ಬೆಂಗಳೂರು: ಮೂಡಿಗೆರೆಯ ಬಿಜೆಪಿ ಶಾಸಕ ಎಂ.ಪಿ. ಕುಮಾರಸ್ವಾಮಿ ಅವರಿಗೆ ಜನಪ್ರತಿನಿಧಿಗಳ ನ್ಯಾಯಾಲಯ ಆರು ತಿಂಗಳ ಜೈಲು ಶಿಕ್ಷೆ ವಿಧಿಸಿದೆ. ಚೆಕ್ ಬೌನ್ಸ್ (Cheque bounce) ಪ್ರಕರಣವೊಂದಕ್ಕೆ ಸಂಬಂಧಿಸಿ ಈ ಶಿಕ್ಷೆ ವಿಧಿಸಲಾಗಿದೆ.
ಎಂ.ಪಿ. ಕುಮಾರಸ್ವಾಮಿ ಅವರು ಹೂವಪ್ಪ ಗೌಡ ಎಂಬವರಿಂದ ಸಾಲ ಪಡೆದಿದ್ದು ಅದರ ಮರುಪಾವತಿಗಾಗಿ ಕೊಟ್ಟಿರುವ ಎಂಟು ಚೆಕ್‌ಗಳು ಬೌನ್ಸ್ ಆಗಿದ್ದವು. ಹೂವಪ್ಪ ಗೌಡ ಅವರು ಇದರ ವಿರುದ್ಧ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದ್ದರು.
ಹೂವಪ್ಪ ಗೌಡರಿಂದ ಪಡೆದ ಸಾಲದಲ್ಲಿ ಒಟ್ಟು ಒಂದು ಕೋಟಿ 38 ಲಕ್ಷದ 65 ಸಾವಿರ ಸಾಲ ಬಾಕಿ ಇತ್ತು. ಇದಕ್ಕೆ ಪ್ರತಿಯಾಗಿ ಸಾಲದ ಕಂತುಗಳೆಂಬಂತೆ ಕುಮಾರಸ್ವಾಮಿ ಅವರು ಎಂಟು ಚೆಕ್‌ಗಳನ್ನು ನೀಡಿದ್ದರು. ಆದರೆ, ಅವೆಲ್ಲವೂ ಬೌನ್ಸ್ ಆಗಿದ್ದವು.
ಈ ಎಂಟು ಚೆಕ್ ಬೌನ್ಸ್ ಪ್ರಕರಣಗಳ ವಿಚಾರಣೆ ನಡೆಸಿದ ಜನಪ್ರತಿನಿಧಿ ನ್ಯಾಯಾಲಯದ ನ್ಯಾಯಾಧೀಶರಾದ ನ್ಯಾ. ಜೆ. ಪ್ರೀತ್ ಅವರು ಅರು ತಿಂಗಳ ಕಾಲ ಜೈಲು ಶಿಕ್ಷೆ ವಿಧಿಸಿದರು.
ಮೇಲ್ಮನವಿಗೆ ಅವಕಾಶ
ಈ ನಡುವೆ ಈ ತೀರ್ಪಿನ ಬಗ್ಗೆ ಮೇಲ್ಮನವಿ ಸಲ್ಲಿಸಲು ಅವಕಾಶ ನೀಡಬೇಕು ಎಂದು ಎಂ.ಪಿ. ಕುಮಾರಸ್ವಾಮಿ ಅವರ ಪರ ವಕೀಲರು ಮನವಿ ಮಾಡಿದ್ದಾರೆ. ಆಗ ಪ್ರತಿಸ್ಪಂದಿಸಿದ ನ್ಯಾಯಾಧೀಶರು ಹತ್ತು ದಿನಗಳ ಕಾಲಾವಕಾಶ ನೀಡಿದರು. ಈ ಕಾಲಾವಧಿಯಲ್ಲಿ ಹಣ ಪಾವತಿ ಮಾಡದೆ ಇದ್ದಲ್ಲಿ ಜೈಲು ಕಾಯಂ ಎಂದು ಹೇಳಲಾಗಿದೆ.
ಇದನ್ನೂ ಓದಿ : ಮೂಡಿಗೆರೆ ಶಾಸಕ ಎಂ.ಪಿ ಕುಮಾರಸ್ವಾಮಿ ವಿರುದ್ಧ ಜಾಮೀನು ರಹಿತ ವಾರಂಟ್