ಬೆಂಗಳೂರು: ಕಾನೂನು ಬಾಹಿರವಾಗಿ ಮಗುವನ್ನು ದತ್ತು ಪಡೆದ ಪ್ರಕರಣದಲ್ಲಿ ಬಂಧನವಾಗಿದ್ದ ಬಿಗ್‌ಬಾಸ್ ಒಟಿಟಿ ಸೀಸನ್-1ರ ಮಾಜಿ ಸ್ಪರ್ಧಿ ಸೋನು ಶ್ರೀನಿವಾಸ್ ಗೌಡ (Sonu Srinivas Gowda) 11 ದಿನಗಳ ಬಳಿಕ ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಮೂರು ದಿನಗಳ ಹಿಂದೆ ಸೋನುಗೌಡಗೆ ಕೋರ್ಟ್ ನಿಂದ ಜಾಮೀನು ಮಂಜೂರಾಗಿತ್ತು. ಜಾಮೀನು ಅರ್ಜಿಯ ಷರತ್ತುಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ಜೈಲಿನಿಂದ ರಿಲೀಸ್ ಮಾಡಲಾಗಿದೆ.
ಮೂರು ದಿನಗಳ ಹಿಂದೆ ಸೋನುಗೌಡಗೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿತ್ತು. ಇಬ್ಬರ ಶ್ಯೂರಿಟಿ ಜತೆಗೆ 1 ಲಕ್ಷ ಬಾಂಡ್ ಷರತ್ತು ವಿಧಿಸಲಾಗಿತ್ತು. ಜಾಮೀನು ಅರ್ಜಿಯ ಷರತ್ತುಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ಶನಿವಾರ ರಾತ್ರಿ 8.10ರ ಸುಮಾರಿಗೆ ಸೋನುಗೌಡ ಅವರನ್ನು ಜೈಲಿನಿಂದ ಬಿಡುಗಡೆ ಮಾಡಲಾಗಿದೆ.
ಈ ವೇಳೆ ಮಾಧ್ಯಮಗಳಿಗೆ ಯಾವುದೇ ಪ್ರತಿಕ್ರಿಯೆ ನೀಡದೆ ಸೋನುಗೌಡ ಹೊರಟಿದ್ದಾರೆ. ಸೋನು ಗೌಡಳನ್ನು ಕರೆದುಕೊಂಡು ಹೋಗಲು ಕುಟುಂಬಸ್ಥರು ಹಾಗೂ ಸ್ನೇಹಿತರು ಆಗಮಿಸಿದ್ದರು.
ರಾಯಚೂರಿನ ಕೂಲಿ ಕಾರ್ಮಿಕ ದಂಪತಿಯ ಹೆಣ್ಣು ಮಗುವನ್ನು ಕಾನೂನು ಬಾಹಿರವಾಗಿ ದತ್ತು ಪಡೆದ ಹಿನ್ನೆಲೆಯಲ್ಲಿ ಮಾ.25ರಂದು ಸೋನು ಗೌಡ ಅವರನ್ನು ಬಂಧಿಸಿ ಕೋರ್ಟ್‌ಮುಂದೆ ಹಾಜರುಪಡಿಸಿದ್ದಾಗ ವಿಚಾರಣೆ ಮಾಡದ ನ್ಯಾಯಾಧೀಶರು 5 ದಿನಗಳ ಕಾಲ ಪೊಲೀಸರ ವಶಕ್ಕೆ ಒಪ್ಪಿಸಿದ್ದರು. ನಂತರ ಐದು ದಿನಗಳಲ್ಲಿ ವಿಚಾರಣೆ ಪೂರ್ಣಗೊಳ್ಳದ ಹಿನ್ನೆಲೆ ಪೊಲೀಸರು ಮತ್ತಷ್ಟು ಕಾಲಾವಕಾಶ ಕೇಳಿದ್ದರು. ಹೀಗಾಗಿ ಸೋನು ಗೌಡ ಅವರನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ನಂತರ, ಸೋನು ಶ್ರೀನಿವಾಸ್ ಗೌಡ ಅವರನ್ನು ಪರಪ್ಪನ ಅಗ್ರಹಾರ ಜೈಲಿಗೆ ರವಾನಿಸಲಾಗಿತ್ತು.
ಇದನ್ನೂ ಓದಿ | Deepika Padukone: ಹೆಚ್ಚೆಚ್ಚು ಕೆಲಸ ಮಾಡಿ, ಹೋಲಿಕೆ ಕಡಿಮೆ ಮಾಡಿರುವೆ ಅಂದಿದ್ದೇಕೆ ದೀಪಿಕಾ?
ಮಾ.25ರಿಂದ ಜೈಲು ಶಿಕ್ಷೆಯನ್ನು ಅನುಭವಿಸುತ್ತಿದ್ದ ಸೋನುಗೌಡ ಅವರು ಜಾಮೀನು ಮಂಜೂರು ಮಾಡುವಂತೆ ಅರ್ಜಿ ಸಲ್ಲಿಕೆ ಮಾಡಿದ್ದರು. ಈ ಅರ್ಜಿಯನ್ನು ವಿಚಾರಣೆ ಮಾಡಿದ ಬೆಂಗಳೂರು ಗ್ರಾಮಾಂತರ ಸಿಜೆಎಂ ಕೋರ್ಟ್ ಜಾಮೀನು ಮಂಜೂರು ಮಾಡಿತ್ತು. ಹೀಗಾಗಿ ಸೋನುಗೌಡ ಬಿಡುಗಡೆಯಾಗಿದ್ದಾರೆ.
ದೂರು ನೀಡಿದ್ದ ಮಕ್ಕಳ ಕಲ್ಯಾಣ ಸಮಿತಿ
ರಾಯಚೂರಿನ ಕೂಲಿ ಕಾರ್ಮಿಕ ದಂಪತಿಯ ಏಳು ವರ್ಷದ ಹೆಣ್ಣು ಮಗುವಿನ ಜತೆ ಸೋನುಗೌಡ ಮುದ್ದಾಟವಾಡುತ್ತಾ, ರೀಲ್ಸ್ ಮಾಡುತ್ತಿದ್ದರು. ಬಳಿಕ ಸೋನು ಗೌಡ ಆ ಮಗುವನ್ನು ತನಗೇ ಕೊಡಬೇಕು ಎಂದು ಹಠ ಹಿಡಿದಿದ್ದರು. 10 ಲಕ್ಷ ರೂ. ಆಮಿಷವನ್ನೂ ಒಡ್ಡಿದ್ದರಂತೆ. ಆದರೆ ಮನೆಯವರು ಕೊಟ್ಟಿರಲಿಲ್ಲ. ಮಾ. 1ರಂದು ರಾಯಚೂರಿನ ಮಗುವಿನ ಮನೆಗೆ ಹೋಗಿದ್ದ ಸೋನು ಗೌಡ ಮಲಗಿದ್ದ ಮಗುವನ್ನು ಎತ್ತಿಕೊಂಡು ಬಂದಿದ್ದಾರೆ ಎನ್ನಲಾಗಿದೆ. ʼʼಮಗಳು 15 ದಿನ ನನ್ನ ಬಳಿ ಇರಲಿ. ಬಳಿಕ ಕರೆದುಕೊಂಡು ಬರುತ್ತೇನೆ. ಮಗಳನ್ನು ನೋಡಬೇಕು ಎನಿಸಿದರೆ ನೀವೂ ಬನ್ನಿʼʼ ಎಂದು ಹೆತ್ತವರಿಗೆ ತಿಳಿಸಿದ್ದರಂತೆ.
ಮಗುವನ್ನು ಬೆಂಗಳೂರಿಗೆ ಕರೆದುಕೊಂಡು ಬಂದ ಬಳಿಕ, ತಾನು ದತ್ತು ತೆಗೆದುಕೊಂಡಿದ್ದೇನೆ ಎಂದು ಸೋನು ಗೌಡ ಸೋಷಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದರು. ಆದರೆ ಅವಿವಾಹಿತೆಯಾಗಿರುವ ಆಕೆ ಹೇಗೆ ದತ್ತು ಪಡೆದುಕೊಂಡರು? ಅದಕ್ಕೆ ಸಂಬಂಧಿಸಿದ ನಿಬಂಧನೆಗಳನ್ನು ಪಾಲನೆ ಮಾಡಲಾಗಿದೆಯಾ ? ಎಂಬ ಬಗ್ಗೆ ವಿಚಾರಿಸಿದಾಗ ಯಾವುದೇ ಕ್ರಮಗಳ ಪಾಲನೆ ಆಗಿಲ್ಲ ಎನ್ನುವುದು ಪತ್ತೆಯಾಗಿತ್ತು. ಆಗ ಮಕ್ಕಳ ಕಲ್ಯಾಣ ಸಮಿತಿ ದೂರು ನೀಡಿ ಪ್ರಕರಣ ಬೆಳಕಿಗೆ ಬಂದಿತ್ತು. ಜತೆಗೆ ಮಗುವನ್ನು ದತ್ತು ಪಡೆದ ಬಗ್ಗೆ ಸಾಮಾಜಿಕವಾಗಿ ಹೇಳಿಕೊಳ್ಳುವಂತಿಲ್ಲ ಎಂಬ ನಿಯಮದ ಉಲ್ಲಂಘನೆಯಾಗಿದೆ ಎನ್ನುವುದು ಸಾಬೀತಾಗಿತ್ತು. ಹೀಗಾಗಿ ಪೊಲೀಸರು ಸೋನು ಗೌಡ ಅವರನ್ನು ಬಂಧಿಸಿದ್ದರು.