ಸುರೇಶ ನಾಯ್ಕ, ಹಾವೇರಿ
ಹಾವೇರಿಯಲ್ಲಿ ನಡೆಯುವ ನುಡಿಜಾತ್ರೆಯಲ್ಲಿ ಇದೇ ಮೊದಲ ಬಾರಿಗೆ ನಾಡಿನಾದ್ಯಂತ ಕನ್ನಡಾಂಬೆಯ ರಥ ಸಂಚಾರ ಮಾಡಿದೆ. ಭವ್ಯ ಮೆರವಣಿಗೆಯಲ್ಲಿ ಸಾಗಲಿರುವ ಸಮ್ಮೇಳನಾಧ್ಯಕ್ಷರಿಗೂ ಇದೇ ಮೊದಲ ಬಾರಿಗೆ ಅರಮನೆಯ ದರ್ಬಾರ್ ಮಾದರಿಯಲ್ಲಿ ಮೆರವಣಿಗೆ ಮಾಡಲು ರಥವನ್ನು ಸಿದ್ದಪಡಿಸಲಾಗಿದೆ.
ಏಲಕ್ಕಿ ಕಂಪಿನ ನಾಡಿನಲ್ಲಿ ಜನವರಿ 6ರಿಂದ 8ರವರೆಗೆ ನಡೆಯಲಿರುವ 86ನೇ ಅಖಿಲ ಭಾರತ ನುಡಿಜಾತ್ರೆಯ ಸಮ್ಮೇಳನಾಧ್ಯಕ್ಷರ ಮೆರವಣಿಗೆಗೆ ಅರಮನೆ ದರ್ಬಾರ್ ಮಾದರಿ’ಯಲ್ಲಿ ಭವ್ಯ ರಥವನ್ನು ಸಿದ್ಧಗೊಳಿಸಲಾಗಿದೆ.
ಸಮ್ಮೇಳನಾಧ್ಯಕ್ಷ ಡಾ.ದೊಡ್ಡರಂಗೇಗೌಡ ಅವರನ್ನು ಅಕ್ಷರಜಾತ್ರೆ ಮೆರವಣಿಗೆಯಲ್ಲಿ ಭವ್ಯ ಮೆರವಣಿಗೆ ಮಾಡಲು ಸಿದ್ದತೆ ಮಾಡಲಾಗಿದೆ. ಮೆರವಣಿಗೆಯಲ್ಲಿ ಭಾಗವಹಿಸುವ ಸಾವಿರಾರು ಕನ್ನಡಾಭಿಮಾನಿಗಳಿಗೆ ಸಮ್ಮೇಳನಾಧ್ಯಕ್ಷರು ಸ್ಪಷ್ಟವಾಗಿ ಕಾಣುವಂತೆ ಎತ್ತರದ ಸಿಂಹಾಸನವನ್ನು ವಿನ್ಯಾಸ ಮಾಡಲಾಗಿದೆ. ಸಿಂಹಾಸನದ ಮೇಲೆ ಹಳದಿ ಬಣ್ಣದ ಛತ್ರಿಯನ್ನು ಅಳವಡಿಸಿರುವುದು ರಥಕ್ಕೆ ಮೆರುಗು ನೀಡಿದೆ.
ಮೈಸೂರಿನಿಂದ ಲಾರಿ ಚಾಸಿಯನ್ನು ತರಿಸಿ, ಅದಕ್ಕೆ ‘ಮೆಟಲ್ ಫ್ರೇಮ್’ ಅಳವಡಿಸಿ, ಫೈಬರ್, ಪ್ಲೈವುಡ್‌ಗಳನ್ನು ಜೋಡಿಸಿ ರಥವನ್ನು ನಿರ್ಮಿಸಲಾಗಿದೆ. ಕೆಂಪು, ಹಳದಿ ಮತ್ತು ಬಂಗಾರದ ವರ್ಣಗಳಿಂದ ರಥವನ್ನು ಅಲಂಕರಿಸಿದ್ದು, ಭುವನೇಶ್ವರಿ, ಸಮ್ಮೇಳನದ ಲಾಂಛನ, ಕನ್ನಡ ಧ್ವಜಗಳಿಂದ ಈ ವಿಶೇಷ ರಥವು ಕಂಗೊಳಿಸುತ್ತಿದೆ ಎಂದು ಕಲಾವಿದ ಷಹಜಾನ್ ಮುದಕವಿ ಹೇಳಿದ್ದಾರೆ.
ಇದನ್ನೂ ಓದಿ | ಕನ್ನಡ ಸಾಹಿತ್ಯ ಸಮ್ಮೇಳನ | ಗಣ್ಯರ ಕೊರಳ ಅಲಂಕರಿಸಲಿವೆ ಉಸ್ಮಾನ್ ಸಾಬ್ ತಯಾರಿಸುವ ವಿಶೇಷ ಏಲಕ್ಕಿ ಹಾರಗಳು!