ಮೈಸೂರು: ʻʻಕಾಂಗ್ರೆಸ್ ನಾಯಕರಿಗೆ ಮರೆವು ಜಾಸ್ತಿ. ಆದರೆ, ಜನರಿಗೆ ಎಲ್ಲವೂ ನೆನಪಿರುತ್ತದೆ. ನಿಜವೆಂದರೆ ಮಹದಾಯಿ ಸಮಸ್ಯೆ (Mahadayi issue) ಉಂಟಾಗಲು ಕಾಂಗ್ರೆಸ್ಸೇ ಕಾರಣʼʼ ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾ ಯಿ ತಿಳಿಸಿದರು. ಚಾಮರಾಜನಗರದಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳ ಉದ್ಘಾಟನೆ, ಶಂಕುಸ್ಥಾಪನೆಗೆ ತೆರಳುವ ಹಾದಿಯಲ್ಲಿ ಮೈಸೂರಿನಲ್ಲಿ ಅವರು ಮಾತನಾಡಿದರು.
ಗೋವಾ ಜತೆಗಿನ ಮಹದಾಯಿ ಯೋಜನೆ ವಿವಾದ ಆಗಲು ಕಾಂಗ್ರೆಸ್ಸೇ ಕಾರಣ. ಅವರ ಅಧಿನಾಯಕಿ ಸೋನಿಯಾ ಗಾಂಧಿ ಗೋವಾಕ್ಕೆ ಚುನಾವಣೆ ಗೆ ಹೋಗಿ ಮಹದಾಯಿಯ ಒಂದು ಹನಿ ನೀರನ್ನೂ ಬೇರೆಡೆಗೆ ತಿರುಗಿಸಲು ಬಿಡುವುದಿಲ್ಲ ಹೇಳಿದ್ದರು. ಈಗ ಅದೇ ಕಾಂಗ್ರೆಸ್ ನಾಯಕರು ಮಹಾದಾಯಿ ನೀರಿಗಾಗಿ ಹೋರಾಟ ಮಾಡುತ್ತೇವೆ ಎಂದು ಹೇಳುತ್ತಿರುವುದು ಹಾಸ್ಯಾಸ್ಪದ ಎಂದರು.
ʻʻಮಹದಾಯಿ ಯೋಜನೆ ಸಮಸ್ಯೆಯಾಗಲು ಕಾಂಗ್ರೆಸ್ ಕಾರಣ. ಅವರಿಗೆ ಹೋರಾಟ ಮಾಡುವ ಯಾವ ನೈತಿಕ ಹಕ್ಕೂ ಇಲ್ಲ. 5 ವರ್ಷ ಅಧಿಕಾರದಲ್ಲಿದ್ದಾಗ ಏನೂ ಮಾಡಲಾಗಲಿಲ್ಲ. ಎಸ್.ಸಿ/ಎಸ್.ಟಿ ಸಮುದಾಯದ 40 ವರ್ಷಗಳ ಬೇಡಿಕೆಯನ್ನು ತಿರುಗಿಯೂ ನೋಡಿರಲಿಲ್ಲʼʼ ಎಂದು ಹೇಳಿದರು ಬೊಮ್ಮಾಯಿ.
ಆಗ ಧೈರ್ಯ ಮಾಡದ ಸಿದ್ದರಾಮಯ್ಯ ಈಗ ಮಾಡ್ತಾರಾ?
ʻʻಸಿದ್ದರಾಮಯ್ಯ ಅಧಿಕಾರಕ್ಕೆ ಬಂದರೆ ಒಳಮೀಸಲಾತಿ ನೀಡುವುದಾಗಿ ಟ್ವೀಟ್ ಮಾಡಿದ್ದಾರೆ. 5 ವರ್ಷ ಮುಖ್ಯಮಂತ್ರಿಗಳಾಗಿದ್ದಾಗ ವರದಿಯನ್ನು ಮಂಡಿಸುವ ಸಮಾವೇಶವೊಂದರಲ್ಲಿ ಕೇವಲ ದೀಪ ಹಚ್ಚಿ ಬಂದರು, ಮಾತನಾಡಲೂ ಇಲ್ಲ. ಎಲ್ಲಾ ನಡೆನುಡಿಗಳು ಜನರ ಮನದಾಳದಲ್ಲಿದೆ. ಅದನ್ನು ಮುಚ್ಚಿಹಾಕಲು ಸಮಾವೇಶ ಮಾಡಿದರು. ಜನರನ್ನು ಪದೇಪದೆ ಮರಳು ಮಾಡಲು ಸಾಧ್ಯವಿಲ್ಲ. ಹಿಂದೆ ಚುನಾವಣೆ ಸಂದರ್ಭದಲ್ಲಿ ಒಳಮೀಸಲಾತಿ ಕೊಡುವುದಾಗಿ ಭರವಸೆ ನೀಡಿದ್ದರು. ಆದರೆ ಸಮ್ಮಿಶ್ರ ಸರ್ಕಾರದಲ್ಲಿ ಒಮ್ಮೆಯಾದರೂ ಒತ್ತಾಯ ಮಾಡಿದ್ದರೇʼʼ ಎಂದು ಬೊಮ್ಮಾಯಿ ಪ್ರಶ್ನಿಸಿದರು.
ಮೀಸಲಾತಿ ಬಗ್ಗೆ ಗೊಂದಲ ಇಲ್ಲ
ಎಸ್.ಸಿ/ ಎಸ್.ಟಿ ಮೀಸಲಾತಿ ವಿಚಾರದಲ್ಲಿ ಸರಕಾರ ಮತ್ತು ಪಕ್ಷಕ್ಕೆ ಯಾವುದೇ ಗೊಂದಲಗಳಿಲ್ಲ. ಪ್ರಶ್ನೆಗೆ ಉತ್ತರ ನೀಡಲಾಗುತ್ತಿದೆ. ಈಗ ಪ್ರಸ್ತಾವನೆ ಮುಂದಿದೆಯೇ ಎಂದು ಕೇಳಿದ್ದಾರೆ. ಸದ್ಯಕ್ಕಿಲ್ಲ, ನಾಳೆ ಪ್ರಸ್ತಾವನೆ ಹೋಗಲಿದೆ. ಇದನ್ನು ಕಾಂಗ್ರೆಸ್ ಹುಟ್ಟುಹಾಕುತ್ತಿದೆ. ಅವರಿಗೆ ಎಸ್.ಸಿ/ ಎಸ್.ಟಿ ಮತಗಳು ತಪ್ಪಿಹೋಗುತ್ತಿವೆ ಎನ್ನುವ ಆತಂಕದಿಂದ ಹೀಗೆ ಮಾಡುತ್ತಿದ್ದಾರೆ ಎಂದರು ಬೊಮ್ಮಾಯಿ.
ಇದನ್ನೂ ಓದಿ | Basavaraja Bommai | ಮೂಢನಂಬಿಕೆ ನಂಬಲ್ಲ, ಚಾಮರಾಜ ನಗರ ಭೇಟಿಯಿಂದ ಶುಭವಾಗುತ್ತೆ ಎಂದ ಬೊಮ್ಮಾಯಿ