Site icon Vistara News

Sreeramulu absent | ರೆಡ್ಡಿ ಮೊಮ್ಮಗಳ ನಾಮಕರಣಕ್ಕೆ ಆಪ್ತಮಿತ್ರ ರಾಮುಲು ಗೈರು: ಮೊದಲ ಬಾರಿ ಹೀಗಾಗಿದ್ದರ ಹಿಂದೆ ಇದ್ಯಾ ರಾಜಕೀಯ?

Ramulu reddy sushma

ಶಶಿಧರ ಮೇಟಿ, ವಿಸ್ತಾರ ನ್ಯೂಸ್‌ ಬಳ್ಳಾರಿ
ಜನಾರ್ದನ ರೆಡ್ಡಿ ಅವರ ಮೊಮ್ಮಗಳ ನಾಮಕರಣಕ್ಕೆ ಅವರ ಆಪ್ತಮಿತ್ರ ಶ್ರೀರಾಮುಲು ಗೈರು ಹಾಜರಾಗಿರುವುದು (Sreeramulu absent) ಭಾರಿ ಚರ್ಚೆಗೆ ಕಾರಣವಾಗಿದೆ. ಕೆಲವು ದಶಕಗಳ ಸ್ನೇಹದಲ್ಲಿ ಬಿರುಕು ಮೂಡಿತೇ ಎಂಬ ಗುಮಾನಿ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ. ನಾಮಕರಣಕ್ಕೆ ಹಾಜರಾಗದಿರುವ ಬಗ್ಗೆ ಬೇರೆ ಅರ್ಥ ಕಲ್ಪಿಸುವುದು ಬೇಡ ಎಂದು ಶ್ರೀರಾಮುಲು ಹೇಳುವ ಮೂಲಕ ಗುಮಾನಿಗೆ ತೆರೆ ಎಳೆಯುವ ಕೆಲಸ ಮಾಡಿದ್ದಾರೆ. ಆದರೂ ಚರ್ಚೆ ಮಾತ್ರ ಮುಂದುವರಿದಿದೆ.

ಜನಾರ್ದನ ರೆಡ್ಡಿ ಮತ್ತು ಶ್ರೀರಾಮುಲು ಕಳೆದ ಹಲವು ದಶಕಗಳಿಂದ ಆಪ್ತ ಸ್ನೇಹಿತರು. ಬಳ್ಳಾರಿಯಿಂದ ಚುನಾವಣೆಗೆ ಸ್ಪರ್ಧಿಸಿದ್ದ ಸುಷ್ಮಾ ಸ್ವರಾಜ್‌ ಅವರು ಈ ಇಬ್ಬರನ್ನು ತಮ್ಮ ಮಕ್ಕಳೆಂದು ಕರೆದಿದ್ದರು. ಇಬ್ಬರೂ ಸ್ನೇಹಿತರು ಅನ್ನುವುದಕ್ಕಿಂತಲೂ ಅಣ್ಣ-ತಮ್ಮಂದಿರಂತೆ ಇದ್ದರು. ರೆಡ್ಡಿ ಅವರ ಮನೆಯಲ್ಲಿ ಏನೇ ಕಾರ್ಯಕ್ರಮ ನಡೆದರೂ ರಾಮುಲು ಇರಲೇಬೇಕು. ಪ್ರತಿಯೊಂದು ಸಮಾರಂಭವನ್ನು ಪರಸ್ಪರರು ಮುಂದೆ ನಿಂತು ಮಾಡಿಸುತ್ತಿದ್ದರು, ಸಕ್ರಿಯವಾಗಿ‌ ತೊಡಗಿಸಿಕೊಳ್ಳುತ್ತಿದ್ದರು. ಆದರೆ ಇತ್ತೀಚೆಗೆ ಯಾಕೋ ಈ ರೀತಿಯ ಚಟುವಟಿಕೆಗಳಿಗೆ ಕಡಿಮೆಯಾಗಿವೆ. ಜನಾರ್ದನ ರೆಡ್ಡಿ ಅವರು ಬಹಿರಂಗವಾಗಿ ಬಿಜೆಪಿ ವಿರುದ್ಧ ಮುನಿಸು ಹೊರ ಹಾಕಿರುವುದು, ರೆಡ್ಡಿ‌ ಇವರು ಇತ್ತೀಚೆಗೆ ಕನಕದುರ್ಗಮ್ಮ ದೇವಸ್ಥಾನಕ್ಕೆ ಬಂದಾಗ ಅವರೊಂದಿಗೆ ರಾಮುಲು ಬಾರದಿರುವುದು, ಇತ್ತೀಚೆಗೆ ಕೌಲ್ ಬಜಾರ್ ಕಾರ್ಯಕ್ರಮಕ್ಕೆ ರೆಡ್ಡಿಯೊಂದಿಗೆ‌ ರಾಮುಲು ಹೋಗದಿರುವುದು ಸೇರಿದಂತೆ ಇಬ್ಬರು ಒಟ್ಟಾಗಿ ಕಾಣಿಸಿಕೊಳ್ಳುವುದು ಕಡಿಮೆಯಾಗಿದೆ. ಈ ಮಧ್ಯೆ ರೆಡ್ಡಿ ಅವರ ಮೊಮ್ಮಗಳ ನಾಮಕರಣಕ್ಕೆ ರಾಮುಲು ಗೈರು‌ ಹಾಜರಾಗಿರುವುದು ಇಬ್ನರ ಮಧ್ಯದ ಸ್ನೇಹದ ಬಿರುಕಿನ ವಿಚಾರ ಮುನ್ನಲೆಗೆ ಬಂದಿದೆ. ರೆಡ್ಡಿ ಅವರ ಮನೆ ಕಾರ್ಯಕ್ರಮವನ್ನು ಯಾವತ್ತೂ ಮಿಸ್‌ ಮಾಡದ ರಾಮುಲು ಈ ಬಾರಿ ಮಿಸ್‌ ಮಾಡಿಕೊಂಡಿದ್ದಕ್ಕೆ ಹಲವು ಚರ್ಚೆಗಳಿಗೆ ಕಾರಣವಾಗಿದೆ.

ಇದಕ್ಕೆ‌ ರಾಮುಲು ಹೇಳುವುದೇನು?
ಆದರೆ, ʻʻ ನಮ್ಮ ಸ್ವಾಮೀಜಿಯವರ ತಂಗಿಯ‌ ಮದುವೆ ಜೈಪುರದಲ್ಲಿತ್ತು. ಅಲ್ಲಿಗೆ ಹೋಗಿದ್ದೆ. ಹೀಗಾಗಿ ನಾಮಕರಣ ಮಿಸ್‌ ಮಾಡಿಕೊಂಡೆ. ನಾಮಕರಣಕ್ಕೆ ಹೋಗದಿರುವುದಕ್ಕೆ ಬೇರೆ ಅರ್ಥ ಕಲ್ಪಿಸುವುದು ಬೇಡ ಇಬ್ಬರು ಮುಂಚಿನಿಂದ ಸ್ನೇಹಿತರುʼʼ ಎಂದಿದ್ದಾರೆ ರಾಮುಲು.

ಜನಾರ್ದನ ರೆಡ್ಡಿ ಅವರ ಬೇಸರ ಮತ್ತು ಅಸಮಾಧಾನವನ್ನು ಪಕ್ಷದ ಹಿರಿಯರಿಗೆ‌ ಮುಟ್ಟಿಸುವ ಕೆಲಸ ಮಾಡಿದ್ದೇನೆ ಎಂದರೂ ರಾಮುಲು ಹೇಳಿದ್ದಾರೆ. ರೆಡ್ಡಿಗೆ ಬಿಜೆಪಿ ಬಗೆಗಿನ ಅಸಮಾಧಾನ ಇರುವುದನ್ನು ರಾಮುಲು ಒಪ್ಪಿಕೊಂಡಿದ್ದಾರೆ.

“ರಾಜಕಾರಣ ಸ್ವಂತ ವಿವೇಚನೆಗೆ ಬಿಟ್ಟಿರುವ ವಿಚಾರ” ರಾಮುಲು ಮಾತಿನ ಮರ್ಮವೇನು?
ಜನಾರ್ದನ ರೆಡ್ಡಿ ಅವರು ಎಲ್ಲಿಯೇ ಇದ್ದರೂ ಅವರಿಗೆ ಒಳ್ಳೆಯದಾಗಲಿ, ರಾಜಕಾರಣ ಸ್ವಂತ ವಿವೇಚನೆಗೆ ಬಿಟ್ಟಿದ್ದು ಎನ್ನುವ ರಾಮುಲು ಮಾತಿನ ಮರ್ಮವಾದರೂ ಏನು ಎಂಬ ಬಗ್ಗೆ ಹಲವು ಅನುಮಾನಗಳು ಕಾಡುತ್ತಿವೆ. ಇಂತಹ ಹಲವು ಹೇಳಿಕೆ ಮತ್ತು ಇಬ್ಬರ ನಡೆಗಳು ಬಹಿರಂಗವಾಗಿ ಬಿರುಕಿನ ಅನುಮಾನವನ್ನು ಹುಟ್ಟುಹಾಕುವಂತೆ ಮಾಡಿದೆ.

ಹಲವು ಊಹಾಪೋಹಗಳು
ರಾಮುಲು ಮತ್ತು ರೆಡ್ಡಿ ಅವರಿಗೆ ಸಂಬಂಧಿಸಿದಂತೆ ಸಾರ್ವಜನಿಕ ವಲಯದಲ್ಲಿ ಹಲವಾರು ಊಹಾಪೋಹಗಳು ಹರಿದಾಡುತ್ತಿವೆ.

ಒಂದು‌ ಕಾಲದಲ್ಲಿ ರೆಡ್ಡಿ ಮತ್ತು ಮಾಜಿ‌ ಶಾಸಕ ಸುರೇಶ್ ಬಾಬು ಪರಮಾಪ್ತರು, ಇತ್ತೀಚಿನ ದಿನಗಳಲ್ಲಿ ಇವರ ಮಧ್ಯೆ ಅಂತರ ಇದೆ. ಈ ಅಂತರದಲ್ಲಿ ಹೊಂದಾಣಿಕೆಗೆ ಮಾಡುವ ಪ್ರಯತ್ನ ರಾಮುಲು ಮಾಡಿದ್ದಾರೆ ಎನ್ನುವ ಗುಮಾನಿಯೂ ಇದೆ? ರೆಡ್ಡಿ ಮತ್ತು ಸುರೇಶ್ ಬಾಬು ಮಧ್ಯದ ಆಸ್ತಿ ವಿಚಾರವು ಇಂತಹ ವಿಚಾರಕ್ಕೆ ಕಾರಣವಾಯ್ತೆ ಎಂದು ಕೆಲವರು ಮಾತನಾಡಿಕೊಳ್ಳುತ್ತಿದ್ದಾರೆ.

ಚುನಾವಣೆಯ ಹೊಸ್ತಿಲಲ್ಲಿ ರೆಡ್ಡಿ ಅವರಿಗೆ ಬಿಜೆಪಿ ಪಕ್ಷದಲ್ಲಿ ಮನ್ನಣೆ ನೀಡದಿರುವುದು, ಹೊಸ ಪಕ್ಷದ ಹುಟ್ಟು ಹಾಕುವ ಮಾತನಾಡಿರುವುದು, ರಾಮುಲು ಅಂತರಕ್ಕೆ ಕಾರಣವಾಯ್ತೆ ಎಂಬ ಪ್ರಶ್ನೆಯೂ ಇದೆ.

ಚುನಾಚಣೆಯ ಹೊಸ್ತಿಲಲ್ಲಿ ಈ ಬೆಳವಣಿಗೆ‌ ಸಹಜ‌‌ ಎಂಬಿತ್ಯಾದಿ ಊಹಾಪೋಹದ ಮಾತುಗಳು ಸಾರ್ವಜನಿಕ ಮತ್ತು ರಾಜಕೀಯ ವಲಯದಲ್ಲಿ ಹರಿದಾಡುತ್ತಿವೆ, ಇವುಗಳಿಗೆ ಯಾವುದೇ ಖಚಿತತೆ ಇಲ್ಲ, ಪೂರಕ ಅಂಶಗಳು ಇಲ್ಲ, ಈ ವಿಚಾರಗಳಿಗೆ ಸಂಬಂಧ ಪಟ್ಟವರು ಬಹಿರಂಗ ಉತ್ತರ ಕೊಟ್ಟರೆ ಮಾತು ಈ ಊಹಪೋಹದ ಹಕ್ಕಿಗಳಿಗಿರುವ ರೆಕ್ಕೆಗಳು ಕಳಚಿ ಬೀಳಲಿವೆ.

ಇದನ್ನೂ ಓದಿ | Karnataka election | ಸಿದ್ದರಾಮಯ್ಯ – ಡಿಕೆಶಿ ಜೋಡೆತ್ತುಗಳಲ್ಲ, ಕಿತ್ತಾಡುವ ಚಿರತೆಗಳು ಎಂದ ಶ್ರೀರಾಮುಲು

Exit mobile version