Site icon Vistara News

ಶ್ರೀರಾಮನ ಜಪಿಸುವ ಬಿಜೆಪಿಯವರೇ ರಾಮಾಯಣ ದರ್ಶನ೦ ಬರೆದ ಕವಿಯನ್ನು ಅವಮಾನಿಸಿದ್ದಾರೆ!

ಶಿವಮೊಗ್ಗ: ಬಿಜೆಪಿ ಸರ್ಕಾರದವರು ಯಾವಾಗಲೂ ಶ್ರೀರಾಮ ಶ್ರೀರಾಮ ಎನ್ನುತ್ತಾರೆ. ಆದರೆ ರಾಮಾಯಣ ದರ್ಶನ೦ ಬರೆದ ಕವಿಯ ಪದ್ಯಗಳನ್ನು ಈಗಿನ ಪಠ್ಯ ಪರಿಷ್ಕರಣೆ ಸಮಿತಿ ಅವಹೇಳನ ಮಾಡಿದೆ. ಆದರೂ ಸರ್ಕಾರ ಸುಮ್ಮನಿರುವುದು ಯಾಕೆ ಎಂದು ಕಾಂಗ್ರೆಸ್ ಮುಖಂಡ ಆರ್ ಎಂ ಮಂಜುನಾಥ ಗೌಡ ಪ್ರಶ್ನಿಸಿದರು..

ಇದನ್ನೂ ಓದಿ | ಪಠ್ಯ ಪುಸ್ತಕ ಪರಿಷ್ಕರಣೆ ವಿರೋಧಿಸಿ ಪಾದಯಾತ್ರೆ

ಈ ಕುರಿತು ಸೋಮವಾರ ತೀರ್ಥಹಳ್ಳಿ ಪಟ್ಟಣದ ಬೆಟ್ಟಮಕ್ಕಿಯ ತಮ್ಮ ನಿವಾಸದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು  ʼʼರಾಷ್ಟ್ರಕವಿ ಎಂದೇ ಹೆಸರುವಾಸಿಯಾಗಿರುವ ಕುವೆಂಪು ಅವರ ಗೀತೆಯನ್ನು ನಾವೆಲ್ಲರೂ ನಾಡಗೀತೆಯಾಗಿ ಒಪ್ಪಿಕೊಂಡಿದ್ದೇವೆ. ಆದರೆ ಅಧಿಕೃತ ನಾಡಗೀತೆಗೆ ಪಠ್ಯ ಪರಿಷ್ಕರಣೆ ಸಮಿತಿಯ ಅಧ್ಯಕ್ಷರು ಅಗೌರವ ತೋರಿದ್ದಾರೆ. ಆದರೆ ಅಂತಹ ಪಠ್ಯ ಪರಿಷ್ಕರಣೆಯನ್ನು ಸರ್ಕಾರ ಒಪ್ಪಿಕೊಂಡಿದೆ. ಈಗಿನ ಪಠ್ಯವನ್ನು ಬಿಟ್ಟು ಹಳೆಯ ಪಠ್ಯ ಪುಸ್ತಕವನ್ನೇ ಮಕ್ಕಳಿಗೆ ಕೊಡಬೇಕುʼʼ ಎಂದು ಒತ್ತಾಯಿಸಿದರು..

ಪಠ್ಯ ಕಿತ್ತಾಟದಿಂದ ಒಂದಾದರೂ ಮಂಜುನಾಥ್‌ ಗೌಡ-ಕಿಮ್ಮನೆ ರತ್ನಕರ್‌

ರಾಜ್ಯ ಸರ್ಕಾರದ ಪಠ್ಯ ಪರಿಷ್ಕರಣೆ ಎಡವಟ್ಟು ಖಂಡಿಸಿ ಜೂನ್ 15ಕ್ಕೆ ಕಾಂಗ್ರೆಸ್‌ ನಾಯಕ ಕಿಮ್ಮನೆ ರತ್ನಾಕರ್ ನೇತೃತ್ವದಲ್ಲಿ ನಡೆಯುವ ಪಾದಯಾತ್ರೆಗೆ ಕಾಂಗ್ರೆಸ್ ಮುಖಂಡ ಆರ್ ಎಂ ಮಂಜುನಾಥ ಗೌಡ ಬೆಂಬಲ ಘೋಷಿಸಿದ್ದಾರೆ. ತಾವು ಕಾಂಗ್ರೆಸ್ ಸೇರ್ಪಡೆ ಆದಾಗಿಂದಲೂ ಅಂತರ ಕಾಯ್ದುಕೊಂಡಿದ್ದ ಕಿಮ್ಮನೆ ರತ್ನಾಕರ್ ವಿರುದ್ಧ ಆರ್‌ ಎಂ ಮಂಜುನಾಥ ಗೌಡ ಮುನಿಸಿಕೊಂಡಿದ್ದರು. ಇತ್ತೀಚೆಗೆ ಕಿಮ್ಮನೆ ರತ್ನಾಕರ್ ತೀರ್ಥಹಳ್ಳಿಯಿಂದ ಶಿವಮೊಗ್ಗದವರೆಗೆ ನಡೆಸಿದ್ದ ಪಾದಯಾತ್ರೆಗೆ ಮಂಜುನಾಥ ಗೌಡ ಬೆಂಬಲಿಸಿರಲಿಲ್ಲ. ಆದರೆ ಇದೀಗ ಮಂಜುನಾಥ ಗೌಡ ನೀಡಿರುವ ಹೇಳಿಕೆ ತೀರ್ಥಹಳ್ಳಿ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಹೊಸ ಹುಮ್ಮಸ್ಸು ಮೂಡಿಸಿದೆ.

ಸುದ್ದಿಗೋಷ್ಠಿಯಲ್ಲಿ ಟಿ ಎಲ್ ಸುಂದರೇಶ್, ಸಚೀಂದ್ರ ಹೆಗ್ಡೆ, ಸಾಹಿತಿ ರಮೇಶ್ ಶೆಟ್ಟಿ, ರಾಮಚಂದ್ರ, ಹಾರೊಗೊಳಿಗೆ ಪದ್ಮನಾಭ್‌, ವೆಂಕಟೇಶ್ ಹೆಗ್ಡೆ, ಶಬನಮ್, ಸುಶೀಲ ಶೆಟ್ಟಿ, ಬಾಳೇಹಳ್ಳಿ ಪ್ರಭಾಕರ್, ಹಾಲಗದ್ದೆ ಉಮೇಶ್, ಮಂಜುನಾಥ್, ಕಂಡಿಲ್ ರಾಘವೇಂದ್ರ, ರೆಹಮತುಲ್ಲಾ ಅಸಾದಿ, ಕುರುವಳ್ಳಿ ನಾಗರಾಜ್ ಮತ್ತಿತರರು ಉಪಸ್ಥಿತರಿದ್ದರು.

ಇದನ್ನೂ ಓದಿ | ಮುಗಿಯಲಿಲ್ಲ ಪಠ್ಯಪುಸ್ತಕ ವಿವಾದ: ಮರು ಪರಿಷ್ಕರಣೆ ಆದರೆ ₹158 ಕೋಟಿ ಹೊರೆ

Exit mobile version