ಬೆಂಗಳೂರು: ನಾನು ರಾಷ್ಟ್ರೀಯ ಸ್ವಯಂಸೇವಕ ಸಂಘದ ದೇಶ ಭಕ್ತಿಗೆ ತಲೆಬಾಗಿದ್ದೇನೆ ಎಂದು ಹೇಳಿರುವ ಸಿಎಂ ಬಸವರಾಜ ಬೊಮ್ಮಾಯಿ ಅವರ ವಿರುದ್ಧ ಸಾಮಾಜಿಕ ಕಾರ್ಯಕರ್ತರೊಬ್ಬರು ರಾಜ್ಯಪಾಲರಿಗೆ ದೂರು ನೀಡಿದ್ದಾರೆ.
ಆರೆಸ್ಸೆಸ್ ಎಂಬ ಸಂಘಟನೆಯೇ ಕಾನೂನಿನಡಿ ನೋಂದಣಿಯಾಗಿಲ್ಲ. ಅಂಥ ಸಂಘಟನೆಗೆ ಸಿಎಂ ಅವರು ತಲೆಬಾಗಿದ್ದೇನೆ ಎಂದು ಹೇಳಿರುವುದು ಪ್ರಜಾಪ್ರಭುತ್ವ, ಸಂವಿಧಾನಕ್ಕೆ ಮಾಡಿದ ಅಪಮಾನ. ಅವರು ತಾವು ಸ್ವೀಕರಿಸಿದ ಪ್ರತಿಜ್ಞೆಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ಹನುಮೇಗೌಡ ಎಂಬವರು ರಾಜ್ಯಪಾಲರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಸ್ವಾತಂತ್ರ್ಯದ ಅಮೃತ ಮಹೋತ್ಸವದ ಪ್ರಯುಕ್ತ ಬೆಂಗಳೂರು ನಗರ ಜಿಲ್ಲಾ ಬಿಜೆಪಿ ವತಿಯಿಂದ ಬೆಂಗಳೂರಿನ ಕಂಠೀರವ ಸ್ಟೇಡಿಯಂನಲ್ಲಿ ಆಯೋಜಿಸಲಾಗಿದ್ದ ಅಮೃತ ಭಾರತಿಗೆ ಕರುನಾಡ ಜಾತ್ರೆ ಕಾರ್ಯಕ್ರಮದಲ್ಲಿ ಬೊಮ್ಮಾಯಿ ಅವರು ಆಡಿದ ಮಾತನ್ನು ಪ್ರಶ್ನಿಸಿ ರಾಜ್ಯಪಾಲರಿಗೆ ದೂರು ನೀಡಲಾಗಿದೆ.
ಬೊಮ್ಮಾಯಿ ಅವರು ಹೇಳಿದ್ದೇನು?
ಸಿಎಂ ಬಸವರಾಜ ಬೊಮ್ಮಾಯಿ ಅವರು ಆರೆಸ್ಸೆಸ್‌ನ ಕೈಗೊಂಬೆ ಎಂದು ಇತ್ತೀಚೆಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆರೋಪಿಸಿದ್ದರು. ಇದಕ್ಕೆ ಕಂಠೀರವ ಸ್ಟೇಡಿಯಂನಲ್ಲಿ ನಡೆದ ಕಾರ್ಯಕ್ರಮದಲ್ಲಿ ಉತ್ತರ ನೀಡಿದ ಬೊಮ್ಮಾಯಿ ಅವರು ತಾನು ಕೈಗೊಂಬೆಯಲ್ಲ, ಆದರೆ ಅಭಿಮಾನಿ ಎಂದಿದ್ದರು.
ʻʻ ನಾನು ಆರೆಸ್ಸೆಸ್ ಕೈಗೊಂಬೆ ಎಂದು ಯಾರೋ ನಿನ್ನೆ ಹೇಳಿದ್ರು. ನಿಜವೆಂದರೆ ನಾನು ಕೈಗೊಂಬೆಯಲ್ಲ. ಆದರೆ, ಅದರ ದೇಶಭಕ್ತಿಗೆ ತಲೆ ಬಾಗಿದ್ದೇನೆ. ನಾನು ರಾಷ್ಟ್ರೀಯ ಸ್ವಯಂಸೇವಕ ಸಂಘದ ಆದರ್ಶಕ್ಕೆ ತಲೆ ಬಾಗಿದ್ದೇನೆ. ದೇಶಭಕ್ತಿಗೆ ತಲೆಬಾಗಿದ್ದೇನೆ. ತತ್ವ ಸಿದ್ದಾಂತಗಳನ್ನು ಗೌರವಿಸುತ್ತೇನೆ. ನನಗೆ ಆ ಸಂಘಟನೆಯ ಬಗ್ಗೆ ಅಭಿಮಾನವಿದೆʼʼ ಎಂದಿದ್ದರು.
ಯಾರು ಈ ಹನುಮೇಗೌಡ?
ರಾಜ್ಯಪಾಲರಿಗೆ ದೂರು ನೀಡಿದ ಹನುಮೇ ಗೌಡ ಅವರು ಬೆಂಗಳೂರಿನ ಕಾಮಾಕ್ಷಿಪುರದ ರಂಗನಾಥ ಪುರ ನಿವಾಸಿಯಾಗಿದ್ದಾರೆ. ತಾನು ಮಾಹಿತಿ ಹಕ್ಕಿನ ಮೂಲಕ ಭ್ರಷ್ಟಾಚಾರದ ವಿರುದ್ಧ ಮತ್ತು ಸರಕಾರಿ ಆಸ್ತಿಗಳ ರಕ್ಷಣೆ, ಮಾನವ ಹಕ್ಕುಗಳ ರಕ್ಷಣೆಗೆ ಹೊರಾಡುತ್ತಿದ್ದೇನೆ ಎಂದು ಅವರು ದೂರಿನಲ್ಲಿ ತಮ್ಮ ಬಗ್ಗೆ ಹೇಳಿಕೊಂಡಿದ್ದಾರೆ.
ಆರೆಸ್ಸೆಸ್‌ಗೆ ವಿರೋಧ ಯಾಕೆ?
ಆರೆಸ್ಸೆಸ್ ಸಂಘಟನೆ ಕಾನೂನಿನಡಿ ನೋಂದಣಿ ಆಗಿಲ್ಲ ಎಂದು ಅವರು ಹೇಳಿದ್ದಾರೆ. ಇದಕ್ಕೆ ಪೂರಕವಾಗಿ ಕಾಂಗ್ರೆಸ್‌ನ ಬಿ.ಕೆ. ಹರಿಪ್ರಸಾದ್ ಅವರಿಗೆ ಸರಕಾರ ನೀಡಿದ ಉತ್ತರವನ್ನು ಉಲ್ಲೇಖಿಸಿದ್ದಾರೆ.
– ಸಣ್ಣ ಮಕ್ಕಳ ತಲೆಕೆಡಿಸುತ್ತಿದೆ. ಬೇನಾಮಿಯಾಗಿ ಅಕ್ರಮ ಹಣ, ಆಸ್ತಿ ಮಾಡಿಕೊಂಡಿದೆ.
– ಹಲವಾರು ಕೋಟಿ ವ್ಯವಹಾರವಿದ್ದರೂ ಲೆಕ್ಕಪತ್ರ ನಿರ್ವಹಿಸಿಲ್ಲ, ಸದಸ್ಯರ ನಿರ್ವಹಣೆ ಇಲ್ಲ.
– ಆರೆಸ್ಸೆಸ್ ವಿರುದ್ಧ ಸ್ವತಃ ಸಿಎಂಗೆ ದೂರು ನೀಡಿದ್ದರೂ ಸರಿಯಾಗಿ ತನಿಖೆ ಮಾಡಿಲ್ಲ.
ಈ ರೀತಿಯ ಹಿನ್ನೆಲೆಯಿರುವ ಸಂಘಟನೆಗೆ ತಲೆಬಾಗಿದ್ದೇನೆ ಎಂದು ಹೇಳುವ ಮೂಲಕ ಬೊಮ್ಮಾಯಿ ಅವರು ಸಾಂವಿಧಾನಿಕ ಹುದ್ದೆಗೆ ಅಪಮಾನ ಮಾಡಿದ್ದಾರೆ. ಹೀಗಾಗಿ ಅಸಂವಿಧಾನಿಕ ಸಂಘಟನೆಗೆ ಬದ್ಧರಾಗಿರುವ ಸಿಎಂ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಹನುಮೇಗೌಡ ಆಗ್ರಹಿಸಿದ್ದಾರೆ.