ಬಳ್ಳಾರಿ: ಬಳ್ಳಾರಿ ಕೇಂದ್ರ ಕಾರಾಗೃಹದಲ್ಲಿ (Bellary Central Jail) ನಿಷೇಧಿತ ವಸ್ತುಗಳನ್ನು ಬಳಸುತ್ತಿರುವ ಮಾಹಿತಿ ಮೇರೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರ ನೇತೃತ್ವದ ಸುಮಾರು 100ಕ್ಕೂ ಹೆಚ್ಚು ಸಿಬ್ಬಂದಿ ಅಧಿಕಾರಿಗಳ ತಂಡ ದಾಳಿ ಮಾಡಿ ಒಂದು ಮೊಬೈಲ್ ಮತ್ತು ಮೂರು ಸಿಮ್ ಕಾರ್ಡ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಚುನಾವಣೆ ಹತ್ತಿರವಾಗುತ್ತಿರುವ ಹೊತ್ತಿನಲ್ಲೇ ಈ ದಾಳಿ ನಡೆಸಿದೆ. ಈ ಹಿಂದೆ ಎಸ್‌ಪಿ ನೇತೃತ್ವದಲ್ಲಿ ಹಲವು ಬಾರಿ ದಾಳಿ ನಡೆಸಿದ ಉದಾಹರಣೆಗಳು ಇವೆ.
ಮಂಗಳವಾರ ಬೆಳಗ್ಗೆ 6.30ಕ್ಕೆ ದಾಳಿ ಮಾಡಿದ ಅಧಿಕಾರಿಗಳು ಕಾರಾಗೃಹದ ಎಲ್ಲ ಕೋಣೆಗಳನ್ನು ಶೋಧನೆ ಮಾಡಿದ್ದು, ಶೋಧನೆ ವೇಳೆಯಲ್ಲಿ ಒಂದು ಸಿಮ್ ಇರುವ ಮೊಬೈಲ್ ಹಾಗೂ 3 ಸಿಮ್ ಕಾರ್ಡ್‌ಗಳು ಸಿಕ್ಕಿವೆ. ಸುಮಾರು 2 ತಾಸುಗಳ ಕಾಲ ಶೋಧನಾ ಕಾರ್ಯ ಮಾಡಿದರು.
ಈ ಬಗ್ಗೆ ಗಾಂಧಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ದಾಳಿಯಲ್ಲಿ ಡಿವೈಎಸ್‌ಪಿ ಬಸವರಾಜ್ ಕೆ., ಪೊಲೀಸ್ ಇನ್ಸ್‌ಪೆಕ್ಟರ್‌ಗಳಾದ ಶ್ರೀನಿವಾಸ ಮೇಟಿ, ಸಿದ್ದರಾಮೇಶ್ವರ, ಎಂ. ಎನ್. ಸಿಂಧೂರು, ವಾಸು ಕುಮಾರ್, ಬಸವರಾಜ ಪಾಟೀಲ್, ಗುಂಡೂರಾವ್, ಅಂಬರೇಶ್ ಹುಬ್ಬಳ್ಳಿ, ಅಮೋಫ್, ಗೋವಿಂದ ಸುಮಾರು 100 ಸಿಬ್ಬಂದಿ ಭಾಗಿಯಾಗಿದ್ದರು. ಈ ಸಂದರ್ಭದಲ್ಲಿ ಕೇಂದ್ರ ಕಾರಾಗೃಹದ ಅಧೀಕ್ಷಕರಾದ ಲತಾ, ಉಪಾಧೀಕ್ಷಕ ಅಂಬರೀಶ್ ಸೇರಿದಂತೆ ಇತರರು ಇದ್ದರು.
ಇದನ್ನೂ ಓದಿ: Tipu Sultan: ಕಾಂಗ್ರೆಸ್ ನನ್ನನ್ನು ನಂಜೇಗೌಡರಿಗೆ ಹೋಲಿಕೆ ಮಾಡಿರುವುದು ಹೆಮ್ಮೆಯ ವಿಚಾರ: ಸಿ.ಟಿ. ರವಿ
ಕೇಂದ್ರ ಸಚಿವ ನಿತಿನ್ ಗಡ್ಕರಿ ಕಚೇರಿಗೆ ಮತ್ತೆ ಜೀವ ಬೆದರಿಕೆ ಕರೆ
ಬೆಳಗಾವಿ: ಕೇಂದ್ರ ಹೆದ್ದಾರಿ ಖಾತೆ ಸಚಿವ ನಿತಿನ್ ಗಡ್ಕರಿ (Nitin Gadkari) ಅವರಿಗೆ ಮತ್ತೊಮ್ಮೆ ಜೀವ ಬೆದರಿಕೆ ಕರೆ ಮಾಡಲಾಗಿದೆ. ಮಹಾರಾಷ್ಟ್ರದ ನಾಗ್ಪುರದಲ್ಲಿರುವ ನಿತಿನ್ ಗಡ್ಕರಿ ಅವರ ಜನಸಂಪರ್ಕ ಕಚೇರಿಯ ಲ್ಯಾಂಡ್‌ಲೈನ್‌ಗೆ ಕರೆ ಮಾಡಿದ ವ್ಯಕ್ತಿ 10 ಕೋಟಿ ರೂ.ಗೆ ಬೇಡಿಕೆ ಇಟ್ಟಿದ್ದಾನೆ ಎಂದು ಹೇಳಲಾಗಿದೆ.
ಕಳೆದ ಜನವರಿ ತಿಂಗಳಲ್ಲಿ ಬೆಳಗಾವಿ ಹಿಂಡಲಗಾ ಜೈಲಿನಿಂದ ಜಯೇಶ್ ಕಾಂತಾ ಎಂಬಾತನ ಹೆಸರಿನಲ್ಲಿ ನಾಗಪುರದ ಕಚೇರಿಗೆ ಬೆದರಿಕೆ ಕರೆ ಮಾಡಲಾಗಿತ್ತು. ಇದೀಗ ಅದೇ ಜಯೇಶ್ ಹೆಸರಿನಲ್ಲಿ ಹಿಂಡಲಗಾ ಜೈಲಿನಿಂದಲೇ ಕರೆ ಮಾಡಲಾಗಿದೆ ಎಂದು ಹೇಳಲಾಗಿದೆ.
ಜಯೇಶ್ ಕಾಂತಾ ಅಲಿಯಾಸ್ ಜಯೇಶ್ ಪೂಜಾರಿ ಹೆಸರು ಬಳಸಿ ಕರೆ ಮಾಡಲಾಗಿದೆ. 10 ಕೋಟಿ ರೂಪಾಯಿ ನೀಡುವಂತೆ ಆಗಂತುಕ ಬೇಡಿಕೆ ಇಟ್ಟಿದ್ದಾನೆ. ಆದರೆ, ನಿಜಕ್ಕೂ ಕರೆ ಮಾಡಿದ್ದು ಜಯೇಶ್ ಪೂಜಾರಿಯಾ ಎನ್ನುವ ಬಗ್ಗೆ ತನಿಖೆ ಆರಂಭಗೊಂಡಿದೆ. ಈ ನಡುವೆ, ನಾಗ್ಪುರದ ನಿತಿನ್ ಗಡ್ಕರಿ ಕಚೇರಿ ಬಳಿ ಭದ್ರತೆ ಹೆಚ್ಚಳ ಮಾಡಲಾಗಿದ್ದು, ಮಹಾರಾಷ್ಟ್ರ ಎಟಿಎಸ್ ಅಧಿಕಾರಿಗಳಿಂದ ತನಿಖೆ ನಡೆದಿದೆ.
ಜನವರಿ 14ರಂದು ಏನಾಗಿತ್ತು? ಯಾರು ಈ ಜಯೇಶ್ ಕಾಂತಾ?
ಕಳೆದ ಜನವರಿ 14ರಂದು ನಾಗಪುರದ ನಿತಿನ್ ಗಡ್ಕರಿ ಅವರ ಕಚೇರಿಗೆ ರಾತ್ರಿ 11.25, 11.32 ಮತ್ತು 12.32ಕ್ಕೆ ಕರೆ ಮಾಡಿ ಬೆದರಿಕೆ ಹಾಕಲಾಗಿತ್ತು. ಇದು ಹಿಂಡಲಗಾ ಜೈಲಿನಿಂದ ಬಂದ ಕರೆ ಇದೆಂದು ಪ್ರಾಥಮಿಕ ತನಿಖೆಯಲ್ಲೇ ಬಯಲಾಗಿತ್ತು. ಅಂದು ಕರೆ ಮಾಡಿದವನು ಜೈಲಿನಲ್ಲಿರುವ ಹಿಂಡಲಗಾ ಜೈಲಿನಲ್ಲಿರುವ ಕೈದಿಯಾಗಿರುವ ಗ್ಯಾಂಗ್ ಸ್ಟರ್ ಜಯೇಶ್ ಕಾಂತಾ ಅಲಿಯಾಸ್ ಜಯೇಶ್ ಪೂಜಾರಿ ಎಂದು ಪತ್ತೆ ಹಚ್ಚಲಾಗಿತ್ತು. ಆವತ್ತು ಜಯೇಶ್ ಪೂಜಾರಿಯ ಕೋಣೆಯನ್ನು ಶೋಧಿಸಿದಾಗ ಒಂದು ಡೈರಿ ಪತ್ತೆಯಾಗಿತ್ತು.
ಇದನ್ನೂ ಓದಿ: Karnataka Elections : ಗದಗ ಜಿಲ್ಲೆಯಲ್ಲಿ ಬಂಗಾರ, ಹಣದ ಬೇಟೆ; ಚುನಾವಣೆಗೆ ಮುನ್ನವೇ ನಡೀತಿದೆ ಭಾರಿ ವ್ಯವಹಾರ
ಜಯೇಶ್ ಕಾಂತಾನನ್ನು ಅಂದು ನಾಗಪುರ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿ ಮರಳಿ ಹಿಂಡಲಗಾ ಜೈಲಿಗೆ ಕಳುಹಿಸಿದ್ದರು. ಈಗ ಆತ ಮತ್ತೆ ಕರೆ ಮಾಡಿದ್ದಾನೆಯೇ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ಪದೇ ಪದೆ ಗಡ್ಕರಿ ಅವರಿಗೆ ಕರೆ ಮಾಡುವ ಉದ್ದೇಶದ ಬಗ್ಗೆಯೂ ತನಿಖೆ ಆಗಬೇಕಾಗಿದೆ. ಮಹಾರಾಷ್ಟ್ರ ಎಟಿಎಸ್ ಅಧಿಕಾರಿಗಳು ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡಿದ್ದಾರೆ.