂಬಲ ಕೊಡುತ್ತಾರೆ ಎಂಬ ನಂಬಿಕೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ವಿಜಯಪುರದಲ್ಲಿ ನಿಮ್ಮ ಆಶೀರ್ವಾದ ಬಸನಗೌಡ ಪಾಟೀಲ್ ಯತ್ನಾಳ್‌ಗೆ ಕೊಡಬೇಕು. ಯತ್ನಾಳ್ ಮಂತ್ರಿಯಾಗಿ, ಶಾಸಕರಾಗಿ ಅತ್ಯುತ್ತಮ ಕೆಲಸ ಮಾಡಿದ್ದಾರೆ. ಛತ್ರಪತಿ ಶಿವಾಜಿಯಂತೆ ದಾನ, ಧರ್ಮಕ್ಕೆ ಯತ್ನಾಳ್ ಹೆಸರುವಾಸಿಯಾಗಿದ್ದಾರೆ. ಈ‌ ಬಾರಿ ಬಸನಗೌಡಗೆ ಮತ ನೀಡಿ ದಾಖಲೆ ನಿರ್ಮಿಸಬೇಕು ಎಂದು ಕರೆ ನೀಡಿದರು.

ಇದನ್ನೂ ಓದಿ | BJP Karnataka: ಬಿಜೆಪಿ ವತಿಯಿಂದಲೇ ಕಿಚ್ಚ ಸುದೀಪ್‌ ಪ್ರವಾಸ ನಿಗದಿ: ಬುಧವಾರ 6 ಅಭ್ಯರ್ಥಿಗಳ ಪರ ಬಿರುಸಿನ ಪ್ರಚಾರ

ಮೋದಿ ಅವರ ನೇತೃತ್ವದಲ್ಲಿ ದೇಶ ಅಭಿವೃದ್ಧಿಯತ್ತ ಸಾಗಿದೆ. ನಾನು ತಿನ್ನಲ್ಲ, ಬೇರೆಯವರನ್ನು ತಿನ್ನೋಕೆ ಬಿಡಲ್ಲ ಅಂತ ಮೋದಿ ಬಂದ ದಿನವೇ ಹೇಳಿದ್ದಾರೆ. ಕೋಟ್ಯಂತರ ಜನರ ಮನೆಗೆ ಗ್ಯಾಸ್, ನೀರು, ಶೌಚಾಲಯ ಕೊಟ್ಟಿದ್ದಾರೆ. ರೈತರಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ 10 ಸಾವಿರ ರೂ ರೈತ ಸಮ್ಮಾನ್‌ ನಿದಿ ಕೊಡಲಾಗುತ್ತಿದೆ. ದೇಶದ ಅರ್ಥ ವ್ಯವಸ್ಥೆಯನ್ನು ಮೋದಿ ಅಭಿವೃದ್ಧಿಗೊಳಿಸುತ್ತಿದ್ದಾರೆ ಎಂದು ಹೇಳಿದರು.

Exit mobile version