ಬೆಂಗಳೂರು: ರಾಜ್ಯಾದ್ಯಂತ ಒತ್ತುವರಿ ಆಗಿರುವ ಸರ್ಕಾರಿ ಜಮೀನನ್ನು (Government Land Encroachment) ಮತ್ತೆ ವಶಕ್ಕೆ ಪಡೆಯುವ ಸಂಬಂಧ ವಿಶೇಷ ಟಾಸ್ಕ್‌ಫೋರ್ಸ್ (Special Taskforce) ರಚಿಸಲು ಸರ್ಕಾರ ಮುಂದಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ (Revenue Minister Krishna Byre Gowda) ಅವರು ಪವರ್ ಪಾಯಿಂಟ್ ವಿತ್ ಎಚ್‌ಪಿಕೆ (Power Point with HPK) ಸಂದರ್ಶನದಲ್ಲಿ ಹೇಳಿದರು.
ವಿಸ್ತಾರ ನ್ಯೂಸ್ ಪ್ರಧಾನ ಸಂಪಾದಕ ಹರಿಪ್ರಕಾಶ್ ಕೋಣೆಮನೆ (Hariprakash Konemane) ಅವರು ನಡೆಸಿಕೊಡುವ “ಪವರ್ ಪಾಯಿಂಟ್ ವಿತ್ ಎಚ್‌ಪಿಕೆ” ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಕಂದಾಯ ಇಲಾಖೆಯಲ್ಲಿ ನಡೆಸಲಾಗುವ ಸುಧಾರಣೆಗಳ ವಿವರ ನೀಡಿದರು.
ಒತ್ತುವರಿ ತೆರವಿಗೆ ಟಾರ್ಗೆಟ್ ಆಧಾರಿತ ಕಾಲಮಿತಿ ಕಾರ್ಯಕ್ರಮ
ರಾಜ್ಯದಲ್ಲಿ ಬೆಂಗಳೂರು ನಗರ ಮತ್ತು ಗ್ರಾಮಾಂತರದಲ್ಲಿ ಹೆಚ್ಚು ಸರ್ಕಾರಿ ಭೂಮಿ ಒತ್ತುವರಿ ಆಗಿದೆ. ಈ ಒತ್ತುವರಿ ತೆರವು ಮಾಡಿ ಸರ್ಕಾರಿ ಭೂಮಿಗೆ ಬೇಲಿ ಹಾಕಲು ಸಂಬಂಧ ಪಟ್ಟ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಕೃಷ್ಣಬೈರೇಗೌಡ ಅವರು ತಿಳಿಸಿದರು.
ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲಾಧಿಕಾರಿಗಳ ಸಭೆಯನ್ನು ಇನ್ನು ಎರಡು-ಮೂರು ದಿನದಲ್ಲಿ ಕರೆಯುತ್ತೇನೆ. ಜಿಲ್ಲೆಯಲ್ಲಿ ಎಷ್ಟೆಷ್ಟು ಭೂಮಿ ಒತ್ತುವರಿ ಆಗಿದೆ, ಎಲ್ಲೆಲ್ಲಿ ಆಗಿದೆ ಎನ್ನುವ ವಿವರವನ್ನು ಅವರಿಂದಲೇ ಮಾಹಿತಿ ಪಡೆಯುತ್ತೇನೆ. ಬಳಿಕ ತಿಂಗಳಿಗೆ ಎಷ್ಟು ಒತ್ತುವರಿ ಪ್ರಕರಣಗಳನ್ನು ಇತ್ಯರ್ಥಪಡಿಸಿ ಭೂಮಿ ಮರುವಶ ಮಾಡಿಕೊಳ್ಳಬಹುದು ಎಂದು ಕೇಳುತ್ತೇನೆ. ಆ ಮೂಲಕ ಅವರು ಹೇಳಿದ ಟಾರ್ಗೆಟ್ ಅನ್ನು ಅವರಿಗೇ ನೀಡಿ ಕಾಲಮಿತಿಯೊಳಗೆ ಒತ್ತುವರಿಯನ್ನು ತೆರವು ಮಾಡಲು ಪ್ಲ್ಯಾನ್ ಇದೆ. ಇದಕ್ಕಿಂತಲೂ ಹೆಚ್ಚಾಗಿ ಒತ್ತುವರಿ ತೆರವು ಮಾಡಿದ ಭೂಮಿಗೆ ಬೇಲಿ ಹಾಕಿ ಸಂರಕ್ಷಿಸಲಾಗುತ್ತದೆ ಎಂದು ಅವರು ತಿಳಿಸಿದರು. ಇದೇ ಮಾದರಿಯನ್ನು ರಾಜ್ಯಾದ್ಯಂತ ವಿಸ್ತರಿಸಲಾಗುವುದು ಎಂದು ಕೃಷ್ಣ ಬೈರೇಗೌಡ ಹೇಳಿದರು.
ಬೇನಾಮಿ ಹೆಸರಲ್ಲಿ ಮಾಡಿದ ಜಮೀನು ನೋಂದಣಿ ರದ್ದು
ರಾಜ್ಯದಲ್ಲಿ ಬೇನಾಮಿ ಹೆಸರಲ್ಲಿ ಜಮೀನು ನೋಂದಣಿ ಮಾಡುವ ಕುತಂತ್ರಗಳನ್ನು ತಡೆಯಲು ಸರ್ಕಾರ ಕ್ರಮ ಕೈಗೊಳ್ಳಲಿದೆ. ಈ ರೀತಿಯ ಬೇನಾಮಿ ನೋಂದಣಿಗಳನ್ನು ರದ್ದು ಮಾಡುವ ಅಧಿಕಾರವನ್ನು ಜಿಲ್ಲಾಧಿಕಾರಿಗೆ ನೀಡಲು ತೀರ್ಮಾನಿಸಲಾಗಿದೆ. ಹಾಗೆಯೇ ಕಂದಾಯ ಇಲಾಖೆಯಲ್ಲಿ ಬಾಕಿ ಇರುವ ದಾಖಲೆ ವಿಲೇವಾರಿಗೆ ಡಿಸಿ ಮತ್ತು ಎಸಿಗಳಿಗೆ ಡೆಡ್ ಲೈನ್ ನೀಡಿದ್ದೇವೆ.
ಮನೆ ಕಟ್ಟಲು ಇನ್ನು ಭೂ ಪರಿವರ್ತನೆ ಅಗತ್ಯವಿಲ್ಲ
ಈಗಾಗಲೇ ಪರಿವರ್ತನೆ ಆಗಿರುವ ಭೂಮಿಯಲ್ಲಿ ಮನೆ ಕಟ್ಟಲು ಮತ್ತೆ ಭೂ ಪರಿವರ್ತನೆ ಮಾಡಬೇಕಾದ ಪರಿಸ್ಥಿತಿ ಈಗ ಇದೆ. ಹೊಸ ಕಾನೂನಿನ ಮೂಲಕ ಈಗಾಗಲೇ ಭೂಪರಿವರ್ತನೆ ಆಗಿರುವ ಜಾಗದಲ್ಲಿ ನೇರವಾಗಿ ಮನೆ ಕಟ್ಟಲು ಅವಕಾಶ ನೀಡಲು ಸರ್ಕಾರ ಮುಂದಾಗಿದೆ ಎಂದು ಸಚಿವ ಕೃಷ್ಣಬೈರೇಗೌಡ ತಿಳಿಸಿದರು
ಭೂನೋಂದಣಿ ಪ್ರಕ್ರಿಯೆ ಡಿಜಿಟಲೈಸೇಷನ್
ಭೂನೋಂದಣಿ ಪ್ರಕ್ರಿಯೆಗೆ ವೇಗ ನೀಡಲು ಅದನ್ನು ಡಿಜಿಟಲೀಕರಣ ಮಾಡಲಾಗುತ್ತದೆ. ಈ ಪ್ರಕ್ರಿಯೆ ನಡೆಯುತ್ತಿದ್ದು, ಇದು ಪೂರ್ಣಗೊಂಡ ಬಳಿಕ ಜನರು ಕಂದಾಯ ರಿಜಿಸ್ಟ್ರೇಷನ್ ಆಫೀಸುಗಳಿಗೆ ಆಗಾಗ ಎಡತಾಕಬೇಕಾಗಿಲ್ಲ. ಅಲ್ಲಿ ಬಂದು ದಿನವಿಡೀ ಕಾಯಬೇಕಾಗಿಲ್ಲ. ಎಲ್ಲ ದಾಖಲೆಗಳನ್ನು ಆಂತರಿಕ ಡಿಜಿಟಲ್ ವ್ಯವಸ್ಥೆಯ ಮೂಲಕವೇ ಪಡೆಯಲಾಗುತ್ತದೆ. ಬಳಿಕ ಒಂದು ನಿರ್ದಿಷ್ಟ ದಿನ, ನಿರ್ದಿಷ್ಟ ಸಮಯವನ್ನು ನಿಗದಿಪಡಿಸಲಾಗುತ್ತದೆ. ಆ ಸಮಯಕ್ಕೆ ಬಂದು ಸಹಿ ಮತ್ತು ಬೆರಳ ಮುದ್ರೆ ನೀಡಿ ಹೋದರೆ ಸಾಕಾಗುತ್ತದೆ. ಈ ಯೋಜನೆ ಜಾರಿ ಶೀಘ್ರದಲ್ಲೇ ನಡೆಯಲಿದೆ ಎಂದರು.
ಇದನ್ನೂ ಓದಿ: Power Point with HPK : ಕೆಜಿ ಹಳ್ಳಿ ಗಲಭೆ ಕೇಸ್ ವಾಪಸ್ ಹಿಂದೆ ಸಿಎಂ ಸಿದ್ದರಾಮಯ್ಯ: ಆರಗ ಜ್ಞಾನೇಂದ್ರ
ಇಷ್ಟೇ ಅಲ್ಲ, ಇನ್ನೂ ಹಲವು ಜನಪರವಾಗಿರುವ, ಜನೋಪಯೋಗಿಯಾದ ಸುಧಾರಣೆಗಳ ಕುರಿತು ಮಹತ್ವದ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ ಕೃಷ್ಣ ಬೈರೇಗೌಡರು. ಇದರ ಜತೆಗೆ ಕರ್ನಾಟಕ ರಾಜಕೀಯ, ಕಾಂಗ್ರೆಸ್ ರಾಜಕೀಯ, ಲೋಕಸಭಾ ಚುನಾವಣೆಯ ಸ್ಪರ್ಧೆಯ ಕುರಿತಂತೆ ಮಹತ್ವದ ಒಳಸುಳಿವುಗಳನ್ನು ತೆರೆದಿಟ್ಟಿದ್ದಾರೆ.