Site icon Vistara News

ಆನ್‌ಲೈನ್‌ನಲ್ಲಿ ‘ಚೆಲುವೆ’ಯ ಬುಕ್‌ ಮಾಡಲು ಹೋದವನಿಗೆ 48 ಸಾವಿರ ರೂ. ಪಂಗನಾಮ!

online fraud

ಬೆಂಗಳೂರು: ಆನ್‌ಲೈನ್‌ ವಂಚನೆ, ಸೈಬರ್‌ ಕ್ರೈಂ (Cyber Crime) ಬಗ್ಗೆ ಎಷ್ಟು ಜಾಗೃತಿ ಮೂಡಿಸಿದರೂ ಜನ ಆನ್‌ಲೈನ್‌ನಲ್ಲಿ ವಂಚನೆಗೊಳಗಾಗುತ್ತಲೇ ಇರುತ್ತಾರೆ. ಅದರಲ್ಲೂ, ಯುವಕರು, ಅಕ್ಷರಸ್ಥರೇ ಆನ್‌ಲೈನ್‌ನಲ್ಲಿ ಹೆಚ್ಚು ವಂಚನೆಗೀಡಾಗುತ್ತಿದ್ದಾರೆ. ಇದಕ್ಕೆ ನಿದರ್ಶನ ಎಂಬಂತೆ, ಬೆಂಗಳೂರಿನಲ್ಲಿ ಸಾಫ್ಟ್‌ವೇರ್‌ ಎಂಜಿನಿಯರ್‌ (Software Engineer) ಒಬ್ಬರು ಆನ್‌ಲೈನ್‌ನಲ್ಲಿ ಸೆಕ್ಸ್‌ ವರ್ಕರ್‌ಳನ್ನು ಬುಕ್‌ ಮಾಡಲು ಹೋಗಿ 48,500 ರೂ. ಕಳೆದುಕೊಂಡಿದ್ದಾರೆ. ಆನ್‌ಲೈನ್‌ ಜಾಹೀರಾತು ನಂಬಿ ಅವರು ಪಂಗನಾಮ ಹಾಕಿಸಿಕೊಂಡಿದ್ದಾರೆ.

ಖಾಸಗಿ ಕಂಪನಿಯಲ್ಲಿ ಸಾಫ್ಟ್‌ವೇರ್‌ ಎಂಜಿನಿಯರ್‌ ಆಗಿ ಕೆಲಸ ಮಾಡುತ್ತಿರುವ, ಕುಂದಲಹಳ್ಳಿಯ ಪಿ.ಜಿಯಲ್ಲಿ ವಾಸವಿರುವ 25 ವರ್ಷದ ವ್ಯಕ್ತಿಯು ಲೈಂಗಿಕ ಕಾರ್ಯಕರ್ತೆಯ ಹುಡುಕಾಟದಲ್ಲಿದ್ದರು. ಇದೇ ವೇಳೆ ಅನಾಮಧೇಯ ವ್ಯಕ್ತಿಯೊಬ್ಬ ಸಾಫ್ಟ್‌ವೇರ್‌ ಎಂಜಿನಿಯರ್‌ಗೆ ಕರೆ ಮಾಡಿದ್ದಾರೆ. ನಾನು ಪಿಂಪ್‌ (ಲೈಂಗಿಕ ಕಾರ್ಯಕರ್ತೆಯರನ್ನು ಪೂರೈಸುವವ) ಎಂದು, ನಿಮಗೆ ಎಂತಹ ಚೆಲುವೆ ಬೇಕೋ, ಅಂತಹ ಚೆಲುವೆಯನ್ನು ಕಳುಹಿಸುತ್ತೇನೆ ಎಂದಿದ್ದಾರೆ. ಅವನ ಮಾತನ್ನು ಸಾಫ್ಟ್‌ವೇರ್‌ ಎಂಜಿನಿಯರ್‌ ನಂಬಿದ್ದಾನೆ.

ಸೆಕ್ಸ್‌ ವರ್ಕರ್‌ ಜತೆ ಎರಡು ತಾಸು ಕಾಲ ಕಳೆಯಲು 4 ಸಾವಿರ ರೂ. ಕೊಡಬೇಕು ಎಂದು ಕಾಲ್‌ ಮಾಡಿದವ ಹೇಳಿದ್ದಾನೆ. ಮೊದಲೇ ಚೆಲುವೆಯ ಹುಡುಕಾಟದಲ್ಲಿದ್ದ ಸಾಫ್ಟ್‌ವೇರ್‌ ಎಂಜಿನಿಯರ್‌, 4 ಸಾವಿರ ರೂ. ಆನ್‌ಲೈನ್‌ ಟ್ರಾನ್ಸ್‌ಫರ್‌ ಮಾಡಿದ್ದಾನೆ. ಹೀಗೆ, ಆ ಚಾರ್ಜ್‌, ಈ ಶುಲ್ಕ ಎಂದು ಸಾಫ್ಟ್‌ವೇರ್‌ ಎಂಜಿನಿಯರ್‌ನಿಂದ ವಂಚಕನು 48,500 ರೂ. ಪಡೆದಿದ್ದಾನೆ. ಇಷ್ಟು ಹಣ ಕೊಟ್ಟರೂ ಸಾಫ್ಟ್‌ವೇರ್‌ ಎಂಜಿನಿಯರ್‌ಗೆ ಚೆಲುವೆ ಜತೆ ಕಾಲ ಕಳೆಯುವುದು ಬಿಡಿ, ಆಕೆಯ ಮುಖವನ್ನೂ ತೋರಿಸಿಲ್ಲ. ಆಗಲೇ ಸಾಫ್ಟ್‌ವೇರ್‌ ಎಂಜಿನಿಯರ್‌ಗೆ ತಾವು ಮೋಸ ಹೋಗಿರುವುದು ಗೊತ್ತಾಗಿದೆ.

ಇದನ್ನೂ ಓದಿ: Fraud Case : ಮೋದಿ, ಸಿಎಂ ಹೆಸರು ಬಳಸಿ ಕಾಲ್‌; ಮಠ, ಉದ್ಯಮಿಗಳಿಗೆ ಮಹಾ ವಂಚನೆ

ಸಾವಿರಾರು ರೂಪಾಯಿ ಕಳೆದುಕೊಂಡ ಸಾಫ್ಟ್‌ವೇರ್‌ ಎಂಜಿನಿಯರ್‌ ಕೊನೆಗೆ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದಾರೆ. ಐಪಿಸಿ ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಹಲವು ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಜಾಹೀರಾತಿನಲ್ಲಿ ಸಿಕ್ಕ ನಂಬರ್‌ಗೆ ಕರೆ ಮಾಡಿದೆ. ಅವರು ವಾಟ್ಸ್‌ಆ್ಯಪ್ ಮೂಲಕ ಸಂಪರ್ಕಿಸಿದರು. ಬ್ರಿಗೇಡ್‌ ಟೆಕ್‌ ಪಾರ್ಕ್‌ ಹತ್ತಿರ ಬರುವಂತೆ ಹೇಳಿ ಲೈವ್‌ ಲೊಕೇಷನ್‌ ಕಳುಹಿಸಿದರು. ನಂತರ ಮಹಿಳೆಯ ಸುರಕ್ಷತೆ ಸೇರಿ ಹಲವು ಕಾರಣ ನೀಡಿ ಹಣ ಪಡೆದರು ಎಂಬುದಾಗಿ ಸಾಫ್ಟ್‌ವೇರ್‌ ಎಂಜಿನಿಯರ್‌ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version