Site icon Vistara News

Snake Rescue: ಹೆಲ್ಮೆಟ್‌, ಶೂ, ಮಂಚದ ಒಳಗೂ ಹಾವು; ಮೈಸೂರೀಗ ಹಾವಿನ ನಗರಿ!

snake rescue in mysore

ಮೈಸೂರು: ಪ್ರಹ್ಲಾದನ ಬಳಿಯಲ್ಲಿ ಹಿರಣ್ಯ ಕಶಿಪು ಕೇಳಿದಂತೆ “ನಿನ್ನ ಹರಿ ಈ ಕಂಬದಲ್ಲಿರುವನೇ? ಆ ಕಂಬದಲ್ಲಿರುವನೇ..” ಎಂಬ ರೀತಿಯಲ್ಲಿ ಈಗ ಮೈಸೂರಿನವರ ಪರಿಸ್ಥಿತಿ ಇದ್ದು, ಸನ್ನಿವೇಶ ತುಸು ಭಿನ್ನವಾಗಿದೆ. ಏಕೆಂದರೆ ಮೈಸೂರಿನಲ್ಲಿ ಈಗ ಹಾವುಗಳ ಹಾವಳಿ ಶುರುವಾಗಿದೆ. ಹಾವು ಅಡುಗೆ ಮನೆಯಲ್ಲಿರುವುದೇ? ದೇವರ ಕೋಣೆಯಲ್ಲಿರುವುದೇ? ಮಂಚದ ಮೇಲೆ? ಶೂ ಒಳಗೆ? ಈ ಹೆಲ್ಮೆಟ್‌ ಒಳಗೂ ಇರುವುದೇ? ಈ ಯಾವ ಪ್ರಶ್ನೆಗಳನ್ನು ಕೇಳಿದರೂ ಉತ್ತರ ಮಾತ್ರ, “ಹೌದು… ಹೌದು”. ಹೀಗೆ ಮೈಸೂರಿನ ಕೆಲವು ಬಡಾವಣೆಗಳಲ್ಲಿ ಎಲ್ಲೆಂದರಲ್ಲಿ ಹಾವುಗಳು ಕಾಣಿಸಿಕೊಳ್ಳತೊಡಗಿದ್ದು, ಅವುಗಳ ರಕ್ಷಣಾ ಕಾರ್ಯ (Snake Rescue) ನಡೆಯುತ್ತಿದೆ.

ಮೈಸೂರಲ್ಲಿ ಹಾವುಗಳ ಆತಂಕ ಶುರುವಾಗಿದೆ. ಬಹುತೇಕ ಬಡಾವಣೆಗಳಲ್ಲಿ ಹಾವುಗಳು ಕಾಣಿಸಿಕೊಳ್ಳುತ್ತಿವೆ. ಚಳಿ, ಶೀತಗಾಳಿ, ಮಳೆಗೆ ಹಾವುಗಳು ಹೊರಗೆ ಬರುತ್ತಿವೆ. ಒಂದು ಮನೆಯ ದೇವರ ಕೋಣೆಯಲ್ಲಿ ಹಾವೊಂದು ಕಾಣಿಸಿಕೊಂಡಿದೆ. ಹೀಗಾಗಿ ಕುಟುಂಬಸ್ಥರು ಆ ಹಾವಿಗೆ ಪೂಜೆ ಸಲ್ಲಿಕೆ ಮಾಡಿದ್ದಾರೆ.

ಇದನ್ನೂ ಓದಿ: Weather report: ಥಂಡಿ ಗಾಳಿಯೊಂದಿಗೆ ಈ ಐದು ಜಿಲ್ಲೆಗಳಲ್ಲಿ ಅಬ್ಬರಿಸಲಿರುವ ವರುಣ; ಇದರಲ್ಲಿ ನಿಮ್ಮ ಊರು ಇದೆಯಾ ನೋಡಿ

ಮನೆಯೊಂದರಲ್ಲಿ ಕಾಣಿಸಿಕೊಂಡಿರುವ ಹಾವು

ಮಾದೇಗೌಡ ಬಡಾವಣೆ, ಬಿಎಂಶ್ರೀ‌ ನಗರ, ವಿಜಯನಗರ, ಮಹದೇಶ್ವರ ಬಡಾವಣೆ, ವಿವೇಕಾನಂದ ನಗರ, ಪೊಲೀಸ್ ಲೇಔಟ್, ಚೆಸ್ಕಾಂ‌ ಕಚೇರಿ ಸಹಿತ ಹಲವು ಕಡೆ ಹಾವುಗಳು ಕಾಣಿಸಿಕೊಳ್ಳಲಾರಂಭಿಸಿವೆ.

ದೇವರ ಕೋಣೆಯಲ್ಲಿ ಕಾಣಿಸಿಕೊಂಡಿದ್ದ ಹಾವಿಗೆ ಮನೆಯವರಿಂದ ಪೂಜೆ

ಒಂದು ಕಡೆ ಯುಜಿಡಿ ಪೈಪಿನ ಒಳಗೆ ಹಾವೊಂದು ಕಾಣಿಸಿಕೊಂಡಿದೆ. ಇನ್ನೊಂದು ಕಡೆ ಮನೆ ಸಿಟ್‌ಔಟ್‌ ಬಳಿ ಕೆಳಕ್ಕೆ ನೆಲದ ಮೇಲೆ ಇಡಲಾಗಿದ್ದ ಹೆಲ್ಮೆಟ್ ಒಳಗೆ ನಾಗರ ಹಾವೊಂದು ಕಾಣಿಸಿಕೊಂಡಿದೆ. ಪುಟಾಣಿ ಮಕ್ಕಳ ಶೂ ಒಳಗೆ ಸಹ ಹಾವುಗಳು ಕಂಡಿವೆ.

ಇನ್ನು ಮತ್ತೊಂದು ಕಡೆ ಮನೆಯವರು ಮಂಚದ ಬಳಿಗೆ ಹೋದಾಗ ಏನೋ ಸದ್ದಾಗಿದೆ ಎಂದು ಮೇಲೆ ನೋಡಿದರೆ, ಮಂಚಕ್ಕೆ ಹಾಕಲಾಗಿದ್ದ ಸೊಳ್ಳೆ ಪರದೆ ಮೇಲೆ ನಾಗರ ಹಾವೊಂದು ಇದೆ. ಇದನ್ನು ಕಂಡು ಮನೆಯವರು ಹೌಹಾರಿದ್ದಾರೆ. ಆದರೆ, ಏನು ಮಾಡಬೇಕೆಂದು ಅವರಿಗೆ ತೋಚಲಿಲ್ಲ. ಆದರೆ, ಹಾವು ಮಾತ್ರ ಯಾವುದೇ ಗಾಬರಿ ಇಲ್ಲದೆ, ಆರಾಮವಾಗಿ ಹೆಡೆ ಎತ್ತಿ ಅತ್ತಿಂದಿತ್ತ ನೋಡುತ್ತಲಿತ್ತು. ಈ ವೇಳೆ ಅದರ ಹತ್ತಿರಕ್ಕೆ ಮೊಬೈಲ್‌ ಕ್ಯಾಮೆರಾ ಒಯ್ದರೂ ಆ ಹಾವು ಇದ್ದಲ್ಲಿಂದ ಮಿಸುಕಾಡಲಿಲ್ಲ.

ಹೆಲ್ಮೆಟ್‌ ಒಳಗೆ ಅಡಗಿ ಕುಳಿತಿದ್ದ ಹಾವು

ಚೆಸ್ಕಾಂ‌ ಕಚೇರಿಯಲ್ಲಿ ಸಹ ಹಾವೊಂದು ಪ್ರತ್ಯಕ್ಷವಾಗಿದ್ದು ಆತಂಕವನ್ನು ಮೂಡಿಸಿತ್ತು. ಬಟ್ಟೆಯ ಬುಟ್ಟಿ ಒಳಗೆ ಸಹ ಹಾವೊಂದು ಅವಿತು ಕುಳಿತಿತ್ತು. ಬಟ್ಟೆಯ ಬುಟ್ಟಿಗೆ ಇನ್ನೇನು ಕೈ ಹಾಕಬೇಕು ಎನ್ನುವಷ್ಟರಲ್ಲಿ ಹಾವು ಕಂಡ ಮಹಿಳೆಯೊಬ್ಬರು ಮಾರು ದೂರ ಹಾರಿದ್ದಾರೆ. ಕೊನೆಗೆ ಮನೆಯವರಿಗೆ ವಿಷಯ ತಿಳಿಸಿದ್ದಾರೆ. ಈ ಎಲ್ಲ ಕಡೆ ಉರಗ ರಕ್ಷಕರಿಗೆ ಕರೆ ಮಾಡಿ ವಿಷಯ ತಿಳಿಸಲಾಗಿತ್ತು. ಸ್ನೇಕ್‌ ಕ್ಯಾಚರ್‌ ಬಂದು ಹಾವನ್ನು ರಕ್ಷಿಸಿ ಕಾಡಿಗೆ ಬಿಟ್ಟು ಬಂದಿದ್ದಾರೆ.

ಇದನ್ನೂ ಓದಿ: Family Dispute: ನಾನೇನು ಮಾಡಲಿ ಸ್ವಾಮಿ ನನ್ನ ಪತ್ನಿ ಡ್ರಗ್‌ ಪ್ರೇಮಿ; ಠಾಣಾ ಮೆಟ್ಟಿಲೇರಿದ ನಟ ಕಂ ನಿರ್ಮಾಪಕ

ಮನೆಯೊಂದರಲ್ಲಿ ಕಾಣಿಸಿಕೊಂಡಿದ್ದ ಹಾವಿನ ರಕ್ಷಣೆ

ಮೈಸೂರಲ್ಲಿ ಹಾವುಗಳ ಹಾವಳಿಯ ವಿಡಿಯೊ ಇಲ್ಲಿದೆ

ಎಚ್ಚರಿಕೆ ವಹಿಸಲು ಸೂಚನೆ

ಈಗಿನ ವಾತಾವರಣ ಅಷ್ಟು ಸಮರ್ಪಕವಾಗಿಲ್ಲ. ಹೀಗಾಗಿ ಹಾವುಗಳು ಬೆಚ್ಚನೆಯ ಪ್ರದೇಶಗಳನ್ನು ಅರಸಿ ಬರುತ್ತಿವೆ. ಹೀಗಾಗಿ ಮೈಸೂರಿನಲ್ಲಿ ಹಾವಿನ ಹಾವಳಿ ಹೆಚ್ಚಾಗಿದೆ. ಈ ಕಾರಣಕ್ಕಾಗಿ ಮನೆಯಲ್ಲಿರುವವರು ಆಗಾಗ ಎಲ್ಲ ಕಡೆ ಪರಿಶೀಲಿಸಿಕೊಳ್ಳುತ್ತಲೇ ಇರಬೇಕು. ಮನೆಯ ಹೊರಗಡೆ ಇಡುವ ಶೂ, ಹೆಲ್ಮೆಟ್‌ಗಳಂತಹ ವಸ್ತುಗಳನ್ನು ಬಳಸುವಾಗ ಎಚ್ಚರಿಕೆಯನ್ನು ವಹಿಸಬೇಕು. ಏಕಾಏಕಿ ಅದರೊಳಗೆ ಕೈ ಅಥವಾ ಕಾಲುಗಳನ್ನು ಹಾಕಬಾರದು. ಒಮ್ಮೆ ಪರಿಶೀಲನೆ ನಡೆಸಿ ಬಳಿಕ ಬಳಸಬೇಕು ಎಂದು ಉರಗ ತಜ್ಞರು ಸಲಹೆ ನೀಡಿದ್ದಾರೆ.

Exit mobile version