Site icon Vistara News

Sonu Srinivas Gowda: ಮಗುವಿಗಾಗಿ ಸೋನು ಗೌಡ 10 ಲಕ್ಷ ರೂ. ಆಮಿಷ ಒಡ್ಡಿದ್ದು ನಿಜವೇ? ಹೆತ್ತವರು ಹೇಳಿದ್ದಿಷ್ಟು

sonu gowda

sonu gowda

ಬೆಂಗಳೂರು: ಸೋಷಿಯಲ್‌ ಮೀಡಿಯಾ ತಾರೆ, ‘ಬಿಗ್ ಬಾಸ್ ಕನ್ನಡ ಒಟಿಟಿ 1’ ಖ್ಯಾತಿಯ ಸೋನು ಶ್ರೀನಿವಾಸ್ ಗೌಡ (Sonu Srinivas Gowda) ಅವರು 7 ವರ್ಷದ, ರಾಯಚೂರು ಮೂಲದ ಬಡ ಹುಡುಗಿಯನ್ನು ದತ್ತು ತೆಗೆದುಕೊಂಡಿದ್ದಾರೆ ಎನ್ನಲಾದ ವಿಚಾರ ಸದ್ಯ ಭಾರಿ ವಿವಾದ ಹುಟ್ಟು ಹಾಕಿದೆ. ಪೊಲೀಸ್‌ ವಿಚಾರಣೆಗಾಗಿ ಬೆಂಗಳೂರಿಗೆ ಆಗಮಿಸಿದ ಬಾಲಕಿಯ ಹೆತ್ತವರಾದ ಮುದ್ದಪ್ಪ ಮತ್ತು ರಾಜೇಶ್ವರಿ ‘ವಿಸ್ತಾರ ನ್ಯೂಸ್‌’ನೊಂದಿಗೆ ಮಾತನಾಡಿದ್ದಾರೆ. ಈ ವೇಳೆ ಸೋನು ಗೌಡ ಮಗುವಿಗಾಗಿ 10 ಲಕ್ಷ ರೂ. ಆಮಿಷ ಒಡ್ಡಿರುವ ವಿಚಾರವೂ ಬೆಳಕಿಗೆ ಬಂದಿದೆ.

10 ಲಕ್ಷ ರೂ. ಆಫರ್‌!

ಸುಮಾರು 5-6 ತಿಂಗಳ ಹಿಂದೆ ಸೋನು ಗೌಡ ಆಗ ಬೆಂಗಳೂರಿನಲ್ಲಿದ್ದ ಮಗುವಿನ ಹೆತ್ತವರ ಬಳಿ ಬಂದು ಮಗುವನ್ನು ದತ್ತು ಕೊಡುವಂತೆ ಕೇಳಿದ್ದರು. ಈ ಬಗ್ಗೆ ಮಗುವಿನ ತಾಯಿ ರಾಜೇಶ್ವರಿ ಮಾತನಾಡಿ, ʼʼಮೊದಲು ಸೋನು ಗೌಡ 10 ಲಕ್ಷ ರೂ. ಆಫರ್‌ ನೀಡಿ 7 ವರ್ಷದ ಹೆಣ್ಣು ಮಗುವನ್ನು ದತ್ತು ಕೊಡಿ ಎಂದಿದ್ದರು. ಅದಕ್ಕೆ ನಾನು ಮಗುವನ್ನು ಕೊಡುವುದಿಲ್ಲ ಎಂದು ತಿಳಿಸಿದ್ದೆʼʼ ಎಂದಿದ್ದಾರೆ.

ಮಾ. 1ರಂದು ರಾಯಚೂರಿನ ಮಗುವಿನ ಮನೆಗೆ ಸೋನು ಗೌಡ ತೆರಳಿದ್ದ ವಿಡಿಯೊ ಲಭ್ಯವಾಗಿದೆ. ʼʼಮಧ್ಯರಾತ್ರಿ ಅವರು ತಮ್ಮ ಸಹೋದರರ ಜತೆಗೆ ಮನೆಗೆ ಆಗಮಿಸಿದ್ದರು. ಆಗ ಹೆಣ್ಣು ಮಗು ಮಲಗಿತ್ತು. ಅದನ್ನು ಹಾಗೇ ಎತ್ತಿಕೊಂಡಿದ್ದರುʼʼ ಎಂದು ರಾಜೇಶ್ವರಿ ಮಾಹಿತಿ ನೀಡಿದ್ದಾರೆ.

ʼʼಹಿಂದೆಲ್ಲ ಮಗಳು ದಿನಾ ಕರೆ ಮಾಡಿ ಮಾತನಾಡುತ್ತಿದ್ದಳು. ಈಗ ಮೂರು ದಿನಗಳಿಂದ ಮಗಳ ಜತೆ ಮಾತನಾಡಿಲ್ಲʼʼ ಎಂದು ರಾಜೇಶ್ವರಿ ನೋವು ತೋಡಿಕೊಂಡಿದ್ದಾರೆ. ʼʼಮಾರ್ಚ್‌ 1ರಂದು ರಾಯಚೂರಿನ ಮನೆಗೆ ಬಂದಿದ್ದ ಸೋನು ಗೌಡ ಅವರು, ಮಗಳು ನನ್ನ ಜತೆ 15 ದಿನ ಇರಲಿ. ಬಳಿಕ ಕರೆದುಕೊಂಡು ಬನ್ನಿ ಎಂದಿದ್ದರು. ಅಪ್ಪ ಅಮ್ಮ ಬೇಕು ಎಂದಾಗ ಕರೆದುಕೊಂಡು ಬರುತ್ತೇನೆ. ಮಗಳನ್ನು ನೋಡಬೇಕು ಎನಿಸಿದರೆ ನೀವೂ ಬನ್ನಿ ಎಂದಿದ್ದರುʼʼ ಎಂದು ರಾಜೇಶ್ವರಿ ತಿಳಿಸಿದ್ದಾರೆ.

ʼʼಪ್ರೀತಿಯಿಂದ ಕರೆದುಕೊಂಡು ಹೋಗುತ್ತೇನೆ ಎಂದಾಗ ಕಳುಹಿಸಿಕೊಟ್ಟಿದ್ದೇವೆ. ಆಕೆಯನ್ನು ಚೆನ್ನಾಗಿ ಓದಿಸಿ ಅವಳ ಕಾಲ ಮೇಲೆ ಅವಳು ನಿಲ್ಲುವಂತೆ ಮಾಡುತ್ತೇನೆ ಎಂದ ಕಾರಣಕ್ಕೆ ಮಗಳನ್ನು ಕಳುಹಿಸಿ ಕೊಡಲು ಮನೆಯವೆರಲ್ಲ ಸಮ್ಮತಿ ಸೂಚಿಸಿದ್ದರುʼʼ ಎಂದು ರಾಜೇಶ್ವರಿ ಹೇಳಿದ್ದಾರೆ. ʼʼಅದು ಬಿಟ್ಟು ಯಾವುದೇ ಆಮಿಷ, ಹಣದ ಆಸೆ ತೋರಿಸಿ ಕರೆದುಕೊಂಡು ಬಂದಿಲ್ಲʼʼ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: Sonu Srinivas Gowda: ಸೋನು ಗೌಡ ದತ್ತು ಪಡೆದ ಪ್ರಕರಣ; ರಾಯಚೂರಿನಲ್ಲಿ ಸ್ಥಳ ಮಹಜರು

ಸೋನು ಗೌಡ ಯಾವ ಕಾರಣಕ್ಕೆ ದತ್ತು ತೆಗೆದುಕೊಂಡಿದ್ದೇನೆ ಎಂಬ ಹೇಳಿಕೆ ನೀಡಿದ್ದರು ಎನ್ನುವುದು ಗೊತ್ತಿಲ್ಲ ಎಂದು ಮಗುವಿನ ಹೆತ್ತವರು ಹೇಳಿದ್ದಾರೆ. ʼʼನಾವು ಮಗುವನ್ನು ದತ್ತು ಕೊಟ್ಟಿಲ್ಲ. ಶಾಲೆಗೆ ಸೇರಿಸುತ್ತೇನೆ ಎಂದು ಹೇಳಿ ಸೋನು ಗೌಡ ಮಗುವನ್ನು ಕರೆದುಕೊಂಡು ಬಂದಿದ್ದಾರೆʼʼ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version