Site icon Vistara News

Karnataka Election 2023: ಸೌಭಾಗ್ಯ ಬಸವರಾಜನ್‌ ಪಕ್ಷೇತರವಾಗಿ ಕಣಕ್ಕೆ; ಕಾಂಗ್ರೆಸ್‌ನಲ್ಲಿ ಮತ್ತೊಂದು ಬಂಡಾಯ

Karnataka Election 2023 updates Sowbhagya Basavaraj to contest as independent

ಚಿತ್ರದುರ್ಗ: ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ (Karnataka Election 2023) ಎಲ್ಲ ಪಕ್ಷಗಳಿಗೂ ಬಂಡಾಯದ ಬಿಸಿ ತಟ್ಟುತ್ತಲೇ ಇದೆ. ಸದ್ಯಕ್ಕೆ ಜೆಡಿಎಸ್‌ ಹಾಗೂ ಕಾಂಗ್ರೆಸ್‌ ಟಿಕೆಟ್‌ ಘೋಷಣೆಯಾಗಿದ್ದು, ಎರಡೂ ಕಡೆ ಟಿಕೆಟ್‌ ವಂಚಿತ ಆಕಾಂಕ್ಷಿಗಳು ಬಂಡಾಯದ ಬಾವುಟವನ್ನು ಈಗಾಗಲೇ ಹಾರಿಸಿದ್ದಾರೆ. ಕೆಲವರ ಅಸಮಾಧಾನವನ್ನು ಶಮನ ಮಾಡಲಾಗಿದ್ದರೂ ಉಳಿದವರ ಆಕ್ರೋಶಗಳು ಹೊರಬರುತ್ತಲೇ ಇವೆ. ಕಾಂಗ್ರೆಸ್‌ನಿಂದ ವಿಧಾನ ಪರಿಷತ್‌ ಮಾಜಿ ಸದಸ್ಯ ರಘು ಆಚಾರ್‌ ಪಕ್ಷ ತೊರೆದು ಜೆಡಿಎಸ್‌ ಸೇರ್ಪಡೆಯಾಗುವುದಾಗಿ ಘೋಷಣೆ ಮಾಡಿದ ಬೆನ್ನಲ್ಲೇ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿರುವ ಮಾಜಿ ಶಾಸಕ ಎಸ್.ಕೆ. ಬಸವರಾಜನ್ ಪಕ್ಷೇತರವಾಗಿ ಸ್ಪರ್ಧೆ ಮಾಡುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ.

ಈ ಸಂಬಂಧ ಚಿತ್ರದುರ್ಗ ಕ್ಷೇತ್ರದ ಮಾಜಿ ಶಾಸಕ ಎಸ್‌.ಕೆ. ಬಸವರಾಜನ್ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ರಘು ಆಚಾರ್ ಅವರು ಈಗಾಗಲೇ ಜೆಡಿಎಸ್‌ನಿಂದ ಸ್ಪರ್ಧೆ ಮಾಡುವುದಾಗಿ ಘೋಷಣೆ ಮಾಡಿದ್ದಾರೆ. ಹಾಗಾಗಿ ನಾನು ಈಗ ಜೆಡಿಎಸ್ ಟಿಕೆಟ್ ಕೇಳುವುದು ಸರಿಯಲ್ಲ. ಹಾಗಾಗಿ ಪಕ್ಷೇತರವಾಗಿ ಸ್ಪರ್ಧೆ ಮಾಡಲು ತೀರ್ಮಾನವನ್ನು ಮಾಡಲಾಗಿದೆ. ಆದರೆ, ನನ್ನ ಬದಲು ಪತ್ನಿ ಸೌಭಾಗ್ಯ ಬಸವರಾಜನ್‌ ಅವರನ್ನು ಕಣಕ್ಕೆ ಇಳಿಸುತ್ತಿದ್ದೇನೆ ಎಂದು ಹೇಳಿದರು.

ಇದನ್ನೂ ಓದಿ: Nationality issue : ಮಕ್ಕಳಿಗೆ ಭಾರತೀಯ ಪೌರತ್ವ ಕೊಡಿ ಎಂದು ಕೇಳುತ್ತಿರುವ ಬೆಂಗಳೂರಿನ ಮಹಿಳೆ; ಹೈಕೋರ್ಟ್‌ ಆಗದು ಎಂದಿದ್ದೇಕೆ?

ಕಾಂಗ್ರೆಸ್‌ ಟಿಕೆಟ್‌ ಹರಾಜಾಗಿದೆ

ಕಾಂಗ್ರೆಸ್ ಟಿಕೆಟ್ ಕೈ ತಪ್ಪಿದ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಕಾಂಗ್ರೆಸ್‌ ಟಿಕೆಟ್ ಹರಾಜಾಗಿದೆ ಎಂದು ಹೇಳಲಾಗುತ್ತಿದೆ. ಹರಾಜು ಕೂಗುವ ಮೂಲಕ ಕಾಂಗ್ರೆಸ್ ಟಿಕೆಟ್ ನೀಡಿದ್ದಾರೆ. ಒಂದು ಚುನಾವಣೆ ಮಾಡುವಷ್ಟು ಹಣಕ್ಕೆ ಕಾಂಗ್ರೆಸ್ ಟಿಕೆಟ್ ಹರಾಜಾಗಿದೆ ಎನ್ನುತ್ತಿದ್ದಾರೆ. ಹಾಗಾಗಿ ನಾನು ಹರಾಜು ಪ್ರಕ್ರಿಯೆಯಲ್ಲಿ ಭಾಗಿಯಾಗಿಲ್ಲ ಎಂದು ಹೇಳಿದರು.

ಜೆಡಿಎಸ್‌ನಿಂದ ರಘು ಆಚಾರ್‌ ನಾಮಪತ್ರ

ಮಾಜಿ ಮುಖ್ಯಮಂತ್ರಿ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಆಪ್ತರಾಗಿದ್ದ ರಘು ಆಚಾರ್‌ ಅವರು ತಮಗೆ ಟಿಕೆಟ್‌ ಸಿಕ್ಕೇ ಸಿಗುತ್ತದೆ ಎಂಬ ನಂಬಿಕೆಯಲ್ಲಿದ್ದರು. ಈ ಬಗ್ಗೆ ಸಿದ್ದರಾಮಯ್ಯ ಅವರ ಜತೆ ನಿರಂತರ ಸಂಪರ್ಕದಲ್ಲಿದ್ದರು. ಆದರೆ, ಎರಡನೇ ಪಟ್ಟಿ ಬಿಡುಗಡೆಯಾದಾಗ ಅವರಿಗೆ ಶಾಕ್‌ ಕಾದಿತ್ತು. ತಮಗೇ ಸಿಗುತ್ತದೆ ಎಂದು ನಂಬಿದ್ದ ಟಿಕೆಟ್‌ ಕೊನೇ ಘಳಿಗೆಯಲ್ಲಿ ವೀರೇಂದ್ರ ಪಪ್ಪಿ ಅವರ ಪಾಲಾಗಿತ್ತು. ಇದು ರಘು ಆಚಾರ್‌ ಅವರನ್ನು ಕೆರಳಿಸಿತ್ತು, ಒಂದೇ ದಿನದಲ್ಲಿ ಜೆಡಿಎಸ್‌ ಅನ್ನು ಸಂಪರ್ಕಿಸಿ ಟಿಕೆಟ್‌ ಖಾತ್ರಿ ಮಾಡಿಕೊಂಡಿದ್ದರು. ಏಪ್ರಿಲ್‌ 14ರಂದು ಜೆಡಿಎಸ್‌ ಸೇರಿ ಏಪ್ರಿಲ್‌ 17ಕ್ಕೆ ನಾಮಪತ್ರ ಸಲ್ಲಿಸುವುದಾಗಿಯೂ ಅವರು ಘೋಷಣೆ ಮಾಡಿದ್ದರು.

ಇದನ್ನೂ ಓದಿ: Road accident : ಹೆದ್ದಾರಿ ಬದಿಯಲ್ಲಿ ಹೆಣವಾಗಿ ಬಿದ್ದ ಆ ಯುವಕನ ಸಾವಿನ ಹಿಂದಿದೆಯಾ ಕೊಲೆಯ ಕರಿನೆರಳು?

ಹೆಲಿಕಾಪ್ಟರ್‌ ಕೂಡಾ ಕಾಂಗ್ರೆಸ್‌ನಿಂದ ಜೆಡಿಎಸ್‌ಗೆ ಪಕ್ಷಾಂತರ!

ಚಿತ್ರದುರ್ಗದ ಕಾಂಗ್ರೆಸ್‌ ಟಿಕೆಟ್‌ ವಂಚಿತ, ಮಾಜಿ ಎಂಎಲ್‌ಸಿ ರಘು ಆಚಾರ್‌ ಅವರು ಪಕ್ಷ ಬದಲಾಯಿಸುತ್ತಿದ್ದಂತೆಯೇ ಅವರ ಹೆಲಿಕಾಪ್ಟರ್‌ ಕೂಡಾ ಕಾಂಗ್ರೆಸ್‌ನಿಂದ ಜೆಡಿಎಸ್‌ಗೆ ಪಕ್ಷಾಂತರ ಮಾಡಲಿದೆ. ರಘು ಆಚಾರ್‌ ಅವರು ಏಪ್ರಿಲ್‌ 14ರಂದು ಜೆಡಿಎಸ್‌ಗೆ ಅಧಿಕೃತವಾಗಿ ಸೇರ್ಪಡೆಯಾಗಲಿದ್ದಾರೆ. ಆದರೆ, ಹೆಲಿಕಾಪ್ಟರ್‌ ಮಾತ್ರ ಅವರಿಗಿಂತ ಮೊದಲೇ ಪಕ್ಷಾಂತರ ಮಾಡಿದೆ.

ರಘು ಆಚಾರ್‌ ಅವರು ಟಿಕೆಟ್‌ ಬಗ್ಗೆ ಭಾರಿ ಆಸೆ ಹೊಂದಿದ್ದರು. ಕಾಂಗ್ರೆಸ್‌ ನಾಯಕ ಸಿದ್ದರಾಮಯ್ಯ ಅವರ ಆಪ್ತರಾಗಿರುವ ರಘು ಆಚಾರ್‌ ತಮ್ಮ ಬಳಿ ಇದ್ದ ಹೆಲಿಕಾಪ್ಟರನ್ನೇ ಅವರ ಸಂಚಾರಕ್ಕೆ ಕೊಟ್ಟಿದ್ದರು. ಸಿದ್ದರಾಮಯ್ಯ ಅವರು ಚುನಾವಣಾ ಪ್ರಚಾರಕ್ಕೆ ಬಳಸುತ್ತಿದ್ದ ಹೆಲಿಕಾಪ್ಟರ್‌ ರಘು ಆಚಾರ್‌ ಅವರದೇ ಆಗಿತ್ತು. ಈ ನಡುವೆ ರಘು ಆಚಾರ್‌ ಅವರ ಹೆಲಿಕಾಪ್ಟರ್‌ ಕೂಡಾ ಸಿದ್ದರಾಮಯ್ಯ ಅವರಿಗೆ ಬೈ ಬೈ ಹೇಳಿ ಎಚ್.ಡಿ ಕುಮಾರಸ್ವಾಮಿ ಪಾಲಾಗಲಿದೆ.

ನಿಜವೆಂದರೆ ಈ ಹೆಲಿಕಾಪ್ಟರ್‌ ಅನ್ನು ರಘು ಆಚಾರ್‌ ಕೆಲವು ದಿನಗಳ ಹಿಂದೆಯೇ ಸಿದ್ದರಾಮಯ್ಯ ಕೈಯಿಂದ ರಘು ಆಚಾರ್‌ ವಾಪಸ್‌ ಪಡೆದಿದ್ದರು. ಕಳೆದ ಒಂದು ತಿಂಗಳಿನಿಂದಲೇ ರಘು ಆಚಾರ್‌ಗೆ ತಮಗೆ ಟಿಕೆಟ್‌ ಕೈತಪ್ಪುವ ಸುಳಿವು ಸಿಕ್ಕಿತ್ತು. ಹಾಗಾಗಿ ಅವರು ಸಿದ್ದರಾಮಯ್ಯ ಅವರ ಜತೆ ನಿರಂತರ ಮಾತುಕತೆ ನಡೆಸುತ್ತಿದ್ದರು. ಟಿಕೆಟ್‌ ಸಿಗುವುದಿಲ್ಲ ಎಂಬ ಸುಳಿವು ಸಿಗುತ್ತಿದ್ದಂತೆಯೇ ತಟಸ್ಥರಾದರು. ಆ ಹೊತ್ತಿನಲ್ಲೇ ತಾವು ನೀಡಿದ್ದ ಹೆಲಿಕಾಪ್ಟರನ್ನೂ ವಾಪಸ್‌ ಪಡೆದಿದ್ದರು ಎನ್ನಲಾಗುತ್ತಿದೆ.

ಇದನ್ನೂ ಓದಿ: H.D. Kumaraswamy: ಜನ ಬೀದಿಗೆ ಬಿದ್ದಾಗ ಬರಲಿಲ್ಲ; ವನ್ಯಜೀವಿ ನೋಡಲು ಬಂದಿದ್ದಾರೆ: ಮೋದಿ ಭೇಟಿಗೆ ಕುಮಾರಸ್ವಾಮಿ ವ್ಯಂಗ್ಯ

ಈ ನಡುವೆ ಕಾಂಗ್ರೆಸ್‌ನಲ್ಲಿ ಇರುವಾಗಲೇ ರಘು ಆಚಾರ್‌ ತಮ್ಮ ಹೆಲಿಕಾಪ್ಟರ್‌ರನ್ನು ಜೆಡಿಎಸ್‌ ನಾಯಕ ಎಚ್‌.ಡಿ. ಕುಮಾರಸ್ವಾಮಿ ಅವರಿಗೆ ನೀಡಿದ್ದರು ಎನ್ನಲಾಗುತ್ತಿದೆ. ಹಾಗಿದ್ದರೆ ಕಾಂಗ್ರೆಸ್‌ ಟಿಕೆಟ್‌ ಕೈತಪ್ಪಿದರೆ ಜೆಡಿಎಸ್‌ಗೆ ಹೋಗುವುದನ್ನು ರಘು ಆಚಾರ್‌ ಮೊದಲೇ ಫೈನಲೈಸ್‌ ಮಾಡಿದ್ದರಾ ಎಂಬ ಸಂಶಯ ಹುಟ್ಟಿಕೊಂಡಿದೆ. ಏನೇ ಆದರೂ ಈಗಂತೂ ಅಧಿಕೃತವಾಗಿ ಹೆಲಿಕಾಪ್ಟರ್‌ ಶಿಫ್ಟ್‌ ಆಗುವುದು ಖಚಿತವಾಗಿದೆ.

Exit mobile version