Site icon Vistara News

Speaker UT Khader : ಬಿಜೆಪಿ ದೂರಿಗೆ ಮುನ್ನವೇ ಖಾದರ್‌ ಅಲರ್ಟ್:‌ ರಾಜ್ಯಪಾಲರಿಗೆ ಅಮಾನತು ವರದಿ ಸಲ್ಲಿಕೆ

Speaker UT Khader meets Governor

ಬೆಂಗಳೂರು: ರಾಜ್ಯ ವಿಧಾನಸಭೆಯಲ್ಲಿ (Legislative assembly) ಸ್ಪೀಕರ್‌ ಸ್ಥಾನದಲ್ಲಿದ್ದ (Speaker chair) ಉಪಸ್ಪೀಕರ್‌ ರುದ್ರಪ್ಪ ಲಮಾಣಿ (Rudrappa Lamani) ಅವರ ಮೇಲೆ ಹರಿದ ಪೇಪರ್‌ ಪೀಸ್‌ಗಳನ್ನು ಎಸೆದುದನ್ನು ಗಂಭೀರವಾಗಿ ಪರಿಗಣಿಸಿ 10 ಬಿಜೆಪಿ ಶಾಸಕರನ್ನು ಅಮಾನತುಗೊಳಿಸಿದ (BJP MLAs suspension) ಪ್ರಕರಣ ಹೊಸ ಹೊಸ ತಿರುವುಗಳನ್ನು ಪಡೆದುಕೊಳ್ಳುತ್ತಿದೆ.

ಸ್ಪೀಕರ್‌ ಯು.ಟಿ. ಖಾದರ್‌ (Speaker UT Khader) ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರ ಸನ್ನೆಯ ಮೇರೆಗೆ ಈ ಅಮಾನತು ಆದೇಶ ಹೊರಡಿಸಿದ್ದಾರೆ ಎಂದು ಜೆಡಿಎಸ್‌ ಆರೋಪಿಸಿದ್ದರೆ, ಬಿಜೆಪಿ ಈ ವಿದ್ಯಮಾನದ ವಿರುದ್ಧ ಪ್ರತಿಭಟನೆ ನಡೆಸಿದೆ. ಗುರುವಾರ ಮುಂಜಾನೆ ವಿಧಾನಸೌಧದ ಎದುರಿನ ಗಾಂಧಿ ಪ್ರತಿಮೆಯ ಮುಂಭಾಗದಲ್ಲಿ ಬಿಜೆಪಿ ಪ್ರತಿಭಟನೆ ನಡೆಸಿ ಬಳಿಕ ರಾಜ್ಯಪಾಲರಿಗೆ ದೂರು ನೀಡಲು ನಿರ್ಧರಿಸಿತ್ತು. ಈ ನಡುವೆ, ಸ್ಪೀಕರ್‌ ಖಾದರ್‌ ಅವರು ಬಿಜೆಪಿ ನಾಯಕರು ದೂರು ನೀಡುವ ಮೊದಲೇ ರಾಜ್ಯಪಾಲ ಥಾವರ್‌ಚಂದ್‌ ಗೆಹ್ಲೋಟ್‌ ಅವರನ್ನು ಭೇಟಿಯಾಗಿ ಘಟನೆಯ ಬಗ್ಗ ವಿವರಣೆ ನೀಡಿದ್ದಾರೆ. ಗುರುವಾರ ಮುಂಜಾನೆಯೇ ಅವರು ರಾಜ್ಯಪಾಲರನ್ನು ಭೇಟಿಯಾದರು. ಅವರ ಜತೆಗೆ ಉಪಸ್ಪೀಕರ್‌ ರುದ್ರಪ್ಪ ಲಮಾಣಿ ಮತ್ತು ವಿಧಾನಸಭಾ ಸಚಿವಾಲಯದ ಕಾರ್ಯದರ್ಶಿ ಜತೆಗಿದ್ದರು.

ರಾಜ್ಯಪಾಲರಿಗೆ ಸ್ಪೀಕರ್‌ ನೀಡಿದ ವಿವರಣೆ ಏನು?

ಬುಧವಾರ ಸದನದಲ್ಲಿ ನಡೆದ ಘಟನಾವಳಿಗಳ ವಿಡಿಯೋ ಸಿಡಿ ಸಮೇತ ರಾಜ್ಯಪಾಲರ ಬಳಿಗೆ ತೆರಳಿದ ಸ್ಪೀಕರ್‌ ಮತ್ತು ಉಪ ಸ್ಪೀಕರ್‌ ರಾಜ್ಯಪಾಲರಿಗೆ ಕೊಟ್ಟ ವಿವರಣೆ ಏನು ಎನ್ನುವ ವಿವರ ವಿಸ್ತಾರ ನ್ಯೂಸ್‌ಗೆ ಲಭ್ಯವಾಗಿದೆ.

  1. ಬುಧವಾರ ಇಡೀ ದಿನದ ಕಲಾಪಗಳ ಬಗ್ಗೆ ರಾಜ್ಯಪಾಲರಿಗೆ ಸ್ಪೀಕರ್‌ ಖಾದರ್‌ ವಿವರಣೆ ನೀಡಿದರು.
  2. ಶಿಷ್ಟಾಚಾರ ನಿಯಮದಂತೆ ವಿವಿಧ ರಾಜ್ಯಗಳ ಸಿಎಂಗಳಿಗೆ ಸೇರಿದಂತೆ ರಾಷ್ಟ್ರೀಯ ನಾಯಕರಿಗೆ ರಾಜ್ಯ ಸರ್ಕಾರದಿಂದ ಗೌರವ ಕೊಡಲಾಗಿದೆ ಎಂದು ರಾಜ್ಯಪಾಲರಿಗೆ ವಿವರಿಸಿದರು.
  3. 2019ರಲ್ಲಿ ಸಮ್ಮಿಶ್ರ ಸರ್ಕಾರ ರಚನೆ ಸಮಯದಲ್ಲಿ ಡ್ಯಾನಿಸ್ ಆಲಿ ಬಂದಾಗಲೂ ಸರ್ಕಾರದ ಅಧಿಕಾರಿಗಳು ಶಿಷ್ಟಾಚಾರ ನಿಯಮ ಪಾಲಿಸಿದ್ದಾರೆ. 2016 ಬಿಜೆಪಿ ರಾಷ್ಟ್ರೀಯ ಕಾರ್ಯಕಾರಣಿ ಸಭೆ ನಡೆದಾಗಲೂ ಬಿಜೆಪಿ ನಾಯಕರಿಗೂ ಶಿಷ್ಟಾಚಾರ ಪಾಲಿಸಿದ್ದಾರೆ. 2016ರಲ್ಲಿ ಆಗಿನ ಸಿಎಂ ಸಿದ್ದರಾಮಯ್ಯ ಸರ್ಕಾರಕ್ಕೆ ಮಾಜಿ ಸಚಿವ ಆರ್ ಆಶೋಕ್, ಅನಂತಕುಮಾರ್ ಮನವಿ ಪತ್ರ ಸಹ ಸಲ್ಲಿಸಿದ್ದರು. ಈಗಲೂ ಆಗಿರುವುದು ಅಂತಹುದೇ ಶಿಷ್ಟಾಚಾರ ಎಂದು ಸ್ಪೀಕರ್‌ ಖಾದರ್‌ ವಿವರಣೆ ನೀಡಿದ್ದಾರೆ.
  4. ಈ ವಿಚಾರವನ್ನು ಸದನದಲ್ಲಿ ಚರ್ಚೆ ನಡೆಸಲು ಬಿಜೆಪಿ ಸದಸ್ಯರು ಅವಕಾಶ ಕೇಳಿದರು. ತಕ್ಷಣ ಅವರಿಗೆ ಸಮಯ ನೀಡಿದ್ದೇನೆ. ಆದರೆ, ವಿಷಯದ ವಿಚಾರ ಬಿಟ್ಟು ಗದ್ದಲ ಮಾಡಿದಾಗ ನನ್ನ ಕಚೇರಿಗೆ ಕರೆಸಿ ಮಾತುಕತೆ ನಡೆಸಿದ್ದೇನೆ. ಅಲ್ಲಿಯೂ ಬಿಜೆಪಿಯವರು ಒಪ್ಪದ ಕಾರಣ ಸದನವನ್ನು ಮುಂದುವರಿಸಿದೆವು.
  5. ಬಿಜೆಪಿ ಸದಸ್ಯರು ಸದನದ ಬಾವಿಗಿಳಿದು ಧರಣಿ ಮಾಡಿದಾಗ ಧರಣಿ ವಾಪಸು ಪಡೆಯುವಂತೆ ಮನವಿ ಮಾಡಿದೆ. ಬಜೆಟ್ ಮೇಲೆ ಚರ್ಚೆಗೆ ಹೆಚ್ಚು ಜನ ಭಾಗವಹಿಸಲು ಅವಕಾಶ ಕೇಳಿದಾಗ ಮಧ್ಯಾಹ್ನ ಊಟಕ್ಕೆ ಬಿಟ್ರೆ ಸಮಯ ವ್ಯರ್ಥ ಆಗುತ್ತದೆ ಎಂಬ ಕಾರಣಕ್ಕೆ ಸದನ ಮುಂದುವರಿಸಿದೆ.
  6. ಅದರ ನಡುವೆ ಡೆಪ್ಯುಟಿ ಸ್ಪೀಕರ್ ಅವರನ್ನು ಕೂರಿ ಚೇರ್ ಲ್ಲಿ ಕೂರಿಸಿ ನಾನು ಕೊಠಡಿಗೆ ಹೋದೆ. ಆಗ ಗದ್ದಲ ಜಾಸ್ತಿ ಮಾಡಿ ಡೆಪ್ಯುಟಿ ಸ್ಪೀಕರ್ ಮುಖದ ಮೇಲೆ ಕಾಗದ ಪತ್ರ ಎಸೆದಿದ್ದಾರೆ. ಡೆಪ್ಯುಟಿ ಸ್ಪೀಕರ್ ಮನವಿಗೂ ಒಪ್ಪದೇ ಪೇಪರ್ ಎಸದಿದ್ದಾರೆ.
  7. ಕರ್ನಾಟಕ ರಾಜಕಾರಣ ಮತ್ತು ವಿಧಾನ ಸಭೆಗೆ ತನ್ನದೇ ಆದ ಘನತೆ ಇದೆ. ಹೀಗಾಗಿ ನನ್ನ ಹಕ್ಕು ಚಲಾಯಿಸಿ ಗದ್ದಲಕ್ಕೆ ತಿರುಗಿಸಿ ಪೇಪರ್ ಎಸೆದ ಹತ್ತು ಶಾಸಕರನ್ನು ಅಮಾನತು ಮಾಡಿದ್ದೇನೆ.
  8. ಸದನಕ್ಕೆ ಅಗೌರವ ತೋರಿಸಿದರೆ ಸಹಿಸಲು ಸಾಧ್ಯವಿಲ್ಲ ಅಂತ ಖಡಕ್ ನಿರ್ಧಾರ ತೆಗೆದುಕೊಂಡಿದ್ದೇನೆ.

ಹೀಗೆ ಸ್ಪೀಕರ್‌ ಯು.ಟಿ. ಖಾದರ್‌ ಅವರು ರಾಜ್ಯಪಾಲರಿಗೆ ವಿವರಣೆ ನೀಡಿದ್ದಾರೆ.

ರಾಜ್ಯಪಾಲರಿಗೆ ದೂರು ನೀಡಲು ತೆರಳುತ್ತಿರುವ ಬಿಜೆಪಿ ನಾಯಕರು

ಖಾದರ್‌ ಭೇಟಿ ಬಗ್ಗೆ ಬಿಜೆಪಿ ನಾಯಕ ಆರ್‌. ಅಶೋಕ್‌ ಹೇಳಿದ್ದೇನು?

ಈ ನಡುವೆ, 10 ಶಾಸಕರನ್ನು ಅಮಾನತು ಮಾಡಿದ ನಿರ್ಧಾರದ ವಿರುದ್ಧ ಬಿಜೆಪಿ ನಾಯಕರು ಗಾಂಧಿ ಪ್ರತಿಮೆಯ ಮುಂದೆ ಪ್ರತಿಭಟನೆ ನಡೆಸಿದರು. ಪ್ರತಿಭಟನೆಗೂ ಮುನ್ನ ಮಾತನಾಡಿದ ಬಿಜೆಪಿ ನಾಯಕ ಆರ್‌. ಅಶೋಕ್‌ ಅವರು, ಸ್ಪೀಕರ್‌ಗೆ ಭಯ ಶುರುವಾಗಿದೆ. ಬಿಜೆಪಿ ಸದಸ್ಯರನ್ನು ಅಮಾನತು ಮಾಡಿದ್ದು ತಪ್ಪು ಎಂಬ ಅರಿವಾಗಿರುವುದಕ್ಕೆ ರಾಜ್ಯಪಾಲರ ಕಡೆ ಹೋಗಿದ್ದಾರೆ ಎಂದು ಹೇಳಿದರು.

ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ʻʻವಿಧಾನಸೌಧದ ಒಳಗೇ ಪ್ರಜಾಪ್ರಭುತ್ವದ ಕಗ್ಗೊಲೆ ಆಗಿದೆ. ಈ ಹಿಂದೆ ಕಾಂಗ್ರೆಸ್‌ ಸದಸ್ಯರು ಬಾಗಿಲು ಗುದ್ದಿದ್ದರು. ಆಗಲೂ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಈಗ ಸ್ಪೀಕರ್ ಈ ರೀತಿ ಕ್ರಮ ಕೈಗೊಂಡಿರುವುದು ಸರಿಯಲ್ಲ. ಐಎಎಸ್ ಅಧಿಕಾರಿಗಳನ್ನು ದುರುಪಯೋಗ ಮಾಡಿಕೊಂಡಿದ್ದರ ವಿರುದ್ಧ ನಮ್ಮ ಹೋರಾಟ ನಡೆಯುತ್ತಿದೆ. ಅವರಿಗೆ ಸಂಬಳ ಕೊಡುವುದು ಸಾರ್ವಜನಿಕರ ಹಣದಿಂದ. ಅವರನ್ನು ಕಾಂಗ್ರೆಸ್ ಕಾರ್ಯಕ್ರಮಕ್ಕೆ ಬಳಸಿಕೊಂಡಿದ್ದು ಅಕ್ಷಮ್ಯ ಎಂದು ಹೇಳಿದರು ಆರ್.‌ ಅಶೋಕ್‌. ಈ ಮಹಾಘಟಬಂಧನ್‌ ಸಭೆ ವಿಫಲವಾಗಿದೆ. ಅದನ್ನು ಮುಚ್ಚಿಕೊಳ್ಳಲು ನಮ್ಮನ್ನು ಅಮಾನತು ಮಾಡಿದ್ದಾರೆ ಎಂದು ಆರೋಪಿಸಿದರು.

ಇದನ್ನೂ ಓದಿ : Assembly Session : ಸದನದಲ್ಲಿ ಮಾತನಾಡಲು ಬಿಡದ ಕಾಂಗ್ರೆಸ್‌ಗೆ ಬಿಜೆಪಿಯಿಂದ 10 ಪ್ರಶ್ನೆ

Exit mobile version