ಬೆಂಗಳೂರು: ಬ್ಯಾಂಕಾಕ್ ಪ್ರವಾಸದ ಸಂದರ್ಭದಲ್ಲಿ ಹಠಾತ್ ಹೃದಯಸ್ತಂಭನದಿಂದ (Cardiac arrest) ಮೃತಪಟ್ಟ ಸ್ಪಂದನಾ ವಿಜಯ ರಾಘವೇಂದ್ರ (Spandana vijay Raghavendra) ಅವರ ಪಾರ್ಥಿವ ಶರೀರವನ್ನು (Dead body) ಮಂಗಳವಾರ ಏರ್‌ಲಿಫ್ಟ್ (Dead body airlift) ಮಾಡುವ ಸಾಧ್ಯತೆಗಳಿದ್ದು, ಬುಧವಾರ ಅಂತ್ಯಕ್ರಿಯೆ ನಡೆಯುವ ನಿರೀಕ್ಷೆ ಇದೆ.
ತಮ್ಮ ಕುಟುಂಬದ ಸೋದರ ಸಂಬಂಧಿಗಳ ಜತೆ ಎಂಟು ದಿನಗಳ ಹಿಂದೆ ಬ್ಯಾಂಕಾಕ್‌ಗೆ ತೆರಳಿದ್ದ ಸ್ಪಂದನಾ ಅವರು ಭಾನುವಾರ ಸಂಜೆ ಶಾಪಿಂಗ್ ಮುಗಿಸಿದ ಬಳಿಕ ಲೋ ಬಿಪಿಗೆ ಒಳಗಾಗಿ ಕುಸಿದು ಬಿದ್ದಿದ್ದರು. ಈ ಮಾಹಿತಿಯನ್ನು ಪಡೆದ ನಟ ವಿಜಯ ರಾಘವೇಂದ್ರ ಅವರು ತುರ್ತಾಗಿ ಬ್ಯಾಂಕಾಕ್‌ಗೆ ತೆರಳಿದ್ದರು. ಅವರು ತಲುಪುವ ಹೊತ್ತಿಗೆ ಸ್ಪಂದನಾ ಪ್ರಾಣ ಪಕ್ಷಿ ಹಾರಿ ಹೋಗಿತ್ತು. ಇತ್ತ ಸ್ಪಂದನಾ ಅವರ ಸಹೋದರ ರಕ್ಷಿತ್ ಶಿವರಾಂ ಕೂಡಾ ಬ್ಯಾಂಕಾಕ್‌ಗೆ ಹೋಗಿದ್ದಾರೆ.
ಈ ನಡುವೆ ಅವರನ್ನು ಬ್ಯಾಂಕಾಕ್‌ನ ಕೆಸಿಎಂಎಚ್ ಹಾಸ್ಪಿಟಲ್ (king chulalongkoran hospital)ಗೆ ಕರೆದುಕೊಂಡು ಹೋಗಲಾಗಿದ್ದು, ಅಲ್ಲಿ ಸಾವನ್ನು ಘೋಷಿಸಲಾಗಿದೆ. ಇದೀಗ ಅವರ ಪಾರ್ಥಿವ ಶರೀರದ ಮರಣೋತ್ತರ ಪರೀಕ್ಷೆ ಮುಕ್ತಾಯಗೊಂಡಿದೆ.
ಈಗಾಗಲೇ ಬ್ಯಾಂಕಾಕ್ ಪೊಲೀಸರು ಸ್ಥಳೀಯವಾಗಿ ದೂರು ದಾಖಲಿಸಿಕೊಂಡು ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ. ಸಾವಿಗೆ ನಿಖರ ಕಾರಣ ಪಡೆದುಕೊಳ್ಳುತ್ತಿರುವ ಬ್ಯಾಂಕಾಕ್ ಪೊಲೀಸರು ಎಲ್ಲ ಮಾಹಿತಿ ಸಂಗ್ರಹಿಸಿದ ಬಳಿಕ ಭಾರತಕ್ಕೆ ಮೃತದೇಹ ರವಾನೆ ಮಾಡಲು ಅನುಮತಿ ನೀಡಲಿದ್ದಾರೆ. ಅಲ್ಲಿನ ಭಾಷೆಯಲ್ಲಿರುವ ದಾಖಲೆಗಳನ್ನು ತರ್ಜುಮೆ ಮಾಡಿ ಬಳಿಕ ಹೊರಡಬೇಕಾಗಿದೆ.
ವಿಶೇಷ ವಿಮಾನದಲ್ಲಿ ಏರ್‌ಲಿಫ್ಟ್ ಸಾಧ್ಯತೆ
ಮೃತದೇಹವನ್ನು ಬೆಂಗಳೂರಿಗೆ ತರಲು ಕುಟುಂಬಿಕರು ಸಿದ್ಧತೆಗಳನ್ನು ನಡೆಸಿದ್ದಾರೆ. ಅಲ್ಲಿನ ಭಾರತೀಯ ರಾಯಭಾರ ಕಚೇರಿಯ ಸಹಾಯವನ್ನು ಪಡೆದುಕೊಳ್ಳಲಾಗುತ್ತಿದೆ. ಮೃತದೇಹವನ್ನು ವಿಶೇಷ ಕಾರ್ಗೊ ವಿಮಾನದಲ್ಲಿ ಬೆಂಗಳೂರಿಗೆ ತರುವ ಸಾಧ್ಯತೆಗಳಿವೆ. ಮಂಗಳವಾರ ಬೆಳಗ್ಗೆ ಇಲ್ಲವೇ ಸಂಜೆಯ ಹೊತ್ತಿಗೆ ಮೃತದೇಹ ಬೆಂಗಳೂರು ತಲುಪಲಿದೆ.
ಎಲ್ಲಿ ಅಂತ್ಯಸಂಸ್ಕಾರ?
ಪಾರ್ಥಿವ ಶರೀರವನ್ನು ಬೆಂಗಳೂರಿಗೆ ತಂದು ಇಲ್ಲಿ ಅಂತಿಮ ದರ್ಶನಕ್ಕೆ ಇಡಲಾಗುತ್ತದೆ. ಬಹುಶಃ ಮಲ್ಲೇಶ್ವರದಲ್ಲಿರುವ ಸ್ಪಂದನಾ ಅವರ ತಂದೆ, ನಿವೃತ್ತ ಪೊಲೀಸ್ ಅಧಿಕಾರಿ ಬಿ.ಕೆ. ಶಿವರಾಂ ಅವರ ಮನೆಯಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡುವ ಸಾಧ್ಯತೆ ಇದೆ. ಅಂತಿಮ ಸಂಸ್ಕಾರಗಳು ಬೆಂಗಳೂರಿನಲ್ಲೇ ನಡೆಯುತ್ತವೆಯೇ ಅಥವಾ ಬೆಳ್ತಂಗಡಿಯಲ್ಲಿರುವ ಕುಟುಂಬದ ಜಾಗದಲ್ಲಿ ನಡೆಯಲಿದೆಯೇ ಎನ್ನುವುದು ವಿಜಯ ರಾಘವೇಂದ್ರ ಅವರು ನಿರ್ಧಾರವನ್ನು ಅವಲಂಬಿಸಿದೆ ಎನ್ನಲಾಗಿದೆ.
ಇದನ್ನೂ ಓದಿ: Spandana Vijay Raghavendra : ಯುವಕರೇ ಹೃದಯ ಜೋಪಾನ; ಆಗಾಗ ತಪಾಸಣೆಗೆ ಡಾ. ಸಿ.ಎನ್ ಮಂಜುನಾಥ್ ಸಲಹೆ
ಎಂಟು ದಿನದ ಹಿಂದೆ ತೆರಳಿದ್ದರು
ಸ್ಪಂದನಾ ಅವರು ಎಂಟು ದಿನದ ಹಿಂದೆ ತಮ್ಮ ಸೋದರ ಸಂಬಂಧಿಗಳ ಜತೆಗೆ ಬ್ಯಾಂಕಾಕ್‌ಗೆ ತೆರಳಿದ್ದರು. ಅವರ ಪುತ್ರ ಶೌರ್ಯ ರಾಘವೇಂದ್ರ ಮತ್ತು ವಿಜಯ ರಾಘವೇಂದ್ರ ಅವರು ಮನೆಯಲ್ಲಿದ್ದರು. ಕೆಲವು ದಿನ ಬಿಟ್ಟು ಬರುತ್ತೇನೆ ಎಂದು ಅಕ್ಕ ಹೇಳಿ ಹೋಗಿದ್ದರು ಎಂದು ಮನೆ ಕೆಲಸದ ಮಹಿಳೆ ತಿಳಿಸಿದ್ದಾರೆ. ಶೌರ್ಯ ರಾಘವೇಂದ್ರ ಅವರು ನಾಗಾಭರಣ ಅವರ ಬಳಿ ನಾಟಕ ತರಬೇತಿಗೆ ಹೋಗಿದ್ದರು. ವಿಜಯ ರಾಘವೇಂದ್ರ ಅವರು ಸಂಜೆ 5.30ಕ್ಕೆ ಶೌರ್ಯ ಅವರನ್ನು ಕರೆದುಕೊಂಡು ಮನೆಗೆ ಹೋಗಿದ್ದರು. ಆ ಬಳಿಕ ರಾತ್ರಿಯ ಹೊತ್ತು ಸ್ಪಂದನಾ ಅವರು ಕುಸಿದು ಬಿದ್ದಿರುವ ಸುದ್ದಿ ವಿಜಯ ರಾಘವೇಂದ್ರ ಅವರಿಗೆ ತಿಳಿದಿದ್ದು, ಕೂಡಲೇ ಅವರು ಬ್ಯಾಂಕಾಕ್‌ಗೆ ಧಾವಿಸಿದ್ದರು.