Site icon Vistara News

Solar Eclipse 2022 | ಗ್ರಹಣ ವೇಳೆ ಒನಕೆ ಪರೀಕ್ಷೆ ಯಶಸ್ವಿ; ಮೋಕ್ಷವಾಗುತ್ತಿದ್ದಂತೆ ನೆಲಕ್ಕುರುಳಿತು!

belagavi onake

ಬೆಳಗಾವಿ: ದಕ್ಷಿಣ ಕಾಶಿ ಎಂದೇ ಪ್ರಸಿದ್ಧಿ ಪಡೆದಿರುವ ಬೆಳಗಾವಿಯ ಕಪಿಲೇಶ್ವರ ದೇವಸ್ಥಾನದಲ್ಲಿ ಖಂಡಗ್ರಾಸ ಸೂರ್ಯಗ್ರಹಣ (Solar Eclipse 2022) ಹಿನ್ನೆಲೆಯಲ್ಲಿ ಮಂಗಳವಾರ ಮಹಾಮೃತ್ಯುಂಜಯ ಜಪ ಸೇರಿದಂತೆ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳು ನೆರವೇರಿವೆ. ಇದೇ ವೇಳೆ ದೇವಸ್ಥಾನ ಆವರಣದಲ್ಲಿ ತಟ್ಟೆ ಮೇಲೆ ಒನಕೆ ಇಟ್ಟು ಗ್ರಹಣ ಪರೀಕ್ಷೆ ಮಾಡಲಾಗಿದೆ.

ಬೆಳಗಾವಿಯ ಕಪಿಲೇಶ್ವರ ದೇವಸ್ಥಾನ

ಕಪಿಲೇಶ್ವರ ದೇವಸ್ಥಾನದ ಗರ್ಭಗುಡಿಯಲ್ಲಿ ಶಿವಲಿಂಗವನ್ನು ಬಿಲ್ವಪತ್ರೆಯಿಂದ ಆವೃತ ಮಾಡಲಾಗಿತ್ತು. ಅರ್ಚಕ ನಾಗರಾಜ ನೇತೃತ್ವದಲ್ಲಿ ಮಹಾಮೃತ್ಯುಂಜಯ ಜಪವನ್ನು ಹಮ್ಮಿಕೊಳ್ಳಲಾಗಿದ್ದು, ಗೃಹಣ ಸಮಾಪ್ತಿ ಆಗುವವರೆಗೂ ಮೃತ್ಯುಂಜಯ ಜಪವನ್ನು ಕೈಗೊಳ್ಳಲಾಗಿದೆ.

ಒನಕೆಯಿಂದ ಗ್ರಹಣ ಪರೀಕ್ಷೆ
ದೇವಸ್ಥಾನ ಆವರಣದಲ್ಲಿ ತಟ್ಟೆ ಮೇಲೆ ಒನಕೆ ಇಟ್ಟು ಭಕ್ತರಿಂದ ಗ್ರಹಣ ಪರೀಕ್ಷೆ ನಡೆದಿದೆ. ಇದು ಪ್ರತಿ ಗ್ರಹಣ ಸಂದರ್ಭದಲ್ಲಿ ಉತ್ತರ ಕರ್ನಾಟಕ ಹಾಗೂ ಮಲೆನಾಡಿನ ಕೆಲವು ಭಾಗಗಳಲ್ಲಿ ರೂಢಿಯಲ್ಲಿರುವ ಆಚರಣೆಯಾಗಿದೆ. ಉ.ಕ. ಭಾಗದಲ್ಲಿ ತಟ್ಟೆ ಮೇಲೆ ನೀರನ್ನಿಟ್ಟು ಅದರಲ್ಲಿ ಒನಕೆಯನ್ನು ನಿಲ್ಲಿಸಲಾಗುತ್ತದೆ. ಗ್ರಹಣದ ಶಕ್ತಿ ಇರುವವರೆಗೆ ಆ ಒನಕೆಯು ಯಾವುದೇ ರೀತಿಯ ಸಹಾಯವಿಲ್ಲದೆ ನಿಂತಿರುತ್ತದೆ. ಗ್ರಹಣ ಮೋಕ್ಷವಾಗುತ್ತಿದ್ದಂತೆ ಆ ಒನಕೆ ಕೆಳಗೆ ಬೀಳುತ್ತದೆ. ಅಂದರೆ, ಒನಕೆಯು ಕೆಳಗೆ ಬಿದ್ದ ತಕ್ಷಣ ಗ್ರಹಣ ಮೋಕ್ಷ ಆಗಿದೆ ಎಂಬುದರ ಸೂಚಕವೂ ಇದಾಗಿದೆ. ಹೀಗಾಗಿ ಗ್ರಹಣ ಬಿಡುತ್ತಿದ್ದಂತೆ ಒನಕೆಯೂ ಉರುಳಿದ್ದು, ಉಳಿದ ಕಾರ್ಯಚಟುವಟಿಕೆಗೆ ಚಾಲನೆ ಸಿಕ್ಕಿದೆ.

ಇದನ್ನೂ ಓದಿ | Solar Eclipse 2022 | ದೇವಸ್ಥಾನಗಳಿಗೂ ಹಿಡಿದ ಸೂರ್ಯಗ್ರಹಣ; ಭಕ್ತರಿಲ್ಲದೇ ಬಣ ಬಣ

ಗುರುಮಿಠಕಲ್ ತಾಲೂಕಿನ ಎಲ್ಹೆರಿ ಗ್ರಾಮದಲ್ಲಿ ವನಕೆ ಪರೀಕ್ಷೆ

ಯಾದಗಿರಿಯಲ್ಲಿಯೂ ಗ್ರಹಣ ಪರೀಕ್ಷೆ
ಯಾದಗಿರಿ ಜಿಲ್ಲೆಯ ಗುರುಮಿಠಕಲ್ ತಾಲೂಕಿನ ಎಲ್ಹೆರಿ ಗ್ರಾಮದ ಜನರು ನೀರಿನಲ್ಲಿ ಒನಕೆ ಇಟ್ಟು ಪರೀಕ್ಷೆ ನಡೆಸಿದ್ದಾರೆ. ರವಿಕುಮಾರ್ ಹಡಪದ್ ಅವರ ಮನೆಯಲ್ಲಿ ಒನಕೆ ಇಟ್ಟು ಪರೀಕ್ಷೆ ನಡೆಸಲಾಗಿದ್ದು, ಯಾವುದೇ ಬೆಂಬಲವಿಲ್ಲದೆ ನೀರಿನಲ್ಲಿ ಒನಕೆ ನಿಂತಿತ್ತು. ಮೋಕ್ಷಕಾಲಕ್ಕೆ ಸರಿಯಾಗಿ ಒನಕೆಯು ನೆಲಕ್ಕುರುಳಿದೆ.

ಮಲೆನಾಡು ಭಾಗದಲ್ಲೂ ಆಚರಣೆ
ಮಲೆನಾಡು ಭಾಗಗಳಾದ ಚಿಕ್ಕಮಗಳೂರು, ಶಿವಮೊಗ್ಗ ಸೇರಿದಂತೆ ಇನ್ನಿತರ ಕಡೆಗಳಲ್ಲಿ ತಟ್ಟೆಯಲ್ಲಿ ಸಗಣಿ ನೀರನ್ನು ಇಟ್ಟು ಅದರ ಮೇಲೆ ಒನಕೆಯನ್ನು ನಿಲ್ಲಿಸಲಾಗುತ್ತದೆ. ಗ್ರಹಣ ಮೋಕ್ಷದ ಬಳಿಕ ದೇವಸ್ಥಾನದ ಶುಚಿ ಕಾರ್ಯಗಳು ನಡೆಯಲಿದೆ. ಪುನಃ ವಿಶೇಷ ಪೂಜೆ ಸೇರಿದಂತೆ ದೇವರಿಗೆ ಮಹಾಮಂಗಳಾರತಿಯನ್ನು ಮಾಡಲಾಗುತ್ತದೆ.

ಇದನ್ನೂ ಓದಿ | Solar Eclipse | ದೇಶದ ನಾನಾ ಭಾಗಗಳಲ್ಲಿನ ಸೂರ್ಯಗ್ರಹಣದ ವಿಸ್ಮಯದ ಝಲಕ್‌ಗಳು!

Exit mobile version