Site icon Vistara News

ವಿಧಾನಸಭೆಯ 13ನೇ ಅಧಿವೇಶನ ಯಶಸ್ವಿ: ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ

Vishweshwar Hegde Kageri

ಬೆಂಗಳೂರು: 15ನೇ ವಿಧಾನಸಭೆಯ 13ನೇ ಅಧಿವೇಶನ ಯಶಸ್ವಿಯಾಗಿ ನಡೆದಿದ್ದು, 55 ಗಂಟೆ 14 ನಿಮಿಷ ಕಾರ್ಯಕಲಾಪ ನಡೆದಿದೆ. ಅಗಲಿದ ಪ್ರಮುಖರಿಗೆ ಮೊದಲ ದಿನ ಸಂತಾಪ ಸೂಚಿಸಿದ್ದೇವೆ ಎಂದು ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪೂರಕ ಅಂದಾಜಿನ ಮೊದಲನೇ ಕಂತನ್ನು ಅಧಿವೇಶನದಲ್ಲಿ ಅಂಗೀಕರಿಸಲಾಗಿದೆ. ಭಾರತದ ಲೆಕ್ಕ ನಿಯಂತ್ರಕರು ಮಹಾಪರಿಶೋಧಕರು ನೀಡಿದ ವರದಿಯನ್ನು ಮಂಡಿಸಲಾಗಿದೆ. 16 ವಿಧೇಯಕಗಳನ್ನು ಮಂಡಿಸಿದ್ದು, ಅವುಗಳಲ್ಲಿ 14 ವಿಧೇಯಕ ಅಂಗೀಕಾರವಾಗಿವೆ. 2 ವಿಧೇಯಕಗಳನ್ನು ಚರ್ಚೆಗೆ ತೆಗೆದುಕೊಳ್ಳಬೇಕಿದೆ ಎಂದು ತಿಳಿಸಿದರು.

ಇದನ್ನೂ ಓದಿ | ಪೌರಕಾರ್ಮಿಕರಿಗೆ ಊಟ ಬಡಿಸಿ, ಅವರೊಂದಿಗೆ ಬೆರೆತು ಉಪಾಹಾರ ಸೇವಿಸಿದ ಸಿಎಂ

ನಿಯಮ 69 ಅಡಿಯಲ್ಲಿ 7 ಸೂಚನೆಗಳನ್ನು ಚರ್ಚೆ ಮಾಡಲಾಗಿದೆ. 150 ಪ್ರಶ್ನೆಗಳಿಗೆ ಸದನದಲ್ಲಿ ಉತ್ತರಿಸಲಾಗಿದೆ. 1650 ಪ್ರಶ್ನೆಗಳಿಗೆ ಲಿಖಿತ ಮೂಲಕ ಉತ್ತರಿಸಲಾಗಿದೆ, 85 ಗಮನ ಸೆಳೆಯುವ ಸೂಚನೆಯನ್ನು ಕಾರ್ಯಕಲಾಪ ಪಟ್ಟಿಗೆ ಸೇರಿಸಿ ಚರ್ಚೆ ಮಾಡಲಾಗಿದೆ ಎಂದು ವಿವರಿಸಿದರು. 15ರಂದು ಅತ್ಯುತ್ತಮ ಶಾಸಕ ಸಮಿತಿಯ ಸಭೆ ನಡೆಸಲಾಗಿದೆ. ಸಿಎಂ ಮತ್ತು ಸಮಿತಿಯ ಸದಸ್ಯರು ಸಭೆಯಲ್ಲಿ ಭಾಗಿಯಾಗಿದ್ದರು. ಅತ್ಯುತ್ತಮ ಶಾಸಕ ಪ್ರಶಸ್ತಿಯನ್ನು ಬೆಳಗಾವಿಯ ಅಧಿವೇಶನದಲ್ಲಿ ನೀಡುತ್ತೇವೆ ಎಂದರು.

ಅಧಿವೇಶನದಲ್ಲಿ ಶೇ.99 ರಷ್ಟು ಹಾಜರಾತಿ ಇತ್ತು. ಕೆ.ಎಸ್.ಈಶ್ವರಪ್ಪ, ರಮೇಶ್ ಜಾರಕಿಹೊಳಿ ಮಾತ್ರ ಅಧಿವೇಶನಕ್ಕೆ ಹಾಜರಿರಲಿಲ್ಲ. ಇನ್ನೂ ಕೆಲವರು ಗೈರಾಗಿದ್ದರೂ ಆ ಬಗ್ಗೆ ನನ್ನ ಗಮನಕ್ಕೆ ತರಲಾಗಿತ್ತು. ಅತಿವೃಷ್ಟಿ ವಿಚಾರದಲ್ಲಿ ನೇರವಾಗಿ 36 ಜನ ಸದಸ್ಯರು ಭಾಗಿಯಾಗಿ ಚರ್ಚಿಸಿದ್ದಾರೆ. ಅಧಿವೇಶನದಲ್ಲಿ ಕಾರ್ಯಕಲಾಪ ವೀಕ್ಷಿಸಲು ಮುಕ್ತ ಅವಕಾಶ ನೀಡಲಾಗಿತ್ತು. 15,641 ಜನ ನೇರವಾಗಿ ಸದನಕ್ಕೆ ಬಂದು ಸದನವನ್ನು ಪ್ರತ್ಯಕ್ಷವಾಗಿ ವೀಕ್ಷಿಸಿದ್ದಾರೆ ಎಂದರು.

ಅಧಿವೇಶನದ ಕೊನೇ ದಿನ ಸೆ.೨೩ರಂದು ಜೆಡಿಎಸ್ ಸದಸ್ಯರ ಧರಣಿಯಿಂದ ಕಾರ್ಯಕಲಾಪ ಸರಿಯಾಗಿ ನಡೆಸಲು ಆಗಿಲ್ಲ. ಇನ್ನುಳಿದ ಎಲ್ಲ ದಿನಗಳು ಕಾರ್ಯಕಲಾಪ ಸುಗಮವಾಗಿ ನಡೆದಿದೆ. ಇದಕ್ಕೆ ಸಹಕರಿಸಿದ ಆಡಳಿತ ಪಕ್ಷದ ನಾಯಕ ಸಿಎಂ ಬೊಮ್ಮಾಯಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ, ಶಾಸಕರು, ಅಧಿಕಾರಿವರ್ಗ, ಮಾಧ್ಯಮದವರಿಗೆ ಧನ್ಯವಾದ ಕೋರುವುದಾಗಿ ತಿಳಿಸಿದರು.

ಇದನ್ನೂ ಓದಿ | ರಾಜ್ಯ ಬಿಜೆಪಿ ಅಧ್ಯಕ್ಷರ ಮಾತನ್ನೇ ಆಕ್ಷೇಪಿಸಿದ ಮಾಜಿ ಸಚಿವ ಎಸ್‌. ಸುರೇಶ್‌ ಕುಮಾರ್‌ !

Exit mobile version