Site icon Vistara News

Solo bike trip | ಅಮೃತ ಸ್ವಾತಂತ್ರ್ಯ: 21 ಸಾವಿರ ಕಿಮೀ ಪ್ರಯಾಣಿಸಿ ಸೈನಿಕರ ಜತೆ ಸಂಭ್ರಮ ಆಚರಿಸಿದ ಬೆಂಗಳೂರಿನ ಯುವಕ

Solo bike trip

ಬೆಂಗಳೂರು: ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂಭ್ರಮ, ಮಹಾಮಾರಿ ಕೊರೊನಾ ನಂತರ ದೇಶದ ಜನಜೀವನದ ಪರಿಸ್ಥಿತಿ ಅಧ್ಯಯನ ಹಾಗೂ ರಸ್ತೆ ಸುರಕ್ಷತೆ ಕುರಿತು ಅರಿವು ಮೂಡಿಸಲು ಬೆಂಗಳೂರಿನ ಸಂದೀಪ್ ಎಂ.ವಿ. ಅವರು ಏಕಾಂಗಿಯಾಗಿ (Solo bike trip) ದೇಶಾದ್ಯಂತ 21 ಸಾವಿರ ಕಿಲೋ ಮೀಟರ್‌ ಪ್ರಯಾಣ ಮಾಡುವ ಮೂಲಕ ದಾಖಲೆ ನಿರ್ಮಿಸಿದ್ದಾರೆ. ಸಂದೀಪ್ ಅವರು 32 ವರ್ಷ ಹಳೆಯ ಯಜ್ಡಿ ರೋಡ್ ಕಿಂಗ್ ದ್ವಿಚಕ್ರ‌ ವಾಹನದಲ್ಲಿ 60 ದಿನಗಳ‌ ಕಾಲ ಪ್ರಯಾಣ ಮಾಡಿ 21 ಸಾವಿರ ಕಿಲೋಮೀಟರ್ ಕ್ರಮಿಸಿ ಬೆಂಗಳೂರಿಗೆ ವಾಪಸಾಗಿದ್ದಾರೆ.

ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಂಭ್ರಮವನ್ನು ದೇಶದ ಗಡಿಕಾಯುವ ಸೈನಿಕರೊಂದಿಗೆ ಆಚರಿಸುವ ಉದ್ದೇಶದಿಂದ ಭಾರತ- ಪಾಕಿಸ್ತಾನ, ಭಾರತ- ಚೀನಾ, ಭಾರತ- ಮ್ಯಾನ್ಮಾರ್ ಹಾಗೂ ಭಾರತ-ನೇಪಾಳ ಗಡಿಗಳಿಗೆ ಭೇಟಿ ನೀಡಿ ಅಲ್ಲಿ ಕರ್ತವ್ಯದಲ್ಲಿ ಸೈನಿಕರೊಂದಿಗೆ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂಭ್ರಮ ಆಚರಿಸಿದರು.

ಸೈನಿಕರೊಂದಿಗೆ ಸಂವಾದ ನಡೆಸಿದ ಸಂದೀಪ್ ಅವರ ತ್ಯಾಗ ಮತ್ತು ಸೇವೆಗೆ ವಿಶೇಷ ಧನ್ಯವಾದ ಅರ್ಪಿಸಿರುವುದಾಗಿ ಹೆಮ್ಮೆಯಿಂದ ಹೇಳುತ್ತಾರೆ. ಇದೇ ಸಮಯದಲ್ಲಿ ಮಹಾಮಾರಿ ಕೊರೋನಾ ನಂತರ ದೇಶದ ಜನಜೀವನದ ಪರಿಸ್ಥಿತಿಯನ್ನು ಹತ್ತಿರದಿಂದ ನೋಡಿ ಆ ಕುರಿತು ವಿಶೇಷ ಅನುಭವ ಪಡೆದಿರುವುದಾಗಿ ಸಂದೀಪ್ ಹೇಳುತ್ತಾರೆ.

ದಿನೇದಿನೆ ಹೆಚ್ಚುತ್ತಿರುವ ಅಪಘಾತದಲ್ಲಿ ಅಮಾಯಕ ಜೀವಗಳು ಬಲಿಯಾಗುತ್ತಿದ್ದು, ಇದರಲ್ಲಿ ಯುವಕರ ಸಂಖ್ಯೆ ದೊಡ್ಡ ಪ್ರಮಾಣದಲ್ಲಿರುವುದು ಆತಂಕದ ವಿಷಯವಾಗಿದೆ. ಆ ಹಿನ್ನೆಲೆಯಲ್ಲಿ ಅಪಘಾತರಹಿತ ಸುರಕ್ಷಿತ
ಪ್ರಯಾಣ ಹಾಗೂ ರಸ್ತೆ ಸುರಕ್ಷತೆ ಕುರಿತು ಯುವ ಜನಾಂಗದಲ್ಲಿ ಜಾಗೃತಿ ಮೂಡಿಸಲು ಸಂದೀಪ್‌ ಈ‌ ಸಾಹಸಕ್ಕೆ ಕೈಹಾಕಿ ಯಶಸ್ವಿಯಾಗಿದ್ದಾರೆ.

ನ್ಯಾಷನಲ್ ಕ್ರೈಮ್ ರೆಕಾರ್ಡ್ ಬ್ಯೂರೊ ( ಎನ್ ಸಿ ಆರ್ ಬಿ) ವರದಿ ಪ್ರಕಾರ 2021 ರಲ್ಲಿ ದೇಶಾದ್ಯಂತ 4 ಲಕ್ಷ 3116 ರಸ್ತೆ ಅಪಘಾತಗಳು ಸಂಭವಿಸಿದ್ದು 1ಲಕ್ಷ 55,622 ಮಂದಿ ಸಾವನ್ನಪ್ಪಿದ್ದು, 3 ಲಕ್ಷ 71,884 ಮಂದಿ ಗಾಯಗೊಂಡಿದ್ದಾರೆ.

ಜಗತ್ರಿನಲ್ಲಿಯೇ ದೊಡ್ಡ ಸಂಖ್ಯೆಯ ಯುವ ಸಮುದಾಯ ಹೊಂದಿರುವ ಭಾರತ ಇಂದು‌ ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಿಸುತ್ತಿದೆ. ಈ ಸಂದರ್ಭದಲ್ಲಿ ದೇಶ ಅಮೂಲ್ಯ ಆಸ್ತಿಯಾದ ಯುವ‌ ಜನಾಂಗದ ಜೀವ ರಕ್ಷಣೆ ಪ್ರತಿಯೊಬ್ಬ ಭಾರತಿಯರ‌ ಕರ್ತವ್ಯ. ಆ ಕಾರಣದಿಂದ ಯುವ‌ ಜನಾಂಗದಲ್ಲಿ ರಸ್ತೆ ಸುರಕ್ಷತೆ‌‌ ಕುರಿತು ಜಾಗೃತಿ ಮೂಡಿಸಲು ದ್ವಿಚಕ್ರ ವಾಹನದಲ್ಲಿ ಭಾರತ ದರ್ಶನ ಯಾತ್ರೆ ನಡೆಸಿರುವುದಾಗಿ ಸಂದೀಪ್ ಹೇಳುತ್ತಾರೆ.

ಯಾವಾಗ ಆರಂಭ? ಯಾವ ದಾರಿಯಲ್ಲಿ ಪಯಣ?
ಸೆಪ್ಟೆಂಬರ್ 29ರಂದು ಬೆಂಗಳೂರಿನಿಂದ ಪ್ರಾಯಾಣ ಆರಂಭಿಸಿದ ಸಂದೀಪ್ ಕೇರಳದ‌ ಕಣ್ಣೂರು, ಪಶ್ಚಿಮ ಕರಾವಳಿ ಮಾರ್ಗವಾಗಿ ಗೋವಾ, ರಾಜಸ್ಥಾನ, ಪಂಜಾಬ್, ಜಮ್ಮು ಮತ್ತು ಕಾಶ್ಮೀರ, ಸಪ್ತ ಸಹೋದರಿ ರಾಜ್ಯಗಳಾದ ಅಸ್ಸಾಂ, ಸಿಕ್ಕಿಂ, ಮಿಜೋರಾಂ, ಅರುಣಾಚಲ ಪ್ರದೇಶ್ ಹಾಗೂ ಪೂರ್ವ ಕರಾವಳಿ ಮಾರ್ಗವಾಗಿ ಕನ್ಯಾಕುಮಾರಿ ಮೂಲಕ ಮೈಸೂರಿಗೆ ಮರಳಿ ಬಂದಿದ್ದಾರೆ. ಒಟ್ಟು 60 ದಿನಗಳ ಯಾತ್ರೆಯಲ್ಲಿ ವೈವಿದ್ಯಮಯ ರೋಚಕ ಅನುಭವ ಪಡೆದಿರುವುದಾಗಿ ಸಂದೀಪ ಹೇಳುತ್ತಾರೆ.

ಹಿಂದೆಯೂ ಸೋಲೋ ಟ್ರಿಪ್‌ ಹೋಗಿದ್ದರು ಸಂದೀಪ್‌
ಬೆಂಗಳೂರಿನ ಟ್ರಾವೆಲ್ ಏಜನ್ಸಿಯೊಂದರಲ್ಲಿ ಕೆಲಸ ಮಾಡುತ್ತಿರುವ ಸಂದೀಪ್‌ ಈ ಮೊದಲು ಬೆಂಗಳೂರಿನಿಂದ ಸಿಕ್ಕಿಂ ತನಕ 6 ಸಾವಿರ ಕಿಮೀ ಪ್ರಯಾಣಿಸಿದ ದಾಖಲೆಯಿದೆ.

ದೇಶದ ಗಡಿ ಪ್ರದೇಶದಲ್ಲಿ ಸೈನಿಕರು ನಮ್ಮ ನಾಡಿನ ರಕ್ಷಣೆಗಾಗಿ ಹಗಲಿರಲು ಪಡುತ್ತಿರುವ ಕಷ್ಟವನ್ನು ಕಣ್ಣಾರೆ ನೋಡಿ ಅನುಭವ ಪಡೆದ ಸಂದೀಪ್ ರಕ್ಷಣಾ ಪಡೆಗಳ ಯೋಧರ ತ್ಯಾಗಕ್ಕೆ ದೇಶದ ಜನತೆ ಜೀವನಪರ್ಯಂತ ಋಣಿಯಾಗಿರಬೇಕು ಎನ್ನುತ್ತಾರೆ.

ಇದನ್ನೂ ಓದಿ | Amritha JOSH! ತಂದೆ ಆಸೆ ಈಡೇರಿಸಲು ಬೈಕಲ್ಲಿ ದೇಶ ಸುತ್ತಿದ ಮಗಳು, 5 ತಿಂಗಳಲ್ಲಿ 23,000 ಕಿ.ಮೀ ಪ್ರಯಾಣ

Exit mobile version