ಬೆಂಗಳೂರು: ಗುಬ್ಬಿ ಜೆಡಿಎಸ್ ಶಾಸಕ ಎಸ್.ಆರ್. ಶ್ರೀನಿವಾಸ್ ಅವರು ನೀಡಿರುವ ರಾಜೀನಾಮೆ ಅಂಗೀಕಾರವಾಗಿದೆ. 15ನೇ ವಿಧಾನಸಭೆಗೆ (Karnataka Election) ಆಯ್ಕೆಯಾಗಿದ್ದ ಎಸ್.ಆರ್.ಶ್ರೀನಿವಾಸ್ ಅವರ ರಾಜೀನಾಮೆಯನ್ನು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಅಂಗೀಕರಿಸಿದ್ದಾರೆ ಎಂದು ವಿಧಾನಸಭೆ ಕಾರ್ಯದರ್ಶಿ ಎಂ.ಕೆ.ವಿಶಾಲಾಕ್ಷಿ ತಿಳಿಸಿದ್ದಾರೆ.
ಸೋಮವಾರ ಬೆಳಗ್ಗೆ ಶಾಸಕ ಶ್ರೀನಿವಾಸ್ ರಾಜೀನಾಮೆ ಪತ್ರವನ್ನು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ನೀಡಿದ್ದರು. ಇದಕ್ಕೆ ಸ್ಪೀಕರ್ ಅಂಗೀಕಾರ ನೀಡಿದ್ದಾರೆ. ಗುಬ್ಬಿ ಶ್ರೀನಿವಾಸ್ ರಾಜೀನಾಮೆಯಿಂದ ತೆರವಾಗಿರುವ ಒಂದು ಸ್ಥಾನದ ಬಗ್ಗೆ ಮುಖ್ಯ ಚುನಾವಣಾಧಿಕಾರಿಗೆ ಎಂ.ಕೆ.ವಿಶಾಲಾಕ್ಷಿ ಅವರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ | Corruption case: ನಿರೀಕ್ಷಣಾ ಜಾಮೀನು ತಿರಸ್ಕೃತ, ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಬಂಧನ
ಕಳೆದ ವರ್ಷ ನಡೆದ ರಾಜ್ಯಸಭೆ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ವಿಪ್ ಉಲ್ಲಂಘಿಸಿ ಕಾಂಗ್ರೆಸ್ ಕಡೆಗೆ ವಾಲಿದ್ದ ಗುಬ್ಬಿ ಶಾಸಕ ಎಸ್.ಆರ್. ಶ್ರೀನಿವಾಸ್ ಶಾಸಕ ಸ್ಥಾನಕ್ಕೆ ಸೋಮವಾರ ಬೆಳಗ್ಗೆ ರಾಜೀನಾಮೆ ನೀಡಿದ್ದರು. ವಿಧಾನಸಭೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ಭೇಟಿ ಮಾಡಿ ರಾಜೀನಾಮೆ ಪತ್ರವನ್ನು ಶ್ರೀನಿವಾಸ್ ಸಲ್ಲಿಸಿದ್ದರು.
2022ರ ಜೂನ್‌ನಲ್ಲಿ ನಡೆದ ರಾಜ್ಯಸಭೆ ಚುನಾವಣೆಯಲ್ಲಿ ವಿಪ್ ಉಲ್ಲಂಘನೆ ಮಾಡಿದ ನಂತರ ಎಚ್.ಡಿ. ಕುಮಾರಸ್ವಾಮಿ ಸೇರಿ ಅನೇಕರ ಕುರಿತು ಶ್ರೀನಿವಾಸ್ ವಾಗ್ದಾಳಿ ನಡೆಸಿದ್ದರು. ಬಳಿಕ ಶ್ರೀನಿವಾಸ್ ಆಪ್ತರನ್ನು ಜೆಡಿಎಸ್ ಪಕ್ಷದಿಂದ ಉಚ್ಚಾಟನೆ ಮಾಡಲಾಗಿತ್ತು. ಅದಾದ ನಂತರ ಪಕ್ಷಕ್ಕೆ ಆಹ್ವಾನಿಸುವ ಪ್ರಯತ್ನವನ್ನು ರಾಜ್ಯ ಜೆಡಿಎಸ್ ಅಧ್ಯಕ್ಷ ಸಿ.ಎಂ. ಇಬ್ರಾಹಿಂ ನಡೆಸಿದ್ದರಾದರೂ ಸಫಲವಾಗಿರಲಿಲ್ಲ.
ರಾಜೀನಾಮೆ ನೀಡುವುದಕ್ಕೂ ಮುನ್ನ ಮಾಜಿ ಸಿಎಂ ಸಿದ್ದರಾಮಯ್ಯ ಮನೆಗೆ ಭೇಟಿ ನೀಡಿ ಮಾತುಕತೆ ನಡೆಸಿದ್ದರು. ಈ ಸಂದರ್ಭದಲ್ಲಿ ಜಮೀರ್ ಅಹಮದ್, ಕಾಂತರಾಜು, ಪಾವಗಡ ಅಭ್ಯರ್ಥಿ ವೆಂಕಟೇಶ್ ಉಪಸ್ಥಿತರಿದ್ದರು. ನಂತರ ಮಾತನಾಡಿದ್ದ ಶ್ರೀನಿವಾಸ್, ನಮ್ಮ ತಾಲೂಕಿನಲ್ಲಿರುವ ಎಲ್ಲ ಮುಖಂಡರ ಜೊತೆ ಮಾತನಾಡಿ ಇದೇ ತಿಂಗಳ 30 ರಂದು ಕಾಂಗ್ರೆಸ್ ಸೇರುತ್ತೇನೆ ಎಂದು ಮಾಹಿತಿ ನೀಡಿದ್ದರು.
ಇದನ್ನೂ ಓದಿ | SC ST Reservation: ಶಿಕಾರಿಪುರಕ್ಕೆ ತೆರಳಿ ಬಂಜಾರ ಸಮಾಜದೊಂದಿಗೆ ಮಾತನಾಡುವೆ: ಬಿ.ಎಸ್.ಯಡಿಯೂರಪ್ಪ
ಕಳೆದ 20 ವರ್ಷಗಳಿಂದ ನನಗೆ ಜನತಾದಳದಲ್ಲಿ ಕೆಲಸ ಮಾಡುವುದಕ್ಕೆ ಅವಕಾಶ ಕೊಟ್ಟಿದ್ದಕ್ಕೆ ದೇವೇಗೌಡರಿಗೆ, ಕುಮಾರಸ್ವಾಮಿ, ರೇವಣ್ಣ ಪಕ್ಷದ ಎಲ್ಲರಿಗೂ ಧನ್ಯವಾದಗಳು. 20 ವರ್ಷಗಳಿಂದ ಭಾವನಾತ್ಮಕ ಸಂಬಂಧವನ್ನು ಇಟ್ಟುಕೊಂಡಿದ್ದೇನೆ. ಎಲ್ಲ ಶಾಸಕರು ಪಕ್ಷದಲ್ಲೇ ಉಳಿದುಕೋ ಅಂತ ಒತ್ತಾಯ ಮಾಡ್ತಿದ್ದಾರೆ. ಆದರೆ, ನಾನು ಹಲವು ಕಾರಣಗಳಿಂದ ಪಕ್ಷ ಬಿಡಲು ನಿರ್ಧರಿಸಿದ್ದೇನೆ ಎಂದು ಹೇಳಿದ್ದರು.