ಮಂಡ್ಯ: ಸ್ಕೂಟರ್‌ನ ಡಿಕ್ಕಿಯಲ್ಲಿ ಹಾಯಾಗಿ ಮಲಗಿದ್ದ ಹಾವು (Snake Rescue) ಕಂಡೊಡನೆ ಮಹಿಳೆಯೊಬ್ಬರು ಬೆದರಿ ಎದ್ದು ಬಿದ್ದು ಓಡಿದ ಘಟನೆ ಮಂಡ್ಯದಲ್ಲಿ ನಡೆದಿದೆ. ಮಂಡ್ಯದ ಹೋಟೆಲ್ ಸಮೀಪದಲ್ಲಿ ಹಾವೊಂದು ಪ್ರತ್ಯಕ್ಷವಾಗಿ ಕ್ಷಣಕಾಲ ಆತಂಕ ಹೆಚ್ಚಿಸಿತ್ತು.
ಸದ್ಯ ಎಲ್ಲೆಂದರಲ್ಲಿ ಕಾಣಿಸಿಕೊಳ್ಳುವ ಹಾವುಗಳು ಜನರನ್ನು ಬೆಚ್ಚಿಬೀಳಿಸುತ್ತಿದೆ. ಚಳಿ, ಶೀತಗಾಳಿ ಜಿಟಿ ಜಿಟಿ ಮಳೆ ಶುರುವಾದರೆ ಸಾಕು ಬೆಚ್ಚಗಿರುವ ಜಾಗ ಹುಡುಕಿಕೊಂಡು ಹೊರಬರುತ್ತಿವೆ. ಶೂ ಒಳಗೆ, ಹೆಲ್ಮೆಟ್ ಬಳಿಕ ಈಗ ಸ್ಕೂಟರ್‌ನಲ್ಲಿ ಹಾವುಗಳು ಪ್ರತ್ಯಕ್ಷವಾಗುತ್ತಿದೆ.
ಮಂಡ್ಯ ಜಿಲ್ಲೆಯ ಮಳವಳ್ಳಿ ಪಟ್ಟಣದ ವೈಭವ್ ಹೋಟೆಲ್ ಬಳಿ ಹಾವೊಂದು (Snake Rescue) ಪ್ರತ್ಯಕ್ಷವಾಗಿ ಕ್ಷಣಕಾಲ ಆತಂಕ ಹೆಚ್ಚಿಸಿತ್ತು. ಮಹಿಳೆಯೊಬ್ಬರು ಕೆಲಸ ಮುಗಿಸಿಕೊಂಡು ತಮ್ಮ ಹೊಂಡಾ ಆಕ್ಟೀವ್ ಗಾಡಿ ಬಳಿ ಬಂದಿದ್ದರು. ಹೆಲ್ಮೆಟ್ ತೆಗೆದುಕೊಳ್ಳಲು ಸ್ಕೂಟರ್ ಡಿಕ್ಕಿ ತೆರೆದಿದ್ದು ಅಷ್ಟೇ ಬೆಚ್ಚಗೆ ಮಲಗಿದ್ದ ಮಂಡಲದ ಹಾವು ಕಂಡು ಬೆಚ್ಚಿಬಿದ್ದರು.
ಮಂಡಲದ ಹಾವು ಕಂಡ ಕೂಡಲೇ ಮಹಿಳೆ ಜೋರಾಗಿ ಕಿರುಚಿ ಎದ್ದೆನೋ ಬಿದ್ದೆನೋ ಎಂದು ಓಡಿ ಹೋಗಿದ್ದಾರೆ. ಮಹಿಳೆಯ ಕಿರುಚಾಟಕ್ಕೆ ಹೋಟೆಲ್‌ವೊಳಗೆ ಇದ್ದವರು, ಸುತ್ತಮುತ್ತಲ ಜನರು ಆತಂಕಗೊಂಡಿದ್ದರು. ಬಳಿಕ ಮಂಡಲದ ಹಾವು ಇರುವುದನ್ನು ನೋಡಿ ಸ್ಥಳೀಯರೊಬ್ಬರು ಉರಗ ತಜ್ಞರಿಗೆ ಕರೆ ಮಾಡಿ ವಿಷಯ ಮುಟ್ಟಿಸಿದ್ದಾರೆ.
ಸ್ಥಳಕ್ಕೆ ಬಂದ ಉರಗ ರಕ್ಷಕರು ಮಂಡಲದ ಹಾವನ್ನು ಸೆರೆಹಿಡಿದು ಸುರಕ್ಷತವಾಗಿ ಕಾಡಿಗೆ ಬಿಟ್ಟಿದ್ದಾರೆ. ಇನ್ನು ಈ ಘಟನೆಯಿಂದ ಕೆಲಕಾಲ ಹೋಟೆಲ್ ಮುಂಭಾಗ ಆತಂಕದ ವಾತಾವರಣವೇ ಸೃಷ್ಟಿಯಾಗಿತ್ತು.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ