ಬಳ್ಳಾರಿ: ವಿಮ್ಸ್‌ನಲ್ಲಿ ವಿದ್ಯುತ್ ವ್ಯತ್ಯಯದಿಂದ ರೋಗಿಗಳು ಮೃತಪಟ್ಟಿಲ್ಲ. ಈ ಬಗ್ಗೆ ತನಿಖೆ ನಡೆಸಲು ಡಾ. ಸ್ಮಿತಾ ಅವರ ನೇತೃತ್ವದಲ್ಲಿ ತಜ್ಞರ ಸಮಿತಿ ರಚನೆ ಮಾಡಲಾಗಿದೆ. ಸಮಿತಿ ವರದಿ ಬಂದ ನಂತರ ಪರಿಶೀಲನೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶ್ರೀರಾಮುಲು ತಿಳಿಸಿದ್ದಾರೆ.
ವಿಮ್ಸ್ ಆಸ್ಪತ್ರೆಗೆ ಶನಿವಾರ ಸಂಜೆ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಸ್ಪತ್ರೆಗೆ ಸೆ.11ರಂದು ರಕ್ತದೊತ್ತಡ ಮತ್ತು ಮೂತ್ರ ಪಿಂಡ ಸಮಸ್ಯೆಯಿಂದ ದಾಖಲಾದ ಮೌಲಾಹುಸೇನ್ 14ರಂದು ನಿಧನರಾಗಿದ್ದಾರೆ. ಚೆಟ್ಟಮ್ಮ ಹಾವು ಕಡಿತದಿಂದ ಸೆ.13ರಂದು ದಾಖಲಾಗಿ ವಿಷ ಜಾಸ್ತಿ ಏರಿದ ಪರಿಣಾಮ ಸೆ.14ರಂದು ಮೃತ ಪಟ್ಟಿದ್ದಾರೆ. ಇಬ್ಬರ ಸಾವಿಗೆ ಆರೋಗ್ಯ ಸಮಸ್ಯೆಗಳೇ ಕಾರಣ. ಚಂದ್ರಮ್ಮ ವೆಂಟಿಲೇಟರ್ ಮೇಲೆ ಇರಲಿಲ್ಲ, ಆಕ್ಸಿಜನ್ ಮಾತ್ರ ಒದಗಿಸಲಾಗಿತ್ತು, ಆದರೆ ಸಾವನ್ನಪ್ಪಿದ್ದಾರೆ. ಸೆ.14ರಂದು ಮೂವರು ಮರಣ ಹೊಂದಿದ್ದಾರೆ. ಇದಕ್ಕೆ ವಿದ್ಯುತ್ ಸಮಸ್ಯೆ ಕಾರಣವಲ್ಲ ಎಂದು ತಿಳಿಸಿದರು.
ಆಸ್ಪತ್ರೆಯಲ್ಲಿ ಅಂದು ರಾತ್ರಿ 8.20ಕ್ಕೆ ವಿದ್ಯುತ್ ಸಂಪರ್ಕ ಇತ್ತು. ಒಂದೂವರೆ ಗಂಟೆ ಯುಪಿಎಸ್ ಬ್ಯಾಕ್ ಅಪ್ ಇರುತ್ತದೆ. ಈ ಘಟನೆ ವಿದ್ಯುತ್ ಸಂಪರ್ಕ ಕಡಿತದಿಂದ ಆಗಿಲ್ಲ. ಸರ್ಕಾರ ಈ ಬಗ್ಗೆ ತನಿಖೆ ನಡೆಸಲು ಡಾ. ಸ್ಮಿತಾ ಅವರ ನೇತೃತ್ವದಲ್ಲಿ ತಜ್ಞರ ಸಮಿತಿ ರಚನೆ ಮಾಡಲಾಗಿದೆ. ತಂಡದಿಂದ ಇನ್ನೂ ವರದಿ ಬಂದಿಲ್ಲ. ನಾಳೆ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಭೇಟಿ ನೀಡಿ ಪರಿಶೀಲಿಸಲಿದ್ದಾರೆ ಎಂದು ತಿಳಿಸಿದರು.
ವಿಮ್ಸ್‌ನಲ್ಲಿ ರೋಗಿಗಳ ಸಾವು ಪ್ರಕರಣ ಸರ್ಕಾರದ ಪ್ರಾಯೋಜಿತ ಕೊಲೆ ಎಂಬ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿ, ನಾವು ಸಾವಿನ ಮನೆಯಲ್ಲಿ ರಾಜಕಾರಣ ಮಾಡಲ್ಲ, ಸತ್ತವರ ಕುಟುಂಬದ ಜತೆ ಸರ್ಕಾರ ನಿಲ್ಲುತ್ತದೆ. ಸಿದ್ದರಾಮಯ್ಯ ಹೇಳಿಕೆಗಳನ್ನು ಗಮನಿಸುತ್ತಿರುವೆ, ಸರ್ಕಾರ ಹಾಗೂ ರಾಮುಲು ಸುಳ್ಳು ಹೇಳ್ತಾ ಇದ್ದಾರೆ ಎಂದು ಅವರು ಹೇಳಿದ್ದಾರೆ. ನಾನು ಸುಳ್ಳು ಹೇಳಿ ರಾಜಕಾರಣ ಮಾರುವ ದುಸ್ಥಿತಿಗೆ ಬಂದಿಲ್ಲ. ಆ ರೀತಿಯ ರಾಜಕಾರಣ ಮಾಡಿದ್ದರೆ ಇನ್ನೂ ದೊಡ್ಡ ಸ್ಥಾನಕ್ಕೆ ಏರುತ್ತಿದ್ದೆ. ಅವರಂತೆ ನಾನು ಒಂದು ಪಾರ್ಟಿಯಿಂದ ಇನ್ನೊಂದು ಪಾರ್ಟಿಗೆ ಹೋಗಿಲ್ಲ ಎಂದು ಕಿಡಿ ಕಾರಿದರು.
ಮೃತರ ಕುಟುಂಬಸ್ಥರಿಗೆ ಅವರೇ ಪರಿಹಾರ ಕೊಡಬೇಕು ಎನ್ನುತ್ತಾರೆ, ಪರಿಹಾರ ಕೊಟ್ಟರೆ ಯಾಕೆ ಕೊಟ್ಟರು ಎಂದು ಪ್ರಶ್ನಿಸುತ್ತಾರೆ. ಮಾನವೀಯತೆ ಆಧಾರದ ಮೇಲೆ ಸರ್ಕಾರ ಪರಿಹಾರ ನೀಡಿದೆ. ಡಾ.ಸ್ಮಿತಾ ಸಮಿತಿ ವರದಿ ಸರ್ಕಾರದ ಕೈ ಸೇರಿದ ಬಳಿಕ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಸಿದರು.
ಇದನ್ನೂ ಓದಿ | Vims Bellary | ಸಿದ್ದರಾಮಯ್ಯ-ಸುಧಾಕರ್ ಜಟಾಪಟಿ; ಗಂಭೀರವಾಯ್ತು ವಿಮ್ಸ್ ರೋಗಿಗಳ ಸಾವು ಪ್ರಕರಣ