Site icon Vistara News

Soujanya Murder : ಧರ್ಮಸ್ಥಳ ಕ್ಷೇತ್ರ, ಡಾ. ಹೆಗ್ಗಡೆ ನಿಂದನೆ ವಿರುದ್ಧ ಬೃಹತ್‌ ಪ್ರತಿಭಟನೆ; ಸಮಗ್ರ ಮರುತನಿಖೆಗೆ ಹಕ್ಕೊತ್ತಾಯ

protest meet at Ujire

ಉಜಿರೆ (ದಕ್ಷಿಣ ಕನ್ನಡ): 11 ವರ್ಷದ ಹಿಂದೆ ನಡೆದ ಧರ್ಮಸ್ಥಳದ ಪಾಂಗಾಳ ನಿವಾಸಿ, ಆಗ ಉಜಿರೆ ಕಾಲೇಜು ಪಿಯು ವಿದ್ಯಾರ್ಥಿನಿಯಾಗಿದ್ದ ಸೌಜನ್ಯಳ ಅತ್ಯಾಚಾರ ಮತ್ತು ಹತ್ಯೆ ಪ್ರಕರಣಕ್ಕೆ (Soujanya Murder) ಸಂಬಂಧಿಸಿ ಧರ್ಮಸ್ಥಳ ಕ್ಷೇತ್ರ (Sri Kshetra Dharmastala) ಮತ್ತು ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆಯವರನ್ನು (Dr. D Veerendra heggade) ನಿಂದಿಸುವುದನ್ನು ಖಂಡಿಸಿ ಶುಕ್ರವಾರ ಉಜಿರೆಯಲ್ಲಿ ಬೃಹತ್‌ ಪ್ರತಿಭಟನಾ ಸಭೆ (protest Meeting at Ujire) ನಡೆಯಿತು. ಅಖಿಲ ಕರ್ನಾಟಕ ಶ್ರೀ ಮಂಜುನಾಥ ಸ್ವಾಮಿ ಭಕ್ತ ವೃಂದದವರಿಂದ ಹತ್ತೊತ್ತಾಯ ಸಮಾವೇಶ ನಡೆಯಿತು. ಈ ಪ್ರಕರಣದ ಸಮಗ್ರ ಮರುತನಿಖೆ (Demand for reenquiry) ಮಾಡುವ ಮೂಲಕ ಅನಗತ್ಯವಾಗಿ ಕ್ಷೇತ್ರವನ್ನು ನಿಂದಿಸುತ್ತಿರುವ ಜನರ ಬಾಯಿ ಮುಚ್ಚಿಸಬೇಕು ಎಂದು ಒತ್ತಾಯಿಸಲಾಯಿತು.

11 ವರ್ಷದ ಹಿಂದೆ ನಡೆದ ಈ ಕೊಲೆ ಪ್ರಕರಣ ರಾಜ್ಯಾದ್ಯಂತ ಸದ್ದು ಮಾಡಿತ್ತು. ಈ ಕೊಲೆಗೆ ಸಂಬಂಧಿಸಿ ಪೊಲೀಸರು ಅಂದು ಬಂಧಿಸಿದ್ದ ಸಂತೋಷ್‌ ರಾವ್‌ನನ್ನು ಇತ್ತೀಚೆಗೆ ಸಿಬಿಐ ನ್ಯಾಯಾಲಯ ದೋಷಮುಕ್ತನೆಂದು ಬಿಡುಗಡೆ ಮಾಡಿದೆ. ಈ ಪ್ರಕರಣದಲ್ಲಿ ಮೊದಲಿನಿಂದಲೂ ಧರ್ಮಸ್ಥಳ ಕ್ಷೇತ್ರ ಮತ್ತು ಡಾ. ಹೆಗ್ಗಡೆಯವರ ಕುಟುಂಬದ ಮೇಲೆ ಬೊಟ್ಟು ಮಾಡುತ್ತಿದ್ದ ಕೆಲವು ಶಕ್ತಿಗಳು ಸಿಬಿಐ ನ್ಯಾಯಾಲಯದ ತೀರ್ಪಿನ ಬಳಿಕ ಮತ್ತೆ ಚಿಗಿತುಕೊಂಡಿದ್ದು, ನಾನಾ ಆರೋಪಗಳನ್ನು ಮಾಡುತ್ತಿದ್ದಾರೆ. ಅದರಲ್ಲೂ ಮುಖ್ಯವಾಗಿ ಸಾಮಾಜಿಕ ಜಾಲ ತಾಣದಲ್ಲಿ ಭಾರಿ ಅಪಪ್ರಚಾರಗಳು ನಡೆಯುತ್ತಿವೆ.

ಪ್ರವಾಹದಂತೆ ಸಿಡಿದೆದ್ದ ಮಂಜುನಾಥನ ಭಕ್ತರು! | Protest in Ujire | Vistara News

ಇದನ್ನು ಗಮನಿಸಿದ ಡಾ. ವೀರೇಂದ್ರ ಹೆಗ್ಗಡೆಯವರು ಸ್ವತಃ ಮಾತನಾಡಿ, ಸೌಜನ್ಯ ಸಾವು ಸಂಭವಿಸಿದಾಗಲೇ ತಾನೇ ಇದರ ಬಗ್ಗೆ ಸಿಬಿಐ ತನಿಖೆ ನಡೆಸಬೇಕು ಒತ್ತಾಯಿಸಿದ್ದನ್ನು ನೆನಪಿಸಿದ್ದರು. ಅಷ್ಟೇ ಅಲ್ಲದೆ ಈಗಲೂ ಈ ಪ್ರಕರಣದ ಸಮಗ್ರ ಮರು ತನಿಖೆ ನಡೆಸು ಅಪರಾಧಿಯ ಬಂಧನ ಆಗಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದ್ದರು.

ಇಷ್ಟಾದರೂ ಅಪಪ್ರಚಾರಗಳು ಮುಂದುವರಿದ ಹಿನ್ನೆಲೆಯಲ್ಲಿ ಡಾ. ಹೆಗ್ಗಡೆಯವರ ಅಭಿಮಾನಿಗಳು ಮತ್ತು ಧರ್ಮಸ್ಥಳ ಕ್ಷೇತ್ರದ ಭಕ್ತರು ರಾಜ್ಯದ ಹಲವು ಕಡೆಗಳಲ್ಲಿ ಪ್ರತಿಭಟನಾ ಸಭೆಗಳನ್ನು ನಡೆಸಿದ್ದಾರೆ. ಶುಕ್ರವಾರ ಉಜಿರೆಯಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಭಕ್ತರ ಪ್ರತಿಭಟನಾ ಸಭೆ ನಡೆಯಿತು.

ಉಜಿರೆ ಜನಾರ್ದನ ದೇವಸ್ಥಾನದ ಬಳಿಯಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆ ಉಜಿರೆ ಕಾಲೇಜಿನ ಮೈದಾನದವರೆಗೆ ಸಾಗಿ ಅಲ್ಲಿ ಸಮಾವೇಶಗೊಂಡಿತು. ಸಭೆಯಲ್ಲಿ ಮಾತನಾಡಿದ ಭಕ್ತರ ಪ್ರತಿನಿಧಿಗಳು ಸೌಜನ್ಯ ಸಾವಿನಿಂದ ನಮಗೂ ನೋವಾಗಿದೆ. ಇದನ್ನು ಖಂಡಿತವಾಗಿಯಾಗಿ ಸಹಿಸಲಾಗದು. ಈ ಪ್ರಕರಣವನ್ನು ಬಳಸಿಕೊಂಡು ಕೆಲವರು ಧರ್ಮಸ್ಥಳ ಕ್ಷೇತ್ರದ ವಿರುದ್ಧ ಅಪಪ್ರಚಾರ, ನಿಂದನೆ ಮಾಡುತ್ತಿದ್ದಾರೆ. ಇದನ್ನು ಕೂಡಾ ಸಹಿಸಲಾಗದು. ಹಾಗಾಗಿ ಇದನ್ನು ತಪ್ಪಿಸಬೇಕು ಎಂದರೆ ಪ್ರಕರಣದ ಮರುತನಿಖೆ ನಡೆಸಬೇಕು, ನಿಜವಾದ ಆರೋಪಿಯನ್ನು ಬಂಧಿಸಬೇಕು ಎಂದು ಆಗ್ರಹಿಸಿದರು. ಶಾಸಕ ಹರೀಶ್‌ ಪೂಂಜಾ ಅವರ ಮೂಲಕ ರಾಜ್ಯಸರ್ಕಾರಕ್ಕೆ ಈ ಸಂಬಂಧ ಮನವಿಯನ್ನು ಸಲ್ಲಿಸಲಾಯಿತು.

ಪ್ರತಿಭಟನಾ ಸಭೆಗೆ ಬಂದ ಸೌಜನ್ಯಾ ತಾಯಿ ಮತ್ತು ಸಹೋದರ

ಈ ನಡುವೆ, ಸಮಾವೇಶ ಸ್ಥಳಕ್ಕೆ ಸೌಜನ್ಯಳ ತಾಯಿ ಕುಸುಮಾವತಿ ಮತ್ತು ಪುತ್ರ ಆಗಮಿಸಿದ್ದರು. ಅವರು ಕೂಡಾ Justice for sowjanya ಎಂಬ ಭಿತ್ತಿಪತ್ರ ಹಿಡಿದುಕೊಂಡಿದ್ದರು. ಅವರು ವೇದಿಕೆಯನ್ನು ಹತ್ತಲು ನೋಡಿದಾಗ ಅವರನ್ನು ತಡೆಯಲಾಯಿತು. ತಾವು ಕೂಡಾ ನ್ಯಾಯ ಕೇಳಲು ಬಂದಿದ್ದೇವೆ, ಧರ್ಮಸ್ಥಳ ಕ್ಷೇತ್ರದ ಬಗ್ಗೆ ಅಪಪ್ರಚಾರ ಮಾಡುವುದಕ್ಕೆ ತಮ್ಮದೂ ವಿರೋಧವಿದೆ ಎಂದು ಹೇಳಿದರು. ಈ ಪ್ರಕರಣದಲ್ಲಿ ನ್ಯಾಯ ನೀಡಬೇಕು, ತಾವು ಹೇಳುವ ವ್ಯಕ್ತಿಗಳನ್ನು ತನಿಖೆಗೆ ಒಳಪಡಿಸಬೇಕು ಎಂದು ಅವರು ಆಗ್ರಹಿಸಿದರು. ಪೊಲೀಸರು ಅವರನ್ನು ತಕ್ಷಣ ಬೇರೆಡೆಗೆ ಕರೆದುಕೊಂಡು ಹೋದರು.

ಇದನ್ನೂ ಓದಿ: Sowjanya Murder : ಸೌಜನ್ಯ ಸಾವಿಗೆ ನ್ಯಾಯ ಒದಗಿಸಿ; ಸರ್ಕಾರ, ಸಿಬಿಐಗೆ ಡಾ. ಡಿ ವೀರೇಂದ್ರ ಹೆಗ್ಗಡೆ ಮನವಿ, ವಿಹಿಂಪ ಬೆಂಬಲ

Exit mobile version