Site icon Vistara News

P Mallesh: ಹಿರಿಯ ಸಮಾಜವಾದಿ ಚಿಂತಕ, ಹೋರಾಟಗಾರ ಪ.ಮಲ್ಲೇಶ್ ವಿಧಿವಶ

ಪ ಮಲ್ಲೇಶ್‌

ಮೈಸೂರು: ಹಿರಿಯ ಹೋರಾಟಗಾರರು ಹಾಗೂ ಸಮಾಜವಾದಿ ಚಿಂತಕರಾಗಿದ್ದ ಪ.ಮಲ್ಲೇಶ್ (P Mallesh) ಅವರು ವಿಧಿವಶರಾಗಿದ್ದಾರೆ. ವಯೋಸಹಜ ಸಮಸ್ಯೆಯಿಂದ ಬಳಲುತ್ತಿದ್ದ ಮಲ್ಲೇಶ್ ಅವರಿಗೆ 90 ವರ್ಷ ವಯಸ್ಸಾಗಿತ್ತು.

ಎರಡು ವಾರದಿಂದ ಅನಾರೋಗ್ಯ ಬಳಲುತ್ತಿದ್ದ ಮಲ್ಲೇಶ್ ಅವರಿಗೆ ಬುಧವಾರ ರಾತ್ರಿ ಉಸಿರಾಟಕ್ಕೆ ತೊಂದರೆಯಾಗಿದೆ. ಈ ಹಿನ್ನೆಲೆ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ.

ಸಾಮಾಜಿಕ, ರೈತ, ದಲಿತ, ಪ್ರಗತಿಪರ ಹೋರಾಟಗಳಲ್ಲಿ ಭಾಗಿಯಾಗಿದ್ದ ಮಲ್ಲೇಶ್‌ ಅವರು ಮಾಜಿ ಸಿಎಂ ಸಿದ್ದರಾಮಯ್ಯರ ಆಪ್ತ ಸ್ನೇಹಿತರಾಗಿದ್ದರು. ಅವರಿಗೆ ಮೂವರು ಪುತ್ರಿಯರು, ಒಬ್ಬ ಪುತ್ರ ಇದ್ದಾರೆ. ಎರಡು ವರ್ಷಗಳ ಹಿಂದಷ್ಟೇ ಪತ್ನಿ ಸರ್ವಮಂಗಳ ನಿಧನ ಹೊಂದಿದ್ದರು. ಮೂಲತಃ ಚಿತ್ರದುರ್ಗದವರಾದ ಮಲ್ಲೇಶ್‌ ಮೈಸೂರಿನಲ್ಲಿ ತಮ್ಮ ಬಿಎ ಅಧ್ಯಯನ ಮುಗಿಸಿದ್ದರು. ಮಾನಸ ಗಂಗೋತ್ರಿಯಲ್ಲಿ ಪ್ರಪ್ರಥಮ ತಂಡದಲ್ಲಿ ಕನ್ನಡ ಎಂ.ಎ ವ್ಯಾಸಂಗ ಮಾಡಿದ್ದರು.

ವಿದ್ಯಾರ್ಥಿಯಾಗಿದ್ದಾಗಲೇ ಬರೆಯುವ ಹವ್ಯಾಸವನ್ನು ರೂಢಿಸಿಕೊಂಡಿದ್ದ ಮಲ್ಲೇಶ್‌ ಸಮಾಜವಾದಿ ಸಂಘಟನೆಯಲ್ಲಿ ತೊಡಗಿಕೊಂಡು ಹೋರಾಟದ ದಾರಿಯನ್ನು ಆಯ್ಕೆ ಮಾಡಿಕೊಂಡರು. ಕನ್ನಡ ನಾಡಿನ ಕುರಿತು ಹೆಚ್ಚಿನ ಆಸಕ್ತಿ ಹೊಂದಿದ್ದ ಅವರು ಗೋಕಾಕ್‌ ಮತ್ತು ಕಾವೇರಿ ಚಳವಳಿಯಲ್ಲಿ ಸಕ್ರಿಯರಾಗಿದ್ದರು. ಕೆಲ‌ ವರ್ಷಗಳ ಹಿಂದಷ್ಟೇ ದ್ವೇಷ ಬಿಟ್ಟು ದೇಶ ಕಟ್ಟು ಎಂಬ ರಾಜ್ಯ ಮಟ್ಟದ ಚಳವಳಿಯನ್ನು ಆರಂಭಿಸಿದ್ದರು. ತಿಂಗಳ ಕಾಲ ಕೋಮುವಾದದ ವಿರುದ್ಧ ಹೋರಾಡಿದ್ದರು. ಜತೆಗೆ ಮೈಸೂರಲ್ಲಿ ಉಷ್ಣಸ್ಥಾವರವನ್ನು ವಿರೋಧಿಸಿ ಶಾಶ್ವತ ತಡೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇವರು ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಆಪ್ತರಾಗಿದ್ದರು.

ಇದನ್ನೂ ಓದಿ | Priyanka Gandhi | ಕುಸ್ತಿ ಪಟುಗಳ ಲೈಂಗಿಕ ಕಿರುಕುಳ ಆರೋಪವನ್ನು ಗಂಭೀರವಾಗಿ ಪರಿಗಣಿಸಿ; ಪ್ರಿಯಾಂಕಾ ಗಾಂಧಿ ಆಗ್ರಹ

Exit mobile version