Site icon Vistara News

Legislative Assembly: ಬೇರ್ಪಡಿಸುವುದು ನನ್ನ ಕೆಲಸವಲ್ಲ: ʼಪ್ರಗತಿಪರʼರಿಗೆ ತಿರುಗೇಟು ನೀಡಿದ ಸ್ಪೀಕರ್‌‌ ಯು.ಟಿ. ಖಾದರ್

New MLAs Yoga UT Khader Gururaj gantihole kodgi

#image_title

ಬೆಂಗಳೂರು: ನೂತನ ಶಾಸಕರಿಗೆ (Legislative Assembly Members) ತರಬೇತಿ ನೀಡುವ ಕಾರ್ಯಕ್ರಮದಲ್ಲಿ ಗಣ್ಯರ ಆಹ್ವಾನಕ್ಕೆ ವಿರೋಧ ವ್ಯಕ್ತಪಡಿಸಿದ್ದ ʼಪ್ರಗತಿಪರʼ ಸಾಹಿತಿ, ಲೇಖಕರ ಗುಂಪಿಗೆ ಸ್ಪೀಕರ್‌ ಯು.ಟಿ. ಖಾದರ್‌ ತಿರುಗೇಟು ನೀಡಿದ್ದಾರೆ. ನೆಲಮಂಗಲ ಬಳಿಯಿರುವ ಕ್ಷೇಮವನದಲ್ಲಿ 70 ನೂತನ ಶಾಸಕರಿಗೆ ತರಬೇತಿಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಖಾದರ್‌ ಮಾತನಾಡಿದರು.

ರಾಜಕೀಯದಲ್ಲಿ ಟೀಕೆ ಟಿಪ್ಪಣಿಗಳು ಸಹಜ. ಹಾಗೆಯೇ ಯಾವುದೇ ಕಾರ್ಯಕ್ರಮ ಮಾಡುವಾಗ ಟೀಕೆ ಟಿಪ್ಪಣಿಗಳು ಸಹಜ. ಟೀಕೆ ಟಿಪ್ಪಣಿಗಳು ಪ್ರಜಾಪ್ರಭುತ್ವದ ಸೌಂದರ್ಯ. ಯಾವುದೇ ಸಿದ್ದಾಂತ ಇರಲಿ ಎಲ್ಲರೂ ಜೋಡಿಸುವ ಕೆಲಸ ನನ್ನದು. ಬೇರ್ಪಡಿಸುವ ಕೆಲಸ ನನ್ನದಲ್ಲ ಎಂದರು.

ಕಾರ್ಯಕ್ರಮಕ್ಕೆ ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ, ಆರ್ಟ್‌ ಆಫ್‌ ಲಿವಿಂಗ್‌ನ ಶ್ರೀ ಶ್ರೀ ರವಿಶಂಕರ್‌ ಗುರೂಜಿ, ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಆಶಾ ದೀದಿ, ಜಮಾತೆ ಇಸ್ಲಾಮ್‌ ಐ ಹಿಂದ್‌ನ ಕರ್ನಾಟಕ ಕಾರ್ಯದರ್ಶಿ ಮೊಹಮ್ಮದ್‌ ಕುಂಞ, ಖ್ಯಾತ ತರಬೇತುದಾರ ಗುರುರಾಜ ಕರಜಗಿ ಅವರನ್ನು ಆಹ್ವಾನಿಸಲಾಗುತ್ತಿದೆ ಎಂದು ಈ ಹಿಂದೆ ಯು.ಟಿ. ಖಾದರ್‌ ಸುದ್ದಿಗೋಷ್ಠಿಯಲ್ಲಿ ಹೇಳಿದ್ದರು.

ಇದನ್ನೂ ಓದಿ: MLA training: ಇಂದಿನಿಂದ ನೂತನ ಶಾಸಕರಿಗೆ ತರಬೇತಿ ಶಿಬಿರ; ಕರಜಗಿ, ರವಿಶಂಕರ್‌ ಗುರೂಜಿಗೆ ಖೊಕ್

ಸಾಹಿತಿಗಳ ಗುಂಪೊಂದು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿತ್ತು. ಧಾರ್ಮಿಕ ವ್ಯಕ್ತಿಗಳಿಂದ ಶಾಸಕರಿಗೆ ಬೋಧನೆ ಮಾಡಿಸುವುದು ಪ್ರಜಾಪ್ರಭುತ್ವಕ್ಕೆ ವಿರುದ್ಧವಾದದ್ದು ಎಂದು ಸಿಎಂ ಸಿದ್ದರಾಮಯ್ಯ ಹಾಗೂ ಸ್ಪೀಕರ್‌ ಯು.ಟಿ. ಖಾದರ್‌ ಅವರಿಗೆ ಪತ್ರ ಬರೆದಿತ್ತು. ಕಾಂಗ್ರೆಸ್‌ ವಕ್ತಾರ ರಮೇಶ್‌ ಬಾಬು ಸಹ ಇದನ್ನು ಆಕ್ಷೇಪಿಸಿದ್ದರು. ಮುಖ್ಯವಾಗಿ, ಕಾಂಗ್ರೆಸ್‌ನ ಗ್ಯಾರಂಟಿ ಯೋಜನೆಗಳನ್ನು ಗುರುರಾಜ ಕರ್ಜಗಿ ಅವರು ಟೀಕಿಸಿದ್ದಾರೆ ಎಂದು ರಮೇಶ್‌ ಬಾಬು ಹೇಳಿದ್ದರು.

ಈ ಎಲ್ಲ ಟೀಕೆಗಳ ನಂತರವೂ ಕಾರ್ಯಕ್ರಮದಲ್ಲಿ ಡಿ. ವೀರೇಂದ್ರ ಹೆಗ್ಗಡೆ, ಬ್ರಹ್ಮ ಕುಮಾರಿ ಸಂಸ್ಥೆಯ ಪ್ರತಿನಿಧಿಗಳು ಹಾಗೂ ಮೊಹಮ್ಮದ್‌ ಕುಂಞ ಭಾಗವಹಿಸುತ್ತಿದ್ದಾರೆ ಎಂದು ಆಹ್ವಾನ ಪತ್ರಿಕೆಯಲ್ಲಿ ತಿಳಿಸಲಾಗಿದೆ. ಟೀಕಾಕಾರರಿಗೆ ಉತ್ತರ ನೀಡಿದ ನಂತರ ಮಾತು ಮುಂದುವರಿಸಿದ ಖಾದರ್‌, ರಾಜಕೀಯ ಸೇರಲು ಯಾವುದೇ ಕಾಲೇಜು ಇಲ್ಲ. ಈ ನಿಟ್ಟಿನಲ್ಲಿ ನಾನು ಸಭಾಪತಿ ಹೊರಟ್ಟಿ ಚರ್ಚೆ ಮಾಡಿದ್ದೇವೆ. ರಾಜ್ಯದಲ್ಲಿ ಒಂದು ವರ್ಷದ ಟ್ರೈನಿಂಗ್ ಮಾಡಬೇಕು. ಡಿಗ್ರಿ ಆದಮೇಲೆ ಟ್ರೈನಿಂಗ್ ನೀಡಲು ಚರ್ಚೆ ಮಾಡಿದ್ದೇವೆ. ಯುವಕರಿಗೆ ರಾಜಕೀಯ ತಿಳಿದುಕೊಳ್ಳಲು ಅವಕಾಶ ಆಗಲಿದೆ. ಮಾಧ್ಯಮ ಬಿಟ್ಟು ರಾಜಕೀಯ ಇಲ್ಲ, ರಾಜಕೀಯ ಬಿಟ್ಟು ಮಾಧ್ಯಮ ಇಲ್ಲ. ಮಾಧ್ಯಮಗಳ ಜೊತೆ ಸೌಹಾರ್ದ ಸಂಬಂಧ ಇರಬೇಕು ಎಂದರು.

ಎಲ್ಲರೂ ಶಾಸಕರನ್ನು ಅಭಿನಂದನೆಗಳು. ಮೊದಲ ಬಾರಿ ಶಾಸಕರಾಗಿದ್ದೀರಿ, ನೀವೇ ನಿಮ್ಮ ಕ್ಷೇತ್ರದ ಶಾಶ್ವತ ಶಾಸಕರು ಆಗಬೇಕು. ಅಂತಹ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು. ಪ್ರಶ್ನೆ ಹೇಗೆ ಕೇಳಬೇಕು, ಯಾವ ರೀತಿ ನಡೆದುಕೊಳ್ಳಬೇಕು ಎಂಬುದಕ್ಕೆ ತರಬೇತಿ ನೀಡಲಾಗುತ್ತದೆ. ನಾನು ಮೊದಲ ಬಾರಿಗೆ ಉಪ ಚುನಾವಣೆಯಲ್ಲಿ ಗೆದ್ದಾಗ ನನಗೆ ಏನೂ ಗೊತ್ತಿರಲಿಲ್ಲ. ಧ್ರುವ ನಾರಾಯಣ್ ಅವರಿಂದ ಕೇಳಿ ಕಲಿತುಕೊಂಡೆ. ಕ್ಷೇತ್ರದಲ್ಲಿ ಹೇಗಿರಬೇಕು ಎಂಬ ವಿಶ್ವಾಸ ನಿಮ್ಮಲ್ಲಿದೆ. ಆದರೆ ಸದನದಲ್ಲಿ ಹೇಗೆ ನಡೆದುಕೊಳ್ಳಬೇಕು ಎಂದು ತರಬೇತಿ ನಡೆಯುತ್ತಿದೆ.

ಇದನ್ನೂ ಓದಿ: Legislative Assembly: ಕಾಂಗ್ರೆಸ್‌ ಸರ್ಕಾರ ಬಂದ ನಂತರ ಅಣಬೆಗಳು ಹುಟ್ಟಿಕೊಳ್ಳುತ್ತಿವೆ: ಸಾಹಿತಿಗಳ ಕುರಿತು ತೇಜಸ್ವಿ ಸೂರ್ಯ ಟೀಕೆ

ಹೊಸದಾಗಿ ಬಂದವರಿಗೆ ರಾಜಕೀಯ ಚೆನ್ನಾಗಿ ಗೊತ್ತಿದೆ. ರಾಜಕೀಯ ಗಣಿತ ಅಲ್ಲ. 2+2 ನಾಲ್ಕು ಆಗುವುದಿಲ್ಲ. ರಾಜಕೀಯದಲ್ಲಿ 22 ಆಗಬಹುದು, 222 ಆಗಬಹುದು. ಅದನ್ನು ಮೈನಸ್ ಮಾಡಿಕೊಳ್ಳದೆ ಕೆಲಸ ಮಾಡಬೇಕು. ಕೆಲವರು ನಾನೆ ಶಾಶ್ವತ ಎಂದು ಭಾವಿಸುತ್ತಾರೆ. ರಾಜಕೀಯ ಎನ್ನುವುದು ಸರ್ಕಸ್ ಕಂಪನಿ. ಸರ್ಕಸ್ ನಲ್ಲಿ ಹುಲಿ, ಆನೆ‌, ಎಲ್ಲಾ ಪ್ರಾಣಿಗಳು ಇರುತ್ತವೆ. ಭಯ ಪಟ್ಟರೆ ಆಗಲ್ಲ, ಸರ್ಕಸ್‌ನಲ್ಲಿ ಬರುವ ರಿಂಗ್ ಮಾಸ್ಟರ್ ಎಲ್ಲರನ್ನೂ ತೆಗೆದುಕೊಂಡು ಹೋಗಬೇಕು. ಏನೇ ಬಂದರೂ ತಾಳ್ಮೆಯಿಂದ ಕೆಲಸ ಮಾಡಬೇಕು. ಎಲ್ಲಾ ಶಾಸಕರ ಒಗ್ಗಟ್ಟೇ ರಾಜ್ಯದ ಶಕ್ತಿ ಎಂದರು.

ಸನ್ಮಾನ ನಿರಾಕರಿಸಿದ ಸಿಎಂ
ಕಾರ್ಯಕ್ರಮದ ಆಯೋಜಕರಾದ ಸ್ಪೀಕರ್‌ ಯು.ಟಿ. ಖಾದರ್‌ ಹಾಗೂ ಎಸ್‌ಡಿಎಂ ಸಂಸ್ಥೆಯ ಉಪಾಧ್ಯಕ್ಷ ಸುರೇಂದ್ರ ಕುಮಾರ್‌ ಅವಅವರಿಂದ ಸನ್ಮಾನ ಸ್ವೀಕರಿಸಲು ಸಿಎಂ ಸಿದ್ದರಾಮಯ್ಯ ನಿರಾಕರಿಸಿದರು.

Exit mobile version