Site icon Vistara News

ಶಿಕ್ಷಣ ಸಚಿವರ ಹೇಳಿಕೆಗೆ ಸೋಷಿಯಲ್‌ ಮೀಡಿಯಾದಲ್ಲಿ ವಿರೋಧ; ಶಿಕ್ಷಕನಿಗೆ ನೋಟಿಸ್ ನೀಡಿದ ಶಿಕ್ಷಣ ಇಲಾಖೆ!

ಶಿಕ್ಷಣ ಸಚಿವರ ಹೇಳಿಕೆ

ಚಿಕ್ಕೋಡಿ: ಶಿಕ್ಷಣ ಸಚಿವರ ಹೇಳಿಕೆಯನ್ನು ಉಲ್ಲೇಖಿಸಿ, ಸೋಷಿಯಲ್‌ ಮೀಡಿಯಾದಲ್ಲಿ ವಿರೋಧದ ಪ್ರತಿಕ್ರಿಯೆ ನೀಡಿದ್ದ ಶಿಕ್ಷಕರೊಬ್ಬರಿಗೆ ಶಿಕ್ಷಣ ಇಲಾಖೆ ನೋಟಿಸ್‌ ನೀಡಿ ಕಾರಣ ಕೇಳಿದೆ.

ರಾಯಬಾಗ ತಾಲೂಕಿನ ನಿಡಗುಂದಿಯ ಅಂಬೇಡ್ಕರ್‌ ನಗರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಶಿಕ್ಷಕ ವೀರಣ್ಣ ಮಡಿವಾಳರ ಅವರಿಗೆ ನೋಟಿಸ್‌ ಜಾರಿಯಾಗಿದೆ.

ಏನಿದು ಪ್ರಕರಣ?
13,800 ಸರ್ಕಾರಿ ಶಾಲೆಗಳ ವಿಲೀನ ಕುರಿತು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ ಮಾಧ್ಯಮಗಳಿಗೆ ನೀಡಿದ್ದ ಹೇಳಿಕೆ ವಿರೋಧಿಸಿ ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದ ರಾಯಬಾಗ ತಾಲೂಕಿನ ನಿಡಗುಂದಿಯ ಅಂಬೇಡ್ಕರ್‌ ನಗರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಶಿಕ್ಷಕ ವೀರಣ್ಣ ಮಡಿವಾಳರ ಅವರಿಗೆ ಚಿಕ್ಕೋಡಿ ಡಿಡಿಪಿಐ ಎಂ.ಎಲ್‌.ಹಂಚಾಟೆ ಅವರು ಕಾರಣ ಕೇಳಿ ಜು.22ರಂದು ನೋಟಿಸ್‌ ಜಾರಿಗೊಳಿಸಿದ್ದಾರೆ.

‘ಸಚಿವರ ಹೇಳಿಕೆಗೆ ನೀವು, ಇದು 13,800 ಶಾಲೆಗಳ ವಿಲೀನವಲ್ಲ. ಅಷ್ಟು ಶಾಲೆಗಳ ಹತ್ಯಾಕಾಂಡ. ಸರ್ಕಾರಿ ಶಾಲೆಗಳ ಮಕ್ಕಳ ಭವಿಷ್ಯದ ಮಾರಣಹೋಮ’ ಎಂಬ ಅಭಿಪ್ರಾಯವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದೀರಿ. ಇದು ಕರ್ನಾಟಕ ನಾಗರಿಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳು 1957ಕ್ಕೆ ವ್ಯತಿರಿಕ್ತವಾಗಿದ್ದು, ನಡತೆ ನಿಯಮಗಳು 1966ರ ನಿಯಮ 3 ಅನ್ನು ಉಲ್ಲಂಘಿಸಿರುವುದು ಸ್ಪಷ್ಟವಾಗಿದೆ. ನಿಮ್ಮ ಮೇಲೆ ಏಕೆ ಕ್ರಮ ಜರುಗಿಸಬಾರದು ಎನ್ನುವುದಕ್ಕೆ 3 ದಿನಗಳಲ್ಲಿ ಉತ್ತರ ನೀಡುಬೇಕು’ ಎಂದು ತಿಳಿಸಿದ್ದಾರೆ.

ಈ ಬಗ್ಗೆ “ವಿಸ್ತಾರ ನ್ಯೂಸ್”ಗೆ ಪ್ರತಿಕ್ರಿಯಿಸಿರುವ ವೀರಣ್ಣ ಮಡಿವಾಳರ, “ನನಗೆ ಯಾರನ್ನೂ ವಿರೋಧಿಸುವ ಅಥವಾ ಪ್ರತಿಭಟಿಸುವ ಉದ್ದೇಶವಿಲ್ಲ. ಸರ್ಕಾರಿ ಶಾಲೆಗಳು ಮುಚ್ಚುತ್ತವೆ ಎಂಬ ಆತಂಕದಿಂದ ನನ್ನ ಸಂವೇದನೆಯನ್ನು ಎರಡು ಸಾಲಿನ ಪದ್ಯದಲ್ಲಿ ಅಭಿವ್ಯಕ್ತಿಸಿದ್ದೇನಷ್ಟೇ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಶಾಲೆಗಳಲ್ಲಿ ಭಗವದ್ಗೀತೆ ಕಲಿಸಲು ಕ್ರಮ; ಸ್ವರ್ಣವಲ್ಲಿಯಲ್ಲಿ ಶಿಕ್ಷಣ ಸಚಿವ ನಾಗೇಶ್‌ ಹೇಳಿಕೆ

Exit mobile version