ಬೆಂಗಳೂರು: ಖಂಡಗ್ರಾಸ ಗ್ರಹಣದ (Solar Eclipse 2022) ಹಿನ್ನೆಲೆಯಲ್ಲಿ ರಾಜ್ಯದ ವಿವಿಧ ದೇವಸ್ಥಾನಗಳಲ್ಲಿ ಗ್ರಹಣ ಕಾಲದಲ್ಲಿ ವಿಶೇಷ ಪೂಜೆ ಪುನಸ್ಕಾರಗಳು, ಹೋಮ ಹವನಗಳು ನಡೆದಿವೆ. ಗ್ರಹಣ ಮೋಕ್ಷವಾಗುತ್ತಿದ್ದಂತೆ ಸ್ವಚ್ಛತಾ ಕಾರ್ಯವನ್ನು ನಡೆಸಿದ್ದು, ಬಳಿಕ ಪೂಜೆ-ಪುನಸ್ಕಾರಗಳನ್ನು ಕೈಗೊಳ್ಳಲಾಗಿದೆ.
ಉಡುಪಿ ಕೃಷ್ಣ ಮಠದಲ್ಲಿ ಪಾರಾಯಣ
ಉಡುಪಿಯ ಶ್ರೀಕೃಷ್ಣ ಮಠದಲ್ಲಿ ಗ್ರಹಣ ಕಾಲದಲ್ಲಿ ಧ್ಯಾನ, ಜಪ, ಪಾರಾಯಣವನ್ನು ಕೈಗೊಳ್ಳಲಾಗಿತ್ತು. ಗ್ರಹಣ ಮುಗಿಯುತ್ತಿದ್ದಂತೆ ಉಡುಪಿ ಮಠದ ಮಧ್ವ ಸರೋವರದಲ್ಲಿ ಪುಣ್ಯ ಸ್ನಾನಗಳನ್ನು ಕೈಗೊಳ್ಳಲಾಯಿತು. ಯತಿಗಳು ಸೇರಿದಂತೆ ಭಕ್ತರು ಪುಣ್ಯಸ್ನಾನ ನೆರವೇರಿಸಿದರು. ಪರ್ಯಾಯ ಕೃಷ್ಣಾಪುರ ಮಠಾಧೀಶರು ಮಹಾಪೂಜೆಯನ್ನು ಪೂರ್ಣಗೊಳಿಸಿದ್ದಾರೆ. ಕೃಷ್ಣ ಮಠದಲ್ಲಿ ಬುಧವಾರ ಮುಂಜಾನೆಯಿಂದ ಪೂಜೆಗಳು ನೆರವೇರಲಿದೆ.
ಮಂತ್ರಾಲಯದಲ್ಲಿ ಶಾಂತಿ ಹೋಮ
ಮಂತ್ರಾಲಯದ ರಾಯರ ಮಠದಲ್ಲಿ ಸುಬುಧೇಂದ್ರ ತೀರ್ಥರ ನೇತೃತ್ವದಲ್ಲಿ ಗ್ರಹಣ ಶಾಂತಿ ಹೋಮವನ್ನು ನೆರವೇರಿಸಲಾಯಿತು. ಮಂತ್ರಾಲಯದ ತುಂಗಭದ್ರಾ ನದಿಯಲ್ಲಿ ಭಕ್ತರು ಗ್ರಹಣ ಸ್ನಾನ ನೆರವೇರಿಸಿ ಮಡಿ ಧರಿಸಿ ದೇಗುಲವನ್ನು ಪ್ರವೇಶ ಮಾಡಿದರು. ಬಳಿಕ ಯಾಗಶಾಲೆಯಲ್ಲಿ ಧಾನ್ಯಗಳ ದಾನ ಪ್ರಕ್ರಿಯೆಗೆ ಚಾಲನೆ ನೀಡಲಾಯಿತು.
ಇದನ್ನೂ ಓದಿ | Solar Eclipse 2022 | ಗ್ರಹಣ ವೇಳೆ ಒನಕೆ ಪರೀಕ್ಷೆ ಯಶಸ್ವಿ; ಮೋಕ್ಷವಾಗುತ್ತಿದ್ದಂತೆ ನೆಲಕ್ಕುರುಳಿತು!
ಸಿಗಂಧೂರು ಚೌಡೇಶ್ವರಿ ದೇಗುಲದಲ್ಲಿ ಪೂಜೆ
ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಸಿಗಂದೂರು ಚೌಡೇಶ್ವರಿ ದೇವಸ್ಥಾನದಲ್ಲಿ ಗ್ರಹಣ ಮೋಕ್ಷ ಕಾಲದ ವೇಳೆ ಗ್ರಹಣ ಶಾಂತಿ ಹೋಮ ಸಹಿತ ಪೂಜಾ ಕಾರ್ಯಗಳನ್ನು ನೆರವೇರಿಸಲಾಗಿದೆ. ಗ್ರಹಣ ಮೋಕ್ಷದ ಬಳಿಕ ಸ್ವಚ್ಛತಾ ಕಾರ್ಯ ನೆರವೇರಿಸಿ ಪೂಜಾ ಕಾರ್ಯಗಳಿಗೆ ಚಾಲನೆ ನೀಡಲಾಯಿತು.
ಹಾಸನದ ದೇಗುಲಗಳಲ್ಲಿ ವಿಶೇಷ ಪೂಜೆ
ಹಾಸನದಲ್ಲಿ ಗ್ರಹಣ ಮೋಕ್ಷ ಕಾಲದ ಬಳಿಕ ದೇವಾಲಯಗಳಲ್ಲಿ ವಿಶೇಷ ಪೂಜೆಯನ್ನು ನೆರವೇರಿಸಲಾಗಿದೆ. ಮಲ್ಲೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ನಡೆಸಲಾಗಿದ್ದು, ಮಹಾಮೃತ್ಯುಂಜಯ, ನವಗ್ರಹ, ಸೂರ್ಯಶಾಂತಿ, ಕೇತು ಶಾಂತಿ ಹೋಮಹವನಗಳನ್ನು ನಡೆಸಲಾಗಿದೆ.
ಇವುಗಳೂ ಸೇರಿದಂತೆ ರಾಜ್ಯದ ಹಲವು ಪ್ರಮುಖ ದೇವಾಲಯಗಳಲ್ಲೂ ಗ್ರಹಣ ನಂತರ ಶುದ್ಧಿ ಕಾರ್ಯಗಳನ್ನು ಮುಗಿಸಿ, ಪೂಜಾ ಕೈಂಕರ್ಯಗಳಿಗೆ ಚಾಲನೆ ನೀಡಲಾಗಿದೆ.
ಇದನ್ನೂ ಓದಿ | Solar Eclipse | ಚಿಕ್ಕಮಗಳೂರಿನ ಜಯಪುರ ಮಸೀದಿಯಲ್ಲಿ ವಿಶೇಷ ಪ್ರಾರ್ಥನೆ, ಹಲವರು ಭಾಗಿ