Site icon Vistara News

ಕಂಡಕ್ಟರ್‌ಗಳ ಕೆಲಸಕ್ಕೆ ಕುತ್ತು ತರಲಿದ್ಯಾ ಶ್ರೀನಿವಾಸ ಮೂರ್ತಿ ಸಮಿತಿ ವರದಿ; 130 ಪುಟಗಳ ವರದಿಯಲ್ಲೇನಿದೆ?

ಸಾರಿಗೆ

ಬೆಂಗಳೂರು: ನಷ್ಟದ ಸುಳಿಗೆ ಸಿಲುಕಿರುವ ಸಾರಿಗೆ ನಿಗಮಗಳ ಪುನಶ್ಚೇತನಕ್ಕೆ ಸರ್ಕಾರ ಪ್ರಯತ್ನಿಸುತ್ತಿದೆ. ಈ ಸಂಬಂಧ ಸರ್ಕಾರ ನೇಮಿಸಿದ್ದ ನಿವೃತ್ತ ಅಪರ ಮುಖ್ಯ ಕಾರ್ಯದರ್ಶಿ ಎಂ.ಆರ್. ಶ್ರೀನಿವಾಸ ಮೂರ್ತಿ ನೇತೃತ್ವದ ಏಕ ಸದಸ್ಯ ಸಮಿತಿಯು 130 ಪುಟಗಳ ಅಂತಿಮ ವರದಿಯನ್ನು ಸಲ್ಲಿಸಿದೆ. ಆದರೆ, ಈ ವರದಿ ಅನುಸಾರ ನಷ್ಟ ತಪ್ಪಿಸಲು ಕಂಡಕ್ಟರ್‌ ಬದಲು ಚಾಲಕ ಒಬ್ಬರೇ ಸಾಕು ಎಂದು ಉಲ್ಲೇಖಿಸಲಾಗಿದ್ದು, ಇದು ನಿರ್ವಾಹಕರ ಕೆಲಸಕ್ಕೆ ಕುತ್ತು ತರಲಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ.

ಮಂಗಳವಾರ ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಬಸವರಾಜ್‌ ಬೊಮ್ಮಾಯಿಗೆ ವರದಿ ಸಲ್ಲಿಕೆ ಮಾಡಲಾಗಿದೆ. ವರದಿಯಲ್ಲಿ 2030ರ ಹೊತ್ತಿಗೆ ಬಸ್‌ಗಳ ಸಂಖ್ಯೆ 40 ಸಾವಿರಕ್ಕೆ ಏರಿಸಲು ಸಲಹೆ ನೀಡಲಾಗಿದೆ. ಸಾರಿಗೆ ವ್ಯವಸ್ಥೆಯ ಸೋರಿಕೆ ತಡೆಗಟ್ಟುವುದು, ಸಂಪನ್ಮೂಲ ಸೃಜನೆಗೆ ಒತ್ತು ನೀಡುವುದು ಸೇರಿದಂತೆ ಸಂಸ್ಥೆಗಳ ಉತ್ತಮ ಸೇವೆಯ ಮೂಲಕ ಲಾಭದಾಯಕವಾಗಿ ಕಾರ್ಯ ನಿರ್ವಹಿಸುವುದರ ಕುರಿತು ಉಲ್ಲೇಖ ಮಾಡಲಾಗಿದೆ ಎನ್ನಲಾಗಿದೆ.

ಪ್ರಮುಖವಾಗಿ ಈ ವರದಿಯಲ್ಲಿ ನಷ್ಟವನ್ನು ತಪ್ಪಿಸಲು ಒಂದು ಬಸ್‌ಗೆ ಚಾಲಕ ಮಾತ್ರ ಸಾಕು. ಚಾಲಕನೇ ನಿರ್ವಾಹಕನ ಕೆಲಸ ಮಾಡುವಂತಿರಬೇಕೆಂದು ತಿಳಿಸಿದೆ. ಇದು ಪರೋಕ್ಷವಾಗಿ ನಿರ್ವಾಹಕರ ಕೆಲಸಕ್ಕೆ ಕುತ್ತು ಬರುವಂತೆ ಕಾಣುತ್ತಿದೆ. ನಾಲ್ಕೂ ಸಾರಿಗೆ ಸಂಸ್ಥೆಗಳ ಸುಸ್ಥಿರ ಕಾರ್ಯ ನಿರ್ವಹಣೆ ಕುರಿತು ವರದಿಯಲ್ಲಿ‌ ಹಲವು ಶಿಫಾರಸುಗಳನ್ನು ಮಾಡಲಾಗಿದೆ.

ಇದನ್ನೂ ಓದಿ | ಜನಸಾಮಾನ್ಯರ ಸಾರಿಗೆಗೆ ವಿಷ ಹಾಕಿ ಕೊಲ್ಲುತ್ತಿದೆ ಸರ್ಕಾರ: ಸಿದ್ದರಾಮಯ್ಯ ಆಕ್ರೋಶ

ಅಂದಹಾಗೆ, ಸಾರಿಗೆ ಸಿಬ್ಬಂದಿಯ ಮುಷ್ಕರ, ಕೊರೊನಾ ಸೋಂಕಿನ ಕಾರಣದಿಂದ ಸಾರಿಗೆ ನಿಗಮಗಳು ನಷ್ಟದ ಕೂಪಕ್ಕೆ ಸಿಲುಕಿವೆ. ಕಳೆದ ಎರಡು ವರ್ಷಕ್ಕೂ ಹೆಚ್ಚು ಸಮಯದಿಂದ ಆರ್ಥಿಕ ಸಂಕಷ್ಟದಿಂದ ಕಂಗೆಟ್ಟ ಸಾರಿಗೆ ನಿಗಮಗಳು ಶೀಘ್ರದಲ್ಲೇ ವಿಲೀನವಾಗುವ ಮಾತುಗಳು ಕೇಳಿ ಬಂದಿದ್ದವು. ಈ ಕುರಿತು ಯಾವುದೇ ಗುಟ್ಟು ಬಿಟ್ಟು ಕೊಟ್ಟಿಲ್ಲ.

130 ಪುಟಗಳ ವರದಿಯಲ್ಲಿ ಏನಿದೆ?

– ಸಾರಿಗೆ ನಿಗಮಗಳ ಆರ್ಥಿಕ ನಷ್ಟ ದೂರ ಮಾಡಲು ಹಲವು ಶಿಫಾರಸು

– ನಾಲ್ಕೂ ಸಾರಿಗೆ ನಿಗಮಗಳಿಗೆ ಮಧ್ಯವರ್ತಿ ಸಂಸ್ಥೆಯಿಂದ ಹಣಕಾಸು ಸಾಲ

– ನಿಗಮಗಳು ಅವುಗಳ ಆದಾಯದಲ್ಲೇ ಮುಂದುವರಿಯುವಂತೆ ಮಾಡುವ ಬಗ್ಗೆ ಸಲಹೆ

– ಸದ್ಯ ನಾಲ್ಕೂ ನಿಗಮಗಳ ಬಳಿ 24 ಸಾವಿರ ಬಸ್‌ಗಳಿವೆ

– 2030ರ ಹೊತ್ತಿಗೆ ಬಸ್‌ಗಳ ಸಂಖ್ಯೆ 40 ಸಾವಿರಕ್ಕೆ ಏರಿಸಲು ಕ್ರಮವಹಿಸಲು ಶಿಫಾರಸು

– ಬಸ್‌ಗಳ ಖರೀದಿಗೆ ಸರ್ಕಾರ ಹಣ ನೀಡದೇ ಮಧ್ಯವರ್ತಿ ಸಂಸ್ಥೆಯಿಂದ ಹಣಕಾಸು ಒದಗಿಸಬೇಕು

– ಒಂದು ಬಸ್‌ಗೆ ಚಾಲಕ ಮಾತ್ರ ಸಾಕು. ಚಾಲಕನೇ ನಿರ್ವಾಹಕನ ಕೆಲಸ ಮಾಡುವಂತಿರಬೇಕು

– ಬಸ್‌ಗಳನ್ನು ಸ್ಟಾಪ್ ಟು ಸ್ಟಾಪ್ ಮಾತ್ರ ನಿಲ್ಲಿಸುವಂತಿರಬೇಕು

ವರದಿ ಸಲ್ಲಿಕೆ ವೇಳೆ ಮುಖ್ಯಮಂತ್ರಿಯವರ ಪ್ರಧಾನ ಕಾರ್ಯದರ್ಶಿ ಎನ್. ಮಂಜುನಾಥ್ ಪ್ರಸಾದ್, ಕಾರ್ಯದರ್ಶಿ  ಜಯರಾಂ ರಾಯಪುರ, ಸಾರಿಗೆ ಇಲಾಖೆ ಕಾರ್ಯದರ್ಶಿ ಪ್ರಸಾದ್, ಕೆಎಸ್‌ಆರ್‌ಟಿಸಿ ಎಂ.ಡಿ. ಅನ್ಬುಕುಮಾರ್ ಮತ್ತು ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಇದನ್ನೂ ಓದಿ | ಪೆಟ್ರೋಲ್‌ ಬಂಕ್‌ಗಳ ಮುಂದೆ ಬಿಎಂಟಿಸಿ ಬಸ್‌ಗಳ ಸರತಿ: ನಷ್ಟ ತಪ್ಪಿಸಲು ಉಪಾಯ

Exit mobile version