Site icon Vistara News

Janardhana Reddy : ಸ್ಪರ್ಧೆಯಿಂದ ಹಿಂದೆ ಸರಿಯಲ್ಲ; ಜನಾರ್ದನ ರೆಡ್ಡಿ, ಪತ್ನಿಗೆ ಸೆಡ್ಡು ಹೊಡೆದ ಸೋಮಶೇಖರ ರೆಡ್ಡಿ

Arunalakshmi- Somashekhar reddy

#image_title

ಬಳ್ಳಾರಿ: ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದಿಂದ ಅಣ್ಣ ಜನಾರ್ಧನ ರೆಡ್ಡಿ (Janardhana Reddy) ಅವರ ಪತ್ನಿ ಅರುಣಾ ಲಕ್ಷ್ಮಿ ಅವರೇ ಸ್ಪರ್ಧಿಸಿದರೂ ತಾನು ಯಾವ ಕಾರಣಕ್ಕೂ ಕಣದಿಂದ ಹಿಂದೆ ಸರಿಯುವುದಿಲ್ಲ ಎಂದು ಹಾಲಿ ಶಾಸಕ ಜಿ. ಸೋಮಶೇಖರ ರೆಡ್ಡಿ ಘೋಷಿಸಿದ್ದಾರೆ. ತಮ್ಮ ಸ್ಪರ್ಧೆ ಅಚಲ ಎಂದು ಅವರು ಸಾರುವುದರೊಂದಿಗೆ ಪ್ರತಿಷ್ಠಿತ ಕಣದಲ್ಲಿ ಅತ್ತಿಗೆ ಮತ್ತು ಮೈದುನ ಪರಸ್ಪರ ಮುಖಾಮುಖಿಯಾಗುವಂತಾಗಿದೆ.

ಅರುಣಾ ಲಕ್ಷ್ಮಿ ಅವರು ಕಲ್ಯಾಣ ರಾಜ್ಯ ಪ್ರಗತಿ ಪಕ್ಷದಿಂದ ಬಳ್ಳಾರಿ ನಗರದಿಂದ ಸ್ಪರ್ಧಿಸಲಿದ್ದಾರೆ ಎಂದು ಜನಾರ್ಧನ ರೆಡ್ಡಿ ಅವರು ಕೆಲವು ದಿನಗಳ ಹಿಂದೆ ಕೊಪ್ಪಳದ ಗಂಗಾವತಿ ತಾಲೂಕಿನ ಆನೆಗೊಂದಿಯಲ್ಲಿ ಹೇಳಿದ್ದರು. ಕಲ್ಯಾಣ ರಥ ಯಾತ್ರೆಗೆ ಚಾಲನೆ ನೀಡಿ ಮಾತನಾಡಿದ ರೆಡ್ಡಿ ಅವರು ಗೆಲ್ಲುವ ಸ್ಥಾನಗಳಲ್ಲಿ ಸ್ಪರ್ಧೆ ಮಾಡುವುದಾಗಿ ಹೇಳಿದ್ದರು.

೨೦೧೩ರಲ್ಲಿ ಶ್ರೀರಾಮುಲು ಮತ್ತು ಜನಾರ್ಧನ ರೆಡ್ಡಿ ಅವರು ಬಿಆರ್‌ಎಸ್‌ ಪಕ್ಷ ಸ್ಥಾಪಿಸಿದಾಗ ಸೋಮಶೇಖರ ರೆಡ್ಡಿ ಬಿಜೆಪಿಯಿಂದ ಸ್ಪರ್ಧಿಸಿರಲಿಲ್ಲ. ʻʻ2013ರ ಚುನಾವಣೆಯ ಕಣದಿಂದ ಹಿಂದೆ ಸರಿಯುವುದಕ್ಕೆ ನಮ್ಮ ಸಹೋದರನ ಪರಿಸ್ಥಿತಿಯೇ ಕಾರಣವಾಗಿತ್ತು‌ʼʼ ಎಂದಿದ್ದ ಸೋಮಶೇಖರ ರೆಡ್ಡಿ ಈ ಬಾರಿ ತಾವು ಸ್ಪರ್ಧೆಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ‌ ಎನ್ನುತ್ತಿದ್ದಾರೆ.

ಇದುವರೆಗೂ ಜನಾರ್ದನ ರೆಡ್ಡಿ ಅವರ ಕೃಪಾಕಟಾಕ್ಷದಿಂದಲೇ ಗೆಲ್ಲುತ್ತಿದ್ದ ಸೋಮಶೇಖರ ರೆಡ್ಡಿ ಈ ಬಾರಿ ಅವರಿಲ್ಲದೆಯೂ ಗೆಲ್ಲಬಲ್ಲೆ, ವಿರೋಧಿಸಿಯೂ ಗೆಲ್ಲಬಲ್ಲೆ ಎಂದಿದ್ದಾರೆ. ʻʻಜನಾರ್ದನ ರೆಡ್ಡಿ ಇಲ್ಲದಿದ್ದರೂ ಗೆಲ್ಲುತ್ತೇನೆ, 2018ರಲ್ಲಿ ಜನಾರ್ದನ ರೆಡ್ಡಿ ಇಲ್ಲದಿದ್ದರೂ ನಾನು ಗೆಲ್ಲಲಿಲ್ಲವೇ?ʼ ಎಂದು ಪ್ರಶ್ನಿಸುವ ಅವರು, ʻʻನಮ್ಮ ಕೆಲಸಗಳೇ ನಮ್ಮನ್ನು ಕೈ ಹಿಡಿಯುತ್ತವೆ. ನನ್ನನ್ನು ಹೊಸ ಪಕ್ಷಕ್ಕೆ ಕರೆದರು. ನಾನು ಹೋಗಲಿಲ್ಲ ಎಂಬ ಸಿಟ್ಟಿನಿಂದ ನನ್ನ ವಿರುದ್ಧ ಪತ್ನಿಯನ್ನೇ ಕಣಕ್ಕಿಳಿಸುವುದಾಗಿ ಹೇಳಿದ್ದಾರೆ. ಇದು ನಿರೀಕ್ಷಿತʼʼ ಎಂದಿದ್ದಾರೆ ಸೋಮಶೇಖರ ರೆಡ್ಡಿ.

ಕುಟುಂಬದಲ್ಲಿ ಬಿರುಕು
ಜನಾರ್ದನ ರೆಡ್ಡಿ ಹೊಸ ಪಕ್ಷ ಸ್ಥಾಪನೆ ಮಾಡಿರುವುದು ಕುಟುಂಬ ಮತ್ತು ಗೆಳೆಯರ ಬಳಗದಲ್ಲಿ ಭಾರಿ ಬಿರುಕಿಗೆ ಕಾರಣವಾಗಿದೆ. ಜನಾರ್ದನ ರೆಡ್ಡಿ ಸೋದರರಾದ ಸೋಮಶೇಖರ ರೆಡ್ಡಿ ಮತ್ತು ಕರುಣಾಕರ ರೆಡ್ಡಿ ಬಿಜೆಪಿಯಲ್ಲಿ ತಕ್ಕ ಮಟ್ಟಿಗೆ ನೆಮ್ಮದಿಯಾಗಿದ್ದಾರೆ. ಈಗ ಪಕ್ಷ ಬಿಡುವ ಸ್ಥಿತಿಯಲ್ಲಿ ಅವರಿಲ್ಲ. ಗೆಳೆಯ ಶ್ರೀರಾಮುಲುವಿಗೂ ಧರ್ಮ ಸಂಕಟವಿದೆ. ಬಿಜೆಪಿಯನ್ನು ಬಿಡುವಂತಿಲ್ಲ, ಜನಾರ್ದನ ರೆಡ್ಡಿಯನ್ನು ಬೆಂಬಲಿಸುವಂತಿಲ್ಲ ಎಂಬ ಅಡಕತ್ತರಿಯಲ್ಲಿರುವ ಅವರೆಲ್ಲ ಜನಾರ್ದನ ರೆಡ್ಡಿಯನ್ನೇ ಎದುರು ಹಾಕಿಕೊಳ್ಳಲು ಮುಂದಾಗಿದ್ದಾರೆ. ಹೀಗಾಗಿ ಗೆಳೆಯರು ಮತ್ತು ಕುಟುಂಬದಲ್ಲೇ ಬಿರುಕು ಮೂಡಲು ಕಾರಣವಾಗಿದೆ.

ಇದನ್ನೂ ಓದಿ : Janardhana Reddy : ಬಳ್ಳಾರಿಯ ಕಣದಲ್ಲಿ ರೆಡ್ಡಿ ಪತ್ನಿ ಅರುಣಾಲಕ್ಷ್ಮಿ V/S ಸೋಮಶೇಖರ್‌ ರೆಡ್ಡಿ; ಜನಾರ್ದನ ರೆಡ್ಡಿ ಘೋಷಣೆ

Exit mobile version