ಶಿವಮೊಗ್ಗ: ನಾಗರ ಪಂಚಮಿ ಹಬ್ಬದಂದೇ ಹಾವು ಕಚ್ಚಿ ಬಾಣಂತಿ ಮೃತಪಟ್ಟಿರುವ ಘಟನೆ (Snake Bite) ಜಿಲ್ಲೆಯ ಸಾಗರ ತಾಲೂಕಿನ ಹುತ್ತಾದಿಂಬ ಗ್ರಾಮದಲ್ಲಿ ಶುಕ್ರವಾರ ನಡೆದಿದೆ. ಗದ್ದೆಯಲ್ಲಿ ಮೇವು ತರಲು ತೆರಳಿದ್ದ ವೇಳೆ ಹಾವು ಕಚ್ಚಿದ್ದರಿಂದ ದುರಂತ ಸಂಭವಿಸಿದೆ.
ರಂಜಿತಾ (22) ಮೃತಪಟ್ಟ ಯುವತಿ. ಗದ್ದೆಯಲ್ಲಿ ಮೇವು ತರಲು ಹೋಗಿದ್ದ ವೇಳೆ ಪೊದೆಯಲ್ಲಿದ್ದ ಹಾವು, ಬಾಣಂತಿಗೆ ಕಚ್ಚಿದೆ. ಆದರೆ, ಈ ಬಗ್ಗೆ ಯುವತಿ ಗಮನಕ್ಕೆ ಬಂದಿಲ್ಲ. ಕೆಲಹೊತ್ತಿನ ಬಳಿಕ ಕುಟುಂಬಸ್ಥರು ನೋಡಿದಾಗ ಗದ್ದೆಯಲ್ಲಿ ರಂಜಿತಾ ಕುಸಿದು ಬಿದ್ದಿದ್ದಳು. ತಕ್ಷಣ ಸಾಗರದ ಉಪವಿಭಾಗೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಮಾರ್ಗ ಮಧ್ಯೆ ರಂಜಿತಾ ಮೃತಪಟ್ಟಿದ್ದಾಳೆ.
ಮೃತ ರಂಜಿತಾ 3 ವರ್ಷದ ಹೆಣ್ಣು ಹಾಗೂ 4 ತಿಂಗಳ ಹಸುಗೂಸು ಹೊಂದಿದ್ದಳು. ಆಸ್ಪತ್ರೆಯ ಶವಾಗಾರದ ಬಳಿ ಮೃತಳ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ.
ಇದನ್ನೂ ಓದಿ | Road Accident : ಪ್ರತ್ಯೇಕ ಅಪಘಾತದಲ್ಲಿ ಆರು ಬೈಕ್ ಸವಾರರ ದುರ್ಮರಣ; ಓರ್ವನಿಗೆ ಗಂಭೀರ ಗಾಯ
ಮದುವೆಗೆ ಪೋಷಕರ ವಿರೋಧ; ಮರಕ್ಕೆ ನೇಣು ಬಿಗಿದುಕೊಂಡು ಪ್ರೇಮಿಗಳು ಆತ್ಮಹತ್ಯೆ
ಬಾಗಲಕೋಟೆ: ಮದುವೆಗೆ ಪೋಷಕರು ವಿರೋಧಿಸಿದಕ್ಕೆ ಪ್ರೇಮಿಗಳಿಬ್ಬರು (Love Case) ನೇಣಿಗೆ ಶರಣಾಗಿದ್ದಾರೆ. ಬಾಗಲಕೋಟೆಯ ರಬಕವಿ-ಬನಹಟ್ಟಿ ತಾಲೂಕಿನ ನಂದಗಾಂವ ಗ್ರಾಮದಲ್ಲಿ ಘಟನೆ ನಡೆದಿದೆ.
ಸಚಿನ್ ದಳವಾಯಿ, ಪ್ರಿಯಾ ಮಡಿವಾಳರ ಮೃತ ಪ್ರೇಮಿಗಳು. ಇವರಿಬ್ಬರು ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದರು. ಆದರೆ ಮನೆಯಲ್ಲಿ ಇವರಿಬ್ಬರ ಮದುವೆಗೆ ವಿರೋಧ ವ್ಯಕ್ತವಾಗಿತ್ತು. ಇದರಿಂದ ಮನನೊಂದು ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮಹಾಲಿಂಗಪುರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಇಬ್ಬರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ .ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇದನ್ನೂ ಓದಿ: Road Accident : ಪ್ರತ್ಯೇಕ ಅಪಘಾತದಲ್ಲಿ ಆರು ಬೈಕ್ ಸವಾರರ ದುರ್ಮರಣ; ಓರ್ವನಿಗೆ ಗಂಭೀರ ಗಾಯ
ಇಬ್ಬರು ಪುಟ್ಟ ಮಕ್ಕಳ ಜತೆ ಬಾವಿಗೆ ಹಾರಿ ತಾಯಿ ಆತ್ಮಹತ್ಯೆ
ಶಿವಮೊಗ್ಗ: ಇಬ್ಬರು ಪುಟ್ಟ ಮಕ್ಕಳ ಜತೆ ಬಾವಿಗೆ ಹಾರಿ ತಾಯಿ ಆತ್ಮಹತ್ಯೆ (Self Harming) ಮಾಡಿಕೊಂಡಿರುವ ಘಟನೆ ಜಿಲ್ಲೆಯ ಹೊಸನಗರ ತಾಲೂಕಿನ ಮತ್ತಿಕೈ ಗ್ರಾಮದಲ್ಲಿ ನಡೆದಿದೆ. ಚಂಪಕಾಪುರ ನಿವಾಸಿ ರಾಜೇಶ್ ಎಂಬುವವರ ಪತ್ನಿ ವಾಣಿ (32), ಮಕ್ಕಳಾದ ಸಮರ್ಥ(12), ಸಂಪದ (6) ಮೃತರು.
ಗುರುವಾರ ರಾತ್ರಿ ಘಟನೆ ನಡೆದಿದ್ದು, ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಾವಿಯಿಂದ ಮೃತದೇಹಗಳನ್ನು ಹೊರತೆಗೆದು ನಗರ ಆಸ್ಪತ್ರೆಯ ಶವಾಗಾರಕ್ಕೆ ರವಾನೆ ಮಾಡಲಾಗಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ