ಬೆಂಗಳೂರು: ರಾಜ್ಯದಲ್ಲಿ ಅತ್ಯಂತ ಹಿಂದುಳಿದ ಪ್ರದೇಶವಾಗಿರುವ ಕಲ್ಯಾಣ ಕರ್ನಾಟಕ ಭಾಗಕ್ಕೆ ಭರ್ಜರಿ ಯೋಜನೆಯನ್ನು ಸಿಎಂ ಸಿದ್ದರಾಮಯ್ಯ ಬಜೆಟ್‌ನಲ್ಲಿ (Karnataka Budget 2023) ಘೋಷಣೆ ಮಾಡಿದ್ದಾರೆ. ಕಲ್ಯಾಣ ಕರ್ನಾಟಕ ಪ್ರದೇಶದ ಸಮಗ್ರ ಅಭಿವೃದ್ಧಿಗಾಗಿ 2023-24ನೇ ಸಾಲಿನಲ್ಲಿ 5,000 ಕೋಟಿ ರೂ.ಗಳ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಯು.ಪಿ.ಎ. ಸರ್ಕಾರದ ಇಚ್ಛಾಶಕ್ತಿಯಿಂದ ಭಾರತದ ಸಂವಿಧಾನಕ್ಕೆ ತಿದ್ದುಪಡಿ ಮಾಡಿ, ಅನುಚ್ಛೇದ 371 (ಜೆ) ಅಳವಡಿಸುವ ಮೂಲಕ ಕಲ್ಯಾಣ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಲಾಗಿದೆ ಎಂದು ಕಾಂಗ್ರೆಸ್ ಸರ್ಕಾರವನ್ನು ಸಿದ್ದರಾಮಯ್ಯ ಸಮರ್ಥನೆ ಮಾಡಿಕೊಂಡರು. ಈ ಪ್ರದೇಶದ ಸಮಗ್ರ ಅಭಿವೃದ್ಧಿಯ ದೃಷ್ಟಿಯಿಂದ ನಮ್ಮ ಸರ್ಕಾರದ ಹಿಂದಿನ ಅವಧಿಯಲ್ಲಿ ಪ್ರತ್ಯೇಕ ಪ್ರದೇಶಾಭಿವೃದ್ಧಿ ಮಂಡಳಿಯನ್ನು ಸ್ಥಾಪಿಸಲಾಯಿತು ಎಂದರು.
ಬಿಜೆಪಿಯನ್ನು ದೂರುವುದನ್ನು ಇಲ್ಲಿಯೂ ಮುಂದುವರಿಸಿದ ಸಿದ್ದರಾಮಯ್ಯ, ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಭಾರಿ ಪ್ರಮಾಣದ ಅನುದಾನ ಘೋಷಿಸಿದ್ದರೂ, ಸಮರ್ಪಕವಾದ ಕ್ರಿಯಾ ಯೋಜನೆ ರೂಪಿಸಿ, ಅನುಷ್ಠಾನಗೊಳಿಸುವಲ್ಲಿ ಅವರ ವೈಫಲ್ಯ ಎದ್ದು ಕಾಣುತ್ತದೆ. ಇದರ ಪರಿಣಾಮವಾಗಿ ಮಂಡಳಿಯಲ್ಲಿ
2,000 ಕೋಟಿ ರೂ. ಗಳಿಗೂ ಹೆಚ್ಚು ಮೊತ್ತದ ಅನುದಾನ ಬಳಕೆಯಾಗದೆ ಉಳಿದಿರುವುದನ್ನು ಗಮನಿಸಲಾಗಿದೆ ಎಂದರು. ಈ ಎಲ್ಲಾ ನ್ಯೂನತೆಗಳನ್ನು ಸರಿಪಡಿಸಿ, ಕಲ್ಯಾಣ ಕರ್ನಾಟಕ ಪ್ರದೇಶದ ಸಮಗ್ರ ಅಭಿವೃದ್ಧಿಗಾಗಿ 2023-24ನೇ ಸಾಲಿನಲ್ಲಿ 5,000 ಕೋಟಿ ರೂ.ಗಳ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಘೋಷಣೆ ಮಾಡಿದ್ದಾರೆ.
ಯೋಜನೆ ಮತ್ತು ಪ್ರದೇಶಾಭಿವೃದ್ಧಿ ಕುರಿತ ಘೋಷಣೆಗಳು
- ರಾಜ್ಯದ ಜಿ.ಎಸ್.ಡಿ.ಪಿ ಬೆಳವಣಿಗೆ ದರವನ್ನು ಶೇ.13 ರಿಂದ ಶೇ.17ಕ್ಕೆ ಹೆಚ್ಚಿಸುವ ಮೂಲಕ ರಾಜ್ಯವನ್ನು 1 ಟ್ರಿಲಿಯನ್ ಡಾಲರ್ ಎಕಾನಮಿಯಾಗಿ ಏರಿಸುವ (1 Trillion Dollar Economy) ಗುರಿಯೊಂದಿಗೆ ಕೃಷಿ, ಉದ್ಯಮ ಮತ್ತು ಸೇವಾ ವಲಯಗಳ ಸಾಮರ್ಥ್ಯ ವೃದ್ಧಿ, ಮೂಲಸೌಕರ್ಯ ಬೆಂಬಲ, ಅಧಿಕಾರ ಪ್ರತ್ಯಾಯೋಜನೆ, ಆಡಳಿತ ವಿಕೇಂದ್ರೀಕರಣ ಮತ್ತಿತರ ಉಪಕ್ರಮಗಳನ್ನು ಜಾರಿಗೆ ತರಲಾಗುವುದು.
- ರಾಜ್ಯದ ಸರಾಸರಿಗಿಂತ ಕಡಿಮೆ ಪ್ರಗತಿ ಸಾಧಿಸುತ್ತಿರುವ ಅಭಿವೃದ್ಧಿ ಆಕಾಂಕ್ಷಿ ತಾಲ್ಲೂಕುಗಳಲ್ಲಿ ಶಿಕ್ಷಣ, ಆರೋಗ್ಯ, ಪೌಷ್ಟಿಕತೆ, ಲಿಂಗ ಸಮಾನತೆ, ಬಡತನ ನಿರ್ಮೂಲನೆ ಮತ್ತಿತರ ಅಭಿವೃದ್ಧಿಯ ಬಹು ಆಯಾಮ ಸೂಚ್ಯಂಕಗಳಲ್ಲಿ ಸುಧಾರಣೆ ತರಲು 3,000 ಕೋಟಿ ರೂ. ವೆಚ್ಚ ಮಾಡಲಾಗುವುದು.
- 2023-24ನೇ ಸಾಲಿನಲ್ಲಿ ನಗರಾಭಿವೃದ್ಧಿ ಇಲಾಖೆಯ ನಿಗಮಗಳ ವತಿಯಿಂದ ಗ್ರೀನ್ ಬಾಂಡ್ಗಳ ಮೂಲಕ ಸುಮಾರು 1,000 ಕೋಟಿ ರೂ. ಬಂಡವಾಳ ಸಂಗ್ರಹಿಸಿ, ಸ್ವಚ್ಛ ಮತ್ತು ಸುಸ್ಥಿರ ನಗರಗಳನ್ನು ವೇಗವಾಗಿ ನಿರ್ಮಾಣ ಮಾಡಲಾಗುವುದು.
- ಕಲ್ಯಾಣ ಕರ್ನಾಟಕ ಭಾಗದಲ್ಲಿ ಬರುವ ವಿವಿಧ ಕೋಟೆಗಳ ಅಭಿವೃದ್ಧಿಗಾಗಿ 75 ಕೋಟಿ ರೂ. ನೀಡಲಾಗುವುದು
- ರಾಮನಗರದಲ್ಲಿರುವ ಜಾನಪದ ಲೋಕದಂತೆಯೇ ಕಲ್ಯಾಣ ಕರ್ನಾಟಕದ ಕೊಪ್ಪಳದಲ್ಲಿ ಜಾನಪದ ಲೋಕ ನಿರ್ಮಾಣಕ್ಕೆ 2 ಕೋಟಿ ರೂ. ನೀಡಲಾಗುವುದು.